Decentralization of officers necessary for smooth governance: Hitnal‘
ಗಂಗಾವತಿ:ಸುಲಲಿತಾ ಆಡಳಿತ, ತ್ವರಿತ ನಿರ್ವಹಣೆಗೆ ಅಧಿಕಾರ ವಿಕೇಂದ್ರೀಕರಣ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಗಂಗಾವತಿ ನೂತನ ಜಿಲ್ಲೆಯಾಗುವ ಎಲ್ಲಾ ಅರ್ಹತೆ ಇದೆ ಎಂದು ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಜಶೇಖರ್ ಹಿಟ್ನಾಳ್ ಹೇಳಿದರು.
ನಗರದ ಗ್ರಾಮ ದೇವತೆ ದುರ್ಗಾದೇವಿ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಭಾನುವಾರ ಕಿಷ್ಕಿಂಧಾ ಜಿಲ್ಲಾ ಹೋರಾಟ ಸಮಿತಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮನವಿ ಸ್ವೀಕರಿಸಿ ಮಾತನಾಡಿದ ಹಿಟ್ನಾಳ್, ಜನಸಂಖ್ಯೆ, ಪ್ರವಾಸೋದ್ಯಮ ಸೇರಿದಂತೆ ಗಂಗಾವತಿ ನೂತನ ಜಿಲ್ಲೆಯಾಗುವ ಎಲ್ಲಾ ಅರ್ಹತೆ ಇದೆ.
ಈ ಹಿಂದೆ ರಾಯಚೂರು ಜಿಲ್ಲೆಯಾದಾಗ ಕೊಪ್ಪಳದಿಂದ ೧೭೦ ಕಿಲೋ ಮೀಟರ್ ದೂರವಾಗುತ್ತಿತ್ತು. ಇಲ್ಲಿನ ಜನ ರಾಯಚೂರಿಗೆ ಹೋಗಿ ಬರಲು ತುಂಬಾ ಪ್ರಯಾಅಸ ಪಡುತ್ತಿದ್ದರು. ಬಳಿಕ ಕೊಪ್ಪಳ ಜಿಲ್ಲೆ ಆಯಿತು. ಆಗಲೂ ಗಂಗಾವತಿ ನಗರಕ್ಕೆ ಜಿಲ್ಲೆಯಾಗುವ ಅರ್ಹತೆ ಇದ್ದರೂ ಇಲ್ಲಿನ ಜನ ಕೊಪ್ಪಳಕ್ಕೆ ಜಿಲ್ಲಾ ಕೇಂದ್ರ ಬಿಟ್ಟುಕೊಟ್ಟು ಹೃದಯ ವೈಶಾಲ್ಯತೆ ಮೆರೆದರು.
ಜನರಿಗೆ ಅಗತ್ಯವಿರುವ ಶೇ.೭೦ರಿಂದ ೮೦ರಷ್ಟು ಕೆಲಸಗಳು ಜಿಲ್ಲಾಡಳಿತದಿಂದಲೇ ಆಗುತ್ತವೆ. ಈ ಹಿಂದೆ ಕೇವಲ ಹತ್ತು ಲಕ್ಷ ಇದ್ದ ಕೊಪ್ಪಳದ ಜನಸಂಖ್ಯೆ ಇದೀಗ ಹದಿನೈದು ಲಕ್ಷಕ್ಕೂ ಹೆಚ್ಚಿದೆ. ಹೀಗಾಗಿ ಜನಸಂಖ್ಯೆ ಆಧಾರದ ಮೇಲೆ ಗಂಗಾವತಿಯು ಐತಿಹಾಸಿಕ ಕಿಷ್ಕಿಂಧಾ ಜಿಲ್ಲೆಯಾಗಬೇಕು ಎಂದು ಅಭಿಪ್ರಾಯಪಟ್ಟರು.
