Breaking News

ಧರ್ಮದ ಪ್ರತಿಯೊಂದು ಮೂಢನಂಬಿಕೆಯನ್ನೂ ನೀವು ಒಪ್ಪಬೇಕು ಎಂದು ಹೇಳುವುದು ಮಾನವನಿಗೆ ಅವಮಾನ ಮಾಡಿದಂತೆ

To say that you have to agree with every superstition of a religion is an insult to humanity

ಜಾಹೀರಾತು

ವಿಶ್ವಾರಾಧ್ಯ ಸತ್ಯಂಪೇಟೆ

ಕೂದಲು ಇದ್ದವಳು ತನ್ನ ಜಡೆಯನ್ನು ಹೇಗಾದರೂ ಕಟ್ಟಿಕೊಳ್ಳಬಹುದು ಎನ್ನುವಂತೆ ಬರಹವನ್ನು ಬಲ್ಲ ಲೇಖಕರು, ಧಾರ್ಮಿಕ ಮುಖಂಡರು ತಮಗೆ ಹೇಗೆ ಬೇಕೋ ಹಾಗೆ ತಮ್ಮ ತಮ್ಮ ಮೂಗಿನ ನೇರಕ್ಕೆ ಬರೆಹಗಳನ್ನು ಬರೆದು ಜನತೆಯನ್ನು ಮತ್ತದೆ ಕಂದಾಚಾರ ಮೌಢ್ಯಗಳಲ್ಲಿ ಇಡಲು ಬಯಸಿರುವುದು ಕಂಡು ಬರುತ್ತದೆ. ಯಾರನ್ನೋ ಹಣಿಯಲು, ಇನ್ನಾರನ್ನೊ ಘಾಸಿಗೊಳಿಸಲು ಬರೆಹ ಉಪಯೋಗವಾಗುತ್ತಿರುವುದು ನಿಜಕ್ಕೂ ಆಘಾತದ ಸಂಗತಿ. ಗಂಡ ಹೆಂಡತಿಯ ನಡುವೆ ಕೂಸು ಹಕನಾಕ ಆಯಿತು ಎಂದೆನ್ನುವಂತೆ ತೀರಾ ಇತ್ತೀಚೆಗೆ ಡಾಕ್ಟರೆಟ್ ಪಡೆದ ಮಠಾಧೀಶರೊಬ್ಬರು ತಮ್ಮ ಒಳ ಮನಸ್ಸಿನ ನಂಜನ್ನು ಪತ್ರಿಕೆಯೊಂದರಲ್ಲಿ ಕಾರಿಕೊಂಡಿದ್ದಾರೆ.

