ಕರ್ಮದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ”: ಓಂ ಬಿರ್ಲಾಗೆ ಮಹುವಾ ಮೋಯಿತ್ರಿ ಮಾರ್ಮಿಕ ಮಾತು
There is no escape from karma": Mahua Moitri's mystical words to Om Birla

ಕರ್ಮದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ”: ಓಂ ಬಿರ್ಲಾಗೆ ಮಹುವಾ ಮೋಯಿತ್ರಿ ಮಾರ್ಮಿಕ ಮಾತು

ನವದೆಹಲಿ: ಮಾರ್ಚ್ 10, 2026 ಭಾರತೀಯ ಸಂಸದೀಯ ಇತಿಹಾಸದಲ್ಲಿ ಸ್ಮರಣೀಯ ದಿನವಾಗಿ ಉಳಿಯಲಿದೆ. ಹೌದು ಸಾಂಪ್ರದಾಯಕವಾಗಿ ಸ್ಪೀಕರ್ ಪೀಠಕ್ಕೆ ಗೌರವ ಸಲ್ಲಿಸಲಾಗುತ್ತದೆ, ಅದೇ ರೀತಿ ಆ ಪೀಠದ ಮೇಲಿ ಕುಳಿತಿರುವ ವ್ಯಕ್ತಿ ಕೂಡ ಪಕ್ಷಪಾತಿಯಾಗಿರದೆ, ಸದನ ನಡೆಸಬೇಕು. ಆದರೆ ಆ ವ್ಯಕ್ತಿ ಪಕ್ಷಪಾತಿಯಾಗಿ ವರ್ತಿಸಿದರೆ ಏನಾಗುತ್ತದೆ ಎಂಬುದಕ್ಕೆ ತೃಣಮೂಲ ಕಾಂಗ್ರೆಸ್‌ನ ಫೈರ್ ಬ್ರಾಂಡ್ ಸಂಸದೆ ಮಹುವಾ ಮೋಯಿತ್ರಿ (Mahua Moitra) ಅವರ ಭಾಷಣ ಸಾಕ್ಷಿಯಾಯಿತು. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯದ ಮೇಲೆ ಚರ್ಚೆ ಆರಂಭಿಸಿದ ಮಹುವಾ, ಕೇವಲ ಭಾಷಣ ಮಾಡಲಿಲ್ಲ; ಬದಲಿಗೆ ಅಂಕಿ-ಅಂಶಗಳ ಚಾಕು ಹಿಡಿದು ಪ್ರಜಾಪ್ರಭುತ್ವದ ವಿರೂಪತೆಯನ್ನು ಬಿಡಿಸಿಟ್ಟರು.
ಕರ್ಮದ ಚಕ್ರ ತಿರುಗಿದೆ!
ಮಹುವಾ ಮೋಯಿತ್ರಿ (Mahua Moitra) ಅವರ ಭಾಷಣದ ಆರಂಭವೇ ಅತ್ಯಂತ ಅರ್ಥಪೂರ್ಣವಾಗಿತ್ತು. ಕಳೆದ ಬಾರಿ ಸಂಶಯಾಸ್ಪದ ಕಾರಣಗಳ ನೀಡಿ, ಮಾತನಾಡಲು ಕನಿಷ್ಠ ಅವಕಾಶವನ್ನೂ ಕೊಡದೆ ಮಹುವಾ ಅವರನ್ನು ಇದೇ ಸದನದಿಂದ ಉಚ್ಚಾಟಿಸಲಾಗಿತ್ತು. ಆದರೆ, ಇಂದು ಅದೇ ಮಹುವಾ ಅದೇ ಸದನದಲ್ಲಿ ಸ್ಪೀಕರ್ ವಿರುದ್ಧವೇ ಚರ್ಚೆ ಆರಂಭಿಸುತ್ತಿದ್ದರು. ಇದನ್ನು ಅವರು “ಡಿವೈನ್ ಕರ್ಮ” (ದೈವಿಕ ಕರ್ಮ) ಎಂದು ಕರೆದರು. “ಕರ್ಮದಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ, ನೀವು ಯಾರ ಧ್ವನಿಯನ್ನು ಅಡಗಿಸಲು ಯತ್ನಿಸಿದಿರೋ, ಅದೇ ಧ್ವನಿ ಇಂದು ನಿಮ್ಮ ನ್ಯಾಯಸಮ್ಮತತೆಯನ್ನು ಪ್ರಶ್ನಿಸುತ್ತಿದೆ” ಎಂದು ಅಕ್ಷರಶಃ ಗುಡುಗಿದ್ದರೆ, ಈ ವೇಳೆ ಸದನದಲ್ಲಿ ಸೂಜಿ ಬಿದ್ದರೂ ಸಪ್ಪಳವಾಗುವಷ್ಟು ಸ್ತಬ್ಧವಾಗಿತ್ತು.
