Caste and religion should not be brought into the middle while punishing criminals: DySP Siddalingappa Gowda Patil

ಸೌಹಾರ್ದಯುತವಾಗಿ ಹಬ್ಬವನ್ನು ಆಚರಿಸಿ…!
ಗಂಗಾವತಿ.26 ಅಪರಾಧಿಗಳನ್ನು ದಂಡಿಸುವಾಗ ಜಾತಿ, ಧರ್ಮಗಳನ್ನು ಮಧ್ಯದಲ್ಲಿ ತರಬಾರದು ಎಂದು ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಪಾಟೀಲ ಹೇಳಿದರು.
ನಗರಠಾಣೆ ಹಾಲ್ ನಲ್ಲಿ ರಂಜಾನ್ ಮತ್ತು ಯುಗಾದಿ ಹಬ್ಬದ ಪ್ರಯುಕ್ತ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿ, ಸಾಮಾಜಿಕ ಸುವ್ಯವಸ್ಥೆ ಕದಲುವಂತಹ ಕೃತ್ಯ ಎಸಗಿದವರ ವಿರುದ್ಧ ಪೊಲೀಸ್ ಇಲಾಖೆ ನಿರ್ದಾಕ್ಷಣವಾಗಿ ಕ್ರಮ ಕೈಗೊಳ್ಳುತ್ತದೆ. ರಂಜಾನ್ ಮತ್ತು ಯುಗಾದಿ ಹಬ್ಬದ ಪ್ರಯುಕ್ತ ಎಲ್ಲ ಸಮುದಾಯದ ಜನರು ಸೌಹಾರ್ದಯುತವಾಗಿ ಹಬ್ಬ ಆಚರಿಸಬೇಕು,ಯಾವುದೇ ರೀತಿಯ ಗಲಾಟೆ, ಜನರಿಗೆ ತೊಂದರೆಯಾಗದ ರೀತಿಯಲ್ಲಿ ಸಮಾಜದ ಮುಖಂಡರು ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.
ಈ ವೇಳೆ ನಗರಸಭೆ ಹಿರಿಯ ಸದಸ್ಯ ಶಾಮೀದ್ ಮನಿಯಾರ್ ಮಾತನಾಡಿ, ರಂಜಾನ್ ಹಬ್ಬದ ವೇಳೆ ನಾನಾ ಮಸೀದಿಗಳ ಪಕ್ಕದಲ್ಲಿ ಟ್ರಾಫಿಕ್, ವಾಹನಗಳ ಶಬ್ದ ನಿಯಂತ್ರಣ ಮಾಡಬೇಕು. ಹಬ್ಬದ ಪ್ರಯುಕ್ತ ಮಂದಿರದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯುತ್ತಿರುತ್ತದೆ. ಆ ವೇಳೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಬೇಕು. ಮಸೀದಿ ಮುಂದೆ ಪಾರ್ಕಿಂಗ್ ಮಾಡಲಾಗಿರುವ ವಾಹನಗಳಿಂದ ಪೆಟ್ರೋಲ್ ಕಳ್ಳತನವಾಗುತ್ತಿದ್ದು, ಅದನ್ನು ತಡೆಗಟ್ಟಬೇಕು. ನಗರಸಭೆಯಿಂದ ಕುಡಿಯುವ ನೀರು ಮತ್ತು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಪಿಐ ಪ್ರಕಾಶ ಮಾಳಿ ರಂಜಾನ್ ಹಬ್ಬದ ಪ್ರಯುಕ್ತ ಮಸೀದಿ ಮತ್ತು ನಾನಾ ವೃತ್ತಗಳಲ್ಲಿ ಹೆಚ್ಚುವರಿಯಾಗಿ ಪೊಲೀಸ್ ಸಿಬ್ಬಂದಿಗಳನ್ನು ನೇಮಕ ಮಾಡಲಾಗುವುದು. ಯಾವುದೇ ರೀತಿಯ ಘರ್ಷಣೆಯಾಗದ ರೀತಿಯಲ್ಲಿ ಎಚ್ಚರ ವಹಿಸಲಾಗುವುದು ಅದಕ್ಕೆ ಸೂಕ್ತ ಸಿಬ್ಬಂದಿಗಳನ್ನು ನೇಮಕ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಎಸ್.ಬಿ.ಖಾದ್ರಿ, ಡಾ.ಬಸೀರಸಾಬ್,ದಳಪತಿ ಫಕೀರಪ್ಪ ನಾಯಕ್, ರಾಮನಾಯ್ಕ್,ನಗರ ಸಬೆ ಸಿಬ್ಬಂದಿ ಷಣ್ಮುಖ, ಮೀರಸಾಬ್, ನಜೀರ್ ಸಾಬ್, ಅಲಿಸಾಬ್, ಕಮರಸಾಬ್,ಸೇರಿದಂತೆ ಇತರರು ಇದ್ದರು
.