ದೇಶದಲ್ಲಿಯೇ ಅತಿವೇಗವಾಗಿ ಬೆಳೆಯುತ್ತಿರುವ ಪ್ರಮುಖ ಧಾರ್ಮಿಕ ತಾಣದಲ್ಲಿ ಅಂಜನಾದ್ರಿ ಒಂದಾಗಿದೆ. ಅಂಜನಾದ್ರಿಗೆ ನಿತ್ಯ ೨೦ರಿಂದ ೨೫ ಸಾವಿರ ಜನ ಭೇಟಿ ನೀಡುತ್ತಿದ್ದು, ಇಷ್ಟು ಜನರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಪ್ರವಾಸೋದ್ಯಮ, ರಸ್ತೆ, ಗಂಗಾವತಿ ನಗರ ಬೆಳವಣಿಗೆಯಾಗಬೇಕಿದೆ. ಹೀಗಾಗಿ ಹೊಸ ಜಿಲ್ಲೆಯಾದರೆ ಅಭಿವೃದ್ಧಿಗೆ ಪೂರಕವಾಗಲಿದೆ.
ಹೀಗಾಗಿ ನೂತನ ಜಿಲ್ಲೆಯ ಬಗ್ಗೆ ಎ.೩೦ರಂದು ಗಂಗಾವತಿಗೆ ಆಗಮಿಸಲಿರುವ ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೆ ತಂದು ಚುನಾವಣೆಯ ಬಳಿಕ ನಿಯೋಗವನ್ನು ಬೆಂಗಳೂರಿಗೆ ಕರೆದೊಯ್ಯುವ ಕೆಲಸ ಮಾಡುತ್ತೇನೆ. ಚುನಾವಣೆಯ ಫಲಿತಾಂಶ ಏನೇ ಆಗಲಿ. ನಾನು ಗಂಗಾವತಿ ಜನರೊಂದಿಗೆ ಇರುತ್ತೇನೆ ಎಂದರು.
ಮಾಜಿಶಾಸಕ ಎಚ್.ಆರ್. ಶ್ರೀನಾಥ್ ಮಾತನಾಡಿ, ಕಿಷ್ಮಿಂಧಾ, ಅಂಜನಾದ್ರಿ ಮೂಲಕ ಗಂಗಾವತಿ ಇಂದು ಇಡೀ ವಿಶ್ವಕ್ಕೆ ಪರಿಚಯವಾಗುತ್ತಿದೆ. ನೂತನ ಜಿಲ್ಲೆ ಮಾಡುವುದರಿಂದ ವಿಮಾನಯಾನ, ಸಾರಿಗೆ, ಪ್ರವಾಸೋದ್ಯಮ, ಆರ್ಥಿಕ ಅಭಿವೃದ್ಧಿ ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಸಿಎಂ ಬಳಿ ಚರ್ಚಿಸಿ ನೂತನ ಜಿಲ್ಲೆಗೆ ಸಹಕಾರ ನೀಡಬೇಕು ಎಂದು ಹಿಟ್ನಾಳ್ ಅವರನ್ನು ಒತ್ತಾಯಿಸಿದರು.
ಕಾಂಗ್ರೆಸ್ ನಾಯಕರಾದ ಲಲಿತಾರಾಣಿ, ಶಾಮೀದ ಮನಿಯಾರ, ಕಿಷ್ಕಿಂಧಾ ಜಿಲ್ಲಾ ಹೋರಾಟ ಸಮಿತಿಯ ಪ್ರಮುಖರಾದ ಸಂತೋಷ್ ಕೇಲೋಜಿ, ನಾರಾಯಣಪ್ಪ ನಾಯಕ್, ಸಿಂಗನಾಳ ಸುರೇಶ, ನಾಗರಾಜ ಗುತ್ತೇದಾರ, ಶ್ರೀನಿವಾಸ ಎಂ.ಜೆ ಮಾತನಾಡಿದರು. ಹಿರಿಯರಾದ ಮುಷ್ಕಿ ವಿರೂಪಾಕ್ಷಪ್ಪ, ಕೃಷ್ಣಪ್ಪ ನಾಯಕ್ ಇದ್ದರು.