ವಿಕಲಚೇತನರ ಮಾಶಾಸನ ಹೆಚ್ಚಿಸಿ, ಅಸಂಘಟಿತರನ್ನು ಉಳಿಸಿ: ಅಶೋಕ ಗುಡಿಕೋಟಿ

H.Mallikarjun
H.Mallikarjun - Kalyanasiri
2 Min Read

Increase monthly pensions for the differently-abled and protect the unorganized sector: Ashok Gudikoti

ವಿಕಲಚೇತನರ ಮಾಶಾಸನ ಹೆಚ್ಚಿಸಿ, ಅಸಂಘಟಿತರನ್ನು ಉಳಿಸಿ: ಅಶೋಕ ಗುಡಿಕೋಟಿ

ಜಾಹೀರಾತು


ಗಂಗಾವತಿ: ವಿಕಲಚೇತನರ ಮಾಶಾಸನವನ್ನು ಹೆಚ್ಚಿಸುವುದರ ಜೊತೆಗೆ, ಸಂಘಟನೆಯ ಬಲವಿಲ್ಲದೆ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿರುವ ಅಸಂಘಟಿತ ವಿಕಲಚೇತನರ ಸಮಸ್ಯೆಗಳಿಗೆ ಸರ್ಕಾರ ತಕ್ಷಣ ಸ್ಪಂದಿಸಬೇಕು ಎಂದು ಕರವೇ ಪ್ರವೀಣಕುಮಾರ ಶೆಟ್ಟಿ ಬಣದ ಅಂಗವಿಕಲರ ಘಟಕದ ಗಂಗಾವತಿ ತಾಲೂಕು ಅಧ್ಯಕ್ಷ ಅಶೋಕ ಗುಡಿಕೋಟಿ ಒತ್ತಾಯಿಸಿದ್ದಾರೆ.
ವಿಕಲಚೇತನರಲ್ಲಿ 21 ಬಗೆಯ ಅಂಗವಿಕಲತೆಗಳನ್ನು ಗುರುತಿಸಲಾಗಿದ್ದು, ವಿವಿಧ ವರ್ಗಗಳ ವಿಕಲಚೇತನರು ತಮ್ಮದೇ ಆದ ಸಂಘಟನೆಗಳನ್ನು ರಚಿಸಿಕೊಂಡು ತಮ್ಮ ಬೇಡಿಕೆಗಳಿಗಾಗಿ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ಆದರೆ ಸಂಘಟನೆಯಿಲ್ಲದ, ಬಡ ಹಾಗೂ ಮಾಶಾಸನವನ್ನು ಅವಲಂಬಿಸಿ ಜೀವನ ನಡೆಸುತ್ತಿರುವ ಅನೇಕ ವಿಕಲಚೇತನರು ತಮ್ಮ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಲು ಸಾಧ್ಯವಾಗದೆ ಹಲವು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶ್ರವಣದೋಷ ಹೊಂದಿರುವ ವಿಕಲಚೇತನರ ಸಂಘ, ವಿಕಲಚೇತನ ಸರ್ಕಾರಿ ನೌಕರರ ಸಂಘ, ವಿಕಲಚೇತನ ಅತಿಥಿ ಶಿಕ್ಷಕರ ಸಂಘ ಸೇರಿದಂತೆ ಹಲವು ಸಂಘಟನೆಗಳು ತಮ್ಮ ಬೇಡಿಕೆಗಳಿಗಾಗಿ ಹೋರಾಟ ನಡೆಸುತ್ತಿವೆ. ರಾಜ್ಯದಲ್ಲಿ ಸುಮಾರು 6,800 ಮಂದಿ ಎಂ.ಆರ್.ಡಬ್ಲ್ಯು., ಯು.ಆರ್.ಡಬ್ಲ್ಯು. ಹಾಗೂ ವಿ.ಆರ್.ಡಬ್ಲ್ಯು. ಕಾರ್ಯಕರ್ತರು ವಿಕಲಚೇತನರ ಬೇಡಿಕೆಗಳ ಜೊತೆಗೆ ತಮ್ಮ ಬೇಡಿಕೆಗಳಿಗೂ ಸರ್ಕಾರದ ಗಮನ ಸೆಳೆಯುತ್ತಿದ್ದಾರೆ.
ಆದರೆ ಗ್ರಾಮೀಣ ಪ್ರದೇಶಗಳಲ್ಲಿರುವ ಅನೇಕ ಬಡ ವಿಕಲಚೇತನರಿಗೆ ಯು.ಡಿ.ಐ.ಡಿ. ಕಾರ್ಡ್‌ನ ಮಹತ್ವವೇ ತಿಳಿದಿಲ್ಲ. ತಮ್ಮ ಪುನರ್ವಸತಿ ಕಾರ್ಯಕರ್ತರು ಯಾರು ಎಂಬುದೂ ತಿಳಿಯದ ಪರಿಸ್ಥಿತಿ ಇದೆ. ಸಂಘಟನೆಯ ಕೊರತೆಯಿಂದಾಗಿ ಅವರು ಸರ್ಕಾರದ ಯೋಜನೆಗಳು ಮತ್ತು ಸೌಲಭ್ಯಗಳನ್ನು ಪಡೆಯಲು ಪರದಾಡುತ್ತಿದ್ದಾರೆ ಎಂದು ಅಶೋಕ ಗುಡಿಕೋಟಿ ಹೇಳಿದ್ದಾರೆ.
ಮಾಶಾಸನ ಹೆಚ್ಚಳಕ್ಕೆ ಒತ್ತಾಯ
