Karnataka Vishwakarma Janaseva Sangh to hold awareness conference on April 23 for release of caste census report

ಬೆಂಗಳೂರು, ಮಾ, 28; ಜಾತಿ ಜನಗಣತಿ ವರದಿಯನ್ನು ಶೀಘ್ರದಲ್ಲಿ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಏಪ್ರಿಲ್ 23 ರಂದು ಬೆಂಗಳೂರಿನಲ್ಲಿ ಕರ್ನಾಟಕ ವಿಶ್ವಕರ್ಮ ಜನಸೇವಾ ಸಂಘದಿಂದ “ವಿಶ್ವಕರ್ಮ ಜನಜಾಗೃತಿ ಸಮಾವೇಶ” ಹಮ್ಮಿಕೊಳ್ಳಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ವಿಶ್ವಕರ್ಮ ಜನಸೇವಾ ಸಂಘ ರಾಜ್ಯಾಧ್ಯಕ್ಷ ಎಂ. ಸೋಮಶೇಖರ್, ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಸಮಾವೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಸಚಿವರು, ಗಣ್ಯರು ಭಾಗವಹಿಸಲಿದ್ದಾರೆ. ಹಿಂದುಳಿದ ವರ್ಗದ ಶೇ 15 ರಷ್ಟು ಮೀಸಲಾತಿ ಪೈಕಿ ಶೇ 3 ರಷ್ಟು ಮೀಸಲಾತಿಯನ್ನು ಅತಿ ಹಿಂದುಳಿದ ಜಾತಿಗಳಿಗೆ ಒಳಮೀಸಲಾತಿ ಕಲ್ಪಿಸಬೇಕು. ನಿಗಮಕ್ಕೆ 300 ಕೋಟಿ ರೂ ಅನುದಾನ, ವಿವಿಗಳಿಗೆ ಅಮರಶಿಲ್ಪಿ ಜಕಣಾಚಾರಿ ಹೆಸರು ನಾಮಕರಣ ಮಾಡಬೇಕು. ವಿಧಾನಸೌಧದ ಆವರಣದಲ್ಲಿ ಭಗವಾನ್ ವಿಶ್ವಕರ್ಮ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕು ಎಂದು ಒತ್ತಾಯಿಸಿದರು.
ಅಮರಶಿಲ್ಪಿ ಜಕಣಾಚಾರಿ ಹುಟ್ಟೂರಾದ ಕೈದಾಳ ಅಭಿವೃದ್ಧಿ, ಬೇಲೂರಿನ ಚೆನ್ನಕೇಶವ ದೇವಾಲಯದಲ್ಲಿ ಜಕಣಾಚಾರಿ ಮತ್ತವರ ಮಗನಾದ ಡಂಕಣಾಚಾರಿ ಪ್ರತಿಮೆ ಅನಾವರಣ ಮಾಡಲು ಸ್ಥಳಾವಕಾಶ, ಕೇಂದ್ರೀಯ ಮತ್ತು ಗ್ರಾಮೀಣ ಬ್ಯಾಂಕ್ ಗಳಲ್ಲಿ ಚಿನ್ನ ಪರೀಕ್ಷಿಸುವವರನ್ನು ಆಚಾರಿ ಎಂದು ಬಳಸದೇ, ಆಭರಣ ಪರೀಕ್ಷಕರು ಎಂದು ಹೆಸರು ಬದಲಿಸಬೇಕು ಎಂದು ಮನವಿ ಮಾಡಲಾಗಿದೆ ಎಂದು ಎಂ. ಸೋಮಶೇಖರ್ ತಿಳಿಸಿದರು.
ಕರ್ನಾಟಕ ವಿಶ್ವಕರ್ಮ ಜನಸೇವಾ ಸಂಘದ ಮಹಿಳಾ ಘಟಕದ ಅಧ್ಯಕ್ಷರನ್ನಾಗಿ ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯ ಕಾರ್ಯದರ್ಶಿ ವಸಂತ ಮುರಳಿ ಆಚಾರ್ಯ ಅವರನ್ನು ನೇಮಿಸಲಾಗಿದೆ. ಇವರು ಕರ್ನಾಟಕ ಅಹಿಂದ ವರ್ಗಗಳ ರಾಜ್ಯಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘದ ರಾಜ್ಯ ಕಾರ್ಯದರ್ಶಿ ಎಚ್. ಪರಮೇಶ್ವರಾಚಾರ್, ಖಜಾಂಚಿ ಕೆ.ವಿ. ದೇವೇಂದ್ರ ಚಾರ್, ಮಹಿಳಾ ವಿಭಾಗದ ರಾಜ್ಯ ಕಾರ್ಯದರ್ಶಿ ಕವಿತಾ ಬಡಿಗೇರ್, ಪ್ರಧಾನ ಕಾರ್ಯದರ್ಶಿ ಗಿರೀಜಾ ಆಚಾರ್ಯ. ಉಪಾಧ್ಯಕ್ಷ ಕೆ.ವಿ. ಜಯಣ್ಣಾಚಾರ್, ಬಸವರಾಜ್ ಹುಣಸೇಮರದ್, ಸಂಶೋಧಕ ಸತೀಶ್ ಮುಳ್ಳೂರ್ ಉಪಸ್ಥಿತರಿದ್ದರು.