Breaking News

ಮಾನ್ಯಮುಖ್ಯಮಂತ್ರಿಗಳು ವಿಧಾನಸಭೆಯಲ್ಲಿ ನೀಡಿದ ಹೇಳಿಕೆ

Honorable Chief Minister’s statement in the Legislative Assembly

ಜಾಹೀರಾತು

IMG 20241219 WA0351 Scaled

ಕೇಂದ್ರ ಗೃಹಸಚಿವ ಅಮಿತ್ ಶಹಾ ಅವರು ರಾಜ್ಯಸಭೆಯಲ್ಲಿ ಮಾತನಾಡುತ್ತಾ ಬಾಬಾಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಆಡಿರುವ ತುಚ್ಛೀಕರಣದ ಮಾತುಗಳನ್ನು ಇಡೀ ದೇಶವೇ ಕೇಳಿದೆ. ಮೊದಲಿಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಭಾರತೀಯ ಜನತಾ ಪಕ್ಷದ ಅಂತರಂಗದ ಅಭಿಪ್ರಾಯವನ್ನು ಬಹಿರಂಗವಾ ಗಿ ಧೈರ್ಯದಿಂದ ದೇಶದ ಮುಂದೆ ತೆರೆದಿಟ್ಟದ್ದಕ್ಕಾಗಿ ಮತ್ತು ಕೊನೆಗೂ ನಿಮ್ಮ ಜೀವಮಾನದಲ್ಲಿ ಒಂದು ಸತ್ಯವನ್ನಾದರೂ ಹೇಳಿದ್ದಕ್ಕೆ ಅವರನ್ನು ನಾನು ಅಭಿನಂದಿಸುತ್ತೇನೆ. ಇದರ ನಂತರ ಇಡೀ ದೇಶ ಬಿಜೆಪಿ ಮತ್ತು ಅದರ ನಾಯಕರ ವಿರುದ್ದ ತಿರುಗಿಬಿದ್ದಾಗ ನಿರೀಕ್ಷೆಯಂತೆ ತಮ್ಮ ಮಾತನ್ನು ತಿರುಚಲಾಗಿದೆ, ಅಂಬೇಡ್ಕರ್ ಅವರ ಬಗ್ಗೆ ನಮಗೆ ಗೌರವವಿದೆ’’ ಎಂದೆಲ್ಲ ಸ್ಪಷ್ಟೀಕರಣವನ್ನು ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಆತ್ಮೀಯ ಸ್ನೇಹಿತನ ರಕ್ಷಣೆಗೆ ಧಾವಿಸಿ ಉದ್ದನೆಯ ಹೇಳಿಕೆಯನ್ನು ನೀಡಿದ್ದಾರೆ. ಇವೆಲ್ಲವೂ ನಿರೀಕ್ಷಿತವಾದುದು.
ಅಮಿತ್ ಶಹಾ ಅವರು ಆಡಿದ ಮಾತುಗಳಲ್ಲಿ ಆಶ್ಚರ್ಯವೇನಿಲ್ಲ. ಬಿಜೆಪಿ ಮತ್ತು ಸಂಘ ಪರಿವಾರದ ನಾಯಕರ ಮನಸ್ಸಲ್ಲಿದ್ದದ್ದು ಬಾಯಿಯಲ್ಲಿ ಬಂದು ಬಿಟ್ಟಿದೆ. ಇದು ಶಹಾ ಅವರ ಬಾಯಿ ತಪ್ಪಿನಿಂದ ಬಂದುದಲ್ಲ ಎನ್ನುವುದಕ್ಕೆ ಇತಿಹಾಸವೇ ಸಾಕ್ಷಿ. ಅಂಬೇಡ್ಕರ್ ಅವರನ್ನು ಇವರು ದ್ವೇಷಿಸಲು ಮುಖ್ಯ ಕಾರಣ ಅವರು ಕೊಟ್ಟು ಹೋಗಿರುವ ಸಂವಿಧಾನ. ಈ ಲಿಖಿತ ಸಂವಿಧಾನ ಜಾರಿಗೆ ಬರುವ ವರೆಗೆ ನಮ್ಮಲ್ಲಿ ಜಾತಿ ಮತ್ತು ಲಿಂಗ ತಾರತಮ್ಯವನ್ನು ಶಾಸನವನ್ನಾಗಿ ಮಾಡಿರುವ ಮನುಸ್ಮೃತಿ ಜಾರಿಯಲ್ಲಿತ್ತು. ಸ್ವಾತಂತ್ರ್ಯ, ಸಮಾನತೆ ಮತ್ತು ಭಾತೃತ್ವದ ಆಶ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೇವಲ ಸಂವಿಧಾನವನ್ನು ಕೊಟ್ಟು ಹೋಗಿಲ್ಲ, ಅಲ್ಲಿಯ ವರೆಗೆ ಜಾರಿಯಲ್ಲಿದ್ದ ಅಲಿಖಿತ ಸಂವಿಧಾನವಾದ ಮನುಸ್ಮೃತಿಯನ್ನು ಸುಟ್ಟು ಹೋಗಿದ್ದರು. 1927ರ ಡಿಸೆಂಬರ್ 25ರಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮನುಸ್ಮೃತಿಯನ್ನು ಸಾರ್ವಜನಿಕವಾಗಿ ಸುಟ್ಟು ಹಾಕಿದ್ದರು. ಅದರ 22 ವರ್ಷಗಳ ನಂತರ ಅವರು ಹೊಸ ಸಂವಿಧಾನವನ್ನು ಹುಟ್ಟುಹಾಕಿದ್ದರು.