ಮಹುವಾ ಅವರ ಟೀಕೆಗಳು ಬರಿ ಗಾಳಿಯಲ್ಲಿ ಗುಂಡು ಹಾರಿಸುವಂತಿರಲಿಲ್ಲ. ಅವರು ಓಂ ಬಿರ್ಲಾ ಅವರ ಅವಧಿಯ ಕರಾಳ ಅಂಕಿ-ಅಂಶಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
- ಅಮಾನತುಗಳ ಸುನಾಮಿ: ಕಳೆದ 20 ವರ್ಷಗಳಲ್ಲಿ ಸಂಸತ್ತಿನಲ್ಲಿ ನಡೆದ ಒಟ್ಟು ಅಮಾನತುಗಳಲ್ಲಿ ಶೇ. 40ರಷ್ಟು ಕೇವಲ ಓಂ ಬಿರ್ಲಾ ಅವರ ಕಾಲದಲ್ಲೇ ನಡೆದಿವೆ. ಅದರಲ್ಲೂ ಡಿಸೆಂಬರ್ 2023ರಲ್ಲಿ ಒಂದೇ ಬಾರಿಗೆ 100ಕ್ಕೂ ಹೆಚ್ಚು ವಿರೋಧ ಪಕ್ಷದ ಸಂಸದರನ್ನು ಅಮಾನತುಗೊಳಿಸಿದ್ದು ಪ್ರಜಾಪ್ರಭುತ್ವದ ಅತಿದೊಡ್ಡ ಕಪ್ಪುಚುಕ್ಕೆ ಎಂದು ಅವರು ಬಣ್ಣಿಸಿದರು.
- ಏಕಪಕ್ಷೀಯ ತೀರ್ಪು: ವಿಶೇಷವೇನೆಂದರೆ, ಅಮಾನತುಗೊಂಡವರಲ್ಲಿ ಒಬ್ಬನೇ ಒಬ್ಬ ಎನ್‌ಡಿಎ ಸದಸ್ಯನಿಲ್ಲ. ಹಾಗಾದರೆ ಆಡಳಿತ ಪಕ್ಷದವರು ಸದಾ ಸಂಸತ್ತಿನ ನಿಯಮ ಪಾಲಿಸುತ್ತಾರೆಯೇ? ಅಥವಾ ಸ್ಪೀಕರ್ ಕಣ್ಣಿಗೆ ಕೇವಲ ವಿರೋಧ ಪಕ್ಷದವರೇ ತಪ್ಪಿತಸ್ಥರಾಗಿ ಕಾಣುತ್ತಾರೆಯೇ? ಎಂಬ ಮಹುವಾ ಅವರ ಪ್ರಶ್ನೆ ಖಾರವಾಗಿತ್ತು.
