
ಒಳಮೀಸಲಾತಿ ನಿಯಮಗಳ ಗೊಂದಲ ಬಗೆಹರಿಸುವವರೆಗೆ ನೇಮಕಾತಿ ಸ್ಥಗಿತಗೊಳಿಸಬೇಕು: ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರಿಗೆಎಸ್. ಸಂಗಮೇಶ್ ಒತ್ತಾಯ

Recruitment should be stopped until confusion over internal reservation rules is resolved: S. Sangamesh urges Chief Secretary Dr. Shalini Rajneesh

ಬೆಂಗಳೂರು: ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಅನುಷ್ಠಾನಕ್ಕೆ ಸಂಬಂಧಿಸಿದ 400 ಬಿಂದುಗಳ ವರ್ತುಲ ಸ್ಪಷ್ಟೀಕರಣ ನೀಡುವ ಜೊತೆಗೆ ಶೇ 3ಕ್ಕಿಂತ ಕಡಿಮೆ ಹುದ್ದೆಗಳ ವಿಚಾರದಲ್ಲಿ ಕಾನೂನುಬದ್ಧ ತಿದ್ದುಪಡಿ ಮಾಡಿ ಸ್ಪಷ್ಟವಾಗಿ ನಿಯಮಗಳನ್ನು ರೂಪಿಸಿ ಜಾರಿಗೆ ತರಲು ಆದ್ಯತೆ ನೀಡಬೇಕೆಂದು ಕರ್ನಾಟಕ ರಾಜ್ಯ ಯುವ ಸಮೂಹ ಮುಖ್ಯಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರನ್ನು ಒತ್ತಾಯಿಸಿದೆ.
ಈ ಸಂಬಂಧ ಮುಖ್ಯಕಾರ್ಯದರ್ಶಿ ಅವರಿಗೆ ಪತ್ರ ಬರೆದಿರುವ ಕರ್ನಾಟಕ ರಾಜ್ಯ ಯುವ ಸಮೂಹದ ರಾಜ್ಯಾಧ್ಯಕ್ಷ ಎಸ್. ಸಂಗಮೇಶ್, ಗೊಂದಲಗಳು ಬಗೆಹರಿಯುವ ತನಕ ಒಳಮೀಸಲಾತಿ ಅನ್ವಯಿಸಿ ಯಾವುದೇ ನೇಮಕಾತಿ ನಡೆಸಬಾರದು. ಸಂವಿಧಾನದ 14, 15(4), 16(1), 16(4) ಹಾಗೂ 46ರಂತೆ, ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಒಂದು ಸಾಮಾಜಿಕ ನ್ಯಾಯದ ಅವಿಭಾಜ್ಯ ಅಂಗವಾಗಿದೆ. ರಾಜ್ಯ ಸರ್ಕಾರ ಈ ದಿಕ್ಕಿನಲ್ಲಿ ಆದೇಶ ಹೊರಡಿಸಿರುವುದು ಸ್ವಾಗತಾರ್ಹವಾದ ಹೆಜ್ಜೆಯಾಗಿದೆ ಎಂದಿದ್ದಾರೆ.
ಆದಾಗ್ಯೂ, ಪ್ರಸ್ತುತ ಆದೇಶದ ಕೆಲವು ವಿಧಾನಗಳು ಸ್ಪಷ್ಟತೆ ಕೊರತೆಯಿಂದ ಹಾಗೂ ಕಾನೂನುಬದ್ಧ ದುರ್ಬಲತೆಯಿಂದ, ಪರಿಣಾಮಕಾರಿ ಅನುಷ್ಠಾನಕ್ಕೆ ಅಡ್ಡಿಯಾಗುವ ಸಾಧ್ಯತೆ ಇದೆ. 400 ಬಿಂದುಗಳ ವರ್ತುಲದಲ್ಲಿ ಸ್ಪಷ್ಟ ಮಾರ್ಗಸೂಚಿ ಅಗತ್ಯವಾಗಿದೆ. ಆದೇಶದಲ್ಲಿ “400 ಪಾಯಿಂಟ್ ರೋಸ್ಟರ್ ಶಲ್ ಬಿ ಫಾಲೋವ್ಡ್” ಎಂದು ಮಾತ್ರ ಉಲ್ಲೇಖವಾಗಿದ್ದು, ಅದರ ಕಾರ್ಯನಿರ್ವಹಣಾ ಚೌಕಟ್ಟು ಸ್ಪಷ್ಟಪಡಿಸಿಲ್ಲ ಎಂದು ಎಸ್. ಸಂಗಮೇಶ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿಗೆ ಸಂಬಂಧಿಸಿದ 400-ಬಿಂದುಗಳ ವರ್ತುಲ ಸ್ಪಷ್ಟೀಕರಣ ಹಾಗೂ “3ಕ್ಕಿಂತ ಕಡಿಮೆ ಹುದ್ದೆಗಳು” ನಿಯಮಗಳಿಗೆ ತಿದ್ದುಪಡಿ ಮಾಡಬೇಕು. ಈ ನಿಬಂಧನೆಗಳ ಮೂಲಕ ಹುದ್ದೆಗಳನ್ನು ಕೃತಕವಾಗಿ ವಿಭಜಿಸಿ ಒಳಮೀಸಲಾತಿಯನ್ನು ತಪ್ಪಿಸುವ ಆತಂಕವಿದೆ. ಇದು ಪರೋಕ್ಷ ಭೇದಭಾವಕ್ಕೆ ಕಾರಣವಾಗುವುದಷ್ಟೇ ಅಲ್ಲದೇ, ಕಾನೂನಿನ ಆತ್ಮವನ್ನೇ ಹಾಳು ಮಾಡುವ ಲೋಪವಾಗಿ ಪರಿಣಮಿಸಬಹುದು. ಹೀಗಾಗಿ 400-ಬಿಂದುಗಳ ವರ್ತುಲಕ್ಕೆ ಸ್ಪಷ್ಟ ಎಸ್ಒಪಿ ಪ್ರಕಟಿಸಬೇಕು. ಪರಿಶಿಷ್ಟ ಜಾತಿಗಳ ಉಪವರ್ಗಗಳಿಗೆ ವೈಜ್ಞಾನಿಕವಾಗಿ ಹಂಚಿಕೆ ಮಾಡಬೇಕು. ರೋಟೇಷನ್, ಬ್ಯಾಕ್ಲಾಗ್ ಮತ್ತು ಕ್ಯಾರಿ-ಫಾರ್ವರ್ಡ್ ನಿಯಮಗಳನ್ನು ಸ್ಪಷ್ಟಪಡಿಸಬೇಕು ಎಂದು ಹೇಳಿದ್ದಾರೆ.