ಬಿಜೆಪಿ ಮತ್ತು ಸಂಘ ಪರಿವಾರದಲ್ಲಿರುವ ಮನುವಾದಿಗಳು ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ದ್ವೇಷಿಸಲು ಇದು ಕಾರಣ. ಇತಿಹಾಸವನ್ನು ಓದಿರುವ ನಮ್ಮಂತಹವರಿಗೆ ಬಿಜೆಪಿ ಮತ್ತು ಆರ್ ಎಸ್ ಎಸ್ ನ ಅಂಬೇಡ್ಕರ್ ದ್ವೇಷ ಹೊಸದಲ್ಲ. ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಅವರು ಬರೆದಿರುವ ದೇಶದ ಸಂವಿಧಾನವನ್ನು ಅವರು ಬದುಕಿರುವಾಗಲೇ ಬಿಜೆಪಿಯ ಮಾತೃಸಂಸ್ಥೆಯಾದ ಆರ್ ಎಸ್ ಎಸ್ ಯಾಕೆ ತಿರಸ್ಕರಿಸಿತ್ತು? ಆರ್ ಎಸ್ ಎಸ್ ನಾಯಕರಾಗಿದ್ದ ಹೆಡಗೆವಾರ್, ಗೋಲ್ವಾಲ್ಕರ್ ಮತ್ತು ಸಾವರ್ಕರ್ ಸಂವಿಧಾನವನ್ನು ವಿರೋಧಿಸಿ ನೀಡಿರುವ ಹೇಳಿಕೆಗಳೇನು ಎನ್ನುವ ವಿವರಗಳೆಲ್ಲ ಇತಿಹಾಸದ ಪುಟಗಳಲ್ಲಿ ಇವೆ. ನಿಮ್ಮ ಸುಳ್ಳುಗಳು ಮತ್ತು ಆತ್ಮವಂಚನೆಯ ನಡವಳಿಕೆಗಳಿಂದ ಅದನ್ನು ಮರೆಮಾಚಬಹುದು, ಆದರೆ ಅಳಿಸಿಹಾಕಲಾಗುವುದಿಲ್ಲ ಎನ್ನುವುದು ನೆನಪಿರಲಿ.

