
Only the name of City Market is there, facilities are all gone!
MLA responsible for traders’ troubles: Magalmani’s outrage
ಸಿಟಿ ಮಾರ್ಕೆಟ್ ಹೆಸರಿಗೆ ಮಾತ್ರ, ಸೌಲಭ್ಯಗಳು ಮಾತ್ರ ಮಾಯ!
ವ್ಯಾಪಾರಿಗಳ ಸಂಕಷ್ಟಕ್ಕೆ ಶಾಸಕರೇ ಹೊಣೆ: ಮ್ಯಾಗಳಮನಿ ಆಕ್ರೋಶ
ಸಿಟಿ ಮಾರ್ಕೆಟ್ ಅವ್ಯವಸ್ಥೆಯ ಆಗರ: ಮ್ಯಾಗಳಮನಿ ಆರೋಪ
ವ್ಯಾಪಾರಿಗಳು, ಸಾರ್ವಜನಿಕರಿಗೆ ಮೂಲಸೌಕರ್ಯಗಳ ಕೊರತೆಯಿಂದ ಸಂಕಷ್ಟ | ಸಮರ್ಪಕವಾಗಿ ಸ್ಥಳಾಂತರಿಸಿ ಶಾಶ್ವತ ಪರಿಹಾರಕ್ಕೆ ಆಗ್ರಹ

ಗಂಗಾವತಿ, ಅ.2: ನಗರದ ಗುಂಡಮ್ಮ ಕ್ಯಾಂಪಿನಲ್ಲಿರುವ ಸಿಟಿ ಮಾರ್ಕೆಟ್ ಅವ್ಯವಸ್ಥೆಯ ಆಗರವಾಗಿ ಮಾರ್ಪಟ್ಟಿದ್ದು, ಸಾರ್ವಜನಿಕರು ಹಾಗೂ ವ್ಯಾಪಾರಿಗಳು ಮೂಲಭೂತ ಸೌಲಭ್ಯಗಳ ಕೊರತೆಯಿಂದ ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ಆರೋಪಿಸಿದರು.
ಗಾಂಧಿ ಜಯಂತಿ ಅಂಗವಾಗಿ ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಪದಾಧಿಕಾರಿಗಳೊಂದಿಗೆ ಸಿಟಿ ಮಾರ್ಕೆಟ್‌ಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸಿದ ಅವರು, ಮಾರುಕಟ್ಟೆಯಲ್ಲಿರುವ ಅವ್ಯವಸ್ಥೆ ಹಾಗೂ ಮೂಲಸೌಕರ್ಯಗಳ ಕೊರತೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಸಿಟಿ ಮಾರ್ಕೆಟ್ ಅನ್ನು ಎರಡು ಬಾರಿ ಉದ್ಘಾಟಿಸಿ ಕಾರ್ಯಾರಂಭ ಮಾಡಲಾಗಿದ್ದರೂ, ಇದುವರೆಗೂ ಮಾರುಕಟ್ಟೆಯ ಸಂಪೂರ್ಣ ಸ್ಥಳಾಂತರವಾಗಿಲ್ಲ. ಕೇವಲ ತರಕಾರಿ ತಳ್ಳುವ ಬಂಡಿಗಳನ್ನು ಸ್ಥಳಾಂತರಿಸುವ ಮೂಲಕ ಬಡ ವ್ಯಾಪಾರಿಗಳಿಗೆ ತೊಂದರೆ ಉಂಟುಮಾಡಲಾಗಿದೆ. ಮಾರುಕಟ್ಟೆಯಲ್ಲಿ ಸಮರ್ಪಕ ನೆರಳಿನ ವ್ಯವಸ್ಥೆ, ಕುಡಿಯುವ ನೀರು, ರಸ್ತೆ ಸೇರಿದಂತೆ ಅಗತ್ಯ ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಇದರಿಂದ ವ್ಯಾಪಾರಿಗಳು ಮಾತ್ರವಲ್ಲದೆ ಮಾರುಕಟ್ಟೆಗೆ ಬರುವ ಸಾರ್ವಜನಿಕರೂ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಮಾರುಕಟ್ಟೆಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಎಲ್ಲ ವ್ಯಾಪಾರಿಗಳನ್ನು ವ್ಯವಸ್ಥಿತವಾಗಿ ಸ್ಥಳಾಂತರಿಸಬೇಕು. ಜೊತೆಗೆ ಮಾರುಕಟ್ಟೆಗೆ ಅಗತ್ಯವಾದ ಮೂಲಸೌಕರ್ಯಗಳನ್ನು ತಕ್ಷಣ ಒದಗಿಸಬೇಕು. ಪ್ರಸ್ತುತ ಮಾರುಕಟ್ಟೆಯಲ್ಲಿರುವ ಅವ್ಯವಸ್ಥೆಯ ಜವಾಬ್ದಾರಿಯನ್ನು ಶಾಸಕರು ವಹಿಸಿಕೊಂಡು, ಕೂಡಲೇ ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ ಕ್ರಮ ಕೈಗೊಳ್ಳಬೇಕು ಎಂದು ಮ್ಯಾಗಳಮನಿ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳಾದ ಜೆಡೆಯಪ್ಪ ಹಂಚಿನಾಳ, ಅರವಿಂದ ಯೋಗಿ, ಗಣೇಶ್ ಬಿ.ಕೆ., ಮಂಜುನಾಥ ಹಿರೇಮಠ ಸೇರಿದಂತೆ ಹಲವರು ಉಪಸ್ಥಿತರಿದ್ದರು.





