Gudekote KPS School teachers welcomed Rukminibai as head teacher
ಗುಡೇಕೋಟೆ: ಕೂಡ್ಲಿಗಿ ತಾಲ್ಲೂಕಿನ ರಾಮಸಾಗರಹಟ್ಟಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿ, ಗುಡೇಕೋಟೆ ಕರ್ನಾಟಕ ಪಬ್ಲಿಕ್ ಶಾಲೆ ಪ್ರೌಢಶಾಲೆ ವಿಭಾಗಕ್ಕೆ ಕಾಯಂ ಮುಖ್ಯ ಶಿಕ್ಷಕಿಯಾಗಿ ಪದೋನ್ನತಿ ಹೊಂದಿರುವ ರುಕ್ಮಿಣಿಬಾಯಿ ಅವರು ಶುಕ್ರವಾರ ಕರ್ತವ್ಯಕ್ಕೆ ಹಾಜರಾದರು. ಇವರಿಗೆ ಶಾಲೆಯ ಶಿಕ್ಷಕರು ಆತ್ಮೀಯವಾಗಿ ಸ್ವಾಗತಿಸಿ ಬರಮಾಡಿಕೊಂಡರು.
ಗುಡೇಕೋಟೆ ಗ್ರಾಪಂ ಅಧ್ಯಕ್ಷ ಎನ್ ಕೃಷ್ಣ ಮಾತನಾಡಿ, ‘ಶಾಲೆಯ ಭೌತಿಕ ಸೌಲಭ್ಯಗಳ ಸುಧಾರಣೆ ಮತ್ತು ಕಲಿಕಾ ಪ್ರಗತಿಯಲ್ಲಿ ಮುಖ್ಯ ಶಿಕ್ಷಕರ ಪಾತ್ರ ಅಪಾರ. ಅವರು ಕ್ರಿಯಾಶೀಲತೆಯ ಜೊತೆಗೆ ದಕ್ಷತೆ ಮತ್ತು ಸಾಮರಸ್ಯ ಮನೋಭಾವದಿಂದ ಕರ್ತವ್ಯ ನಿರ್ವಹಿಸಿದಾಗ ಶೈಕ್ಷಣಿಕ ಅಭಿವೃದ್ಧಿ ಸಾಧ್ಯ’ ಎಂದರು.
‘ಸಹೋದ್ಯೋಗಿಗಳು, ವಿದ್ಯಾರ್ಥಿಗಳು, ಶಾಲಾ ಉಸ್ತುವಾರಿ ಸಮಿತಿ, ಪೋಷಕರು, ಅಧಿಕಾರಿಗಳ ಜೊತೆಗೆ ಉತ್ತಮ ಸಂಪರ್ಕ ಸಾಧಿಸಿ, ಇವೆರೆಲ್ಲರ ಸಹಕಾರ ಪಡೆದು ಶಾಲಾಭಿವೃದ್ಧಿಗೆ ಶ್ರಮಿಸುವುದು ತುಂಬಾ ಸವಾಲಿನ ಕೆಲಸ. ಇದನ್ನು ಸಮರ್ಥವಾಗಿ ನಿರ್ವಹಿಸುವ ಗುಣ ಶ್ರೀಮತಿ ರುಕ್ಮಿಣಿಬಾಯಿ ಅವರಿಗಿದೆ’ ಎಂದು ಹೇಳಿದರು.
ನೂತನ ಮುಖ್ಯಶಿಕ್ಷಕಿ ರುಕ್ಮಿಣಿಬಾಯಿ ಮಾತನಾಡಿ, ‘ಶಿಕ್ಷಕರು ಮತ್ತು ಮುಖ್ಯ ಶಿಕ್ಷಕರು ತೆರೆದ ಮನಸ್ಸಿನಿಂದ, ಪರಸ್ಪರ ನಂಬಿಕೆ ಮತ್ತು ಗೌರವ ಭಾವದಿಂದ ಕಾರ್ಯನಿರ್ವಹಿಸಿದರೆ ಕಲಿಕೆಯ ಗುಣಮಟ್ಟ ಹೆಚ್ಚಿಸಬಹುದು’ ಎಂದರು.
ಈ ಸಂದರ್ಭದಲ್ಲಿ ಗುಡೇಕೋಟೆ ಕೆಪಿಎಸ್ ಪ್ರೌಢಶಾಲಾ ವಿಭಾಗದ ಶಿಕ್ಷಕರು,ಸಹ ಶಿಕ್ಷಕರು,ಗುರುಮಾತೆಯರು, ಶಾಲಾ ಎಸ್ಡಿಎಂಸಿ ಅಧ್ಯಕ್ಷ ಉಪಾಧ್ಯಕ್ಷರು ಸರ್ವ ಸದಸ್ಯರು, ಶಿಕ್ಷಣ ಪ್ರೇಮಿಗಳು ಊರಿನ ಮುಖಂಡರು, ಉಪಸ್ಥಿತರಿದ್ದರು.