
Dengue control is everyone's responsibility: Dr. T. Lingaraju

ಡೆಂಗ್ಯೂ ನಿಯಂತ್ರಣ ಪ್ರತಿಯೊಬ್ಬರ ಜವಾಬ್ದಾರಿ: ಡಾ. ಟಿ.ಲಿಂಗರಾಜು

ಕೊಪ್ಪಳ ಮೇ 18 (ಕರ್ನಾಟಕ ವಾರ್ತೆ): ಡೆಂಗ್ಯೂ ನಿಯಂತ್ರಣ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ಟಿ.ಲಿಂಗರಾಜು ಅವರು ಹೇಳಿದರು.
ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ-2026ರ ಅಂಗವಾಗಿ ಕೊಪ್ಪಳ ಜಿಲ್ಲೆಯಲ್ಲಿ ಡೆಂಗ್ಯೂ ಜ್ವರದ ಹರಡುವಿಕೆ, ನಿಯಂತ್ರಣ ಹಾಗೂ ರೋಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಜನಸಮುದಾಯವನ್ನು ಜಾಗೃತಿಗೊಳಿಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಇತ್ತೀಚೆಗೆ ಕೊಪ್ಪಳ ನಗರದ ಹಳೆ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಹಮ್ಮಿಕೊಂಡಿದ್ದ ಡೆಂಗ್ಯೂ ಜಾಗೃತಿಯ ಜಾಥಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಭಾರತ ಘನ ಸರ್ಕಾರದ ಆರೋಗ್ಯ ಸಚಿವಾಲಯದ ನಿರ್ದೇಶನದ ಮೇರೆಗೆ ಪ್ರತಿವರ್ಷದ ಮೇ-16 ಅನ್ನು ಜಿಲ್ಲೆಯಾಧ್ಯಂತ ರಾಷ್ಟ್ರೀಯ ಡೆಂಗ್ಯೂ ದಿನಾಚರಣೆಯನ್ನಾಗಿ ಆಚರಿಸಿ ಡೆಂಗ್ಯೂ ರೋಗ ಪ್ರಸರಣ ಅವಧಿಯ ಮುನ್ನವೇ ಜನಸಮುದಾಯವನ್ನು ಜಾಗೃತಿಗೊಳಿಸಲು ವ್ಯಾಪಕ ಅಭಿಯಾನ, ಜಾಥಗಳು, ರ‍್ಯಾಲಿ, ಅಂತರ್ ಇಲಾಖಾ ಸಭೆ ಸಮಾರಂಭಗಳನ್ನು ಜಿಲ್ಲೆಯಾಧ್ಯಂತ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ ಡೆಂಗ್ಯೂ ನಿಯಂತ್ರಣ ಪ್ರತಿಯೊಬ್ಬರ ಸಹಕರಿಸಬೇಕು ಎಂದರು.
ಡೆಂಗ್ಯೂ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯಿಂದ ಎಲ್ಲಾ ಸೂಕ್ತ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗಿದೆ. ಡೆಂಗ್ಯೂ-ಚಿಕೂನ್‌ಗುನ್ಯಾ ಜ್ವರಗಳಿಗೆ ಯಾವುದೇ ನಿರ್ಧಿಷ್ಟ ಚಿಕಿತ್ಸೆ ಅಥವಾ ಲಸಿಕೆಯಾಗಲಿ ಪ್ರಸ್ತುತ ಲಭ್ಯವಿಲ್ಲದಿದ್ದರೂ ಸಹ ಜನರೂ ಭಯಪಡುವ ಅವಶ್ಯಕತೆ ಇಲ್ಲ. ಡೆಂಗ್ಯೂ-ಚಿಕೂನ್‌ಗುನ್ಯಾ ಜ್ವರಗಳ ಲಕ್ಷಣಗಳನ್ನಾಧರಿಸಿ ಸೂಕ್ತ ಚಿಕಿತ್ಸೆ ನೀಡಲಾಗುವುದು. ಯಾವುದೇ ಜ್ವರ ಕಾಣಿಸಿಕೊಂಡರೇ ಜನಸಮುದಾಯ ಶೀಘ್ರವೇ ಹತ್ತಿರದ ಸರ್ಕಾರಿ ಆರೋಗ್ಯ ಕೇಂದ್ರಗಳಿಗೆ ತೆರಳಿ ಪರೀಕ್ಷೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆಯಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ಮತ್ತು ಉಚಿತ ಪ್ರಯೋಗಾಲಯ ಪರೀಕ್ಷೆಗಳನ್ನು ಮಾಡಲಾಗುತ್ತಿದ್ದು, ಜನರು ಅನಗತ್ಯ ಭಯಕ್ಕೆ ಒಳಗಾಗದೆ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು ಎಂದು ಹೇಳಿದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿಗಳಾದ ಡಾ. ಎಚ್.ನಂದಕುಮಾರ್ ಅವರು ಮಾತನಾಡಿ, ಡೆಂಗ್ಯೂ ಜ್ವರವು ವೈರಸ್ ಕಾಯಿಲೆಯಾಗಿದ್ದು, ಇದು ಈಡಿಸ್ ಜಾತಿಯ ಸೊಳ್ಳೆಗಳ ಕಚ್ಚುವಿಕೆಯಿಂದ ಹರಡುತ್ತದೆ. ಈ ಸೊಳ್ಳೆಗಳು ಬಹುತೇಕ ಹಗಲು ಹೊತ್ತಿನಲ್ಲಿಯೇ ಕಚ್ಚುತ್ತವೆ. ಈಡಿಸ್ ಸೊಳ್ಳೆಗಳು ನೀರು ಶೇಖರಣೆ ಸಲಕರಣೆಗಳಲ್ಲಿ ಶುದ್ದ ನೀರಿನಲ್ಲಿಯೇ ಸಂತಾನಾಭಿವೃದ್ಧಿ ಮಾಡುತ್ತವೆ. ಹಾಗಾಗಿ ನೀರು ಶೇಖರಣೆ ಸಲಕರಣೆಗಳನ್ನು ಸದಾಕಾಲ ಮುಚ್ಚಿಡಬೇಕು. ಇದರ ಜೊತೆಗೆ ಮನೆಯ ಒಳಾಂಗಣ ಮತ್ತು ಹೊರಾಂಗಣದಲ್ಲಿ ನೀರು ನಿಲ್ಲದಂತೆ ಎಚ್ಚರವಹಿಸಿ ಸೊಳ್ಳೆಗಳ ಉತ್ಪತ್ತಿಯನ್ನು ತಡೆಗಟ್ಟಬೇಕೆಂದರು.
ಈಡೀಸ್ ಲಾರ್ವಾ ಸಮೀಕ್ಷೆಗಾಗಿ ಮನೆಗೆ ಬೇಟಿ ನೀಡುವ ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತರಿಗೆ ಜನರು ಸಹಕಾರ ನೀಡಿ ಅವರ ಸಲಹೆಗಳನ್ನು ಪಾಲಿಸಬೇಕು. ಈ ವರ್ಷದ ಧ್ಯೇಯವಾಕ್ಯ “ಡೆಂಗ್ಯೂ ನಿಯಂತ್ರಣಕ್ಕಾಗಿ ಸಮುದಾಯದ ಸಹಭಾಗಿತ್ವ ಪರಿಶೀಲಿಸಿ, ಸ್ವಚ್ಚಗೊಳಿಸಿ ಹಾಗೂ ಮುಚ್ಚಿಡಿ” ಎಂಬುದಾಗಿದೆ ಎಂದು ಹೇಳಿದರು.
ಜಿಲ್ಲಾ ವಿ.ಬಿ.ಡಿ ನಿಯಂತ್ರಣಾಧಿಕಾರಿಗಳಾದ ಡಾ. ಕುಮಾರಸ್ವಾಮಿ ಗೋನಾಳ್ ಅವರು ಮಾತನಾಡಿ, ಪ್ರಸ್ತುತ ಪೂರ್ವ ಮುಂಗಾರು ಮಳೆಗಾಲ ಪ್ರಾರಂಭವಾಗಿದ್ದು, ಅಲ್ಲಲ್ಲಿ ನಿಂತ ನೀರಿನ ತಾಣಗಳು ಉತ್ಪತ್ತಿಯಾಗುತ್ತವೆ ಹಾಗೂ ನೀರಿನ ಶೇಖರಣಾ ಸಲಕರಣೆಗಳಲ್ಲಿ ನೀರು ಶೇಖರಣೆಯಾಗಿ ಸೊಳ್ಳೆ ಉತ್ಪತ್ತಿಯಾಗಿ ಸೊಳ್ಳೆಗಳ ಸಾಂದ್ರತೆ ಹೆಚ್ಚಾಗುತ್ತದೆ. ಕಾರಣ, ಸೊಳ್ಳೆಗಳಿಂದ ಹರಡುವ ರೋಗಗಳಾದ ಡೆಂಗ್ಯೂ, ಚಿಕೂನ್‌ಗುನ್ಯಾ ಹಾಗೂ ಮಲೇರಿಯಾದಂತಹ ಕಾಯಿಲೆಗಳು ಹೆಚ್ಚಾಗುವ ಸಂಭವವಿರುತ್ತದೆ. ಅದರಲ್ಲೂ ಡೆಂಗ್ಯೂ-ಚಿಕೂನ್‌ಗುನ್ಯಾ ಹರಡುವ ಈಡಿಸ್ ಸೊಳ್ಳೆಗಳು ಮನೆಯ ಒಳಗಡೆ ಕಚ್ಚುವುದರಿಂದ ಡೆಂಗ್ಯೂ-ಚಿಕೂನ್‌ಗುನ್ಯಾ ಜ್ವರಗಳು