Belagavi Chalo on December 09 demanding the fulfillment of various demands of the farmers.
ವರದಿ : ಪಂಚಯ್ಯ ಹಿರೇಮಠ.
ಕಲ್ಯಾಣಸಿರಿ ಸುದ್ದಿ ಕೊಪ್ಪಳ.
ಕೊಪ್ಪಳ : ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಡಿ. 09 ರಂದು ಬೆಳಗಾವಿ ಅಧಿವೇಶನದಲ್ಲಿ ಮುತ್ತಿಗೆ ಹಾಕಿ ಪ್ರತಿಭಟಿಸಿ ಅನುಷ್ಠಾನಕ್ಕೆ ಒತ್ತಾಯಿಸಲಾಗುವುದು ಆದ್ದರಿಂದ ಜಿಲ್ಲೆಯ ಎಲ್ಲಾ ರೈತರು ಹಾಗೂ ರೈತ ಪರ ಸಂಘಟನೆಯವರು ಆಗಮಿಸಬೇಕು ಎಂದು ಕ.ರಾ.ರೈ. ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಮುದಿಯಪ್ಪ ಮಲ್ಲಿಗೆವಾಡ ಮನವಿ ಮಾಡಿದರು.
ಅವರು ರವಿವಾರದಂದು ಪಟ್ಟಣದ ನೀರಿಕ್ಷಣಾ ಮಂದಿರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕುಕನೂರು ತಾಲೂಕ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಂತರ ಕುಕನೂರು ತಾಲೂಕ ನೂತನ ತಾಲೂಕಾಧ್ಯಕ್ಷರಾಗಿ ಪರಶುರಾಮ್ ಪೂಜಾರ ಹಾಗೂ ಮಹಿಳಾಧ್ಯಕ್ಷರಾಗಿ ನೀಲಮ್ಮ ನಿಂಗಾಪೂರ ಇವರನ್ನು ಆಯ್ಕೆ ಮಾಡಲಾಯಿತು.
ಈ ವೇಳೆ ಜಿಲ್ಲಾ ರೈತ ಮುಖಂಡರಾದ ಶರಣಪ್ಪ ಸೋಮಸಾಗರ ಮಾತನಾಡಿ
ರೈತರು ದೇಶದ ಬೆನ್ನೆಲುಬು ಎಂದು ಬಾಯಿ ಬಡಾಯಿ ಕೊಚ್ಚಿಕೊಳ್ಳುವ ರಾಜಕೀಯ ಜನ ಪ್ರತಿನಿಧಿಗಳು ಹಾಗೂ ಸರಕಾರ ರೈತರನ್ನು ಕಡೆಗಣಿಸುತ್ತಾ ಬಂದಿರುವುದು ರೈತರ ತಾಳ್ಮೆ ಪರಿಕ್ಷೀಸುತ್ತಿದೆ. ರಾಜ್ಯದ ರೈತರು ಹಲವಾರು ಬೇಡಿಕೆಗಳಿಗೆ ಆಗ್ರಹಿಸುತ್ತಾ ಬಂದಿದ್ದರು ಈಡೇರಿಸುವ ಭರವಸೆ ನೀಡಿ ರೈತರ ಮೂಗಿಗೆ ತುಪ್ಪ ಹಚ್ಚುವ ಕೆಲಸವನ್ನು ಸರಕಾರ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಡಿ.09ರಂದು ಬೆಳಗಾವಿ ಚಲೋ ಪ್ರತಿಭಟನೆಗೆ ಕರೆ ನೀಡಲಾಗಿದ್ದು ರಾಜ್ಯದ ಹಾಗೂ ಜಿಲ್ಲೆಯ ರೈತರು ಆಗಮಿಸಬೇಕು ಎಂದು ಮನವಿ ಮಾಡಿದರು.
ರೈತ ಸಂಘದ ಬೇಡಿಕೆಗಳು : ರಾಜ್ಯ ಸರಕಾರ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು ಹಾಗೂ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಮತ್ತು ಆಲಮಟ್ಟಿ ಆಣೆಕಟ್ಟು ಜಲಾಶಯ 519 ರಿಂದ 524.256 ಮೀ.ಗೆ ಎತ್ತರಿಸಬೇಕು ಜೊತೆಗೆ ರೈತರ ಬೆಳೆಗಳಿಗೆ ಸರಕಾರ ಕಾನೂನಾತ್ಮಕ ಬೆಲೆ ನಿಗದಿ ಪಡಿಸಬೇಕು ಎಂದು ಆಗ್ರಹಿಸಿ ಒತ್ತಾಯಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾಧ್ಯಕ್ಷೆ ಹುಲಿಗೆಮ್ಮ ನಾಯಕ ಕನಕಗಿರಿ, ಕುಕನೂರು ತಾಲೂಕ ಅಧ್ಯಕ್ಷ ಪರುಶುರಾಮ್ ಪೂಜಾರ, ನೀಲಮ್ಮ ನಿಂಗಾಪೂರ, ಕನಕಗಿರಿ ತಾಲೂಕ ಉಪಾಧ್ಯಕ್ಷ ಸುರೇಶ ಹೊಸ್ಮನಿ, ಸದಸ್ಯರಾದ ಫಕೀರಸಾಬ ನದಾಫ್, ಮಂಜುನಾಥ ಮುಂದಲಮನಿ, ಸುರೇಶ ಮುಂದಲಮನಿ, ರಾಜು ವಾಲ್ಮೀಕಿ, ರವಿ ಪೂಜಾರ, ಲಕ್ಷ್ಮಣ ವಾಲ್ಮೀಕಿ, ರಮೇಶ ಮುಂದಲಮನಿ, ಚೌಡಪ್ಪ ತಳವಾರ ಸೇರಿದಂತೆ ಇನ್ನಿತರರು ಇದ್ದರು.