Gramam administration has shown a path of light in the lives of children
ಪ್ರಜಾಪ್ರಭುತ್ವ ದಿನದಂದು ಶಾಲೆ ಬಿಟ್ಟ ಮೂರು ಮಕ್ಕಳನ್ನು ಪುನಃ ಜ್ಞಾನ ದೇಗುಲಕ್ಕೆ ಸೇರಿಸಿದ ಶ್ರೀರಾಮನಗರ ಗ್ರಾಪಂ ಆಡಳಿತ ಮಂಡಳಿ, ಅಧಿಕಾರಿಗಳು
ಗಂಗಾವತಿ : ತಾಲೂಕಿನ ಶ್ರೀರಾಮನಗರದಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದಂದು ಶಾಲೆ ಬಿಟ್ಟ ಮೂರು ಹೆಣ್ಣು ಮಕ್ಕಳನ್ನು ಪುನಃ ಶಾಲೆಗೆ ಅಡ್ಮಿಷನ್ ಮಾಡುವ ಮೂಲಕ ಮಕ್ಕಳ ಬಾಳಿಗೆ ಬೆಳಕಿನ ಹಾದಿ ತೋರಿ ಶುಕ್ರವಾರ ಅರ್ಥಪೂರ್ಣವಾಗಿ ಆಚರಿಸಿದ್ದು, ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಯಿತು.
ಶ್ರೀರಾಮನಗರದ 5ನೇ ವಾರ್ಡ್ ನಲ್ಲಿ ವಲಸೆ ಬಂದು ಜೀವನ ನಡೆಸುತ್ತಿರುವ ಕುಟುಂಬಗಳಿಗೆ ಸೇರಿದ ಕಾವೇರಿ (ಬಸಾಪಟ್ಟಣ ಗ್ರಾಮದಲ್ಲಿ) 5ನೇ ತರಗತಿ ವಿದ್ಯಾಭ್ಯಾಸ ಮಾಡಿ ಶಾಲೆ ಬಿಟ್ಟಿದ್ದರು. ಯಶೋಧಾ, ಸಂಗೀತಾ ಈವರೆಗೆ ಶಾಲೆ ಮೆಟ್ಟಿಲು ಏರಿರಲಿಲ್ಲ. ಈ ಮಕ್ಕಳು ಶಿಕ್ಷಣದಿಂದ ವಂಚಿತಗೊಂಡು ಗ್ರಾಮದಲ್ಲಿ ಎಲ್ಲೆಂದರಲ್ಲಿ ಅಲೆಯುತ್ತಿದ್ದರು.
ಇದನ್ನು ಮನಗಂಡ ಗ್ರಾಮ ಪಂಚಾಯತ್ ಆಡಳಿತ ಮಂಡಳಿ ಹಾಗೂ ಗ್ರಾಮ ಅಭಿವೃದ್ಧಿ ಅಧಿಕಾರಿಗಳಾದ ವತ್ಸಲಾ, ಆಶಾ ಕಾರ್ಯಕರ್ತರ ತಂಡ ಅವರ ಮೆನೆಗೆ ಭೇಟಿ ನೀಡಿ ಪಾಲಕರಿಗೆ ಶಿಕ್ಷಣದ ತಿಳಿವಳಿಕೆ ಮೂಡಿಸಿ, ಮನವೊಲಿಸಿದರು. ಇದಕ್ಕೆ ಒಪ್ಪಿದ ವಿದ್ಯಾರ್ಥಿನಿಯರ ಪಾಲಕರು ಮಕ್ಕಳನ್ನು ಶಾಲೆಗೆ ನೋಂದಣಿ ಮಾಡಿಸುತ್ತೇವೆ ಎಂದರು.
ಗ್ರಾಮ ಪಂಚಾಯತ್ ಆಡಳಿತ ಮಂಡಳಿ ಅವರು ತಾವೇ ಖುದ್ದಾಗಿ ಗ್ರಾಮದ ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮಕ್ಕಳನ್ನು ಕೈಹಿಡಿದು ಕರೆತಂದು ನೋಂದಣಿ ಮಾಡಿಸಿದರು.
ಬಾಲಕಿ ಕಾವೇರಿಗೆ 7ನೇ ತರಗತಿ, ಈವರೆಗೆ ಶಾಲೆಗೆ ಹೋಗದ ಯಶೋಧಾ, ಸಂಗೀತಾ ಅವರ ವಯಸ್ಸಿನ ಅನುಗುಣವಾಗಿ 2ನೇ ತರಗತಿಗೆ ನೋಂದಣಿ ಮಾಡಿಸಿದರು. ಮಕ್ಕಳು ಖುಷಿಯಿಂದಲೇ ಶಾಲೆ ಮಟ್ಟಿಲೇರಿದರು. ಶಾಲೆ ಮುಖ್ಯೋಪಾದ್ಯರು ಮಕ್ಕಳಿಗೆ ಪುಸ್ತಕ, ಶಾಲೆ ಬಟ್ಟೆ ನೀಡುವುದರ ಮೂಲಕ ಮಕ್ಕಳನ್ನು ಶಾಲೆಗೆ ಆಹ್ವಾನಿಸಿದರು.
ಗ್ರಾಪಂ ಅಧ್ಯಕ್ಷರಾದ ಶಾಂತಪ್ಪ, ಉಪಾಧ್ಯಕ್ಷರಾದ ಹುಸೇನಬೀ, ಸದಸ್ಯರಾದ ಶಾಂಭವಮೂರ್ತಿ, ಗ್ರಾಮ ಅಭಿವೃದ್ಧಿ ಅಧಿಕಾರಿಗಳಾದ ಶ್ರೀಮತಿ ವತ್ಸಲಾ, ಆಶಾ ಕಾರ್ಯಕರ್ತರು ಹಾಗೂ ಶಾಲೆ ಶಿಕ್ಷಕರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಯಿತು.
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದಂದು ವಲಸೆ ಬಂದ ಮಕ್ಕಳಿಗೆ ಶಿಕ್ಷಣದ ಬೆಳಕಿನ ಹಾದಿ ತೋರಿ ಅರ್ಥಪೂರ್ಣವಾಗಿ ಆಚರಿಸಿದರು.