ಹರಡುವ ಸಾದ್ಯತೇ ಇರುತ್ತದೆ. ಕಾರಣ ಯಾವುದೇ ಜ್ವರವಿರಲಿ ಶೀಘ್ರವೇ ಹತ್ತಿರದ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ರಕ್ತ ಪರೀಕ್ಷೆ ಮಾಡಿಸಿ, ಉಚಿತ ಚಿಕಿತ್ಸೆ ಪಡೆಯಬೇಕು. ಹಾಗೂ ಮಲಗುವಾಗ ಸೊಳ್ಳೆ ಪರದೆಗಳನ್ನು ಬಳಕೆಮಾಡಿ. ವಾರಕ್ಕೊಮ್ಮೆ ನೀರು ಶೇಖರಣ ಸಲಕರಣೆಗಳನ್ನು ಖಾಲಿಮಾಡಿ ಸ್ವಚ್ಚಗೊಳಿಸಿ ನೀರು ತುಂಬಿ ಮುಚ್ಚಿಡಬೇಕು. ಸೊಳ್ಳೆ ಕಡಿತದಿಂದ ದೂರವಿರಲು ಸಾದ್ಯವಾದ ಎಲ್ಲಾ ಸ್ವಯಂ ರಕ್ಷಣ ವಿಧಾನಗಳನ್ನು ಅನುಸರಿಸಿ. ಡೆಂಗ್ಯೂ ಜ್ವರ ನಿಯಂತ್ರಣಕ್ಕೆ ಜನಸಮುದಾಯದ ಸಹಕಾರ, ಸೊಳ್ಳೆ ಉತ್ಪತ್ತಿ ತಾಣಗಳ ನಿರ್ಮೂಲನೆ ಹಾಗೂ ಜನಜಾಗೃತಿಯೊಂದೆ ಪರಿಹಾರ ಮಾರ್ಗ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕುಷ್ಟರೋಗ ನಿಯಂತ್ರಣಾಧಿಕಾರಿಗಳಾದ ಡಾ. ಪ್ರಕಾಶ್ ಎಚ್.ಎಸ್., ಕೊಪ್ಪಳ ತಾಲೂಕ ಆರೋಗ್ಯಾಧಿಕಾರಿಗಳಾದ ಡಾ. ರಾಮಾಂಜನೇಯಾ ಹಾಗೂ ಜಿಲ್ಲಾ & ತಾಲೂಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ವ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಜಿಲ್ಲಾ ಆರೋಗ್ಯ ಶಿಕ್ಣಣಾಧಿಕಾರಿಗಳಾದ ಶಿವಾನಂದ ಪೂಜಾರ ಅವರು ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು ಹಾಗೂ ರಾಷ್ಟ್ರೀಯ ಡೆಂಗ್ಯೂ ದಿನಾಚರಣೆಯ ಮಹತ್ವ, ಜನಸಮುದಾಯ ಅನುಸರಿಸಬೇಕಾದ ನಿಯಂತ್ರಣ ಕ್ರಮಗಳನ್ನು ವಿವರಿಸಿದರು.
*ಸಾರ್ವಜನಿಕರಿಗೆ ಅರಿವು:* ನಗರದ ಆಶೋಕ ವೃತ್ತದಲ್ಲಿ “ಮಾನವ ಸರಪಳಿ ನಿರ್ಮಿಸಿ ಜನಸಮುದಾಯ ಹಾಗೂ ಸಿಬ್ಬಂದಿಗೆ ಸೊಳ್ಳೆಗಳಿಂದ ಹರಡುವ ರೋಗಗಳ ಬಗ್ಗೆ ಅರಿವು ಮೂಡಿಸಲಾಯಿತು.
ಕೊಪ್ಪಳ ನಗರದಾದ್ಯಂತ ಸಂಚರಿಸಿದ “ಡೆಂಗ್ಯೂ ಜಾಗೃತಿ ಜಾಥಾ”ವು ಸಂದೇಶ ಹಾಗೂ ಜಾನಪದ ಗೀತೆಗಳನ್ನು ಬಿತ್ತರಿಸಲಾಯಿತು ಹಾಗೂ ಡೆಂಗ್ಯೂ ಜಾಗೃತಿ ಗೀತೆಗಳನ್ನು ಹಾಡುವುದರ ಮೂಲಕ, ಡೆಂಗ್ಯೂ ಜಾಗೃತಿ ಕರಪತ್ರಗಳನ್ನು ಹಂಚುವುದರ ಮೂಲಕ ಮತ್ತು ಬಿತ್ತಿಪತ್ರಗಳನ್ನು ಪ್ರದರ್ಶಿಸುವುದರ ಮೂಲಕ ನಗರದಲ್ಲಿ ಡೆಂಗ್ಯೂ ಜನ ಜಾಗೃತಿ ಮೂಡಿಸಲಾಯಿತು. ಕೊಪ್ಪಳ ಬಸ್ ಡೀಪೋ ಹಾಗೂ ಕಾರ್ಯಗಾರಗಳಲ್ಲಿ ವಿಶೇಷ ಲಾರ್ವಾಸಮೀಕ್ಷೆ ನಡೆಸಿ ಸರ್ವಸಿಬ್ಬಂದಿಗೆ ಡೆಂಗ್ಯೂ-ಚಿಕೂನ್‌ಗುನ್ಯಾ ಕುರಿತು ಅರಿವು ಮೂಡಿಸಲಾಯಿತು.
