Breaking News

ಆರೋಗ್ಯ ಇಲಾಖೆ ಆಯುಕ್ತರ ಆದೇಶದ ಮಧ್ಯ ರಾಜ್ಯಮಟ್ಟದ ಹೋರಾಟಕ್ಕೆ ಮುಂದಾದ ಆಶಾ ಕಾರ್ಯಕರ್ತೆಯರು.

Asha activists launched a state-level protest against the order of the Health Department Commissioner

ಜಾಹೀರಾತು
IMG 20250104 WA0125

ಕೊಪ್ಪಳ :ದಿ,04.01.2025 ರಂದು ಆರೋಗ್ಯ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಇದು ಮುಷ್ಕರ ಕೈಬಿಡಲು ಹೋರಾಟ ನಿರತ ಆಶಾ ಕಾರ್ಯಕರ್ತೆಯರನ್ನು ಹೆದರಿಸುವ ಕ್ರಮವಲ್ಲದೆ ಇನ್ನೇನೂ ಅಲ್ಲ.

ಸುಮಾರು 15 ವರ್ಷಗಳಿಂದ ಅತ್ಯಂತ ಕನಿಷ್ಠ ಸಂಭಾವನೆಯಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಆಶಾಗಳು ಜನತೆಯ ಆರೋಗ್ಯ ಕಾಪಾಡಲು ಅತ್ಯಂತ ಕಾಳಜಿಯಿಂದ ಹಗಲೂ ಇರುಳೂ ಬೆವರು ಸುರಿಸಿ ದುಡಿಯುತ್ತಿರುವುದು ಸುಳ್ಳೇ?

ಕೋವಿಡ್ ಕಾಲದಲ್ಲಿ ಜೀವ ಪಣಕ್ಕಿಟ್ಟು ಅವರು ನಿರ್ವಹಿಸಿದ ಅನನ್ಯ ಸೇವೆಗೆ ಅವರಿಗೆ ಮುಂಚೂಣಿ ಆರೋಗ್ಯ ಕಾರ್ಯಕರ್ತೆಯರು ಎಂದು ಎಲ್ಲಾ ಕಡೆಗಳಿಂದ ಸಿಕ್ಕ ಪ್ರಶಂಸೆ ಸುಳ್ಳೇ?

ಈ ಪತ್ರದಲ್ಲಿ ತಿಳಿಸಿರುವಂತೆ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ಸೂಕ್ತ ಸಮಯದಲ್ಲಿ ದುಡಿದಷ್ಟು ಸಂಭಾವನೆ ಸಿಕ್ಕಿದಲ್ಲಿ ಅವರು ಹಲವು ಕಷ್ಟಗಳನ್ನು ಎದುರಿಸಿ ಕಾಲಕಾಲಕ್ಕೆ ಹೋರಾಟ ನಡೆಸಬೇಕಿತ್ತೇ?

ವಿಶಿಷ್ಟ ಕೆಲಸಗಳಿಗೆ ನೀಡುವ ನಿಗದಿತ ಪ್ರೋತ್ಸಾಹಧನ ಕಳೆದ ಎಂಟು ವರ್ಷಗಳಿಂದ ದುಡಿದಷ್ಟು ನ್ಯಾಯವಾಗಿ ಕೈ ಸೇರುತ್ತಿಲ್ಲ ಎನ್ನುವುದೇ ಆಶಾಗಳ ಆಳಲಲ್ಲವೆ? ಈ ಕುರಿತು ಇಲಾಖೆ ಕರೆದ ನೂರಾರು ಸಭೆಗಳಲ್ಲಿ ಸಂಘವು ಪ್ರದರ್ಶಿಸಿದ ಸಾವಿರಾರು ದಾಖಲೆಗಳು ಹತ್ತಾರು ನಡಾವಳಿಗಳೇ ಜೀವಂತ ಸಾಕ್ಷಿ.

ನಿಜಕ್ಕೂ ಆಶಾ ನೈಜ ಸಮಸ್ಯೆಗಳ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವುದಾಗಿ ಹೇಳುವ ಇಲಾಖೆ, ಕಳೆದ ಒಂದು ವರ್ಷದಿಂದ ರಾಜ್ಯಮಟ್ಟದಲ್ಲಿ ಸುಮಾರು 20 ಸಭೆಗಳನ್ನು ನಡೆಸಿರುವುದೇಕೆ? ಈ ಸಭೆಗಳಲ್ಲಿ ಸಂಘವು ಎತ್ತಿದ ಬೇಡಿಕೆಗಳು ನಿಜ ಎಂದು ಸಚಿವರು ಹಾಗೂ ಅಧಿಕಾರಿಗಳ ಮುಂದೆ ಸಾಬೀತಾದರೂ ಯಾವ ಬೇಡಿಕೆಯನ್ನೂ ಈಡೇರಿಸದೇ ಬಿಟ್ಟಿದ್ದು ಅಪಾರ ಸಂಖ್ಯೆಯ ಅಸಹಾಯಕ ದುಡಿಯುವ ಹೆಣ್ಣು ಮಕ್ಕಳ ಮೇಲೆ ಎಸಗಿದ ಘೋರ ಅನ್ಯಾಯವಲ್ಲವೆ?

