Breaking News

ಲೋಕನಾಯಕಶ್ರೀಭೀಮಣ್ಣ ಖಂಡ್ರೆಸಂಗಮೇಶ ಎನ್ ಜವಾದಿ.

Lokanayakashreebhimanna Khandresangames N Javadi.

ಜಾಹೀರಾತು
IMG 20231122 WA0316 245x300



ಸ್ವಾತಂತ್ರ್ಯ ಹೋರಾಟಗಾರರು, ಗಡಿಭಾಗದ ಹಿರಿಯ ಚಿಂತಕರು, ಲಿಂಗಾಯತ ಧರ್ಮದ ನಾಯಕರು, ರಾಜಕೀಯ ಮುತ್ಸದ್ದಿ, ಈ ನಾಡು ಕಂಡ ಅಪರೂಪದ ವ್ಯಕ್ತಿ,ನಿಜಾಮ ಸರ್ಕಾರದ ರಜಾಕಾರರ ವಿರುದ್ಧ ಹೋರಾಡಿದ ಧೀಮಂತ, ಹಿರಿಯ ರಾಜಕಾರಣಿ, ಶಿಕ್ಷಣ ತಜ್ಞರು.ವಿಮೋಚನಾ ಚಳುವಳಿ ನೇತಾರರು,ಲೋಕನಾಯಕ ಶತಾಯುಷಿ ಶ್ರೀ ಡಾ.ಭೀಮಣ್ಣ ಖಂಡ್ರೆ ರವರು.

ಕರ್ನಾಟಕದ ಏಕೀಕರಣದ ಸೇನಾನಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಗೌರವಾಧ್ಯಕ್ಷ, ಅಜಾತಶತ್ರು ಶತಾಯುಷಿ ಡಾ.ಭೀಮಣ್ಣ ಖಂಡ್ರೆ ಅವರು ಸಧ್ಯ ನೂರು ವಸಂತಗಳನ್ನು ಪೂರೈಸುತ್ತಿರುವ ಹಿರಿಯ ಚೇತನರು. ಈ ಭಾಗದ ಅದಮ್ಯ ಉತ್ಸಾಹಿಗಳು, ದಣಿವರಿಯದ ಕಾಯಕಯೋಗಿಗಳು,
ಜಾತಿ ಮತ ಪಂಥ ಭೇದ ಮರೆತು ಎಲ್ಲ ವರ್ಗದವರನ್ನು ಅಪಾರವಾಗಿ ಪ್ರೀತಿಸುತ್ತಿರುವ ಸರಳ ಸ್ನೇಹ
ಜೀವಿ ಶರಣ ಖಂಡ್ರೆ ರವರು ಎಂದರೆ ಖಂಡಿತವಾಗಿಯೂ ತಪ್ಪಾಗಲಾರದು.

ಅಂದಹಾಗೆ ಈದಿಗ ಡಾ. ಭೀಮಣ್ಣ ಖಂಡ್ರೆ ಅವರ ಜನ್ಮಶತಮಾನೋತ್ಸವ ಹಾಗೂ ಲೋಕನಾಯಕ ಅಭಿನಂದನಾ ಗ್ರಂಥ ಸಮರ್ಪಣಾ ಸಮಾರಂಭದ ಪ್ರಯುಕ್ತ ಶ್ರೀ ಖಂಡ್ರೆ ರವರ ಕುರಿತು ಬರೆಯುವ ಪ್ರಯತ್ನ ಇಲ್ಲಿ ಮಾಡಲಾಗಿದೆ.

ಭೀಮಣ್ಣ ಖಂಡ್ರೆ ರವರು 01-11-1925 ರಂದು
ಬೀದರ್ ಜಿಲ್ಲೆಯ ಭಾಲ್ಕಿಯಲ್ಲಿ ಜನಿಸಿದ ಶ್ರೀಯುತರು ಎಲ್ ಎಲ್ ಬಿ ಓದುಕೊಂಡು ವಕೀಲ ವೃತ್ತಿ ಆರಂಭಿಸಿದರು.
ತದನಂತರ ಸಮಾಜದ ಸೇವೆಯ ಜೊತೆಗೆ ರಾಜಕೀಯ ಜೀವನಕ್ಕೆ ಪಾದಾರ್ಪಣೆ ಮಾಡಿರುತ್ತಾರೆ.