ಅವರಿಗೆ ಪಕ್ಕಾ ಗೊತ್ತು. ಸಂವಿಧಾನ, ಸ್ವಾತಂತ್ರ್ಯ, ಅಭಿವ್ಯಕ್ತಿ ಎನ್ನುತ್ತಲೆ ವೈಜ್ಞಾನಿಕತೆಯನ್ನು- ವೈಚಾರಿಕತೆಯನ್ನು ತಡೆ ಹಿಡಿದು ಅದೆ ಭಾರತ ಸಂವಿಧಾನವೆ ಕೊಡಮಾಡಿದ ಮುಕ್ತ ಚರ್ಚೆಯನ್ನವರು ತಡೆಯಲು ಬಯಸುತ್ತಾರೆ. ಭಾರತ ನಂಬಿಕೆಗಳ ತವರು. ನಂಬಿಕೆಗಳೆ ಮನುಷ್ಯನ ಜೀವ ಜೀವಾಳ, ಇದರಲ್ಲಿ ಎರಡು ಮಾತಿಲ್ಲ. ಆದರೆ ಆ ನಂಬಿಕೆಗಳಿಗೆ ವೈಜ್ಞಾನಿಕ- ವೈಚಾರಿಕ ಆಧಾರಗಳಿವೆಯೆ ? ಎಂದು ಹುಡುಕಿ ನೋಡದೆ ಇರುವುದು ಸಹ ಮನುಷ್ಯನ ಬೆಳವಣ ಗೆ ಅಡ್ಡಗಾಲು ಹಾಕುತ್ತವೆ. ಸಮಾಜದಲ್ಲಿ ವೈಚಾರಿಕತೆ- ವಿಜ್ಞಾನ ಇಲ್ಲದಿದ್ದರೆ ನಮ್ಮ ಸಮಾಜ ಅದೆ ಚರ್ವಿತ ಚರ್ವಣ ಕತೆ ಹೇಳಿ ನಮ್ಮನ್ನೆಲ್ಲ ಮಕಾಡೆ ಮಲಗಿಸುತ್ತಿತ್ತು. ಮೂಲಭೂತವಾದಿಗಳು ಮತ್ತು ಪಟ್ಟಭದ್ರರು ಎಂದಿಗೂ ಬದಲಾಗುವವರಲ್ಲ. ಸಮಾಜ , ಜನ ಬದಲಾದರೆ ಅವರ ಆಟ ಏನು ನಡೆಯುವುದಿಲ್ಲವೆಂದು ಅವರಿಗೆ ಗೊತ್ತು. ಹಾಗಾಗಿ ಯಥಾಸ್ಥಿತಿವಾದಿಗಳು ಎಂದಿಗೂ ನಂಬಿಕೆಯ ಹೆಸರಿನ ಮೇಲೆ ತಮ್ಮ ಅನಿಷ್ಟ ವಿಚಾರದ ಧಾಳಗಳನ್ನು ಉರುಳಿಸುತ್ತಲೆ ಇರುತ್ತಾರೆ.

