
ಬಹುಜನ ಸಮಾಜ ಪಾರ್ಟಿಗೆ ಬೆಂಬಲಿಸಿ: ಶಂಕರ್ ಸಿದ್ದಾಪುರ
ಗಂಗಾವತಿ. ಏ.26: ಬಹುಜನ ಸಮಾಜ ಪಾರ್ಟಿಯ ಕೊಪ್ಪಳ ಲೋಕಸಭಾ ನಿಯೋಜಿತ ಅಭ್ಯರ್ಥಿ ಶಂಕರ್ ಸಿದ್ದಾಪುರ ಅವರು ಸಂಗಾಪುರ, ಮಲ್ಲಾಪುರ, ಹಿಟ್ನಾಳ, ಹುಲಿಗಿ, ಮುನಿರಾಬಾದ್ ವ್ಯಾಪ್ತಿಯಲ್ಲಿ ಪ್ರಚಾರ ಸಭೆಗಳನ್ನು ಶುಕ್ರವಾರದಂದು ನಡೆಸಿದರು.
ಈ ವೇಳೆ ಮಾತನಾಡಿದ ಶಂಕರ್ ಸಿದ್ದಾಪುರ ಅವರು, ನಾನು ಕಳೆದ ಹತ್ತು ವರ್ಷಗಳಿಂದ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಿದ್ದು, ಬಡವರಿಗೆ, ದೀನ ದಲಿತರ ಸಂಕಷ್ಟಗಳಿಗೆ ನೆರವಾಗಿದ್ದೇನೆ. ಅನ್ಯಾಯಕ್ಕೆ ಒಳಗಾಗಿರುವ ಜನಸಾಮಾನ್ಯರ ಪರ ಧರ್ಮ, ಜಾತಿಭೇದ ಮಾಡದೆ ಹೋರಾಟ ಮಾಡಿದ್ದೇನೆ. ಕೊಪ್ಪಳ ಲೋಕಸಭಾ ಕ್ಷೇತ್ರ ಸಂಪೂರ್ಣ ಅಭಿವೃದ್ಧಿ ವಂಚಿತವಾಗಿದ್ದು, ಕಾಂಗ್ರೆಸ್, ಬಿಜೆಪಿ ಈ ಕ್ಷೇತ್ರದ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸದೇ ಜನರೊಂದಿಗೆ ಚೆಲ್ಲಾಟ ಆಡುತ್ತಿವೆ. ಮೂಲಭೂತ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಸಂಪೂರ್ಣ ವಿಫಲವಾಗಿವೆ. ಅಕ್ರಮ, ಅನೈತಿಕ ಚಟುವಟಿಕೆಗಳು ಮಿತಿಮೀರಿವೆ. ರೈತ ಬಾಂಧವರ ಬದುಕು ದುರ್ಬರವಾಗಿದೆ. ಬಡವರ ಮಕ್ಕಳು ಉನ್ನತ, ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಜನಸಾಮಾನ್ಯರ ಮೇಲೆ ಶೋಷಣೆ, ದೌರ್ಜನ್ಯ ದಿನೆದಿನೇ ಹೆಚ್ಚಾಗುತ್ತಿದೆ. ಸಾಮಾಜಿಕ ನ್ಯಾಯ ನೀಡದ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳನ್ನು ತಿರಸ್ಕರಿಸಿ ಈ ಬಾರಿ ಸದಾ ಜನಸಾಮಾನ್ಯರ ಪರ ಚಿಂತಿಸುವ ಬಹುಜನ ಸಮಾಜ ಪಾರ್ಟಿಯ ಅಭ್ಯರ್ಥಿಯಾದ ನನಗೆ ಬೆಂಬಲಿಸಿ ಆನೆ ಗುರುತಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.
ಬಹುಜನ ಸಮಾಜ ಪಾರ್ಟಿಯ ಕೊಪ್ಪಳ ಲೋಕಸಭಾ ನಿಯೋಜಿತ ಅಭ್ಯರ್ಥಿ ಶಂಕರ್ ಸಿದ್ದಾಪುರ ಪರ ಪ್ರಚಾರ ಸಭೆಯಲ್ಲಿ ಬಿ.ಎಸ್.ಪಿ ರಾಜ್ಯ ಕಾರ್ಯದರ್ಶಿ MK ಜಗ್ಗೇಶ ಮೌರ್ಯ, ಕೊಪ್ಪಳ ಜಿಲ್ಲಾ ಉಸ್ತುವಾರಿ ಹುಲಿಗೇಶ್ ದೇವರಮನಿ, ದುರ್ಗೇಶ ಸಿಂಗಾಪುರ, ನಿಂಗಪ್ಪ ನಾಯಕ್, ಶಿವಣ್ಣ ಇಳಿಗನೂರ್, ಬಸವರಾಜ್ ಇಳಿಗನೂರ್, ಮೂರ್ತಿ ಸಂಗಾಪುರ, ಹುಸೇನಪ್ಪ ಸಿದ್ದಾಪುರ, ಭೀಮರಾಯ ಕಾಟಾಪುರ, ಭೀಮಪ್ಪ ಮೈಲಾಪುರ, ಮಂಜು ಸಿದ್ದಾಪುರ ಇನ್ನಿತರ ಪ್ರಮುಖರು ಪಾಲ್ಗೊಂಡು ಮತ ಯಾಚಿಸಿದರು.
Kalyanasiri Kannada News Live 24×7 | News Karnataka
