Breaking News

ಪ್ರವಾಹ ಪೀಡಿತ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರ ಭೇಟಿ

District in-charge minister visit to flood affected areas

ಜಾಹೀರಾತು


ಸಾರ್ವಜನಿಕರ ಅಹವಾಲು ಸ್ವೀಕರಿಸಿ, ಸಮಸ್ಯೆಗಳ ಪರಿಹಾರಕ್ಕೆ ಸಚಿವ ಸತೀಶ ಜಾರಕಿಹೊಳಿ ಸೂಚನೆ


ಬೆಳಗಾವಿ, ಜು.26: ಜಿಲ್ಲೆಯಲ್ಲಿ ಅತಿವೃಷ್ಠಿ/ಪ್ರವಾಹ ಸಂಭವನೀಯ ಹಿನ್ನಲೆಯಲ್ಲಿ ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಶುಕ್ರವಾರ (ಜು.26) ಖಾನಾಪೂರ ತಾಲೂಕಿನ ಪ್ರವಾಹ ಪೀಡಿತ, ಮಳೆ ಹಾನಿಗೊಳಗಾದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.


ಜಾಂಬೋಟಿ ರಸ್ತೆಯ ಕುಸುಮಳ್ಳಿ‌ ಸೇತುವೆ, ವೀಕ್ಷಿಸಿ, ಬಳಿಕ ಖಾನಾಪುರದಿಂದ ಜಾಂಬೋಟಿಗೆ ಸಂಪರ್ಕ ಕಲ್ಪಿಸುವ ಮದ್ಯದಲ್ಲಿ ಮಲಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಯ ಸ್ಥಿತಿಗತಿಯನ್ನು ಪರಿಶೀಲಿಸಿದರು.
ನಂತರ ಖಾನಾಪುರ ಪ್ರವಾಸಿಮಂದಿರದಲ್ಲಿ ವಿವಿಧ ಗ್ರಾಮಗಳ ಜನರ ಅಹವಾಲುಗಳನ್ನು ಆಲಿಸಿದರು.
ಈ ಸಂದರ್ಭದಲ್ಲಿ ಸಚಿವರನ್ನು ಭೇಟಿ ಮಾಡಿದ ಮಲಪ್ರಭಾ ನದಿತೀರದ ಹಿರೇಹಟ್ಟಿಹೊಳಿ ಗ್ರಾಮದ ಜನರು, ಸಂಪೂರ್ಣ ಗ್ರಾಮವೇ ಜಲಾವೃತಗೊಳ್ಳುವುದರಿಂದ ಕೂಡಲೇ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿಕೊಂಡರು.
ಪ್ರತಿವರ್ಷ ಮಳೆಗಾಲದಲ್ಲಿ ಹಿರೇಹಟ್ಟಿಹೊಳಿ ಮುಳುಗಡೆಯಾಗುವುದರಿಂದ ವೈದ್ಯಕೀಯ ಸೌಲಭ್ಯ, ಶಿಕ್ಷಣ ಮತ್ತಿತರ ಮೂಲಸೌಕರ್ಯಗಳು ಗ್ರಾಮಸ್ಥರಿಗೆ ಸಿಗುತ್ತಿಲ್ಲ; ಆದ್ದರಿಂದ ಇದಕ್ಕೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಸಚಿವರಿಗೆ ಒತ್ತಾಯಿಸಿದರು.
ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳಬೇಕು ಅಧಿಕಾರಿಗಳಿಗೆ ಸೂಚನೆ ನೀಡಿದರು.
15 ಗ್ರಾಮಗಳ ಜನರ ಸ್ಥಳಾಂತರಕ್ಕೆ ಸಿದ್ಧ:
ಈ ವೇಳೆ ಖಾನಾಪೂರ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ ಅವರು, ಖಾನಾಪುರ ತಾಲೂಕಿನ ಕಾಡಂಚಿನ 15 ಗ್ರಾಮಗಳನ್ನು ಪಟ್ಟಿ ಮಾಡಲಾಗಿದ್ದು, ಅವರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು. ಇಲ್ಲವೇ ಅಲ್ಲಿನ ಜನರನ್ನು ಸ್ಥಳಾಂತರಿಸುವ ಕುರಿತು ಯೋಚಿಸಲಾಗುವುದು ಎಂದರು.
ಹೊಸ ರಸ್ತೆ ನಿರ್ಮಿಸಲು ಅರಣ್ಯ ಇಲಾಖೆಯಿಂದ ಅನುಮತಿಯಿಲ್ಲ. ನೂರಾರು ವರ್ಷಗಳಿಂದ ಜನರು ಅಂತಹ ಪ್ರದೇಶದಲ್ಲಿ ವಾಸವಿದ್ದಾರೆ. ಈ ಕುರಿತು ಈಗಾಗಲೇ ಅರಣ್ಯ ಸಚಿವರು ಹಾಗೂ ಸ್ಥಳೀಯ ಶಾಸಕರೊಂದಿಗೆ ಬೆಂಗಳೂರಿನಲ್ಲಿ ಸಭೆ ನಡೆಸಲಾಗಿದೆ. ಅರಣ್ಯ ಸಚಿವರಿಗೆ ಇಲ್ಲಿನ ಸ್ಥಳೀಯ ಸ್ಥಿತಿಗತಿಗಳನ್ನು ವಿವರಿಸಲಾಗುವುದು ಎಂದು ಹೇಳಿದರು.