“3ಕ್ಕಿಂತ ಕಡಿಮೆ ಹುದ್ದೆಗಳು” ನಿಯಮವನ್ನು ತಕ್ಷಣ ರದ್ದುಪಡಿಸಬೇಕು ಅಥವಾ ತಿದ್ದುಪಡಿ ಮಾಡಬೇಕು. ಕೃತಕ ವಿಭಜನೆಯನ್ನು ನಿಷೇಧಿಸಬೇಕು. ಟೆಂಡರ್ ಮತ್ತು ಹುದ್ದೆ ಹಂಚಿಕೆಯಲ್ಲಿ ಕಡ್ಡಾಯ ರೋಟೇಷನ್ ವ್ಯವಸ್ಥೆ ಜಾರಿಗೊಳಿಸಬೇಕು. ಎಲ್ಲಾ ಹಂಚಿಕೆ ಮಾಹಿತಿಯನ್ನು ಸಾರ್ವಜನಿಕವಾಗಿ ಆನ್‌ಲೈನ್‌ನಲ್ಲಿ ಪ್ರಕಟಿಸಬೇಕು. ಸ್ವಾಯತ್ತ ಕುಂದುಕೊರತೆ ವ್ಯವಸ್ಥೆ ರೂಪಿಸಬೇಕು. ಲೆಕ್ಕಪರಿಶೋಧನೆ ಹಾಗೂ ಉತ್ತರದಾಯಿತ್ವ ವ್ಯವಸ್ಥೆಗಳನ್ನು ಬಲಪಡಿಸಬೇಕು ಎಂದಿದ್ದಾರೆ.
ಈ ಎಲ್ಲಾ ದೋಷಗಳು ಮತ್ತು ಸ್ಪಷ್ಟತೆ ಕೊರತೆಗಳನ್ನು ಸರಿಪಡಿಸುವವರೆಗೆ, ಯಾವುದೇ ಹೊಸ ಹುದ್ದೆಗಳ ನೇಮಕಾತಿ ಅಥವಾ ಪ್ರಕಟಣೆಗಳನ್ನು ಸರ್ಕಾರ ತಕ್ಷಣ ಸ್ಥಗಿತಗೊಳಿಸಬೇಕು. ಇಲ್ಲವಾದಲ್ಲಿ, ಇಂತಹ ಕ್ರಮಗಳು ಕಾನೂನುಬದ್ಧವಾಗಿ ಪ್ರಶ್ನಾರ್ಹವಾಗುತ್ತವೆ. ಇಲ್ಲವಾದಲ್ಲಿ ಈ ಸಂಬಂಧ ಕಾನೂನು ಹೋರಾಟ ನಡೆಸುವುದಾಗಿ ಎಸ್. ಸಂಗಮೇಶ್ ಎಚ್ಚರಿಕೆ ನೀಡಿದ್ದಾರೆ.
ಮನವಿ ಪತ್ರಕ್ಕೆ ಕರ್ನಾಟಕ ರಾಜ್ಯ ಯುವ ಸಮೂಹದ ಪದಾಧಿಕಾರಿಗಳಾದ ಅಗ್ನಿ ಅಜಿತ್, ಹನುಮೇಶ್ ಗುಂಡೂರ, ಡಾ. ರವಿ ಮರಡಿಪುರ, ಡಾ. ನಾಗೇಶ್ ಕೆ. ಎನ್, ಮಂಜುನಾಥ ಬಿ, ಸಾಮಾಜಿಕ ಹೋರಾಟಗಾರ ನಿಂಗರಾಜ್ ಗುಳೆ ಸಹಿ ಮಾಡಿದ್ದಾರೆ.
