Direct Cash Transfer of Annabhagya Yojana; Distribution of food grains: Mallikarjuna

ಕೊಪ್ಪಳ ಜುಲೈ 13 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ ಪಡಿತರ ಚೀಟಿದಾರರಿಗೆ ಜುಲೈ-2023ರ ಮಾಹೆಗೆ ಆಹಾರ ಧಾನ್ಯಗಳ ಹಂಚಿಕೆ ಮಾಡಲಾಗಿದೆ ಮತ್ತು ಹೆಚ್ಚುವರಿ 05 ಕೆಜಿ ಆಹಾರ ಧಾನ್ಯದ ಬದಲಾಗಿ ಪ್ರತಿ ಕೆಜಿಗೆ ರೂ. 34 ರಂತೆ ಹಣ ವರ್ಗಾವಣೆ ಮಾಡಲಾಗಿದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರಾದ ಮಲ್ಲಿಕಾರ್ಜುನ ಅವರು ತಿಳಿಸಿದ್ದಾರೆ.
ಪಡಿತರ ಚೀಟಿಯಲ್ಲಿನ ಕುಟುಂಬಂದ ಮುಖ್ಯಸ್ಥರ ಖಾತೆಗೆ ಡಿಬಿಟಿ ಮೂಲಕ ಹಣ ವರ್ಗಾಯಿಸಲು ಸರ್ಕಾರವು ಆದೇಶಿಸಿದಂತೆ ಜುಲೈ 2023ರ ಮಾಹೆಯಲ್ಲಿ ಕೊಪ್ಪಳ ಜಿಲ್ಲೆಯ 9,83,713 ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ ಪಡಿತರ ಚೀಟಿಗಳ ಫಲಾನುಭವಿಗಳ 2,61,996 (ಕುಟುಂಬದ ಮುಖ್ಯಸ್ಥರ) ಖಾತೆಗಳಿಗೆ 16,05,65,680 ನೇರ ನಗದು ವರ್ಗಾವಣೆ ಮಾಡಲಾಗಿದೆ. ಈ ಬಗ್ಗೆ ಆಹಾರ ಪೋರ್ಟಲ್ http://ahara.kar.nic.in/statusofdbt.aspx ರಲ್ಲಿ ಪರಿಶೀಲಿಸಿಕೊಳ್ಳುವ ಅವಕಾಶಗಳು ಲಭ್ಯವಿರುತ್ತವೆ. ಆದಾಗ್ಯೂ ಬ್ಯಾಂಕ್ ಖಾತೆ ಇನ್‌ಆಕ್ಟಿವ್ ಆಗಿದ್ದಲ್ಲಿ ಆಧಾರ್ ಕಾರ್ಡ್ ಮತ್ತು ಮೊಬೈಲ್ ಸಂಖ್ಯೆಯೊಂದಿಗೆ ಸಂಬಂಧಿಸಿದ ಬ್ಯಾಂಕ್‌ಗೆ ಹೋಗಿ ಇ-ಕೆವೈಸಿ ಮಾಡಿಸಿ ಸರಿಪಡಿಸಿಕೊಳ್ಳಬಹುದು. ಬ್ಯಾಂಕ್ ಖಾತೆ ಹೊಂದಿರದಿದ್ದಲ್ಲಿ ರಾಷ್ಟೀಕೃತ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್‌ನಲ್ಲಿ ಫಲಾನುಭವಿ ಹೊಸದಾಗಿ ಬ್ಯಾಂಕ್ ಖಾತೆ ತೆರೆಯಲು ತಿಳಿಸಿದೆ. ಫಲಾನುಭವಿಗಳು ತಮ್ಮ ನಿಖರವಾದ ಆಧಾರ್ ಸಂಖ್ಯೆ ತೆಗೆದುಕೊಂಡು ಹೋಗಿ ಬ್ಯಾಂಕ್ ಖಾತೆಗೆ ಹೊಂದಾಣಿಕೆ ಮಾಡಿಕೊಳ್ಳಬೇಕು. ಕಾರ್ಡದಾರರಿಗೆ ಈ ಬಗ್ಗೆ ಅನುಮಾನಗಳಿದ್ದಲ್ಲಿ, ಸಂಬಂಧಿಸಿದ ನ್ಯಾಯಬೆಲೆ ಅಂಗಡಿ ಅಥವಾ ತಹಶೀಲ್ ಕಚೇರಿಯ ಆಹಾರ ಶಾಖೆಯಲ್ಲಿ ವಿಚಾರಿಸುವಂತೆ ತಿಳಿಸಿದೆ.