ಭೀಮಣ್ಣ ಖಂಡ್ರೆ ರವರ ರಾಜಕೀಯ ಪಯಣ
ಅತ್ಯಂತ ಶಿಸ್ತಿನಿಂದ ಸಾಗಿತ್ತು.ಅನೇಕ ಜವಾಬ್ದಾರಿಗಳನ್ನು ಹೊತ್ತುಕೊಂಡು ಕೆಲಸ ಮಾಡಿದರು. ಅಂತೆಯೇ
1968 ರಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಬೀದರ್ ಅಧ್ಯಕ್ಷರಾಗಿ ಕೆಲಸ ಮಾಡಿದ ಇವರು 1980 ರಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. ನಂತರ
1980 ರಲ್ಲಿ ರಾಜ್ಯ ಕಿಸಾನ್ ಕೋಶದ ಸಂಚಾಲಕರಾಗಿ ಆಯ್ಕೆಗೊಂಡು ಕೆಲಸ ನಿರ್ವಹಣೆ ಮಾಡಿದರು. ಇದೆ ಸಂದರ್ಭದಲ್ಲಿ ರೈತರಿಗೆ ಬೀಜ ವಿತರಣೆಯಲ್ಲಿ ಆದಂತಹ ಅನ್ಯಾಯದ ವಿರುದ್ಧ ದ್ವನಿ ಎತ್ತಿದ ಶ್ರೀ ಖಂಡ್ರೆ ರವರನ್ನು ಜೈಲಿಗೆ ಕಳುಹಿಸಲಾಗಿತ್ತು.
ಆದರೆ ಹಠ ಬಿಡದೆ ಜೈಲಿನಲ್ಲಿ ಇದ್ದುಕೊಂಡು ಹೋರಾಟ ಮಾಡುವ ಮೂಲಕ ರೈತರಿಗೆ ಆದಂತ ಅನ್ಯಾಯವನ್ನು ಸರಿಪಡಿಸಿ ರೈತರಿಗೆ ಬೀಜ ವಿತರಣೆ ಮಾಡಿಸುವಲ್ಲಿ ಯಶಸ್ವಿಯಾದರು.ಸರ್ಕಾರದಿಂದ ಬೀಜಗಳನ್ನು ವಿತರಿಸಿದ ನಂತರವೇ ಜೈಲಿನಿಂದ ಹೊರಬಂದರು. ನಂತರ 1981 ಫೆಬ್ರವರಿ 16 ರಂದು ನವದೆಹಲಿಯಲ್ಲಿ ನಡೆದ ಐತಿಹಾಸಿಕ ಅಖಿಲ ಭಾರತ ಕಿಸಾನ್ ರ್ಯಾಲಿಯಲ್ಲಿ ಕರ್ನಾಟಕದ 16 ಸಾವಿರ ರೈತರೊಂದಿಗೆ ಭಾಗವಹಿಸಿ ಕರ್ನಾಟಕದ ಕೀರ್ತಿ ದೇಶದ ಉದ್ದಗಲಕ್ಕೂ ಹರಡುವಂತೆ ಮಾಡಿದರು. ಹೀಗೆ ರಾಜಕೀಯ ಜೀವನದಲ್ಲಿ ಹತ್ತು ಹಲವು ನಿರಂತರವಾಗಿ ಹೋರಾಟಗಳನ್ನು ಮಾಡುತ್ತಾ
1953 ರಲ್ಲಿ ಭಾಲ್ಕಿ ಪುರಸಭೆಯ ಅಧ್ಯಕ್ಷರಾಗಿ ಆಯ್ಕೆಯಾದರು. ತದನಂತರ ಭಾಲ್ಕಿ ಮತ ಕ್ಷೇತ್ರದಿಂದ ನಾಲ್ಕು ಅವಧಿಗೆ ಅಂದರೆ 1962, 1967, 1978 ಮತ್ತು 1983 ರಲ್ಲಿ ರಾಜ್ಯ ವಿಧಾನಸಭೆಯ ಸದಸ್ಯರಾಗಿ ಚುನಾಯಿತರಾದರು. ಮತ್ತೆ 1988 ರಲ್ಲಿ ವಿಧಾನಸಭೆಯ ಸದಸ್ಯರಾಗಿ ಪುನರಾಯ್ಕೆ ಆಯ್ಕೆಯಾಗಿದ್ದು ಇತಿಹಾಸದಲ್ಲಿ ದಾಖಲಾಗಿದೆ.
ಅಲ್ಲದೆ ಬೀದರ್ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ಕರ್ನಾಟಕ ವಿಧಾನ ಪರಿಷತ್ತಿನ (1994 ರಿಂದ 2000)
ಸದಸ್ಯರಾಗಿ ಆಯ್ಕೆಗೊಂಡು (1992 ರಿಂದ 1994 ರವರೆಗೆ ) ಎರಡೂವರೆ ವರ್ಷಗಳ ಕಾಲ ಕರ್ನಾಟಕ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿ ಕೆಲಸ ಮಾಡಿರುತ್ತಾರೆ.
ಹೀಗೆ ಅನೇಕ ಸಮಾಜ ಮುಖಿ ಕೆಲಸಗಳನ್ನು ನಿರ್ವಹಿಸಿಕೊಂಡು, ಜನಪರ,ರೈತಪರ ಕೆಲಸ ಮಾಡಿ ಜನ್ನ ಮನ್ನಣೆ ಪಡೆದುಕೊಂಡು
ಜನಸಾಮಾನ್ಯರಿಂದ ಲೋಕ ಜನನಾಯಕರಾಗಿ ಕಂಗೋಳಿಸುತ್ತಿದ್ದಾರೆ.