ಬಾಬಾ ಸಾಹೇಬ್ ಅಂಬೇಡ್ಕರ್ ಅವರು 1949ನ ನವಂಬರ್ 30ರಂದು ಸಂವಿಧಾನವನ್ನು ದೇಶಕ್ಕೆ ಅರ್ಪಿಸಿದರು. ಅದರ ನಾಲ್ಕು ದಿನಗಳ ನಂತರ ಆರ್ ಎಸ್ ಎಸ್ ಮುಖವಾಣಿ ಆರ್ಗನೈಸರ್ ಪತ್ರಿಕೆ ಸಂವಿಧಾನವನ್ನು ವಿರೋಧಿಸಿ ಸಂಪಾದಕೀಯ ಬರೆದಿರುವುದು ಇತಿಹಾಸದ ಪುಟದಲ್ಲಿದೆ. ‘’ ಅಂಬೇಡ್ಕರ್ ರಚಿತ ಸಂವಿಧಾನದಲ್ಲಿ ಭಾರತೀಯತೆಯೇ ಇಲ್ಲ…..ಇವತ್ತಿಗೂ ಮನಸ್ಮೃತಿಯಲ್ಲಿ ಉಲ್ಲೇಖಿಸಲಾದ ಕಾನೂನುಗಳು ಪ್ರಪಂಚದ ಗೌರವಕ್ಕೆ ಪಾತ್ರವಾಗಿದೆ…. ನಮ್ಮ ಸಂವಿಧಾನವನ್ನು ರಚಿಸಿದ ಪಂಡಿತರಿಗೆ ಇದ್ಯಾವುದೂ ಲೆಕ್ಕಕ್ಕಿಲ್ಲ’’’ ಎಂದೆಲ್ಲ ಸಂವಿಧಾನವನ್ನು ವಿರೋಧಿಸಿ ಬಾಬಾಸಾಹೇಬರನ್ನು ‘’ ಪಂಡಿತರೆಂದು ಗೇಲಿ ಮಾಡಿ ಆರ್ ಎಸ್ ಎಸ್ ಸಂಪಾದಕೀಯ ಬರೆದಿತ್ತು. ಈ ಸಂಪಾದಕೀಯವನ್ನು ಇಂದಿಗೂ ಆರ್ ಎಸ್ ಎಸ್ ಸಮರ್ಥಿಸಿಕೊಳ್ಳುತ್ತಿದೆ.