ರಾಜ್ಯದಲ್ಲಿರುವ ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗೆ ರಾಷ್ಠೀಯ ಆಹಾರ ಭದ್ರತಾ ಕಾಯಿದೆಯನ್ವಯ ವಿತರಿಸಲಾಗುವ 05 ಕೆ ಜಿ ಆಹಾರ ಧಾನ್ಯದೊಂದಿಗೆ, ರಾಜ್ಯ ಸರ್ಕಾರದ ವತಿಯಿಂದ ಹೆಚ್ಚುವರಿಯಾಗಿ 05 ಕೆ.ಜಿ ಆಹಾರ ಧಾನ್ಯವನ್ನು ಸೇರಿಸಿ ಪ್ರತಿ ತಿಂಗಳು ಪ್ರತಿ ಫಲಾನುಭವಿಗೆ ತಲಾ 10 ಕೆಜಿ ಆಹಾರಧಾನ್ಯ ವಿತರಿಸಲು ನಿರ್ದರಿಸಿದ್ದು, ಈ ಉದ್ದೇಶಕ್ಕಾಗಿ ಅಗತ್ಯವಿರುವ ಆಹಾರ ಧಾನ್ಯವನ್ನು ಮುಕ್ತ ಮಾರುಕಟ್ಟೆಯಿಂದ ಖರೀದಿಸಲು ಮುಕ್ತ ಟೆಂಡರ್ ಕರೆಯಲು ತೀರ್ಮಾನಿಸಿದ್ದು ಈ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಬಿಡ್‌ದಾದಾರರು ಆಹಾರ ಧಾನ್ಯವನ್ನು ಸರಬರಾಜು ಮಾಡುವವವರೆಗೆ, ರಾಜ್ಯದಲ್ಲಿರುವ ಅಂತ್ಯೋದಯ ಅನ್ನ ಯೋಜನೆ ಹಾಗೂ ಆದ್ಯತಾ ಪಡಿತರ ಚೀಟಿ ಫಲಾನುಭವಿಗಳಿಗೆ ಪ್ರತಿ ತಿಂಗಳು 05 ಕೆ ಜಿ ಆಹಾರ ಧಾನ್ಯದ ಬದಲಾಗಿ ಪ್ರತಿ ಕೆ.ಜಿ ಗೆ ರೂ. 34 ರಂತೆ ಪಡಿತರ ಚೀಟಿಯಲ್ಲಿನ ಕುಟುಂಬಂದ ಮುಖ್ಯಸ್ಥರ ಖಾತೆಗೆ ಡಿ.ಬಿ.ಟಿ ಮೂಲಕ ಹಣವನ್ನು ವರ್ಗಾಯಿಸಲು ಸರ್ಕಾರವು ಆದೇಶಿಸಿರುತ್ತದೆ. ಅದರಂತೆ ಕೊಪ್ಪಳ ಜಿಲ್ಲೆಯಲ್ಲಿರುವ ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ ಪಡಿತರ ಚೀಟಿಗಳ ಫಲಾನುಭವಿಗೆ ರಾಷ್ಠೀಯ ಆಹಾರ ಭದ್ರತಾ ಕಾಯಿದೆಯನ್ವಯ ಜುಲೈ 2023 ರ ಮಾಹೆಯಲ್ಲಿ ಹಂಚಿಕೆ ಮಾಡಲಾಗಿದೆ.
ಅಂತ್ಯೋದಯ ಅನ್ನ ಯೋಜನೆ ಪಡಿತರ ಚೀಟಿಗೆ 21 ಕೆಜಿ ಅಕ್ಕಿ ಮತ್ತು 14 ಕೆಜಿ ಜೋಳ ಸೇರಿ ಒಟ್ಟು 35 ಕೆ.ಜಿ., ಆದ್ಯತಾ ಪಡಿತರ ಚೀಟಿಯ ಪ್ರತಿ ಫಲಾನುಭವಿಗೆ 03 ಕೆಜಿ ಅಕ್ಕಿ ಮತ್ತು 02 ಕೆಜಿ ಜೋಳ ಸೇರಿ ಒಟ್ಟು 05 ಕೆಜಿ ಆಹಾರ ಧಾನ್ಯಗಳ ಹಂಚಿಕೆ ಮಾಡಲಾಗಿದೆ ಎಂದು ಆಹಾರ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Kalyanasiri Kannada News Live 24×7 | News Karnataka