ಜಾತ್ಯಾತೀತ ನಾಯಕ ಭೀಮಣ್ಣ ಖಂಡ್ರೆ :
ಡಾ.ಭೀಮಣ್ಣ ಖಂಡ್ರೆ ರವರು ಎಂದಿಗೂ ಜಾತಿ ರಾಜಕಾರಣ ಮಾಡಿದವರಲ್ಲ. ನೈತಿಕತೆಯ ಮೌಲ್ಯಾಧಾರಿತ ರಾಜಕಾರಣವನ್ನು ಮಾಡಿದವರು.
ತಮ್ಮ ತತ್ವ ಸಿದ್ಧಾಂತಕ್ಕೆ ಎಂದಿಗೂ ರಾಜಿ ಆಗಲಿಲ್ಲ. ಹಿಡಿದ ಕೆಲಸ ಪೂರ್ಣಗೊಳ್ಳುವವರೆಗೂ ವಿರಮಿಸಿದವರಲ್ಲ. ನೇರ, ನಿಷ್ಠೂರ ವ್ಯಕ್ತಿತ್ವ ಅವರದ್ದಾಗಿತ್ತು. ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಅವಿರತ ಶ್ರಮಿಸಿದ ಅವರು ಹಿಂದೊಮ್ಮೆ ಬರಗಾಲದ ಸಂದರ್ಭದಲ್ಲಿ ಬಿತ್ತನೆ ಬೀಜದ ಲಭ್ಯತೆ ಇದ್ದರೂ ಕೂಡ ಸರ್ಕಾರ ರೈತರಿಗೆ ವಿತರಣೆ ಮಾಡಿರಲಿಲ್ಲ. ಆ ಸಂದರ್ಭದಲ್ಲಿ ಸ್ವಪಕ್ಷದವರನ್ನು ಎದುರು ಹಾಕಿಕೊಂಡು ಗೋದಾಮು ಕೀಲಿ ಮುರಿದು ಬೀಜ ವಿತರಿಸಿ ರೈತಪರ ಕಾಳಜಿ ಮೆರೆದವರು. ಸರ್ಕಾರದಿಂದ ಪುರುಷರ ಫ್ಯಾಮಿಲಿ ಪ್ಲ್ಯಾನಿಂಗ್ ಯೋಜನೆ ರೂಪಿಸಿದ ಸಂದರ್ಭದಲ್ಲಿ ರಾಜ್ಯದಲ್ಲೇ ದಾಖಲೆ ರೀತಿಯಲ್ಲಿ ಭಾಲ್ಕಿ ತಾಲೂಕಿನಲ್ಲಿ ಪುರುಷರ ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಿಸಿದ್ದವರು. ಜಿಲ್ಲೆಯ ರೈತರ ಅನುಕೂಲಕ್ಕೆ ಸಕ್ಕರೆ ಕಾರ್ಖಾನೆ ಸ್ಥಾಪನೆ, ಶೈಕ್ಷಣಿಕ ಕೇಂದ್ರ ಸೇರಿದಂತೆ ಮುಂತಾದ ಅಭಿವೃದ್ಧಿ ಕೆಲಸ ಕೈಗೊಂಡು ಈ ಭಾಗದ ಶ್ರೇಯೋಭಿವೃದ್ಧಿಗೆ ಹಗಲಿರುಳು ಶ್ರಮಿಸಿದವರು. ಅನೇಕ ಆಧ್ಯಾತ್ಮಿಕ ಸಂಸ್ಥೆಗಳೊಂದಿಗೆ ಸಹ ಸಂಬಂಧ ಹೊಂದಿದ್ದಾರೆ. ಅವರು ಅನೇಕ ಸಾಕ್ಷರತಾ ಸಂಸ್ಥೆಗಳ ಸದಸ್ಯರಾಗಿದ್ದಾರೆ ಮತ್ತು ರಾಜ್ಯದ ಸಂಸದೀಯ ವ್ಯವಹಾರಗಳ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಜಾತ್ಯಾತೀತ ಜನನಾಯಕ. ಇಂತಹ
ಅಪರೂಪದ ವ್ಯಕ್ತಿ ರಾಜಕೀಯ ಕ್ಷೇತ್ರದಲ್ಲಿ ಸಿಗುವುದು ಅಪರೂಪ. ಅವರ ವ್ಯಕ್ತಿತ್ವವನ್ನು ಬೇರೆಯವರ ಜತೆಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ಅವರಿಗೆ ಅವರೇ ಸಾಟಿ ಎಂದರೆ ಖಂಡಿತವಾಗಿಯೂ ಅಶೋಕ್ತಿಯಲ್ಲ.
ಇನ್ನು ಹಿರೇಮಠ ಸಂಸ್ಥಾನಕ್ಕೂ ಮತ್ತು ಖಂಡ್ರೆ ಮನೆತನಕ್ಕೂ ಹಿಂದಿನಿಂದಲೂ ಅನ್ಯೋನ್ಯ ಸಂಬಂಧ ಇದೆ. ಈ ಕಾರಣಕ್ಕಾಗಿಯೇ
ಡಾ.ಚನ್ನಬಸವ ಪಟ್ಟದ್ದೇವರು ಮತ್ತು ಡಾ.ಭೀಮಣ್ಣ ಖಂಡ್ರೆ ಅವರ ಗುರುಶಿಷ್ಯರ ಸಂಬಂಧ ಚನ್ನಾಗಿತ್ತು.
ಡಾ.ಚನ್ನಬಸವ ಪಟ್ಟದ್ದೇವರ ಬಗ್ಗೆ ಡಾ.ಭೀಮಣ್ಣ ಖಂಡ್ರೆ ಅವರಿಗೆ ಅಪಾರ ಗೌರವ, ಭಕ್ತಿ ಇತ್ತು. ಶ್ರೀಗಳ ವಿಶ್ವಾಸಕ್ಕೆ ತಕ್ಕಂತೆ ಅವರು ಕೆಲಸ ಮಾಡಿದ್ದು ಕಾಣುತ್ತೇವೆ. ಅಂದಹಾಗೆ
ಡಾ.ಚನ್ನಬಸವ ಪಟ್ಟದ್ದೇವರು ನೂರು ವಸಂತಗಳನ್ನು ಪೂರೈಸಿದ ಸಂದರ್ಭದಲ್ಲಿ ಡಾ.ಭೀಮಣ್ಣ ಖಂಡ್ರೆ ರವರು ಎದುರು ನಿಂತು ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಶತಮಾನೋತ್ಸವ ಸಮಾರಂಭವನ್ನು ಅದ್ಧೂರಿಯಾಗಿ ನೆರವೇರಿಸಿದ್ದು ಇತಿಹಾಸದ ಪುಟಗಳಲ್ಲಿ ಅಜರಾಮರವಾಗಿ ದಾಖಲಾಗಿದೆ. ಹಾಗೆಯೇ
ಯೋಗಾಯೋಗ ಎಂಬಂತೆ ಪಟ್ಟದ್ದೇವರ ಆಪ್ತ ಶಿಷ್ಯರು ಆಗಿರುವ ಡಾ.ಭೀಮಣ್ಣ ಖಂಡ್ರೆ ಅವರ ಶತಮಾನೋತ್ಸವ ಕೂಡ ಇದೀಗ ಅದೇ ನೆಲದಲ್ಲಿ ನಡೆಯುತ್ತಿರುವುದು ಐತಿಹಾಸಿಕ.

