3rd Edition Volleyball Tournament organized by Kalki Boys.
ವರದಿ : ಬಂಗಾರಪ್ಪ ಸಿ .ಹನೂರು .
ಹನೂರು: ಪಟ್ಟಣದ ಶ್ರೀ ಮಲೆ ಮಹದೇಶ್ವರ ಕ್ರೀಡಾಂಗಣದಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ಕಲ್ಕಿ ಬಾಯ್ಸ್ ವತಿಯಿಂದ ಆಯೋಜಿಸಲಾಗಿರುವ ಮೂರನೇ ಆವೃತ್ತಿಯ ವಾಲಿಬಾಲ್ ಲೀಗ್ ಪಂದ್ಯಾವಳಿಯನ್ನು ಏರ್ಪಡಿಸಲಾಗಿದ್ದು ಈ ಬಾರಿ ಪ್ರಪ್ರಥಮ ಬಾರಿಗೆ ಆಟಗಾರರ ಹರಾಜು ಪ್ರಕ್ರಿಯೆ ನಡೆಸಲಾಯಿತು.
ಆರ್ ಸಿ ಬಿ ತಂಡದ ಮಾಲೀಕರಾದ ಅಶ್ವಿನ್ ರವರು ಮಾತನಾಡಿ ಕಳೆದ ಎರಡು ವರ್ಷಗಳಿಂದ ಕಲ್ಕಿ ಬಾಯ್ಸ್ ವತಿಯಿಂದ ಮಹಾಶಿವರಾತ್ರಿ ಹಬ್ಬದ ದಿನದಂದು ವಾಲಿಬಾಲ್ ಪಂದ್ಯಾವಳಿಯನ್ನು ಆಯೋಜಿಸಿಕೊಂಡು ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದಾರೆ ಹಾಗೆಯೇ ಈ ಬಾರಿ ಆಟಗಾರರನ್ನು ಬಿಡ್ ಮಾಡುವ ಮುಖಾಂತರ ಹರಾಜು ಪ್ರಕ್ರಿಯೆ ನಡೆಸಿರುವುದು ವಿಶೇಷವಾಗಿದೆ, ಕ್ರೀಡೆಯು ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯದ ಬೆಳವಣಿಗೆ ಸಹಕಾರಿ ಇದರಿಂದ ಉತ್ತಮ ಆರೋಗ್ಯವನ್ನು ಹೊಂದಬಹುದು, ಆಟಗಾರರು ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ತಿಳಿಸಿದರು.
ಹಿರಿಯ ಆಟಗಾರರಾದ ಶಂಕರ್ ಅವರು ಮಾತನಾಡಿ ಗ್ರಾಮೀಣ ಪ್ರತಿಭೆಗಳಿಗೆ ಉತ್ತಮ ವೇದಿಕೆ ಕಲ್ಪಿಸಿಕೊಡಲು ವಾಲಿಬಾಲ್ ಪಂದ್ಯಾವಳಿಯನ್ನು ನಡೆಸುತ್ತಿರುವುದು ಉತ್ತಮ ಬೆಳವಣಿಗೆ, ಇದರಿಂದ ಉನ್ನತ ದರ್ಜೆ ಆಟಗಾರರು ಹೊರಬರಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಆಯೋಜಕರಾದ ಸಂತೋಷ್ ಅವರು ಮಾತನಾಡಿ ಶಿವರಾತ್ರಿ ದಿನದಂದು ಆಯೋಜಿಸಿರುವ ಮೂರನೇ ಆವೃತ್ತಿಯ ವಾಲಿಬಾಲ್ ಪಂದ್ಯಾವಳಿಯಲ್ಲಿ ಆರ್ ಸಿ ಬಿ ,ಕೆಂಪೇಗೌಡ ವಾರಿಯರ್ಸ್ ,ಒಡೆಯ ವಾರಿಯರ್ಸ್, ಬ್ಲಾಕ್ ಅಂಡ್ ವೈಟ್ ,ಮೆವೋರಿಕ್ಸ್ ತಂಡಗಳು ಭಾಗವಹಿಸಲಿದೆ, ಹಾಗೂ ಅಶೋಕ್ ರವರು 1350 ರೂ ಗಳಿಗೆ ಆರ್ ಸಿಬಿ ತಂಡಕ್ಕೆ ಹರಾಜಾದ ದುಬಾರಿ ಆಟಗಾರರಾಗಿದ್ದಾರೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ತಂಡದ ಮಾಲೀಕರು , ನಾಗೇಂದ್ರ, ವಿಶ್ವಾಸ್, ಶಶಾಂಕ್, ಸಂತೋಷ್ , ಇನ್ನಿತರ ಆಟಗಾರರು ಹಾಗೂ ಕ್ರೀಡಾಭಿಮಾನಿಗಳು ಹಾಜರಿದ್ದರು.