
ರಾಜಕೀಯ ಪಕ್ಷಗಳು ಬಿಎಲ್.ಎ.ಗಳನ್ನು ನೇಮಕ ಮಾಡಿ – ಡಾ. ಸುರೇಶ ಬಿ. ಇಟ್ನಾಳ
Political parties appoint BLAs - Dr. Suresh B. Itnal

ಕೊಪ್ಪಳ ಫೆಬ್ರುವರಿ 20 (ಕರ್ನಾಟಕ ವಾರ್ತೆ): ಎಸ್.ಐ.ಆರ್ ಹಿನ್ನೆಲೆಯಲ್ಲಿ ಮತದಾರರ ಪಟ್ಟಿಗಳ ಸಮಗ್ರ ಪರಿಷ್ಕರಣೆಯ ಸಿದ್ದತೆಗಾಗಿ ಜಿಲ್ಲೆಯಲ್ಲಿ ಮ್ಯಾಪಿಂಗ್ ಕಾರ್ಯ ನಡೆಯುತ್ತಿದ್ದು, ರಾಜಕೀಯ ಪಕ್ಷಗಳು ಬಿಎಲ್.ಎ.ಗಳನ್ನು ನೇಮಕ ಮಾಡಬೇಕೆಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಡಾ. ಸುರೇಶ ಬಿ. ಇಟ್ನಾಳ ಹೇಳಿದರು.
ಅವರು ಶುಕ್ರವಾರ ಕೊಪ್ಪಳ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮತದಾರರ ಪಟ್ಟಿಗಳ ಸಮಗ್ರ ಪರಿಷ್ಕರಣೆ ಕಾರ್ಯದ ಪೂರ್ವಭಾವಿ ಸಿದ್ದತೆಯ ಕುರಿತು ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಕರೆದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಎಪ್ರೀಲ್-2026 ರಿಂದ ಎಸ್.ಐ.ಆರ್ ಜಾರಿಯಾಗುವ ಸಾಧ್ಯತೆಯಿದ್ದು, ಅದಕ್ಕೂ ಪೂರ್ವದಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಮ್ಯಾಂಪಿಂಗ್ ಕಾರ್ಯವನ್ನು ಮಾಡುತ್ತಿದ್ದೇವೆ. ಮ್ಯಾಪಿಂಗ್ & ಪ್ರೋಜೆನಿ ಆಫ್ ಎಲೆಕ್ಟರ್ಸ್ (Mapping and Progeny of Electors) ಆಧಾರದಮೇಲೆ ಪ್ರಕಟಿಸಲಾದ ಮತದಾರರ ಪಟ್ಟಿಗಳಲ್ಲಿಯ ಮತದಾರರನ್ನು 2002ರ ಮಾತದಾರರ ಪಟ್ಟಿಗಳೊಂದಿಗೆ ಪರಿಶೀಲಿಸಿ, ಬಿ.ಎಲ್.ಓ ಆ್ಯಪ್‌ನಲ್ಲಿ ಮ್ಯಾಪಿಂಗ್ ಕಾರ್ಯವನ್ನು ಮತ್ತು 2002ರ ಮತದಾರರ ಪಟ್ಟಿಯಲ್ಲಿ ಇರದೇ ಇರುವ ಮತದಾರರನ್ನು ಪ್ರೋಜೆನಿ ಮಾಡುವ ಮುಖಾಂತರ ಮ್ಯಾಪಿಂಗ್ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ ಎಂದರು.
2025ರಂತೆ ಕೊಪ್ಪಳ ಜಿಲ್ಲೆಯಲ್ಲಿ 12,06,287 ಮತದಾರರಿದ್ದು, 1315 ಮತಗಟ್ಟೆಗಳಿವೆ. ಜಿಲ್ಲೆಯಲ್ಲಿ ಇದುವರೆಗೂ ಶೇ. 86.79 ರಷ್ಟು ಮ್ಯಾಪಿಂಗ್ ಆಗಿದ್ದು, ಇದರಲ್ಲಿ ಶೇ. 77ರಷ್ಟು ಜನರು 2002ರ ಮತದಾರರ ಪಟ್ಟಿಯಲ್ಲಿ ಹೆಸರಿರುವ ಅರ್ಹ ಮತದಾರರಾಗಿದ್ದಾರೆ ಮತ್ತು ಉಳಿದವರು ಆ ಅರ್ಹ ಮತದಾರರ ಪ್ರಸ್ತುತ 18 ವರ್ಷ ಪೂರ್ಣಗೊಂಡ ಮಕ್ಕಳು ಒಳಗೊಂಡಿದ್ದಾರೆ. ಒಟ್ಟಾರೆ 10,46,968 ಮತದಾರರ ಮ್ಯಾಪಿಂಗ್ ಮಾಡಲಾಗಿದ್ದು, 1,59,319 ಮತದಾರರ ಮ್ಯಾಪಿಂಗ್ ಬಾಕಿಯಿದೆ. ಇದರಲ್ಲಿ ಕುಷ್ಟಗಿ ವಿಧಾನಸಭಾ ಕ್ಷೇತ್ರದ 35,562 ಮತದಾರರ, ಕನಕಗಿರಿ ವಿಧಾನಸಭಾ ಕ್ಷೇತ್ರದ 26,741 ಮತದಾರರ, ಗಂಗಾವತಿ ವಿಧಾನಸಭಾ ಕ್ಷೇತ್ರದ 36,946 ಮತದಾರರ, ಯಲಬುರ್ಗಾ ವಿಧಾನಸಭಾ ಕ್ಷೇತ್ರದ 24,532 ಮತದಾರರ ಮತ್ತು ಕೊಪ್ಪಳ ವಿಧಾನಸಭಾ ಕ್ಷೇತ್ರದ 35,538 ಮತದಾರರ ಮ್ಯಾಪಿಂಗ್ ಬಾಕಿ ಇರುತ್ತದೆ ಎಂದು ಹೇಳಿದರು.
ರಾಜ್ಯದಲ್ಲಿ ಎಸ್‌ಐಆರ್ ಪೂರ್ವ ತಯಾರಿ ಆರಂಭವಾಗಿ ಅಕ್ಟೋಬರ್-2025 ರಿಂದ ಸಾಕಷ್ಟು ಸಮಯ ಕಳೆದಿದೆ. ರಾಜ್ಯ ಮಟ್ಟದಿಂದ ಬಿಎಲ್‌ಒ ಮಟ್ಟದವರೆಗೆ ಎಲ್ಲಾ ಅಧಿಕಾರಿಗಳಿಗೆ ಮ್ಯಾಪಿಂಗ್ ಮತ್ತು ಅವರ ಜವಾಬ್ದಾರಿಗಳ ಕುರಿತು ತರಬೇತಿ ನೀಡಲಾಗಿದೆ. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ರಾಜಕೀಯ ಪಕ್ಷಗಳ ಸಭೆ ನಡೆಸಿ, ಪ್ರಕ್ರಿಯೆಯ ಪಾರದರ್ಶಕತೆ ಬಗ್ಗೆ ಮಾಹಿತಿ ನೀಡಲಾಗಿದೆ. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕ್ರಮವಹಿಸಲಾಗಿರುತ್ತದೆ. ಇನ್ನು ಎಸ್‌ಐಆರ್ ಪೂರ್ವ ಪ್ರಕ್ರಿಯೆ ಭಾಗವಾಗಿ ಮೂರು ಹಂತದ ಮ್ಯಾಪಿಂಗ್ ನಡೆಯುತ್ತದೆ. 2002ರ ಪಟ್ಟಿಯಲ್ಲಿ ಹೆಸರು ಹೊಂದಿರುವ ಮತ್ತು ಪ್ರಸ್ತುತ 40 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಮತದಾರರನ್ನು ಬಿಎಲ್‌ಒಗಳು ಮನೆಮನೆಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮೊಬೈಲ್ ಅಪ್ಲಿಕೇಷನ್ ಮೂಲಕ ದೃಢೀಕರಿಸಿ ಮ್ಯಾಪಿಂಗ್ ಮಾಡುತ್ತಿದ್ದಾರೆ ಎಂದರು.