ಖಂಡ್ರೆರವರ ಶೈಕ್ಷಣಿಕ/ ಸಹಕಾರ ಕ್ಷೇತ್ರದಲ್ಲಿ ಸೇವೆ:
ಡಾ. ಭೀಮಣ್ಣ ಖಂಡ್ರೆ ರವರು ಪ್ರಮುಖ ಶೈಕ್ಷಣಿಕ ಸಂಸ್ಥೆ ಶಾಂತಿವರ್ಧಕ ಶಿಕ್ಷಣ ಸಂಸ್ಥೆ ಹುಟ್ಟು ಹಾಕಿ, ಇದರ ಅಧ್ಯಕ್ಷರಾಗಿದ್ದವರು. ಮತ್ತು ಗ್ರಾಮೀಣ ಎಂಜಿನಿಯರಿಂಗ್ ಕಾಲೇಜು, ಪಾಲಿಟೆಕ್ನಿಕ್, I.TI., ಕಲೆ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು, ಉನ್ನತ ಶಿಕ್ಷಣದಂತಹ ಹಲವಾರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ ಹಿರಿಮೆ ಇವರದು. ಇನ್ನು ಪ್ರಮುಖ ಸಹಕಾರಿ ಧುರೀಣರಾಗಿದ್ದ ಇವರು ಬೀದರ್ ಸಹಕಾರ ಸಕ್ಕರೆ ಕಾರ್ಖಾನೆಯ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದವರು 12 ವರ್ಷಗಳ ಕಾಲ ಈ ಕಾರ್ಖಾನೆಯ
ಅಧ್ಯಕ್ಷರಾಗಿ ಸೇವೆ ಸಲ್ಲಿಸಿ, ಕ್ರಷಿಂಗ್ ಸಾಮರ್ಥ್ಯವನ್ನು I 250 ಮೆಟ್ರಿಕ್ ಟನ್‌ಗಳಿಂದ 2500 MT ಗೆ ಹೆಚ್ಚಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.
ಹಾಗೆಯೇ ಸಹಕಾರ ಸಕ್ಕರೆ ಕಾರ್ಖಾನೆಯ ರಾಷ್ಟ್ರೀಯ ಒಕ್ಕೂಟದ ಕಾರ್ಯಕಾರಿ ಸದಸ್ಯರಾಗಿದ್ದವರು ಮತ್ತು ನವದೆಹಲಿಯ ಭಾರತೀಯ ಸಕ್ಕರೆ ರಫ್ತು ನಿಗಮದ ಕಾರ್ಯಕಾರಿ ಸದಸ್ಯರಾಗಿದ್ದರು. ಪ್ರಸ್ತುತ ಇವರು ಮಹಾತ್ಮಾ ಗಾಂಧಿ ಸಹಕಾರಿ ಸಕ್ಕರೆ ಕಾರ್ಖಾನೆ (ನಿ) ಭಾಲ್ಕಿಯಲ್ಲಿ ಹೊಸದಾಗಿ ಸ್ಥಾಪಿಸಲಾದ ಸಹಕಾರಿ ಸಕ್ಕರೆ ಕಾರ್ಖಾನೆಯ ಮುಖ್ಯ ಪ್ರವರ್ತಕರಾಗಿದ್ದಾರೆ ಬಂಧುಗಳೇ, ಹೀಗೆ ಶೈಕ್ಷಣಿಕ ಮತ್ತು ಸಹಕಾರ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಜನಸಾಮಾನ್ಯರು ನೆನಪಿಸಿಕೊಳ್ಳುವಂತಹ ಮತ್ತು ಸ್ಮರಣೆ ಮಾಡಿಕೊಳ್ಳುವಂತಹ ಅನೇಕ ಜನಪರ ನಿಸ್ವಾರ್ಥ ಸೇವಾ ಕೈಂಕರ್ಯಗಳು ಮಾಡಿ ಸೈನಿಸಿಕೊಂಡಿದ್ದಾರೆ.