ಇಂದಿನ ದುಬಾರಿ ಜೀವನದಲ್ಲಿ ವಿಕಲಚೇತನರಿಗೆ ನೀಡಲಾಗುತ್ತಿರುವ ಮಾಶಾಸನ ಜೀವನ ನಿರ್ವಹಣೆಗೆ ಸಾಕಾಗುತ್ತಿಲ್ಲ. ಕೆಲವು ವರ್ಗದ ವಿಕಲಚೇತನರಿಗೆ ಕೇವಲ ₹800 ಹಾಗೂ ಶೇ.75ರಷ್ಟು ವಿಕಲತೆ ಹೊಂದಿರುವವರಿಗೆ ₹1,400ರಷ್ಟು ಮಾಶಾಸನ ನೀಡಲಾಗುತ್ತಿದೆ. ಇತರ ರಾಜ್ಯಗಳಲ್ಲಿ ವಿಕಲಚೇತನರಿಗೆ ₹5,000ರವರೆಗೆ ಮಾಶಾಸನ ನೀಡಲಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿಯೂ ಮಾಶಾಸನವನ್ನು ಕನಿಷ್ಠ ₹5,000ಕ್ಕೆ ಹೆಚ್ಚಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ವಿಕಲಚೇತನರ ಅಭಿವೃದ್ಧಿಗಾಗಿ ಮೀಸಲಿಡಲಾಗಿರುವ ಅನುದಾನ ಸಮರ್ಪಕವಾಗಿ ಬಳಕೆಯಾಗಬೇಕು. ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ವಿಕಲಚೇತನರಿಗೆ ಮೀಸಲಿಟ್ಟ ಅನುದಾನ ಖರ್ಚಾಗದೆ ಉಳಿಯುತ್ತಿರುವ ಕುರಿತು ಪರಿಶೀಲನೆ ನಡೆಸಬೇಕು. ವಿಕಲಚೇತನರಿಗಾಗಿ ಮೀಸಲಾದ ಅನುದಾನವನ್ನು ಬೇರೆ ಯೋಜನೆಗಳಿಗೆ ಬಳಸಲಾಗುತ್ತಿದೆ ಎಂಬ ಆರೋಪಗಳ ಬಗ್ಗೆಯೂ ಸರ್ಕಾರ ಸ್ಪಷ್ಟತೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ತಾಲೂಕು ಮಟ್ಟದ ಕುಂದುಕೊರತೆ ಸಭೆ ನಡೆಸಲಿ
ಗಂಗಾವತಿ ತಾಲೂಕಿನಲ್ಲಿ ಹಲವು ವರ್ಷಗಳಿಂದ ವಿಕಲಚೇತನರ ತಾಲೂಕು ಮಟ್ಟದ ಕುಂದುಕೊರತೆ ಸಭೆ ಸಮರ್ಪಕವಾಗಿ ನಡೆಯದಿರುವುದರಿಂದ ಅನೇಕ ಸಮಸ್ಯೆಗಳು ಪರಿಹಾರವಾಗದೆ ಉಳಿದಿವೆ. ಕೆಲವು ಕಡೆ ಸಭೆಗಳು ನಡೆದರೂ ಅವು ಕಾಟಾಚಾರಕ್ಕೆ ಸೀಮಿತವಾಗುತ್ತಿದ್ದು, ಸಮಸ್ಯೆಗಳಿಗೆ ಪರಿಣಾಮಕಾರಿ ಪರಿಹಾರ ದೊರೆಯುತ್ತಿಲ್ಲ ಎಂದು ಅಶೋಕ ಗುಡಿಕೋಟಿ ಆರೋಪಿಸಿದ್ದಾರೆ.
ತಾಲೂಕು ಆಡಳಿತ ಕೂಡಲೇ ವಿಕಲಚೇತನರ ಕುಂದುಕೊರತೆ ಸಭೆ ನಡೆಸಿ, ಶಿಕ್ಷಣ, ಆರೋಗ್ಯ, ಉದ್ಯೋಗ, ಪುನರ್ವಸತಿ, ಮಾಶಾಸನ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಚರ್ಚಿಸಿ ಪರಿಹಾರ ಕಲ್ಪಿಸಬೇಕು.
ವಿಕಲಚೇತನರ ಹಕ್ಕುಗಳ ಕಾಯ್ದೆ–2016ರ ಆಶಯದಂತೆ ವಿಕಲಚೇತನರನ್ನು ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಮುಖ್ಯವಾಹಿನಿಗೆ ತರಲು ಸರ್ಕಾರ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು. ಎಲ್ಲ ವರ್ಗದ ವಿಕಲಚೇತನರಿಗೆ ಸಮಾನವಾಗಿ ಸರ್ಕಾರಿ ಸೌಲಭ್ಯಗಳು ತಲುಪುವಂತೆ ಅಧಿಕಾರಿಗಳು ಕ್ರಮ ವಹಿಸಬೇಕು. ಈ ಕುರಿತು ಸರ್ಕಾರ, ಸ್ಥಳೀಯ ಸಚಿವರು ಹಾಗೂ ಶಾಸಕರು ತಕ್ಷಣ ಗಮನಹರಿಸಿ ನ್ಯಾಯ ಒದಗಿಸಬೇಕು ಎಂದು ಅಶೋಕ ಗುಡಿಕೋಟಿ ಒತ್ತಾಯಿಸಿದ್ದಾರೆ.

Total Views: 0
ಜಾಹೀರಾತು
Share This Article