ಹಲವಾರು ಬಾರಿ ನಮ್ಮ ಬೇಡಿಕೆಗಳಿಗೆ ಸ್ಪಂದಿಸಿ ಇಲಾಖೆಯು ಸರ್ಕಾರಕ್ಕೆ ಕರಡು ಪ್ರಸ್ತಾವನೆ ಸಲ್ಲಿಸಿರುವುದು ಸುಳ್ಳೇ?

ಆಶಾ ಬೇಡಿಕೆಗಳು ಈಡೇರಿಸಲು ಸಾಧ್ಯವಿಲ್ಲ ಎಂದಾದರೆ! ಒಂದು ವರ್ಷದ ಹಿಂದೆ ಮಾನ್ಯ ಮುಖ್ಯಮಂತ್ರಿಗಳು ಆಶಾ ಸಮಸ್ಯೆಯನ್ನು ಬಗೆಹರಿಸುವ ಗ್ಯಾರೆಂಟಿ ನೀಡಿದ್ದು ಏಕೆ?

ನಿಯಮಾನುಸಾರ ಆಶಾಗಳಿಗೆ ನಿಗದಿತ ವೇತನ ನೀಡಲಾಗದು ಎಂದು ಹೇಳಲಾಗಿದೆ. ಆದರೆ ಇತರ ಕೆಲ ರಾಜ್ಯಗಳಲ್ಲಿ ನೀಡುತ್ತಿರುವುದು ಈ ನಿಯಮಕ್ಕೆ ವಿರುದ್ಧವಾಗಿಯೇ?

ಕೊನೆಗೂ ಯಾವುದೇ ಪರಿಹಾರ ಸಿಗದೇ ಅನಿವಾರ್ಯವಾಗಿ ಆಶಾಗಳು ಹೋರಾಟಕ್ಕೆ ಮುಂದಾಗಿರುವುದು ಮನರಂಜನೆಗಾಗಿಯೇ?

ಎಲ್ಲಾ ಸರ್ಕಾರಗಳು ಮಹಿಳೆಯರ ದುಸ್ಥಿತಿಯ ಕುರಿತು ಕಣ್ಣೀರು ಸುರಿಸುತ್ತಲೇ ನ್ಯಾಯವಾಗಿ ಸರ್ಕಾರಿ ನೌಕರರಿಗೆ ಸಮನಾಗಿ ದುಡಿಯುತ್ತಿರುವ ಈ ಹತಭಾಗ್ಯ ಮಹಿಳೆಯರಿಗೆ ದಶಕದಿಂದ ಎಸಗುತ್ತಿರುವುದು ಘೋರ ಅನ್ಯಾಯವಲ್ಲದೆ ಇನ್ನೇನು?

ಕಳೆದ ಐದಾರು ವರ್ಷಗಳಿಂದ ಮೊಬೈಲ್ ಡಾಟಾ ನೀಡದೆ ಒತ್ತಾಯದಿಂದ ಮೊಬೈಲ್ ಮೂಲಕ ಕೆಲಸ ಮಾಡಿಸಿಕೊಂಡು, ಈ ತಿಂಗಳನವರೆಗೆ ಮೊಬೈಲ್ ಡಾಟಾ ನೀಡದೆ ರೂ.280 ನೀಡುತ್ತಿರುವುದಾಗಿ ಇಲಾಖೆಯಿಂದ ಘೋಷಿಸಿಕೊಂಡಿರುವುದಕ್ಕಿಂತ ಅಪಮಾನಕರ ಕಾರ್ಯ ಇದೆಯೇ? (ಈ ಬಗ್ಗೆ ಆದೇಶ ಮಾಡಿರುವ ದಿ: 28.11.2024) ಇದು ಸರ್ಕಾರ ಹಾಗೂ ಇಲಾಖೆಗೆ ಶೋಭೆ ತರುವುದೇ?

ಆಶಾ ಕಾರ್ಯಕರ್ತೆಯರು ಹೋರಾಟಕ್ಕೆ ಹಾಜರಾದರೆ ಜಿಲ್ಲಾ ಆರೋಗ್ಯ ಅಧಿಕಾರಿಗಳಿಂದ ಜಿಲ್ಲಾಧಿಕಾರಿಗಳು ಮಾಹಿತಿ ಪಡೆಯುವುದು ಎಂದು ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಬಳಸಲಾಗಿದೆ. ನಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸದಿದ್ದ ಮೇಲೆ ಹೇಗೆ ಕ್ರಮ ಕೈಗೊಳ್ಳಲಾಗುವುದು? ಹೇಗೆ ಜಿಲ್ಲಾಧಿಕಾರಿಗಳು ಮಾಹಿತಿ ಪಡೆಯುತ್ತಾರೆ? ಸರ್ಕಾರಿ ನೌಕರರೆಂಬ ರಕ್ಷೆ ನಮಗಿಲ್ಲ ಆದರೆ ಶಿಕ್ಷೆ ಮಾತ್ರ ಇದೆ. ಇದೇ ಸರ್ಕಾರದ ಸಹಜ ನ್ಯಾಯವೆ?