ಬೃಹತ್ ಅಭಿನಂದನಾ ಗ್ರಂಥ : ಶ್ರೀ ಖಂಡ್ರೆರವರ
ಶತಮಾನೋತ್ಸವ ಸಮಾರಂಭದಲ್ಲಿ
ಜಾನಪದ ವಿದ್ವಾಂಸರು ಹಾಗೂ ಹಿರಿಯ ಸಾಹಿತಿ ಡಾ. ಗೊ.ರು. ಚನ್ನಬಸಪ್ಪ ಅವರ ಪ್ರಧಾನ ಸಂಪಾದಕತ್ವದಲ್ಲಿ ಲೋಕನಾಯಕ ಎಂಬ 860 ಪುಟಗಳ ಬೃಹತ್ ಅಭಿನಂದನಾ ಗ್ರಂಥವನ್ನು ಲೋಕಾರ್ಪಣೆ ಮಾಡಲಾಗುತ್ತಿದೆ. ಅನುಭವ ಮಂಟಪದ ಅಧ್ಯಕ್ಷರು, ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧ್ಯಕ್ಷರು ಪರಮ ಪೂಜ್ಯ ಡಾ. ಬಸವಲಿಂಗ ಪಟ್ಟದ್ದೇವರು, ಸುತ್ತೂರು ಸಂಸ್ಥಾನ ಮಠದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಸೇರಿದಂತೆ ನಾಡಿನ ವಿವಿಧ ಮಠಾಧೀಶರು, ರಾಜಕೀಯ ನಾಯಕರು ಸೇರಿದಂತೆ ಸಚಿವರು, ಶಾಸಕರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಕಾರಣ ಸಮಾಜದ ಎಲ್ಲ ಜಾತಿ, ಜನವರ್ಗದ ಕಲ್ಯಾಣಕ್ಕಾಗಿ, ವಂಚಿತರಿಗೆ ನ್ಯಾಯ ದೊರಕಿಸಲು ಅವಿರತ ಹೋರಾಟ ಮಾಡಿದ, ವಿಶೇಷವಾಗಿ ಲಿಂಗಾಯತ ಸಮುದಾಯದ ಸರ್ವಾಂಗೀಣ ಪ್ರಗತಿಗಾಗಿ, ಸಮಾಜದ ಏಳಿಗೆಗಾಗಿ, ಅಭ್ಯುದಯಕ್ಕಾಗಿ ನಿರಂತರವಾಗಿ ಶ್ರಮಿಸಿದ ಮಹಾನ್ ಚೇತನ ಡಾ. ಭೀಮಣ್ಣ ಖಂಡ್ರೆ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮಕ್ಕೆ ಹೆಚ್ಚಿನ – ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು.