ಯಾವುದೆ ಧರ್ಮದ ನಂಬಿಕೆಗಳನ್ನು, ಆಚಾರಗಳನ್ನು, ಪೂಜಾ ವಿಧಾನಗಳನ್ನು, ಅಂಧಕಾರವನ್ನು ಪ್ರಶ್ನಿಸಲೆಬೇಡಿ ಎಂದು ಹೇಳಿದ್ದನ್ನು ಬುದ್ದ ಬಸವ ಅಂಬೇಡ್ಕರ್ ಪುಲೆ,ಪೆರಿಯಾರ, ನಾರಾಯಣ ಗುರು, ಸ್ವಾಮಿ ವಿವೇಕಾನಂದ, ಭಗತಸಿಂಗ್ ಮುಂತಾದವರು ಒಪ್ಪಿಕೊಂಡಿದ್ದರೆ. ನಮ್ಮ ಭಾರತ ಮೌಢ್ಯಗಳ ಕೊಂಪೆಯಾಗುತ್ತಿತ್ತು. ಸತಿ ಸಹಗಮನ ಎಂಬುದು ಸಹ ಭಾರತೀಯರ ನಂಬಿಕೆಯಾಗಿತ್ತು. ಹಾಗಂತ, ಆ ನಂಬಿಕೆಯನ್ನೆ ಮುಂದು ಮಾಡಿ ಇಂದಿಗೂ ಪತಿ ಸತ್ತ ನಂತರ ಹೆಣ್ಣನ್ನು ಆತನೊಂದಿಗೆ ಬೆಂಕಿಹಚ್ಚಿ ಕೊಲ್ಲಬಹುದೆ ? ನೆಲದಲ್ಲಿ ಉಗಿದು ಇಡಬಹುದೆ ? ನ ಸ್ತ್ರೀ ಸ್ವಾತಂತ್ರ್ಯಂ ಅರ್ಹತಿ ಎಂಬ ಧರ್ಮವೊಂದರ ಶ್ಲೋಕವನ್ನು ನಂಬಲೇಬೇಕು ಎಂದಿದ್ದರೆ ಇಂದು ಸಮಾಜದಲ್ಲಿ ಗಂಡಸಿಗೆ ನಾವು ಸಮ ಎಂಬಂತೆ ದುಡಿಯುತ್ತಿರುವ ಮಹಿಳೆಯರನ್ನೆಲ್ಲ ಮತ್ತೆ ಅಡುಗೆ ಮನೆಗೆ ಕಳಿಸಬೇಕೆ ? ಪರರ ಧರ್ಮದ ಬಗೆಗೆ ಸಹನೆ ಇಟ್ಟುಕೊಳ್ಳಬೇಕು ಸತ್ಯ, ಆದರೆ ಧರ್ಮದ ನಡಾವಳಿಯ ಹೆಸರಿನ ಮೇಲೆ ಕೇವಲ ತಲಾಕ ತಲಾಕ ತಲಾಕ ಎಂದು ಮೂರು ಬಾರಿ ಕೂಗಿದಾಕ್ಷಣ ಗಂಡನಿಂದ ಹೆಂಡತಿಗೆ ವಿಚ್ಛೇದನ ಸಿಗುತ್ತದೆಂದು ಧರ್ಮವೊಂದು ಹೇಳಿದೆ ಎಂಬುದನ್ನು ಒಪ್ಪಬೇಕಾದರೆ ಸಂವಿಧಾನವಾದರೂ ಏಕೆ ಬೇಕು? ಆಶೀರ್ವಾದದಿಂದ ಮಕ್ಕಳಾಗುತ್ತವೆ, ದೇವರಿಗೆ ಪೂಜೆ ಪುನಸ್ಕಾರ ಮಾಡಿದರೆ ಏನೆಲ್ಲವೂ ಲಭ್ಯ ಎಂಬುದು ಧರ್ಮದ ನಂಬಿಕೆ. ಹಾಗಂತ ಇದನ್ನು ಪ್ರಶ್ನಿಸಲೆಬಾರದೆ ? ನಿಜಕ್ಕೂ ಆಶೀರ್ವಾದದಿಂದ ಮಕ್ಕಳಾಗುತ್ತವೆಯೆ ? ಪೂಜೆ ಪುನಸ್ಕಾರಕ್ಕೆ ಏನೆಲ್ಲವೂ ಲಭ್ಯ ಆಗುವ ಆಗಿದ್ದರೆ ನಾವು ಕಾಯಕ ಮಾಡುವುದನ್ನು ಬಿಟ್ಟು, ಆ ಧರ್ಮೀಯರೆಲ್ಲ ಪೂಜೆ ಪುನಸ್ಕಾರವನ್ನೆ ಮಾಡಬಾರದೇಕೆ ?

