Bidadi Cattle Resting Grounds Junior College
ಗಂಗಾವತಿ.ಅ.29: ಮಾಜಿ ಸಂಸದ ಶಿವರಾಮ ಗೌಡರ ಆಶಯದಂತೆ ಹಿರಿಯ ನಾಗರಿಕರ ವಾಯು ವಿಹಾರ ಕೇಂದ್ರವಾಗಬೇಕಿದ್ದ ಜೂನಿಯರ್ ಕಾಲೇಜ್ ಮೈದಾನದ ಬೀಡಾಡಿ ದನಗಳ ತಂಗುದಾಣವಾಗಿ ಮಾರ್ಪಟ್ಟಿದೆ ಎಂದು ಜನ ಜಾಗೃತಿ ಸಮಿತಿಯ ರಾಜ್ಯಾಧ್ಯಕ್ಷ ಗಣೇಶ ಮಚ್ಚಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿದ ಗಣೇಶ ಮಚ್ಚಿ, ನಗರದ ಸಾರ್ವಜನಿಕರಿಗೆ ಹಾಗೂ ಹಿರಿಯ ನಾಗರಿಕರಿಗೆ ವಾಯು ವಿಹಾರಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಮಾಜಿ ಸಂಸದ ಶಿವರಾಮ ಗೌಡರು ಸಂಸದರ ಅನುದಾನದಡಿ ಕೋಟ್ಯಾಂತರ ವೆಚ್ಚದಲ್ಲಿ ವಾಕಿಂಗ್ ಟ್ರ್ಯಾಕ್ ನಿರ್ಮಿಸಿದ್ದರು. ನಿತ್ಯ ಸಂಜೆ ಮತ್ತು ಬೆಳಿಗ್ಗೆ ನೂರಾರು ಜನ ಇಲ್ಲಿಗೆ ಬಂದು ನೆಮ್ಮದಿಯಿಂದ ವಾಕಿಂಗ್ ಮಾಡುತ್ತಿದ್ದರು. ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗಿತ್ತು. ಆದರೆ ಇತ್ತೀಚೆಗೆ ಬೀಡಾಡಿ ದನಗಳ ಹಾವಳಿಯಿಂದಾಗಿ ವೃದ್ಧರು, ಮಹಿಳೆಯರು, ಮಕ್ಕಳು ಇಲ್ಲಿಗೆ ಬರಲು ಹೆದರುವಂತಾಗಿದೆ. ಮೈದಾನದ ತುಂಬಾ ಬಿಡಾರ ಹೂಡುವ ಬೀಡಾಡಿ ದನಗಳು ವಾಕಿಂಗ್ ಟ್ರ್ಯಾಕ್ ಸೇರಿದಂತೆ ಎಲ್ಲೆಂದರಲ್ಲಿ ಸೆಗಣಿ ಹಾಕಿ ಕಲುಷಿತಗೊಳಿಸಿವೆ. ಕೆಲವು ದನಗಳು ಮಕ್ಕಳನ್ನು ಅಟ್ಟಿಸಿಕೊಂಡು ಬಂದು ಗುದ್ದಿವೆ ಎನ್ನಲಾಗುತ್ತಿದೆ. ಸದ್ಯಕ್ಕೆ ಮೈದಾನದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು ವಾಯು ವಿಹಾರಿಗಳಿಗೆ ನೆಮ್ಮದಿ ಇಲ್ಲದಂತಾಗಿದೆ. ಈ ಬಗ್ಗೆ ನಗರಸಭೆ ಪೌರಾಯುಕ್ತರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ದನಗಳ ಮಾಲೀಕರಿಗೆ ಈ ಕುರಿತು ನೋಟೀಸ್ ನೀಡಲಾಗಿದೆ ಎಂದು ಸಬೂಬು ಹೇಳಿ ಜಾರಿಕೊಳ್ಳುತ್ತಾರೆ. ಕೂಡಲೇ ಬೀಡಾಡಿ ದನಗಳನ್ನು ಹಿಡಿದು ಪಕ್ಕದ ಜಿಲ್ಲೆಯ ಗೋಶಾಲೆಗೆ ಬಿಡಬೇಕು. ಆ ಮೂಲಕ ಪೌರಾಯುಕ್ತರು
ದನಗಳ ಮಾಲೀಕರಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡಬೇಕು ಎಂದು ಗಣೇಶ ಮಚ್ಚಿ ಆಗ್ರಹಿಸಿದ್ದಾರೆ.
“ಇಡೀ ನಗರಕ್ಕೆ ಜೂನಿಯರ್ ಕಾಲೇಜ್ ಮೈದಾನ ಒಂದೇ ಸುರಕ್ಷಿತ ವಾಯು ವಿಹಾರ ಕೇಂದ್ರವಾಗಿದೆ. ಇಲ್ಲೂ ಕೂಡ ಬೀಡಾಡಿ ದನಗಳ ಭೀತಿಯಲ್ಲಿ ವೃದ್ಧರು, ಮಹಿಳೆಯರು ವಾಕಿಂಗ್ ಮಾಡುವಂತಾಗಿದೆ. ಆಟದ ಮೈದಾನ ದನಗಳ ಕೊಂಡವಾಡದಂತಾಗಿದೆ. ನಗರಸಭೆ ಪೌರಾಯುಕ್ತರು ನೆಪ ಹೇಳುತ್ತಾ ಕಾಲಹರಣ ಮಾಡದೆ ದನಗಳನ್ನು ಪಕ್ಕದ ಜಿಲ್ಲೆಯ ಗೋಶಾಲೆಗೆ ಬಿಡುವ ಮೂಲಕ ದನಗಳ ಮಾಲೀಕರಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡಬೇಕು”
ಗಣೇಶ ಮಚ್ಚಿ
ರಾಜ್ಯಾಧ್ಯಕ್ಷ, ಜನ ಜಾಗೃತಿ ಸಮಿತಿ ಗಂಗಾವತಿ