
Take special care of rural drinking water supply and sanitation: T. Krishnamurthy

ಗ್ರಾಮೀಣ ಕುಡಿವ ನೀರು ಪೂರೈಕೆ, ನೈರ್ಮಲ್ಯಕ್ಕೆ ವಿಶೇಷ ಕಾಳಜಿ ವಹಿಸಿ: ಟಿ.ಕೃಷ್ಣಮೂರ್ತಿ

ಕೊಪ್ಪಳ ಏಪ್ರಿಲ್ 08 (ಕರ್ನಾಟಕ ವಾರ್ತೆ): ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕುಡಿವ ನೀರು ಪೂರೈಕೆ ಮತ್ತು ನೈರ್ಮಲ್ಯಕ್ಕೆ ಎಲ್ಲ ಪಿಡಿಓಗಳು ವಿಶೇಷ ಕಾಳಜಿ ವಹಿಸಬೇಕು ಎಂದು ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿಗಳಾದ ಟಿ.ಕೃಷ್ಣಮೂರ್ತಿ ಅವರು ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್‌ನ ಜೆ.ಎಚ್ ಪಟೇಲ್ ಸಭಾಂಗಣದಲ್ಲಿ ಏಪ್ರೀಲ್ 8ರಂದು ಕೊಪ್ಪಳ ಜಿಲ್ಲೆಯ ವಿವಿಧ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಕುಡಿಯುವ ನೀರು ಮತ್ತು ಇತರೆ ವಿಷಯಗಳ ಕುರಿತು ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಎಲ್ಲ ಗ್ರಾಮಗಳಲ್ಲಿ ಕುಡಿಯುವ ನೀರಿನ ಮೂಲಗಳಲ್ಲಿ ಬೇಸಿಗೆ ಮುಗಿಯುವವರೆಗೂ ಬಳಕೆಗೆ ಸಾಧ್ಯವಾಗುವಷ್ಟು ನೀರಿನ ಸಂಗ್ರಹಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಯಾವುದೇ ನೀರಿನ ಮೂಲವಿಲ್ಲದೇ ಇದ್ದಲ್ಲಿ ಅಂತಹ ಪ್ರದೇಶಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಅಥವಾ ಖಾಸಗಿ ಬೋರವೆಲ್‌ಗಳಿಂದ ಬಾಡಿಗೆ ಆಧಾರದಲ್ಲಿ ನೀರು ಪಡೆಯಲು ಜಿ.ಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳ ಅನುಮತಿಯೊಂದಿಗೆ ನಿಯಮಾನುಸಾರ ಕ್ರಮ ವಹಿಸಬೇಕು ಎಂದರು.
ಜಿಲ್ಲಾ ಪಂಚಾಯಿತಿಗೆ ಸಂಬಂಧಿಸಿದ ಜಲಜೀವನ್ ಮಿಷನ್, ಸ್ವಚ್ಛ ಭಾರತ್ ಮಿಷನ್, ವಸತಿ ಯೋಜನೆ, ಉದ್ಯೋಗ ಖಾತರಿ ಯೋಜನೆ, ಪಂಚಾಯತ್ ರಾಜ್ ವಿಷಯಕ್ಕೆ ಸಂಬಂಧಿಸಿದಂತೆ, ತೆರಿಗೆ ವಸೂಲಾತಿ, ಆಸ್ತಿಗಳ ಸಮೀಕ್ಷೆ, ಸಕಾಲ, ಗ್ರಾಮ ಆರೋಗ್ಯ ಅಭಿಯಾನ, ಬಯೋಮೆಟ್ರಿಕ್ ಹಾಜರಾತಿ, ಗ್ರಂಥಾಲಯ ನಿರ್ವಹಣೆ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಅನುಷ್ಠಾನ ಮಾಡಬೇಕು. ತೆರಿಗೆ ಸಂಗ್ರಹಣೆಯಲ್ಲಿ ಪ್ರಗತಿ ಸಾಧಿಸದ ಪಂಚಾಯತಿಗಳು ಕೂಡಲು ನಿಗದಿತ ಗುರಿಯಂತೆ ತೆರಿಗೆ ಸಂಗ್ರಹಣೆಗೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಎಲ್ಲ ಪಿಡಿಓಗಳಿಗೆ ಸೂಚನೆ ನೀಡಿದರು.
ಗ್ರಾಮೀಣ ಪ್ರದೇಶದಲ್ಲಿನ ಕುಡಿಯುವ ನೀರಿನ ಸರಬರಾಜು ಪೈಪುಗಳನ್ನು ನಿರಂತರವಾಗಿ ಗಮನಿಸಿ, ಯಾವುದೇ ಸೋರಿಕೆ ಕಂಡುಬಂದಲ್ಲಿ ಅದನ್ನು ಕೂಡಲೇ ಸರಿಪಡಿಸಿ ಕುಡಿಯುವ ನೀರು ಕಲುಷಿತವಾಗದಂತೆ ಕ್ರಮವಹಿಸಬೇಕು. ಶುದ್ಧ ಕುಡಿಯುವ ನೀರಿನ ಮೋಟಾರ್ ಪಂಪ್ ಹಾಗೂ ಜಲಜೀವನ್ ಮಿಷನ್ ನೀರು ಸರಬರಾಜು ಪಂಪ್‌ಗಳು ಸುಸ್ಥಿಯಲ್ಲಿರುವಂತೆ ನೋಡಿಕೊಳ್ಳಬೇಕು. ಎಲ್ಲಾ ಓ.ಎಚ್.ಟಿ ಟ್ಯಾಂಕುಗಳನ್ನು ಕ್ರಮೆಣವಾಗಿ ಸ್ವಚ್ಛಗೊಳಿಸಿ, ಈ ಬಗ್ಗೆ ಸ್ವಚ್ಛತಾ ಕಾರ್ಯದ ಮತ್ತು ಸ್ವಚ್ಛತಾ ಕಾರ್ಯ ಪೂರ್ಣಗೊಂಡ ನಂತರದ ಎರಡೂ ಜಿ.ಪಿ.ಎಸ್ ಫೋಟೋಗಳೊಂದಿಗೆ ಜಿಪಂ.ಗೆ ವರದಿ ಸಲ್ಲಿಸಬೇಕು. ಕುಡಿಯುವ ನೀರಿನ ಪರೀಕ್ಷೆಗಳು ಶೇ. 100 ರಷ್ಟಾಗಬೇಕು ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲೆಯ ಎಲ್ಲ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ಇತರೆ ಇಲಾಖೆಗಳ ಅಧಿಕಾರಿಗಳು, ಎಲ್ಲ ಗ್ರಾ.ಪಂ ಪಿಡಿಓ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
