
Six-foot-long snake caught after entering shop on Anegundi Road

ಆನೆಗುಂದಿ ರಸ್ತೆಯ ಅಂಗಡಿಯೊಳಗೆ ನುಗ್ಗಿದ್ದ ಆರು ಅಡಿ ಉದ್ದದ ಕೆರೆಹಾವು ಸೆರೆ

ಗಂಗಾವತಿ: ನಗರದ ಪ್ರಮುಖ ರಸ್ತೆಗಳಲ್ಲಿ ಒಂದಾದ ಆನೆಗುಂದಿ ರಸ್ತೆಯಲ್ಲಿರುವ ಸೀತಾರಾಮ ಕಲ್ಯಾಣ ಮಂಟಪದ ಪಕ್ಕದ ಸಣ್ಣ ತರಕಾರಿ ಅಂಗಡಿಯೊಳಗೆ ಆರು ಅಡಿ ಉದ್ದದ ಬೃಹತ್ ಕೆರೆಹಾವೊಂದು ನುಗ್ಗಿ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದ ಘಟನೆ ಇಂದು ನಡೆದಿದೆ. ಶುಕ್ರವಾರ ಸಂಜೆ 6:30 ರ ಸುಮಾರಿನಲ್ಲಿ ಸೀತಾರಾಮ ಕಲ್ಯಾಣ ಮಂಟಪದ ಬಳಿಯಿರುವ ಉಮೇಶ ಅಯ್ಯಾ ಎಂಬುವವರು ತರಕಾರಿ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಸಂದರ್ಭದಲ್ಲಿ, ದಿಢೀರನೆ ಸುಮಾರು ಆರು ಅಡಿ ಉದ್ದದ ಕೆರೆಹಾವು ಕಾಣಿಸಿಕೊಂಡಿದೆ. ಹಾವನ್ನು ಕಂಡ ತಕ್ಷಣ ಅಂಗಡಿ ಮಾಲೀಕರು ಹಾಗೂ ಗ್ರಾಹಕರು ಗಾಬರಿಯಿಂದ ಹೊರಕ್ಕೆ ಓಡಿ ಬಂದಿದ್ದಾರೆ. ಜನನಿಬಿಡ ರಸ್ತೆಯಾಗಿರುವುದರಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸ್ಥಳೀಯರು ತಕ್ಷಣವೇ ಹಾವಿನ ರಕ್ಷಕರಾದ ರವಿ ಗೌಳಿ ನಗರದ (ಲಕ್ಷ್ಮಿ ಕ್ಯಾಂಪ್)ರವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪರಿಣಿತರು ಬಹಳ ಜಾಣ್ಮೆಯಿಂದ ಕಾರ್ಯಾಚರಣೆ ನಡೆಸಿ, ಯಾವುದೇ ಅನಾಹುತವಾಗದಂತೆ ತರಕಾರಿ ಬುಟ್ಟಿಗಳ ನಡುವೆ ಅವಿತು ಕುಳಿತಿದ್ದ ಹಾವನ್ನು ಹಿಡಿಯುವಲ್ಲಿ ಯಶಸ್ವಿಯಾದರು.ಹಿಡಿದ ಹಾವನ್ನು ಸುರಕ್ಷಿತವಾಗಿ ಚೀಲದಲ್ಲಿ ತುಂಬಿಕೊಂಡು ಜನವಸತಿ ಇಲ್ಲದ ಅರಣ್ಯ ಪ್ರದೇಶಕ್ಕೆ ಬಿಡಲಾಗುವುದು ಎಂದು ರಕ್ಷಕರು ತಿಳಿಸಿದ್ದಾರೆ. ಕೆರೆಹಾವು ವಿಷಕಾರಿಯಲ್ಲದಿದ್ದರೂ, ಅದರ ಬೃಹತ್ ಗಾತ್ರವು ಜನರಲ್ಲಿ ಭೀತಿ ಹುಟ್ಟಿಸಿತ್ತು. ಹಾವು ಸೆರೆಯಾದ ನಂತರ ಅಂಗಡಿ ಮಾಲೀಕರು ಹಾಗೂ ಆ ಭಾಗದ ನಿವಾಸಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
