Private schools pressured to display fee details on school walls: Yallappa Kattimani, KKDSS.
Private schools pressured to display fee details on school walls: Yallappa Kattimani, KKDSS.

ಖಾಸಗಿ ಶಾಲೆಗಳು ಶುಲ್ಕಗಳ ಬಗ್ಗೆ ಶಾಲಾ ಗೋಡೆಗಳ ಮೇಲೆ ಬರೆಯಿಸಲು ಒತ್ತಾಯ: ಯಲ್ಲಪ್ಪ ಕಟ್ಟಿಮನಿ, ಕೆ.ಕೆ.ಡಿ.ಎಸ್.ಎಸ್


ಗಂಗಾವತಿ: ಖಾಸಗಿ ಶಿಕ್ಷಣ ಸಂಸ್ಥೆಗಳು ಕರ್ನಾಟಕ ಶಿಕ್ಷಣಕಾಯ್ದೆ 1983ರ ಅಡಿಯಲ್ಲಿ ರಚಿತವಾಗಿರುವ ಎಲ್ಲಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವುದು ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಈ ನಿಯಮಗಳನ್ನು ಮೀರಿ ಯಾವುದೇ ವಂತಿಗೆ ಸಂಗ್ರಹಿಸುವುದಕ್ಕೆ ಅವಕಾಶ ಇರುವುದಿಲ್ಲ. ಆದರೂ ಕಾರಟಗಿ, ಗಂಗಾವತಿ ಹಾಗೂ ಕನಕಗಿರಿ ತಾಲೂಕುಗಳಲ್ಲಿ ಖಾಸಗಿ ಶಾಲೆಗಳು ಪ್ರತಿವರ್ಷ ಮನಬಂದಂತೆ ಶುಲ್ಕ ಹೆಚ್ಚಳ ಮಾಡಿ, ಶಿಕ್ಷಣವನ್ನು ವಾಣಿಜ್ಯ ಕ್ಷೇತ್ರವನ್ನಾಗಿ ಮಾಡಿಕೊಂಡು ಪಾಲಕರಿಂದ ಸಿಕ್ಕ ಸಿಕ್ಕ ಹಾಗೆ ಶುಲ್ಕದ ರೂಪದಲ್ಲಿ ಹಣ ವಸೂಲಿ ಮಾಡಲಾಗುತ್ತಿದೆ, ಈ ಕುರಿತು ಶಿಕ್ಷಣ ಇಲಾಖೆ ಎಚ್ಚೆತ್ತುಕೊಂಡು ಖಾಸಗಿ ಶಾಲೆಗಳ ಮೇಲೆ ಹಿಡಿತ ಸಾಧಿಸಿ, ಶುಲ್ಕಗಳನ್ನು ಮನಬಂದಂತೆ ಹೆಚ್ಚಳ ಮಾಡದ ಹಾಗೆ ಹಾಗೂ ಶಿಕ್ಷಣ ಇಲಾಖೆಯ ನಿಯಮಗಳನ್ನು ಪಾಲಿಸುವಂತೆ ಶಿಸ್ತು ಕ್ರಮ ಜರುಗಿಸಲು ಹಾಗೂ ಖಾಸಗಿ ಶಾಲೆಗಳು ಶಾಲಾ ಶುಲ್ಕಗಳನ್ನು ಪಾಲಕರಿಂದ ಆನ್‌ಲೈನ್ ಮೂಲಕ ತಮ್ಮ ಸಂಸ್ಥೆಯ ಬ್ಯಾಂಕ್ ಖಾತೆಗೆ ಜಮೆ ಮಾಡಿಕೊಳ್ಳಲು ಆದೇಶಿಸಬೇಕೆಂದು ಈಗಾಗಲೇ ನಮ್ಮ ಕೆ.ಕೆ.ಡಿ.ಎಸ್.