
National Lok Adalat on July 11
Special Lok Adalat to be held in August for 'Peace Conference'

ಜುಲೈ 11 ರಂದು ರಾಷ್ಟ್ರೀಯ ಲೋಕ್ ಅದಾಲತ್
* ಆಗಸ್ಟ್ ಮಾಹೆಯಲ್ಲಿ `ಸಮಾಧಾನ ಸಮಾರೋಹ’ ವಿಶೇಷ ಲೋಕ್ ಅದಾಲತ್

ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥ ಪಡಿಸಿಕೊಳ್ಳಲು ಸುವರ್ಣಾವಕಾಶ: ನ್ಯಾ. ಮಹಾಂತೇಶ ಎಸ್. ದರಗದ
ಕೊಪ್ಪಳ ಮೇ 08 (ಕರ್ನಾಟಕ ವಾರ್ತೆ): ರಾಜಿ ಸಂಧಾನದ ಮೂಲಕ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಕ್ಕೆ ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ಮತ್ತು ಸರ್ವೋಚ್ಛ ನ್ಯಾಯಾಲಯದಲ್ಲಿನ ಬಾಕಿ ಇರುವ ವ್ಯಾಜ್ಯಗಳನ್ನು ರಾಜಿ ಸಂಧಾನದ ಮೂಲಕ ಪರಿಹರಿಸಿಕೊಳ್ಳಲು ಸಮಾಧಾನ ಸಮಾರೋಹ’ ವಿಶೇಷ ಲೋಕ್ ಅದಾಲತ್‌ನಲ್ಲಿ ಸುವರ್ಣಾವಕಾಶವಾಗಿದ್ದು, ಪಕ್ಷಗಾರರು ಸದುಪಯೋಗ ಪಡೆದುಕೊಳ್ಳುವಂತೆ ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮಹಾಂತೇಶ ಎಸ್. ದರಗದ ಅವರು ಹೇಳಿದರು.
ಜಿಲ್ಲಾ ನ್ಯಾಯಾಲಯದಲ್ಲಿರುವ ಡಿ.ಎಲ್.ಎಸ್.ಎ ಕಚೇರಿಯಲ್ಲಿ `ಸಮಾಧಾನ ಸಮಾರೋಹ’ ವಿಶೇಷ ಲೋಕ ಅದಾಲತ ಮತ್ತು ಮೆಗಾ ಲೋಕ ಅದಾಲತನ ಮಾಹಿತಿ ನೀಡಲು ಮೇ 08 ರಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಚಂದ್ರಶೇಖರ. ಸಿ. ಅವರ ನೇತೃತ್ವದಲ್ಲಿ ಕೊಪ್ಪಳ ಜಿಲ್ಲೆಯಾದ್ಯಂತ 2026ರ ಜುಲೈ 11 ರಂದು ನಡೆಯಲಿರುವ ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ಪಕ್ಷಗಾರರು ತಮ್ಮ ವ್ಯಾಜ್ಯಗಳನ್ನು ಪರಸ್ಪರ ರಾಜಿ ಸಂಧಾನದ ಮಾಡಿಕೊಳ್ಳುವ ಮೂಲಕ ತಮ್ಮ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥ ಪಡಿಸಿಕೊಳ್ಳಬಹುದು. ರಾಷ್ಟ್ರೀಯ ಲೋಕ್ ಅದಾಲತ್ ಮೂಲಕ ರಾಜಿ ಸಂಧಾನಕ್ಕಾಗಿ ಸಿವಿಲ್ ದಾವೆಗಳು, ಭೂ-ಸ್ವಾಧೀನ ಪ್ರಕರಣಗಳು, ಬ್ಯಾಂಕ್ ವಸೂಲಾತಿ ಪ್ರಕರಣಗಳು, ಚೆಕ್ ಬೌನ್ಸ್ ಪ್ರಕರಣಗಳು, ಮೋಟಾರು ಅಪಘಾತ ಪರಿಹಾರ ಪ್ರಕರಣಗಳು, ವೈವಾಹಿಕ ಪ್ರಕರಣಗಳು ಹಾಗೂ ರಾಜಿ ಆಗಲು ಅರ್ಹವಿರುವ ಕ್ರಿಮಿನಲ್ ಕಂಪೌಂಡೆಬಲ್ ಪ್ರಕರಣಗಳು ಸೇರಿದಂತೆ ಹಲವಾರು ಪ್ರಕರಣಗಳನ್ನು ರಾಜಿ ಸಂಧಾನದಲ್ಲಿ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ ಎಂದರು.