 ಆಶಾ ಕಾರ್ಯಕರ್ತೆಯರು ಹೋರಾಟಕ್ಕೆ ಹೋದಾಗ ಸಾರ್ವಜನಿಕ ನಿಗದಿತ ಸೇವೆ ಒದಗಿಸಲು ವಿವಿಧ ಆರೋಗ್ಯ ಸಿಬ್ಬಂದಿಗೆ ಜವಾಬ್ದಾರಿ ವಹಿಸಿಸಲಾಗುವುದು, ಅದಕ್ಕಾಗಿ ಹೊಸದಾಗಿ ಆಶಾಗಳನ್ನು ಆಯ್ಕೆ ಮಾಡಲಾಗುವುದು ಎನ್ನಲಾಗಿದೆ. ಆಶಾಗಳು ಈ ಬೆದರಿಕೆಯನ್ನು ಸವಾಲಾಗಿ ಸ್ವೀಕರಿಸಿ ದಿಟ್ಟವಾಗಿ ಎದುರಿಸಿ ನಿಲ್ಲಲಾರದೆ?

ನಿಯಮಾನುಸಾರ ಮೂರು ತಿಂಗಳು ಕೆಲಸ ಮಾಡದಿದ್ದಲ್ಲಿ ಮಾತ್ರ ಯಾವುದೇ ಆಶಾಳನ್ನು ಕೆಲಸದಿಂದ ಬಿಡುಗಡೆಗೊಳಿಸಬಹುದು. ಆದರೆ ಈಗ ಮುಷ್ಕರಕ್ಕೆ ಹೋದರೆ ಕ್ರಮ ಕೈಗೊಳ್ಳಬೇಕೆಂದು ಆದೇಶ ನೀಡಲಾಗಿದೆ. ಇಲಾಖೆ ಇಂತಹ ಕಾನೂನುಬಾಹಿರ ಕ್ರಮ ಕೈಗೊಳ್ಳಬಹುದೇ? ಇದು ಬೇಲಿಯೇ ಎದ್ದು ಹೊಲ ಮೇಯ್ದಂತಾಗದೇ?

 ನಮ್ಮ ಹೋರಾಟ ಕೇವಲ ದುಡಿಮೆಗೆ ತಕ್ಕ ಸಂಭಾವನೆಗಾಗಿ ಮಾತ್ರವಲ್ಲ ನಮ್ಮ ಆತ್ಮಗೌರವ, ನಮ್ಮ ಘನತೆಗಾಗಿ, ನ್ಯಾಯಕ್ಕಾಗಿ ಎಂಬುದನ್ನು ಮತ್ತೆ ನೆನಪಿಸಿಕೊಳ್ಳೋಣ.

ಒಟ್ಟಾರೆ ಕಳೆದ ವರ್ಷ ಫೆಬ್ರವರಿಯಲ್ಲಿ ಮಾನ್ಯ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿರುವುದು, ಮೊನ್ನೆ ಬೆಳಗಾವಿ ಅಧಿವೇಶನದಲ್ಲಿ ಎತ್ತಿದ ಆಶಾ ಬೇಡಿಕೆಗಳ ಬಗ್ಗೆ ಉತ್ತರಿಸಿದ ಸಚಿವರ ಅತ್ಯಂತ ಅನುಕಂಪದ ನುಡಿಗಳು, ಆಶಾಗಳಿಗೆ ಆಶಾಕಿರಣವಾಗಿದ್ದವು. ಆದರೆ ಈಗ ಸರ್ಕಾರದ ನಡೆಯಿಂದ ಕತ್ತಲಾವರಿಸಿದೆ. ಈ ಹಿಂದೆ ಮ್ಯಾಚಿಂಗ್ ಗ್ಯಾಂಟ್, ನಿಗದಿತ ಗೌರವಧನ ನೀಡಿರುವುದು ಇದೇ ಸರ್ಕಾರದ ಮೊದಲ ಅವಧಿಯಲ್ಲಿ, ದೇಶಕ್ಕೇ ಮೊಟ್ಟ ಮೊದಲು ಎಂಬ ಕೀರ್ತಿ ಇತ್ತು. ಸರ್ಕಾರ ಈ ಕೀರ್ತಿಯನ್ನು ಮುಂದುವರೆಸುವುದೇ ಅಥವಾ ಕಳೆದುಕೊಳ್ಳುವುದೇ ಎಂಬುದನ್ನು ಈ ಮುಷ್ಕರ ತೀರ್ಮಾನಿಸುತ್ತದೆ.

About Mallikarjun

Check Also

20251015 201304 collage.jpg

ರೈತರು ಕೃಷಿ ಸಂಸ್ಕರಣಾ ಘಟಕ ತರಬೇತಿಯಸದುಪಯೋಗ ಪಡೆದುಕೊಳ್ಳಬೇಕು- ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

Farmers should take advantage of agro-processing unit training - Union Minister Nirmala Sitharaman ಕೊಪ್ಪಳ ಅಕ್ಟೋಬರ್ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.