ಆರ್ ಎಸ್ ಎಸ್ ನ ಎರಡನೇ ಸರಸಂಘ ಚಾಲಕರಾಗಿದ್ದ ಎಂ.ಎಸ್ .ಗೋಳ್ವಾಳ್ಕರ್ ಅವರು ಬರೆದಿರುವ ಆರ್ ಎಸ್ ಎಸ್ ನ ಸಂವಿಧಾನವೆಂದೇ ಬಗೆಯಲಾಗಿರುವ ಬಂಚ್ ಆಫ್ ಥಾಟ್ಟ್ ನಲ್ಲಿಯೂ ಅಂಬೇಡ್ಕರ್ ಮತ್ತು ಸಂವಿಧಾನವನ್ನು ವಿರೋಧಿಸಿದ್ದರು. ‘’ ವೇದಗಳ ನಂತರ ನಮ್ಮ ಹಿಂದೂ ರಾಷ್ಟ್ರಕ್ಕೆ ಪೂಜನೀಯವಾದ ಗ್ರಂಥವೆಂದರೆ ಮನುಸ್ಮೃತಿಯಾಗಿದ್ದು ಅನಾದಿ ಕಾಲದಿಂಧಲೂ ನಮ್ಮ ಸಂಸ್ಕೃತಿ ಸಂಪ್ರದಾಯ ಮತ್ತು ಆಚಾರಗಳಿಗೆ ಅದು ಆಧಾರವಗಿದೆ. ಇವತ್ತು ಮನುಸ್ಮೃತಿಯೇ ಹಿಂದುಗಳ ಕಾನೂನು’’ ಎಂದು ಗೋಳ್ವಾಳ‍್ಕರ್ ಹೇಳಿದ್ದರು. ಇದು ಸುಳ್ಳೇ? ಇದೇ ರೀತಿ ವಿ.ಡಿ.ಸಾವರ್ಕರ್ ಅವರೂ ಸಂವಿಧಾನವನ್ನು ವಿರೋಧಿಸಿದ್ದರು.
ಬಿಜೆಪಿಯಾಗಲಿ, ಆರ್ ಎಸ್ ಎಸ್ ಆಗಲಿ ಇಲ್ಲಿಯ ವರೆಗೆ ಸಂವಿಧಾನ ಮತ್ತು ಅಂಬೇಡ್ಕರ್ ಅವರನ್ನು ವಿರೋಧಿಸಿದ್ದ ಆರ್ ಎಸ್ ಎಸ್ ಸಂಪಾದಕೀಯವನ್ನಾಗಲಿ, ಗೋಳ್ವಾಳ್ಕರ್ ಮತ್ತು ಸಾವರ್ಕರ್ ಅಭಿಪ್ರಾಯವನ್ನಾಗಲಿ ತಿರಸ್ಕರಿಸಿಲ್ಲ. ಇದರ ಅರ್ಥ ಇವರ ಮನಸ್ಸಿನೊಳಗೆ ಅಂಬೇಡ್ಕರ್ ಬಗೆಗಿನ ದ್ವೇಷ, ಅಸೂಯೆ, ಅಸಹನೆ ಈಗಲೂ ಜೀವಂತವಾಗಿದೆ ಎಂದು ಅರ್ಥವಲ್ಲವೇ? ಇದರಿಂದಾಗಿ ಅಮಿತ್ ಶಹಾ ಅವರು ಅಂಬೆಡ್ಕರ್ ಅವರ ಬಗ್ಗೆ ಆಡಿದ ಮಾತು ನನಗೆ ಆಶ್ಚರ್ಯ ಉಂಟು ಮಾಡಿಲ್ಲ. ಸಮಾಧಾನದ ಸಂಗತಿ ಎಂದರೆ ಇದೀಗ ಇಡೀ ದೇಶಕ್ಕೆ ಻ವರ ಅಂತರಂಗದ ಅರಿವಾಗಿದೆ.. ಬಾಬಾಸಾಹೇಬ್ ಅವರು ಕೊಟ್ಟ ಸಂವಿಧಾನದಡಿಯಲ್ಲಿಯೇ ಕಾರ್ಯನಿರ್ವಹಿಸುತ್ತಿರುವ ಸಂಸತ್ ನಲ್ಲಿ ನಿಂತು ಅವರ ಸ್ಮರಣೆಯನ್ನು ವ್ಯಸನ ಎಂದು ತುಚ್ಛೀಕರಿಸುವ ಅವರ ಧೈರ್ಯಕ್ಕೆ ಮೆಚ್ಚಿಕೊಳ‍್ಳಲೇ ಬೇಕು. ಈ ಮಾತನ್ನು ಕೇಳಿದ ನಂತರ ರಾಜ್ಯಸಭಾಧ್ಯಕ್ಷರು ನಿಜಕ್ಕೂ ಸಂವಿಧಾನದಡಿಯಲ್ಲಿ ಕಾರ್ಯನಿರ್ವಹಿಸುವವರಾಗಿದ್ದರೆ ತಕ್ಷಣ ಅವರನ್ನು ಸದನದಿಂದ ಅಮಾನತ್ ಗೊಳಿಸಬೇಕಾಗಿತ್ತು.

, ಅಂಬೇಡ್ಕರ್ ನಮಗೆ ವ್ಯಸನ ಅಲ್ಲ, ನಿತ್ಯ ಸ್ಮರಣೆ. ನಮ್ಮ ಉಸಿರು ಇರುವ ವರೆಗೆ, ಈ ಭೂಮಿಯಲ್ಲಿ ಸೂರ್ಯ-ಚಂದ್ರ ಇರುವ ವರೆಗೆ ಅಂಬೇಡ್ಕರ್ ಸ್ಮರಣೆ ಇರಲಿದೆ. ನೀವು ತುಚ್ಛೀಕರಿಸಿದಷ್ಟೂ ಪುಟಿದು ಪುಟಿದು ಮೇಲೆದ್ದು ಬಂಧು ಅವರು ನಮ್ಮ ಮುನ್ನಡೆಯ ಹಾದಿಗೆ ಬೆಳಕಾಗುತ್ತಾರೆ. ನಿಮ್ಮ ದುರಹಂಕಾರದ ಮಾತಿಗೆ ನಿಮ್ಮ ಬೆನ್ನಹಿಂದಿರುವ ಚೇಲಾಗಳು ಮೇಜುಕುಟ್ಟಿ ಸಂಭ್ರಮಿಸಿರಬಹುದು. ಆದರೆ ಅಂಬೇಡ್ಕರ್ ಅವರಿಂದಾಗಿ ಸಮಾನತೆ ಮತ್ತು ಘನತೆಯ ಬದುಕನ್ನು ಪಡೆದಿರುವ ದೇಶದ ಕೋಟ್ಯಂತರ ಜನ ನಿಮಗೆ ಛೀಮಾರಿ ಹಾಕುತ್ತಿದ್ದಾರೆ ಎನ್ನುವುದು ತಿಳಿದಿರಲಿ.