- ಮೌನಕ್ಕೆ ಶರಣಾದ ಮೈಕ್: ವಿರೋಧ ಪಕ್ಷದ ನಾಯಕರು ದೇಶದ ಜ್ವಲಂತ ಸಮಸ್ಯೆಗಳಾದ ಮಣಿಪುರ ಹಿಂಸಾಚಾರ ಅಥವಾ ಅದಾನಿ ಹಗರಣದ ಬಗ್ಗೆ ಮಾತನಾಡಲು ಎದ್ದಾಗಲೆಲ್ಲಾ ಸೆನ್ಸಾರ್ ಮಂಡಳಿಯಂತೆ ಮೈಕ್ ಕಟ್ ಮಾಡುವ ತಂತ್ರಜ್ಞಾನವನ್ನು ಸ್ಪೀಕರ್ ಕಚೇರಿ ಕರಗತ ಮಾಡಿಕೊಂಡಿದೆ ಎಂದು ಅವರು ವ್ಯಂಗ್ಯವಾಡಿದರು.
ಉಪಸಭಾಪತಿ ಹುದ್ದೆಯೆಂಬ ‘ಖಾಲಿ ಖುರ್ಚಿ’
ಸಂವಿಧಾನದ 93ನೇ ವಿಧಿಯ ಪ್ರಕಾರ ಸಭಾಪತಿಯ ಜೊತೆಗೆ ಉಪಸಭಾಪತಿಯ ಆಯ್ಕೆಯೂ ಅಷ್ಟೇ ಮುಖ್ಯ. ಆದರೆ ಕಳೆದ ಏಳು ವರ್ಷಗಳಿಂದ ಭಾರತದ ಲೋಕಸಭೆಯಲ್ಲಿ ಈ ಹುದ್ದೆಯನ್ನು ಖಾಲಿ ಇಡಲಾಗಿದೆ. “ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ ಸದನವನ್ನು ಒಬ್ಬನೇ ವ್ಯಕ್ತಿಯ ಸರ್ವಾಧಿಕಾರದ ಕೇಂದ್ರವನ್ನಾಗಿ ಮಾಡಲಾಗಿದೆ” ಎಂಬುದು ಮಹುವಾ ಅವರ ಗಂಭೀರ ಆರೋಪವಾಗಿತ್ತು.
ದ್ವೇಷ ಭಾಷಣಕ್ಕೆ ರಕ್ಷಣೆ, ಪ್ರಶ್ನೆ ಮಾಡಿದವರಿಗೆ ಶಿಕ್ಷೆ!
ಭಾಷಣದ ಅತ್ಯಂತ ಕಟುಭಾಗವೆಂದರೆ, ಬಿಜೆಪಿ ಸಂಸದ ರಮೇಶ್ ಬಿದೂರಿ ಅವರು ಸದನದಲ್ಲಿ ಮುಸ್ಲಿಂ ಸಂಸದರ ವಿರುದ್ಧ ಬಳಸಿದ ಅಶ್ಲೀಲ ಮತ್ತು ದ್ವೇಷಪೂರಿತ ಪದಗಳ ಪ್ರಸ್ತಾಪ. ಆ ಸಂದರ್ಭದಲ್ಲಿ ಸ್ಪೀಕರ್ ಬಿರ್ಲಾ ಅವರು ಯಾವುದೇ ಕಠಿಣ ಕ್ರಮ ಕೈಗೊಳ್ಳಲಿಲ್ಲ. ಆದರೆ ದೇಶದ ಭದ್ರತೆಯ ಬಗ್ಗೆ ಪ್ರಶ್ನೆ ಕೇಳಿದ ವಿರೋಧ ಪಕ್ಷದವರನ್ನು ಗುಂಪು ಗುಂಪಾಗಿ ಹೊರಹಾಕಲಾಯಿತು. “ನೀವು ಕೇವಲ ಒಬ್ಬ ಸಂಸದನಿಗೆ ಅವಮಾನ ಮಾಡಲಿಲ್ಲ, ಈ ದೇಶದ 20 ಕೋಟಿ ಮುಸ್ಲಿಮರ ಅಸ್ತಿತ್ವವನ್ನೇ ಪ್ರಶ್ನಿಸಿದ ವ್ಯಕ್ತಿಗೆ ರಕ್ಷಣೆ ನೀಡಿದಿರಿ” ಎಂದು ಮಹುವಾ ನೇರವಾಗಿ ಬೆರಳು ಮಾಡಿ ತೋರಿಸಿದರು.