2002ರ ಪಟ್ಟಿಯಲ್ಲಿ ಹೆಸರು ಇರದೇ ಇರುವ ಯುವ ಮತದಾರರನ್ನು ಅವರ ವಂಶಸ್ಥರೊಂದಿಗೆ (ತಂದೆ, ತಾಯಿ, ತಾತ ಅಥವಾ ಅಜ್ಜಿ) ಮ್ಯಾಪಿಂಗ್ ಮಾಡಲಾಗುತ್ತಿದೆ. ಇದು ಮಗ, ಮಗಳು, ಮೊಮ್ಮಗ ಹಾಗೂ ಮೊಮ್ಮಗಳಿಗೆ (ತೃತಿಯ ಲಿಂಗಿಗಳು ಸೇರಿದಂತೆ) ಅನ್ವಯಿಸುತ್ತದೆ. 2002 ರ ಅವಧಿಯಲ್ಲಿ ಕರ್ನಾಟಕದ ಪಟ್ಟಿಯಲ್ಲಿ ಇಲ್ಲದೆ, ಬೇರೆ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದ ಪಟ್ಟಿಯಲ್ಲಿ ಹೆಸರಿದ್ದ ಮತದಾರರಿಗೂ ಮ್ಯಾಪಿಂಗ್ ಮಾಡಲು ಬಿಎಲ್‌ಒ ಆಪ್‌ನಲ್ಲಿ ಅವಕಾಶ ನೀಡಲಾಗಿದೆ. ಮಾನ್ಯತೆ ಪಡೆದ ರಾಷ್ಟ್ರ, ರಾಜ್ಯ ರಾಜಕೀಯ ಪಕ್ಷದವರು ಬಿಎಲ್‌ಎ-1ರ ಮುಖಾಂತರ ಬಿಎಲ್‌ಎಗಳನ್ನು ನೇಮಕ ಮಾಡಲು ಪ್ರತಿ ಜಿಲ್ಲೆಗೆ, ವಿಧಾನಸಭಾ ಕ್ಷೇತ್ರಕ್ಕೆ ಅಧಿಕೃತ ಪ್ರತಿನಿಧಿಗಳನ್ನು ನೇಮಕ ಮಾಡಬಹುದಾಗಿರುತ್ತದೆ. ಬಿಎಲ್‌ಎ-1 ರವರ ಮುಖಾಂತರ ರಾಜಕೀಯ ಪ್ರತಿನಿಧಿಗಳು ಪ್ರತಿ ಮತಗಟ್ಟೆಗೆ ಬಿಎಲ್‌ಎ-2 ಮುಖಾಂತರ ಬಿಎಲ್‌ಎಗಳನ್ನು ನೇಮಕ ಮಾಡಬಹುದಾಗಿದೆ ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಅವರು ಮಾತನಾಡಿ, ಸಾಮಾನ್ಯವಾಗಿ ಒಂದು ಮತಗಟ್ಟೆಗೆ ಒಬ್ಬ ಬಿಎಲ್‌ಎ ರವರನ್ನು ನೇಮಕ ಮಾಡಬೇಕಾಗಿರುತ್ತದೆ. ಒಂದಕ್ಕಿಂತ ಹೆಚ್ಚು ಬೂತ್‌ಗಳಿಗೆ ಒಬ್ಬ ಬಿಎಲ್‌ಎರವನ್ನು ನೇಮಕ ಮಾಡಬೇಕಾದಲ್ಲಿ ಈ ಬೂತ್‌ಗಳು ಒಂದೇ ಮತಗಟ್ಟೆಯ (Cluster Booth with one location) ವ್ಯಾಪ್ತಿಯೊಳಗೆ ಒಳಪಡಬೇಕಾಗಿರುತ್ತದೆ. ಮತಗಟ್ಟೆಗಳು ನೇಮಗೊಂಡ ಬಿಎಲ್‌ಎ ರವರು ಸಾಮಾನ್ಯವಾಗಿ ಆ ಮತಗಟ್ಟೆಯ ಮತದಾರರಾಗಿರಬೇಕಾಗಿರುತ್ತದೆ. ಆ ಮತಗಟ್ಟೆಯಲ್ಲಿ ನೋಂದಣಿಯಾಗದೇ ಇರುವ ಬಿಎಲ್‌ಎಗಳು ಲಭ್ಯವಿಲ್ಲದ ಸಂದರ್ಭದಲ್ಲಿ ಆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನೋಂದಾಯಿತ ಮತದಾರರನ್ನು ಬಿಎಲ್‌ಎ ಎಂದು ನೇಮಕ ಮಾಡಬಹುದಾಗಿರುತ್ತದೆ ಎಂದರು.