ಆದ್ದರಿಂದಲೆ ಶರಣರು ಅರ್ಚನೆ ಪೂಜನೆ ನೇಮವಲ್ಲ.ಧೂಪ ದೀಪಾರತಿ ನೇಮವಲ್ಲ.ಮಂತ್ರ ತಂತ್ರ ನೇಮವಲ್ಲ ಎಂದು ಹೇಳಿದರು. ಇನ್ನೊಬ್ಬರ ಮನಸ್ಸಿಗೆ ನೋವಾಗಬಾರದೆಂದು ಸತ್ಯವನ್ನು ಹೇಳಬಾರದೆ ? ರೋಗಿಯಾದವರಿಗೆ ಒಮ್ಮೊಮ್ಮೆ ಮಾತ್ರೆಗಳನ್ನು ಕೊಡಬೇಕಾಗುತ್ತದೆ. ಒಂದೊಂದು ಸಲವಂತು ಶಸ್ತ್ರ ಚಿಕಿತ್ಸೆ ಮಾಡಲೆಬೇಕಾಗುತ್ತದೆ. ಆಗ ಸ್ವಲ್ಪ ಮಟ್ಟಿನ ನೋವೂ ಆಗುತ್ತದೆ. ಹಾಗಂತ ಶಸ್ತ್ರ ಚಿಕಿತ್ಸೆ ಮಾಡದೆ ಇರಲಾಗುತ್ತದೆಯೆ ? ಈ ಕಾರಣಗಳಿಂದಲೆ ಬಸವಾದಿ ಶರಣರು ತಮ್ಮ ವಚನಗಳನ್ನು ಅಧರಕ್ಕೆ ಕಹಿ ಉದರಕ್ಕೆ ಸಿಹಿ ಎಂದು ಹೇಳಿದರು. ಭೂಮಿಯ ಸುತ್ತ ಚಂದ್ರ ಮತ್ತು ಸೂರ್ಯ ತಿರುಗುತ್ತಾನೆ ಎಂಬುದು ಬಹು ಧರ್ಮಗಳ ನಂಬಿಕೆ. ಈ ನಂಬಿಕೆಯನ್ನು ಪ್ರಶ್ನಿಸದೆ ಹೋಗಿದ್ದರೆ ಖಗೋಳ ಜ್ಞಾನದ ವಿಜ್ಞಾನ ನಮ್ಮ ಮಕ್ಕಳಿಗೆ ದಕ್ಕುತ್ತಿತ್ತೆ ? ಭೂಮಿ ಚಪ್ಪಟೆಯಾಗಿದೆಯೆಂದು ಗೆಲಿಲಿಯೋ ಹೇಳಿದಾಗ ಚರ್ಚನ ಪಾದ್ರಿಗಳೆಲ್ಲ ಗಹಗಹಿಸಿ ನಕ್ಕರು. ಗೆಲಿಲಿಯೋ ನನ್ನು ಗಲ್ಲಿಗೆ ಏರಿಸಿದರು. ಆದರೆ ಆ ಧರ್ಮದ ನಂಬಿಕೆಯನ್ನು ಪ್ರಶ್ನಿಸಿದ ಗೆಲಿಲಿಯೋ ಗೆದ್ದನಲ್ಲವೆ ?

