Irrigation expert MR. Request to give the post of KADA president to Venkatesh
ಗಂಗಾವತಿ: ಮುನಿರಾಬಾದ್‌ನ ಸಾಹಿತಿ, ಪರಿಸರ ಪ್ರೇಮಿ, ತುಂಗಭದ್ರಾ ಉಳಿಸಿ ಆಂದೋಲನ ಸಮಿತಿ (ರಿ) ಅಧ್ಯಕ್ಷರು, ಕಾಂಗ್ರೆಸ್ ಕಾರ್ಮಿಕರ ಘಟಕದ ಜಿಲ್ಲಾಧ್ಯಕ್ಷರಾದ ಎಂ.ಆರ್. ವೆಂಕಟೇಶ ಅವರನ್ನು ಕಾಡಾ ಅಧ್ಯಕ್ಷರನ್ನಾಗಿ ನೇಮಿಸಬೇಕೆಂದು ಕ್ರಾಂತಿ ಚಕ್ರ ಬಳಗದ ರಾಜ್ಯಾಧ್ಯಕ್ಷ ಭಾರಧ್ವಾಜ್ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ. ಎಂ.ಆರ್. ವೆಂಕಟೇಶರವರು ಕಳೆದ ೩೦ ವರ್ಷಗಳಿಂದ ರೈತರ ಹಾಗೂ ರೈತಕೂಲಿಕಾರರ ಜೊತೆಗಿದ್ದು, ರಾಯಚೂರು, ಬಳ್ಳಾರಿ, ವಿಜಯನಗರ ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಚಿರಪರಿಚಿತರಾಗಿದ್ದಾರೆ. ತುಂಗಭದ್ರಾ ಜಲಾಶಯದ ಬಗ್ಗೆ ಇವರಿಗಿರುವ ಅಪಾರ ಮಾಹಿತಿ ನಮ್ಮ ಭಾಗದಲ್ಲಿ ಯಾರಿಗೂ ಇಲ್ಲ. ಇವರನ್ನು ಕಾಡಾ ಅಧ್ಯಕ್ಷರನ್ನಾಗಿ ನೇಮಿಸಿದರೆ ಜಲಾಶಯ ಹಾಗೂ ಅಚ್ಚುಕಟ್ಟಿನ ಸಮಸ್ಯೆಗಳನ್ನು ಬಗೆಹರಿಸಲು ಅರ್ಹರಾಗಿದ್ದಾರೆ. ಕಳೆದ ಹತ್ತು ವರ್ಷಗಳಿಂದ ರಾಯಚೂರು, ಬಳ್ಳಾರಿ, ಕೊಪ್ಪಳ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಜಲಾಶಯದ ಬಗ್ಗೆ ಅನೇಕ ಹೋರಾಟಗಳನ್ನು ಮಾಡಿದ್ದಾರೆ. ೨೦೦೮-೦೯ ರಲ್ಲಿ ತುಂಗಭದ್ರಾ ಹೂಳು ಮತ್ತು ಕಲುಷಿತ ನೀರಿನ ಬಗ್ಗೆ ಸಂಶೋಧನೆ ಮಾಡಲು ತುಂಗಭದ್ರಾ ಹುಟ್ಟಿನಿಂದ ಕೊನೆಯವರೆಗೆ ಪ್ರವಾಸ ಮಾಡಿದ್ದಾರೆ. ಅದರ ವರದಿಯನ್ನು ನೀರಾವರಿ ಸಲಹಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳಿಗೆ ಸಲ್ಲಿಸಿದ್ದಾರೆ. ಅವರು ಇವರ ವರದಿಯನ್ನು ಪರಿಶೀಲಿಸಿ ಬಹಳಷ್ಟು ಕ್ರಮಗಳನ್ನು ಜರುಗಿಸಿದ್ದಾರೆ. ಇಂತಹ ಸೂಕ್ತ ವ್ಯಕ್ತಿಯನ್ನು ಕಾಡಾ ಅಧ್ಯಕ್ಷರನ್ನಾಗಿ ಮಾಡಿದರೆ ಜಲಾಶಯದ ಹಾಗೂ ಅಚ್ಚುಕಟ್ಟಿನ ಪ್ರದೇಶದ ಅಭಿವೃದ್ಧಿಗಾಗಿ ಶ್ರಮಿಸುವಲ್ಲಿ ಅನುಮಾನವಿಲ್ಲ. ಕೂಡಲೇ ಎಂ.ಆರ್. ವೆಂಕಟೇಶ ಇವರನ್ನು ಕಾಡಾ ಅಧ್ಯಕ್ಷರನ್ನಾಗಿ ನೇಮಕ ಮಾಡಲು ಮುಖ್ಯಮಂತ್ರಿಗಳನ್ನು ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಒತ್ತಾಯಿಸುವಂತೆ ಭಾರದ್ವಾಜ್ ಮನವಿ ಮಾಡಿದ್ದಾರೆ.