Fight against dismissal of 1123 workers of labor service centers in violation of court order – Karnataka State Karmikha Bandhu Hitrarakshan Sangh warns
ಬೆಂಗಳೂರು; ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆಯ “ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಿಂದ ತೆರೆಯಲಾದ ಕಾರ್ಮಿಕ ಸೇವಾ ಕೇಂದ್ರಗಳ ನೌಕರರನ್ನು ಕೆಲಸದಿಂದ ತೆಗೆದು ಹೊಸದಾಗಿ ನೇಮಕ ಮಾಡಿಕೊಳ್ಳುವ ಮೂಲಕ ಕಾರ್ಮಿಕ ವಿರೋಧಿ ನೀತಿಯನ್ನು ರಾಜ್ಯ ಸರ್ಕಾರ ಅನುಸರಿಸುತ್ತಿದ್ದು, 1123 ಕಾರ್ಮಿಕರಿಗೆ ಸಚಿವ ಸಂತೋಷ್ ಲಾಡ್ ನ್ಯಾಯ ಒದಗಿಸಬೇಕು ಎಂದು ಕರ್ನಾಟಕ ರಾಜ್ಯ ಕಾರ್ಮಿಕ ಬಂಧು ಹಿತರಕ್ಷಣಾ ಸಂಘ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ರಂಗಸ್ವಾಮಿ, ಕಾರ್ಮಿಕರನ್ನು ಕೆಲಸದಿಂದ ತೆಗೆಯಬಾರದೆಂದು ನ್ಯಾಯಾಲಯದ ಆದೇಶವಿದ್ದರೂ ಸಹ ಅನ್ಯಾಯ ಮಾಡಲಾಗುತ್ತಿದೆ. ಕಾರ್ಮಿಕ ಸೇವಾ ಕೇಂದ್ರಗಳಿಗಾಗಿ 1123 ಕಾರ್ಮಿಕರನ್ನು 2018 ರ ಮಾರ್ಚ್ 17 ರಂದು ನೇಮಿಸಿಕೊಂಡು, ದುಡಿಸಿಕೊಂಡು ಇದೀಗ ಕೆಲಸದಿಂದ ತೆಗೆದು ಹಾಕಿದ್ದಾರೆ. ಜೊತೆಗೆ ಹೊಸದಾಗಿ ನೇಮಕಾತಿ ಮಾಡಿಕೊಳ್ಳುತ್ತಿದ್ದು, ಕೂಡಲೇ ಕಾರ್ಮಿರಿಗೆ ಅನ್ಯಾಯ ಸರಿಪಡಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸರ್ಕಾರ 2023 ರ ಸೆಪ್ಟೆಂಬರ್ 25 ರಂದು ಸೇವಾ ಕೇಂದ್ರಗಳನ್ನು ರದ್ದುಗೊಳಿಸಿ, ಎಲ್ಲಾ ಕಾರ್ಮಿಕರನ್ನು ತಕ್ಷಣದಿಂದ ಕೆಲಸದಿಂದ ತೆಗೆಯಲು ಆದೇಶ ಮಾಡಿತ್ತು. ಈ ಆದೇಶದ ವಿರುದ್ಧ 150 ಕಾರ್ಮಿಕರು ರಾಜ್ಯ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿ ಕಾನೂನು ಹೋರಾಟ ನಡೆಸಿದ್ದರು. ಈ ವರ್ಷದ ಮಾರ್ಚ್ 13 ರಂದು ನ್ಯಾಯಾಲಯ ಈ ಕಾರ್ಮಿಕರನ್ನು ಕೆಲಸದಿಂದ ತೆಗೆಯದಂತೆ ನಿರ್ದೇಶನ ನೀಡಿದೆ. ಸರ್ಕಾರದ ಆದೇಶಕ್ಕೆ ತಡೆಯಾಜ್ಞೆ ಇದ್ದರೂ ಸಹ ಮತ್ತೊಮ್ಮೆ ಬೇರೆಯವರನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಕಾರ್ಮಿಕ ಇಲಾಖೆ ಮುಂದಾಗಿದೆ. ಈ ಸಂಬಂಧ ಎಲ್ಲ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳ ಸಭೆ ನಡೆಸಿ, ಕಾರ್ಮಿಕ ಸೇವಾ ಕೇಂದ್ರಗಳನ್ನು ಹೊಸದಾಗಿ ತೆರೆಯಲು ನಿರ್ಧರಿಸಿದೆ. ಇದಕ್ಕೆ ನ್ಯಾಯಾಲಯದ ತಡೆಯಾಜ್ಞೆ ಇದ್ದರೂ ಈ ಹಿಂದೆ ನೇಮಕಮಾಡಿಕೊಳ್ಳಲು ಮುಂದಾಗುವ ಮೂಲಕ ಕಾರ್ಮಿಕರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ರಂಗಸ್ವಾಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.