ಅಂಬೇಡ್ಕರ್ ಎಂಬ ಮನುಷ್ಯ ಈ ಭೂಮಿಯಲ್ಲಿ ಹುಟ್ಟದೆ ಇರುತ್ತಿದ್ದರೆ, ನನಗೆ ಮುಖ್ಯಮಂತ್ರಿಯಾಗುವ ಅವಕಾಶವೇ ಬರುತ್ತಿರಲಿಲ್ಲ, ನಾನು ಊರಲ್ಲಿ ದನ-ಕುರಿ ಮೇಯಿಸಿಕೊಂಡು ಇರಬೇಕಾಗುತ್ತಿತ್ತು .. ನಮ್ಮ ಪಕ್ಷದ ಹಿರಿಯ ನಾಯಕ ಸನ್ಮಾನ್ಯ ಮಲ್ಲಿಕಾರ್ಜುನ ಖರ್ಗೆಯವರು ರಾಜಕೀಯ ಕ್ಷೇತ್ರದಲ್ಲಿ ಉನ್ನತ ಸ್ಥಾನಗಳನ್ನು ಪಡೆದು ಎಐಸಿಸಿಯ ಅಧ್ಯಕ್ಷ ಸ್ಥಾನವನ್ನು ಅಲಂಕರಿಸುತ್ತಿರಲಿಲ್ಲ, ಕಲಬುರ್ಗಿಯ ಯಾವುದಾದರೂ ಕಾರ್ಖಾನೆಯಲ್ಲಿ ಕಾರ್ಮಿಕರಾಗಿರುತ್ತಿದ್ದರು. ಈ ವಾಸ್ತವ ಸದಾ ನಮ್ಮ ನೆನಪಲ್ಲಿರುತ್ತದೆ. ನೀವು ಹೇಳುವ ವ್ಯಸನ ನಮ್ಮ ಪಾಲಿನ ಅಂಬೇಡ್ಕರ್ ಸ್ಮರಣೆ ನಮ್ಮನ್ನೆಲ್ಲ ಇಲ್ಲಿಗೆ ತಂದು ನಿಲ್ಲಿಸಿ ನಮಗೆ ಸ್ಥಾನಮಾನ,ಗೌರವ ಮತ್ತು ಜನರ ಸೇವೆ ಮಾಡುವ ಅವಕಾಶವನ್ನು ಕೊಟ್ಟಿದೆ ಎನ್ನುವುದನ್ನು ನಾವು ಮರೆತಿಲ್ಲ.
ನಾನು ಮಾತ್ರ ಅಲ್ಲ, ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಅವರು ಕೊಟ್ಟಿರುವ ಸಂವಿಧಾನ ಇಲ್ಲದೆ ಇರುತ್ತಿದ್ದರೆ ಗೃಹಸಚಿವರಾಗಿ ಬದುಕು ಕೊಟ್ಟ ಮಹಾತ್ಮನನ್ನೇ ತುಚ್ಛೀಕರಿಸುವ ಅವಕಾಶ ಅವರಿಗೂಸಿಗುತ್ತಿರಲಿಲ್ಲ ಶಹಾ ಅವರು ನಿಮ್ಮೂರಿನಲ್ಲಿ ಎಲ್ಲಾದರೂ ಗುಜರಿ ವ್ಯಾಪಾರ ಮಾಡಿಕೊಂಡು ಇರಬೇಕಾಗುತ್ತಿತ್ತು,

About Mallikarjun

Check Also

screenshot 2025 10 25 17 53 12 59 6012fa4d4ddec268fc5c7112cbb265e7.jpg

ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಶತೋತ್ತರ ದಶಮಾನೋತ್ಸವದ ಪೂರ್ವಭಾವಿ ಸಭೆ

Preparatory meeting for the centenary celebrations of Shivaratri Rajendra Mahaswamy. ವರದಿ: ಬಂಗಾರಪ್ಪ .ಸಿ .ಹನೂರು : …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.