ಇತ್ತೀಚೆಗೆ ಕಾಡಂಚಿನ ಅಮಗಾಂವ ಗ್ರಾಮದ ಮಹಿಳೆ ಆರೋಗ್ಯ ಸಮಸ್ಯೆಯಿಂದ ಸಾವನ್ನಪ್ಪಿರುವ ಪ್ರಕರಣಕದ ಬಗ್ಗೆ ಜಿಲ್ಲಾಧಿಕಾರಿಯಿಂದ ಮಾಹಿತಿ ಪಡೆಯಲಾಗಿದೆ. ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಸೇರಿಸಲು ವಾಹನ ವ್ಯವಸ್ಥೆ, ಆ್ಯಂಬುಲೆನ್ಸ್ ಹೋಗಲು ಸರಿಯಾದ ರಸ್ತೆ ಇಲ್ಲ, ನೆಟವರ್ಕ್ ಸಮಸ್ಯೆ ಇದೆ ಎಂಬುದು ತಿಳಿದುಬಂದಿದೆ.
ಅದೇ ರೀತಿಯಲ್ಲಿ ರೇಶನ್ ಪಡೆಯಲು ಕಾಡಂಚಿನ ಗ್ರಾಮಸ್ಥರು ಪರದಾಡುವಂತಾಗಿದೆ. ಶೇ.80ರಷ್ಟು ಜನರು ಒಪ್ಪಿದರೆ ಅವರನ್ನು ಬೇರೆಡೆ ಸ್ಥಳಾಂತರ ಮಾಡಬಹುದು ಎಂದು ಸಚಿವ ಸತೀಶ ಜಾರಕಿಹೊಳಿ ಸ್ಪಷ್ಟಪಡಿಸಿದರು.
ಖಾನಾಪುರದ ಹಲವು ಹಳೆಯ ಸೇತುವೆಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಭಾರಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. ಇನ್ನೂ ಖಾನಾಪುರದಿಂದ ಗೋವಾ ರಾಜ್ಯದ ಗಡಿಯವರೆಗೂ ರಾಷ್ಟ್ರೀಯ ಹೆದ್ದಾರಿ ರಸ್ತೆ ದುರಸ್ಥಿ ಮತ್ತು ಸೇತುವೆಗಳ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ. ಮಳೆಗಾಲ ಮುಗಿದ ಬಳಿಕ ಹೊಸ ಸೇತುವೆ ನಿರ್ಮಾಣಕ್ಕೆ ಸೂಚಿಸಲಾಗುವುದು ಎಂದು ಹೇಳಿದರು.
ಜಿಲ್ಲೆಯಲ್ಲಿ ಪ್ರವಾಹ ಅಷ್ಟೊಂದು ಅಪಾಯಕಾರಿ ಮಟ್ಟದಲ್ಲಿಲ್ಲ. ಸದ್ಯದ ಪ್ರವಾಹ ಪರಿಸ್ಥಿತಿ ನಿಯಂತ್ರಣದಲ್ಲಿದೆ. ನಿನ್ನೆ ಚಿಕ್ಕೋಡಿ ಭಾಗದ ವಿವಿಧೆಡೆ ಭೇಟಿ ಪರಿಶೀಲನೆ ನಡೆಸಲಾಗಿದೆ. ಸದ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು‌.
ಈ ಸಂದರ್ಭದಲ್ಲಿ ಖಾನಾಪುರ ಶಾಸಕರಾದ‌ ವಿಠ್ಠಲ ಹಲಗೇಕರ, ಮಾಜಿ ಶಾಸಕರಾದ ಅಂಜಲಿ ನಿಂಬಾಳ್ಕರ್, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಸೇರಿದಂತೆ ವಿವಿಧ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

About Mallikarjun

Check Also

ಅಖಿಲ ಕರ್ನಾಟಕ ನಾಲ್ಕನೇ ಕವಿಕಾವ್ಯ ಸಮ್ಮೇಳನಾಧ್ಯಕ್ಷರಾಗಿ ಸಾಹಿತಿ, ಸಂಶೋಧಕ ಡಾ. ಜಾಜಿ ದೇವೇಂದ್ರಪ್ಪ ಆಯ್ಕೆ.

Literary researcher Dr. Jaji Devendrappa is selected. ಗಂಗಾವತಿ: ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಬೆಂಗಳೂರು ಕೊಪ್ಪಳ ಜಿಲ್ಲಾ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.