2002 ರಲ್ಲಿಯ ಮತದಾರರ ಪಟ್ಟಿಯಲ್ಲಿರುವ ಮತದಾರರ ನಮೂದುಗಳನ್ನು ಪರಿಶೀಲಿಸಲು https://ceo.karnataka.gov.in/search/kn ಹಾಗೂ https://voters.eci.gov.in/searchInSIR/S2UA4DPDF-JK4QWODSE ನಲ್ಲಿ ಅವಕಾಶವನ್ನು ಕಲ್ಪಿಸಲಾಗಿರುತ್ತದೆ. ಕೊಪ್ಪಳ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ನೇಮಕ ಮಾಡಲಾಗಿರುವ ಬೂತ್ ಮಟ್ಟದ ಅಧಿಕಾರಿಗಳ ವಿವರಗಳನ್ನು https://ceo.karnataka.gov.in/113/gallery/en ರ ಮೂಲಕ ಹಾಗೂ ECI NET App ಮೂಲಕ ಪಡೆಯಬಹುದಾಗಿರುತ್ತದೆ. ಪ್ರಸ್ತುತ ಇರುವ ಮತದಾರರ ಪಟ್ಟಿಗಳಲ್ಲಿ ಭಾವಚಿತ್ರವು ಸರಿಯಾಗಿ ಮುದ್ರಣವಾಗದಿದ್ದಲ್ಲಿ ಮತ್ತು ಇತರೆ ನಮೂದುಗಳು ಸರಿಯಾಗಿ ಇರದೇ ಇದ್ದಲ್ಲಿ ಸೂಕ್ತ ಭಾವಚಿತ್ರದೊಂದಿಗೆ ನಮೂನೆ 8 ಹಾಗೂ ಇತರೆ ದೋಷಗಳಿದ್ದಲ್ಲಿ ಸೂಕ್ತ ದಾಖಲೆಗಳನ್ನು ಸರಿಪಡಿಸಿಕೊಳ್ಳುವ ಪ್ರಕ್ರಿಯೆಯು ಜಾರಿಯಲ್ಲಿದ್ದು, ಈ ಕುರಿತು ರಾಜಕೀಯ ಪಕ್ಷಗಳು ಗಮನ ಹರಿಸುವುದು ಅತ್ಯವಶ್ಯಕವಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಕೊಪ್ಪಳ ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ, ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಟಿ.ಕೃಷ್ಣಮೂರ್ತಿ, ಆಹಾರ ಇಲಾಖೆ ಉಪನಿರ್ದೇಶಕ ಸೂರ್ಯಕುಮಾರ, ಜಿಲ್ಲಾ ಚುನಾವಣಾ ಶಾಖೆಯ ತಹಶಿಲ್ದಾರ ರವಿಕುಮಾರ ವಸ್ತ್ರದ್, ಶಿರಸ್ತೆದಾರ ನಾಗರಾಜ್, ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಕೃಷ್ಣ ಇಟ್ಟಂಗಿ, ಸೋಮನಗೌಡ, ಕೃಷ್ಣ ಶೆಟ್ಟರ್, ಸೈಯದ್ ನಾಸೀರ ಹುಸೈನಿ, ಅಮರೇಶ್ ಮುರಳಿ, ಮೈಲಾರಪ್ಪ ಹಾಗೂ ಮತ್ತಿತರರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.