ನೀನೊಲಿದರೆ ಕೊರಡು ಕೊನರುವುದಯ್ಯಾ ಎಂಬುದು ಬಸವಣ್ಣನವರು ಹೇಳಿದ ಸತ್ಯ ಮಾತು. ಇಲ್ಲಿ ನೀನು ಅಂದರೆ ಯಾರು ? ಅಗೋಚರ- ಅಪ್ರಮಾಣ- ಅಪ್ರತಿಮ ಲಿಂಗವಲ್ಲ. ನಮ್ಮೆಲ್ಲರೊಳಗೆ ಇರುವ ಅಂತಸಾಕ್ಷಿ, ಪ್ರಜ್ಞೆ. ಈ ಎರಡನ್ನು ಇಂಬಿಟ್ಟುಕೊಂಡು ಮಾಡಿದ ಎಲ್ಲಾ ಕೆಲಸಗಳು ಯಶಸ್ಸನ್ನು ಕಾಣುತ್ತವೆ. ಇದೆಲ್ಲ ಬಿಟ್ಟು ಗುಡಿ ಮಸೀದಿ ಚರ್ಚುಗಳನ್ನು ಅಲೆದು ಆಯಾ ಧರ್ಮದಲ್ಲಿರುವ ನಂಬಿಕೆಗಳೆಂಬ ಮೌಢ್ಯಗಳನ್ನು ಅನುಸರಿಸಿದರೆ ಪ್ರಗತಿ ಸಾಧ್ಯವೆ ? ಕಲ್ಲನ್ನೆ ದೇವರೆಂದು ಪೂಜಿಸುವುದಾದರೆ ನಾನು ದೊಡ್ಡ ಬೆಟ್ಟವನ್ನೆ ಪೂಜಿಸುವೆ ಎಂಬ ಸಂತ ಕಬೀರರ ವಾಣ ಮರೆಯಬಹುದೆ ? ಇಸ್ರೋ ವಿಜ್ಞಾನಿಗಳು ಚಂದ್ರಯಾನ ಕೈಗೊಂಡು ಬಹುದೊಡ್ಡ ಸಾಧನೆ ಮಾಡಿದ್ದಾರೆ. ಅವರನ್ನು ಇಡೀ ಪ್ರಪಂಚವೆ ಕೊಂಡಾಡಬೇಕು. ಆದರೆ ಆ ವಿಜ್ಞಾನಿಗಳಲ್ಲಿರುವ ಅವೈಚಾರಿಕ, ಅಜ್ಞಾನದ ಮನಸ್ಸನ್ನು ಖಂಡಿಸಬೇಡವೆ ? ಚಂದ್ರಯಾನ ಮೂರರ ಯಶಸ್ಸು ದೇವಸ್ಥಾನ ಪೂಜೆಯಿಂದಲೆ ಸಾಧ್ಯವಾಯಿತು ಎನ್ನುವುದಾದರೆ ! ಚಂದ್ರಯಾನ ಎರಡನ್ನು ಉಡಾವಣೆ ಮಾಡುವ ಮುಂಚೆ ಅದರ ಪ್ರತಿಕೃತಿಯನ್ನಿಟ್ಟು ಅದೆ ದೇವಸ್ಥಾನದಲ್ಲಿ ಪೂಜಿಸಿದರಲ್ಲ ! ಆದರೂ ಅದೇಕೆ ವಿಫಲವಾಯಿತು. ಚಂದ್ರಯಾನ ವಿಫಲ ಹಾಗೂ ಸಫಲತೆಗೆ ಕಾರಣ ಆ ಪೂಜೆಯಲ್ಲ. ವೈಜ್ಞಾನಿಕ ಚಿಂತನೆಯಲ್ಲಿಯ ಕೊರತೆ- ಮತ್ತು ದೂರ ದೃಷ್ಟಿ ಎಂದು ಹೇಳಬಹುದು.