ಎಸ್ ಸಂಘಟನೆ ಹಲವಾರು ಬಾರಿ ಪತ್ರಗಳ ಮೂಲಕ ಮನವಿ ಮಾಡಿಕೊಂಡರೂ ಸ್ಥಳೀಯ ಕ್ಷೇತ್ರಶಿಕ್ಷಣಾಧಿಕಾರಿಗಳು ಕೇವಲ ನೋಟಿಸ್ ನೀಡಿ ಸುಮ್ಮನಾಗಿದ್ದು, ಯಾವುದೇ ಕ್ರಮ ಜರುಗಿಸದೇ ಇರುವುದು ಬೇಸರದ ಸಂಗತಿಯಾಗಿದೆ ಎಂದು ಸಂಘಟನೆಯ ರಾಜ್ಯಾಧ್ಯಕ್ಷರಾದ ಯಲ್ಲಪ್ಪ ಕಟ್ಟಿಮನಿ ಆಕ್ರೋಶ ವ್ಯಕ್ತಪಡಿಸಿದರು.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ಖಾಸಗಿ ಶಾಲೆಗಳು ಶುಲ್ಕದ ವಿವರಗಳನ್ನು ಶಾಲಾ ಗೋಡೆಯ ಮೇಲೆ (4X8ರ ಸೈಜ್ ನಲ್ಲಿ) ಪೇಂಟ್‌ನಿಂದ ಬರೆಯಿಸುವುದು, ಪ್ರಾಥಮಿಕ ತರಗತಿಗಳಿಗೆ ನಿಯಮ 13(2) (ಬಿ) ಪ್ರಕಾರ ಪ್ರವೇಶ ಪರೀಕ್ಷೆ ನಡೆಸುವ ಮೂಲಕ ವಿಧ್ಯಾರ್ಥಿಗಳನ್ನು ತರಗತಿಗೆ ದಾಖಲು ಮಾಡಿಕೊಳ್ಳುವ ಸಂಸ್ಥೆಗೆ ದಂಡ ವಿಧಿಸಲು ಅವಕಾಶವಿದೆ, ಇದಕ್ಕೆ ಅವಕಾಶ ನೀಡದಂತೆ ಎಲ್ಲಾ ಶಾಲೆಯ ಆಡಳಿತ ಮಂಡಳಿ/ಮುಖ್ಯೋಪಾಧ್ಯಾಯರು ಸರಕಾರದ ನಿಯಮನುಸಾರ ವಿಧ್ಯಾರ್ಥಿಗಳ ದಾಖಲಾತಿ ಮಾಡಿಕೊಳ್ಳಲು ಸರ್ಕಾರ ತಿಳಿಸಿದೆ, ಆದರೆ ಯಾವುದೇ ಖಾಸಗಿ ಶಿಕ್ಷಣ ಸಂಸ್ಥೆಯವರು ಸರಕಾರಿ ನಿಯಮಗಳನ್ನು ಹಾಗೂ ಸುತ್ತೋಲೆಗಳ ಅಂಶಗಳ ಉಲ್ಲಂಘನೆ ಮಾಡುತ್ತಿದ್ದಾರೆ. ಗಂಗಾವತಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೇ ಮೌನವಾಗಿದ್ದಾರೆ. ಕೂಡಲೇ ಈ ಬಗ್ಗೆ ಎಚ್ಚೆತ್ತುಕೊಂಡು ಖಾಸಗಿ ಶಾಲೆಗಳಿಗೆ ಶಿಸ್ತುಬದ್ಧವಾಗಿ ಸೂಚನೆ ಹೊರಡಿಸಿ, ಶಿಕ್ಷಣ ಇಲಾಖೆಯ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಲು ಹಾಗೂ ಶುಲ್ಕಗಳ ವಿವರಗಳ ಬಗ್ಗೆ ಗೋಡೆಬರಹ ಬರೆಯಿಸಲು ಆದೇಶಿಸಬೇಕೆಂದು ಕೆ.ಕೆ.ಡಿ.ಎಸ್.ಎಸ್ ಒತ್ತಾಯಿಸುತ್ತದೆ ಎಂದರು. ಒಂದುವೇಳೆ ಹೀಗೆಯೇ ಶಿಕ್ಷಣ ಇಲಾಖೆ ನಿರ್ಲಕ್ಷ್ಯ ತೋರಿದಲ್ಲಿ ಕೆ.ಕೆ.ಡಿ.ಎಸ್.ಎಸ್ ಸಂಘಟನೆ ಇದೇ ತಿಂಗಳ 27 ರಂದು ಕೊಪ್ಪಳ ಜಿಲ್ಲಾಧಿಕಾರಿಗಳ ಕಛೇರಿ ಮುಂದುಗಡೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.