ಅಂತ್ಯಕಾಲದ ಮುನ್ಸೂಚನೆ?
ಮಹುವಾ ಮೋಯಿತ್ರಿ ತಮ್ಮ ಭಾಷಣವನ್ನು ಮುಗಿಸಿದ್ದು 1653ರಲ್ಲಿ ಆಲಿವರ್ ಕ್ರಾಮ್‌ವೆಲ್ ಬ್ರಿಟಿಷ್ ಸಂಸತ್ತಿಗೆ ಹೇಳಿದ ಐತಿಹಾಸಿಕ ಸಾಲುಗಳೊಂದಿಗೆ: “ನೀವು ಇಲ್ಲಿ ಒಳ್ಳೆಯದನ್ನು ಮಾಡುವುದಕ್ಕಿಂತ ಹೆಚ್ಚಾಗಿ ಬಹಳ ಕಾಲ ಕುಳಿತುಬಿಟ್ಟಿದ್ದೀರಿ. ಇನ್ನು ಹೊರಡಿ, ದೇವರ ಹೆಸರಲ್ಲಿ ನೀವು ಇಲ್ಲಿಂದ ತೊಲಗಿ!”
ಈ ಮಾತುಗಳು ಕೇವಲ ಓಂ ಬಿರ್ಲಾ ಅವರಿಗೆ ಮಾತ್ರವಲ್ಲ, ಇಡೀ ಆಡಳಿತ ವ್ಯವಸ್ಥೆಗೆ ನೀಡಿದ ಎಚ್ಚರಿಕೆಯಾಗಿತ್ತು. ಸಂಸತ್ತು ಎಂದರೆ ಕೇವಲ ಕಲ್ಲು-ಕಾಂಕ್ರೀಟ್ ಕಟ್ಟಡವಲ್ಲ, ಅದು ಜನರ ಧ್ವನಿ. ಆ ಧ್ವನಿಯನ್ನು ಅಡಗಿಸುವ ಸಭಾಪತಿ ಪೀಠಕ್ಕೆ ಗೌರವ ಇರುವುದಿಲ್ಲ ಎಂಬ ಅಸಲಿ ಸತ್ಯವನ್ನು ಮಹುವಾ ಮರುಸ್ಥಾಪಿಸಿದರು.
ಮಹುವಾ ಮೋಯಿತ್ರಿ ಅವರ ಈ ಭಾಷಣ ಭಾರತೀಯ ಪ್ರಜಾಪ್ರಭುತ್ವದ ಶಕ್ತಿಯನ್ನು ತೋರಿಸುತ್ತದೆ. ಎಷ್ಟೇ ಅಮಾನತು ಮಾಡಿದರೂ, ಧ್ವನಿಯನ್ನು ಅಡಗಿಸಿದರೂ ಸತ್ಯ ಒಂದಲ್ಲ ಒಂದು ದಿನ ಗಟ್ಟಿಯಾಗಿ ಕೇಳಿಯೇ ಕೇಳುತ್ತದೆ ಎಂಬುದಕ್ಕೆ ಈ ದಿನವೇ ಸಾಕ್ಷಿ. ಸ್ಪೀಕರ್ ವಿರುದ್ಧದ ಈ ಅವಿಶ್ವಾಸ ನಿರ್ಣಯ ಕೇವಲ ಮತಗಳ ಸಂಖ್ಯೆಯಲ್ಲಿ ಸೋಲಬಹುದು, ಆದರೆ ನೈತಿಕವಾಗಿ ಮಹುವಾ ಮತ್ತು ವಿರೋಧ ಪಕ್ಷಗಳು ದೊಡ್ಡ ಜಯ ದಾಖಲಿಸಿವೆ.