ಮುಕ್ತಿಯ ಹೆಸರಿನ ಮೇಲೆ ಹಲವಾರು ಧರ್ಮಗಳು ಏನೇನೋ ನಂಬಿಕೆಗಳನ್ನು ಬೆಳೆಸಿವೆ. ಇದನ್ನೆಲ್ಲ ಕಂಡು ರೋಸಿ ಹೋದ ೧೭ ನೇ ಶತಮಾನದ ಸಂತೆಕೆಲ್ಲೂರಿನ ಸಂತ ಎಲ್ಲಿಯ ಭಕ್ತಿಯದೆಲ್ಲಿಯ ಮುಕ್ತಿಯದೋ ಈ ಸೂಳೆ ಮಕ್ಕಳಿಗೆ ಎಂದು ಕಟುವಾಗಿ ಎಚ್ಚರಿಸಿದ್ದಾನೆ. ಮುಕ್ತಿ ಎಂಬುದು ಸತ್ತ ಮೇಲೆ ಸಿಗುವ ಪ್ರಶಾಂತ ಮನಸ್ಥಿತಿಯಲ್ಲ. ಬದುಕಿದ್ದಾಗಲೆ ವಿಷಯ ವಾಸನೆಗಳಿಗೆ ದೂರ ಸರಿಯುವುದು. ಭಕ್ತಿಯ ಹೆಸರಿನ ಮೇಲೆ ನಡೆದಿರುವ ಅನಾಚಾರ ಖಂಡಿಸದಿದ್ದರೆ ನಮ್ಮ ಸಹೋದರಿಯರೆಲ್ಲ ಇಂದಿಗೂ ದೇವರಿಗೆ ಬೆತ್ತಲೆ ಸೇವೆ ಮಾಡಬೇಕಿತ್ತು. ದೇವರ ಹೆಸರಿನ ಮೇಲೆ ಅವರನ್ನು ಸೂಳೆಗಾರಿಕೆಗೆ ಬಿಡಬೇಕಿತ್ತು. ಸರಕಾರವೆ ನಿಷೇಧಿಸಿರುವ ಸಿಡಿ ಆಡುವುದನ್ನು ಮತ್ತೆ ಧರ್ಮದ ನಂಬಿಕೆಗಳ ಹೆಸರಿನ ಮೇಲೆ ಜಾರಿಗೆ ತರಬೇಕೆ ? ಮಠಾಧೀಶನೊಬ್ಬ ಮುಳ್ಳು ಬೇಲಿಯ ಮೇಲೆ ಮಲಗಿ ಉತ್ಸವ ಮಾಡಿಕೊಳ್ಳುವುದು ನಂಬಿಕೆ ಎಂದು ಪ್ರಶ್ನಿಸದಿದ್ದರೆ ಅದು ಮೌಢ್ಯವಾಗುತ್ತಿತ್ತು. ಮೌಢ್ಯ ಸುಲಿಗೆಗೆ ದಾರಿಯಾಗುತ್ತಿತ್ತು. ಕೆಲವು ಧರ್ಮಗಳಲ್ಲಿ ನಾದ ರಿದಮ್‌ಗೆ ಕುಣಿದು ಕುಪ್ಪಳಿಸುವ ಜನರು ಆ ಧರ್ಮದ ಮುಖಂಡ ಹಣೆಗೆ ಕೈ ಇಡುತ್ತಲೆ ಆ ಕುಪ್ಪಳಿಸುವೆ ನಿಲ್ಲುತ್ತದೆ. ಕಾಲಿಲ್ಲದವರಿಗೆ ಕಾಲು, ಕಣ್ಣಿಲ್ಲದವರಿಗೆ ಕಣ್ಣು ಕೊಡುವ ಸಾಮರ್ಥ್ಯವಿದ್ದರೆ ಆಸ್ಪತ್ರೆಗಳು ಏಕೆ ಬೇಕು ? ನಮ್ಮ ಮಕ್ಕಳನ್ನು ವೈದ್ಯಕೀಯ ವಿದ್ಯೆ ಕಲಿಸಬೇಕೇಕೆ ?

ಯಾವ ದುರುದ್ದೇಶವಿಲ್ಲದ ಟೀಕೆ ಟಿಪ್ಪಣೆಗಳು ಸಂವಿಧಾನವನ್ನು ಗೆಲ್ಲಿಸುತ್ತವೆ. ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುತ್ತವೆ. ಟೀಕೆ ಟಿಪ್ಪಣೆಗಳೆ ಪ್ರಜಾಪ್ರಭುತ್ವದ ಮೂಲ ಬೇರು. ಆರೋಗ್ಯಪೂರ್ಣ ಚರ್ಚೆಗಳು ಬೇಡ ಎಂದು ನಿರ್ಧರಿಸುವುದಾದರೆ ಸರಕಾರ ಕೂಡಲೆ ಶರಣರ ಚಿಂತನೆಗಳನ್ನು ಬ್ಯಾನ್ ಮಾಡಬೇಕು. ಸ್ವಾಮಿ ವಿವೇಕಾನಂದ, ಭಗತ್ ಸಿಂಗ್, ಡಾ.ಅಂಬೇಡ್ಕರ್,ಪೆರಿಯಾರ, ಜ್ಯೋತಿಬಾ ಪುಲೆ, ನಾರಾಯಣ ಗುರು ಮುಂತಾದವರ ವಿಚಾರಗಳಿಗೆ ಎಳ್ಳು ನೀರು ಬಿಡಬೇಕಾಗುತ್ತದೆ.