ಇತ್ಯರ್ಥಪಡಿಸಿಕೊಂಡರೆ ಪ್ರಕರಣವು ಇಬ್ಬರಿಗೂ ಒಪ್ಪಿಗೆಯಾಗುವಂತೆ ಕೊನೆಗೊಂಡು ನ್ಯಾಯಾಲಯಕ್ಕೆ ತುಂಬಿದ ನ್ಯಾಯಾಲಯ ಶುಲ್ಕ ಸಂಪೂರ್ಣವಾಗಿ ವಾಪಸ್ ನೀಡಲಾಗುವುದು. ಕಾರಣ ಪಕ್ಷಗಾರರು ಇದೇ ಜುಲೈ 11ರಂದು ಕೊಪ್ಪಳ ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಜರುಗುವ “ರಾಷ್ಟ್ರೀಯ ಲೋಕ ಅದಾಲತ್”ನ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.
ಸಮಾಧಾನ ಸಮಾರೋಹ ವಿಶೇಷ ಲೋಕ್ ಅದಾಲತ್: ಭಾರತದ ಸರ್ವೋಚ್ಚ ನ್ಯಾಯಾಲಯವು “ಸಮಾಧಾನ ಸಮಾರೋಹ” ವಿಶೇಷ ಲೋಕ್ ಅದಾಲತ್‌ನ್ನು 2026ರ ಆಗಸ್ಟ್ 21, 22 ಮತ್ತು 23ರಂದು ಮೂರು ದಿನಗಳ ಕಾಲ ಹಮ್ಮಿಕೊಂಡಿದ್ದು, ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದ ವಿಚಾರಣೆಗೆ ಬಾಕಿ ಇರುವ ಒಟ್ಟು 4328 ಪ್ರಕರಣಗಳನ್ನು ಸಂಧಾನಕ್ಕಾಗಿ ಗುರುತಿಸಿ, ಈ ವಿಶೇಷ ಲೋಕ್ ಅದಾಲತ್‌ನ್ನು ಆಯೋಜಿಸಿದೆ ಎಂದರು.
ಕೊಪ್ಪಳ ಜಿಲ್ಲೆಗೆ ಸಂಬಂಧಿಸಿದಂತೆ ಈ ವರೆಗೆ ಸಿವಿಲ್-60 ಮತ್ತು ಕ್ರಿಮಿನಲ್ (ಅ)-1 ಸೇರಿ ಒಟ್ಟು 61 ಪ್ರಕರಣಗಳನ್ನು ಗುರುತಿಸಿದ್ದು, ಆಸಕ್ತಿಯುಳ್ಳವರು ಸರ್ವೋಚ್ಛ ನ್ಯಾಯಾಲಯದಲ್ಲಿ ಬಾಕಿ ಇರುವ ತಮ್ಮ ವ್ಯಾಜ್ಯಗಳನ್ನು ರಾಜಿ ಸಂಧಾನದ ಮೂಲಕ ಪರಿಹರಿಸಿಕೊಳ್ಳಲು ನೋಂದಣಿಗೂ ಸಹ ಅವಕಾಶ ಕಲ್ಪಿಸಲಾಗಿದೆ. ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಗಳನ್ನು ಸಂಪರ್ಕಿಸುವ ಮೂಲಕ ಸಾರ್ವಜನಿಕರು ತಮ್ಮ ವ್ಯಾಜ್ಯಗಳನ್ನು ಪರಿಹರಿಸಿಕೊಳ್ಳಲು ಇಂದಿನಿಂದಲೇ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಆಯ್ಕೆಯಾದ ವ್ಯಾಜ್ಯಗಳನ್ನು ಮಧ್ಯಸ್ಥಿಕೆಗಾರರ ಮಧ್ಯಸ್ಥಿಕೆಯಲ್ಲಿ ಸಂಬಂಧಪಟ್ಟ ಜಿಲ್ಲಾ ಅಥವಾ ತಾಲ್ಲೂಕು ಮಟ್ಟದಲ್ಲಿಯೇ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದಾಗಿದೆ ಎಂದು ಗೌರವಾನ್ವಿತ ನ್ಯಾಯಾಧೀಶರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ನ್ಯಾಯಾಲಯದ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಿಬ್ಬಂದಿಗಳು ಮತ್ತು ಮಾಧ್ಯಮ ಪ್ರತಿನಿಧಿಗಳು ಉಪಸ್ಥಿತರಿದ್ದರು.