ಸಮಾರಂಭದ ದಿನಾಂಕ/ ಸ್ಥಳ:
ಡಿಸೆಂಬರ್‌ 2 ರಂದು ಭಾಲ್ಕಿ ನಗರದಲ್ಲಿ ಇರುವ ಶ್ರೀ ಭೀಮಣ್ಣ ಖಂಡ್ರೆ ತಾಂತ್ರಿಕ ಮಹಾವಿದ್ಯಾಲಯ(ಬಿಕೆಐಟಿ) ಆವರಣದಲ್ಲಿ ಜರುಗಲಿರುವ ಈ ಐತಿಹಾಸಿಕ ಸಮಾರಂಭಕ್ಕೆ ನಾಡಿನ ಮಠಾಧೀಶರು, ರಾಜಕೀಯ ಮುಖಂಡರು, ಹಿರಿಯ ಸಾಹಿತಿಗಳು ಸಾಕ್ಷಿಯಾಗಲಿದ್ದಾರೆ.ಇಂತಹ ಅಪರೂಪದ ಸಮಾರಂಭ ನಮ್ಮೆಲ್ಲರಿಗೂ ಕಣ್ತುಂಬಿಕೊಳ್ಳಲು ಸದಾವಕಾಶ ಸಿಕ್ಕಿದೆ. ಹಾಗಾಗಿ ಡಾ.ಭೀಮಣ್ಣ ಖಂಡ್ರೆ ಅಭಿಮಾನಿಗಳು, ಸಾರ್ವಜನಿಕರು ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಿ ಈ ಶತಮಾನೋತ್ಸವ ಸಮಾರಂಭ ಇತಿಹಾಸ ಪುಟದಲ್ಲಿ ಸೇರುವಂತೆ ಮಾಡಬೇಕು.