‘’ಇದು ಶಾಸ್ತ್ರದಲ್ಲಿ ಹೇಳಿದೆ. ಆದುದರಿಂದ ಇದನ್ನು ನಂಬಬೇಕು ಎಂಬ ಮೂಢನಂಬಿಕೆಯಿಂದ ಪಾರಾಗಬೇಕು. ಎಲ್ಲವನ್ನೂ ಎಂದರೆ, ವಿಜ್ಞಾನ,ಧರ್ಮ, ತತ್ವ ಇವನ್ನೆಲ್ಲ ಯಾವುದೋ ಒಂದು ಹೊಸ ಶಾಸ್ತ್ರ ಹೇಳುತ್ತದೆ ಎಂದು ಹೇಳಿ ಅದಕ್ಕೆ ಹೊಂದಿಸಿಕೊಂಡು ಹೋಗುವಂತೆ ಮಾಡಲೆತ್ನಿಸುವುದು ಒಂದು ಮಹಾಪರಾಧ. ಗ್ರಂಥ ಆರಾಧನೆಯೆ ವಿಗ್ರಹಾರಾಧನೆಯಲ್ಲೆಲ್ಲ ಭಯಂಕರವಾದುದು.ಶಾಸ್ತ್ರ ನಿಯಮಗಳೆಂಬ ಕಹಳೆಯ ಧ್ವನಿಯನ್ನು ಕೇಳಿದೊಡನೆಯೇ ಹಳೆಯ ಮೂಢ ನಂಬಿಕೆ ಆಚಾರಗಳು ನಮ್ಮನ್ನು ಮೆಟ್ಟಿಕೊಳ್ಳುವವು. ನಮಗೆ ಅದು ಗೊತ್ತಾಗುವುದಕ್ಕೆ ಮುಂಚೆಯೇ ಸ್ವಾತಂತ್ರ್ಯ ವೆಂಬ ನಮ್ಮ ನೈಜ ಸ್ವಭಾವವನ್ನು ಮರೆತು ಹಳ್ಳಿಯ ಆಚಾರಕ್ಕೆ ಮತ್ತು ಮೂಢ ನಂಬಿಕೆಗೆ ಒಳಗಾಗುವೆವು. ಧರ್ಮದ ಪ್ರತಿಯೊಂದು ಮೂಢನಂಬಿಕೆಯನ್ನೂ ನೀವು ಒಪ್ಪಬೇಕು ಎಂದು ಹೇಳುವುದು ಮಾನವನಿಗೆ ಅವಮಾನ ಮಾಡಿದಂತೆ. ಪ್ರತಿಯೊಂದನ್ನು ನಂಬಬೇಕೆಂದು ಹೇಳುವವನೂ ಅಧೋಗತಿ ಇಳಿಯುವನು’’ ಎಂಬ ಸ್ವಾಮಿ ವಿವೇಕಾನಂದ ಮಾತುಗಳನ್ನು ಕಣ್ಣ ಮುಂದೆ ಇಟ್ಟುಕೊಂಡು ಮುನ್ನಡೆಯಬೇಕಿದೆ. ಅಜ್ಞಾನವನ್ನು ಪ್ರಶ್ನಿಸುತ್ತ ವಿಜ್ಞಾನದೆಡೆಗೆ ಮುಖ ಮಾಡಲೇಬೇಕಿದೆ.

ವಿಶ್ವಾರಾಧ್ಯ ಸತ್ಯಂಪೇಟೆ

About Mallikarjun

Check Also

screenshot 2025 10 15 21 38 17 03 6012fa4d4ddec268fc5c7112cbb265e7.jpg

ಸಂಘಟಕಿ ಜ್ಯೋತಿ ಗೊಂಡಬಾಳ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ

Organizer Jyoti Gondbal is the District Women's Congress President. ಕೊಪ್ಪಳ: ಜಿಲ್ಲೆಯ ಆಡಳಿತರೂಢ ಕಾಂಗ್ರೆಸ್ ಪಕ್ಷದ ಮಹಿಳಾ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.