ಕೊನೆಯ ನುಡಿ:

ನೂರು ವಸಂತಗಳನ್ನು ಪೂರೈಸಿರುವ ಈ ಭಾಗದ ಸ್ವಾತಂತ್ರ ಹೋರಾಟಗಾರರು, ಲಿಂಗಾಯತ ಸಮಾಜದ ನಾಯಕರು, ರಾಜಕೀಯ ಮುತ್ಸದ್ದಿ, ಹಿರಿಯ ಚೇತನ, ಲೋಕನಾಯಕರು ಆಗಿರುವ ಡಾ.ಭೀಮಣ್ಣ ಖಂಡ್ರೆ ಅವರ ಶತಮಾನೋತ್ಸವ ಮತ್ತು ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಜಾತಿಭೇದ ಮರೆತು ಎಲ್ಲ ವರ್ಗದವರು ಅಪಾರ ಸಂಖ್ಯೆಯಲ್ಲಿ ಆಗಮಿಸಬೇಕೆಂದು ವಿನಂತಿ.

IMG 20231122 WA0317

ಲೇಖಕರು: ಸಂಗಮೇಶ ಎನ್ ಜವಾದಿ.
ಬರಹಗಾರರು, ಚಿಂತಕರು, ಹೋರಾಟಗಾರರು.

About Mallikarjun

Check Also

screenshot 2025 11 11 19 38 54 04 e307a3f9df9f380ebaf106e1dc980bb6.jpg

ಜಿಲ್ಲೆಯ ಯಾವುದೇ ಧಾರ್ಮಿಕ ಮಂದಿರಗಳಲ್ಲಿ ಬಾಲ್ಯ ವಿವಾಹ ಜರುಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ : ಡಾ. ಸುರೇಶ ಇಟ್ನಾಳ

It is our duty to ensure that child marriage does not take place in any …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.