
Dr. Sharanabasappa Kolkar: An Explorer of Local History and an Accomplished Researcher

ಸ್ಥಳೀಯ ಇತಿಹಾಸದ ಅನ್ವೇಷಕ, ಸಂಶೋಧನೆಯ ಸಾಧಕ ಡಾ. ಶರಣಬಸಪ್ಪ ಕೋಲ್ಕಾರ
ಬದುಕು–ಬರಹ–ಸಂಶೋಧನೆಯ ಮೂಲಕ ಕೊಪ್ಪಳ ಜಿಲ್ಲೆಯ ಐತಿಹಾಸಿಕ ಪರಂಪರೆಗೆ ಹೊಸ ಬೆಳಕು ನೀಡಿದ ವಿದ್ವಾಂಸ
ಡಾ. ರವಿ ಎನ್. ಚವ್ಹಾಣ ಪ್ರಾಚಾರ್ಯರು, ಎಚ್.ಆರ್. ಸರೋಜಮ್ಮ ಬಾಲಕಿಯರ ಪದವಿಪೂರ್ವ ಕಾಲೇಜು, ಗಂಗಾವತಿ
ಕನ್ನಡ ನಾಡಿನ ಇತಿಹಾಸ, ಸಂಸ್ಕೃತಿ, ಸಾಹಿತ್ಯ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯ ಸುಲಭದ್ದಲ್ಲ. ಅದರಲ್ಲೂ ತನ್ನ ನೆಲದ ಇತಿಹಾಸವನ್ನು ಹುಡುಕಿ, ಶೋಧಿಸಿ, ದಾಖಲೀಕರಣ ಮಾಡುವ ಮೂಲಕ ಅಜ್ಞಾತ ಸಂಗತಿಗಳನ್ನು ಬೆಳಕಿಗೆ ತರುವುದು ಅಪಾರ ಅಧ್ಯಯನ, ತಾಳ್ಮೆ ಮತ್ತು ಬದ್ಧತೆಯನ್ನು ಬೇಡುವ ಕೆಲಸ. ಇಂತಹ ಅಪರೂಪದ ಸಂಶೋಧನಾ ಕಾರ್ಯದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಕೊಪ್ಪಳ ಜಿಲ್ಲೆಯ ಐತಿಹಾಸಿಕ ಹೆಗ್ಗುರುತುಗಳನ್ನು ನಾಡಿನ ಗಮನಕ್ಕೆ ತಂದಿರುವವರು ಡಾ. ಶರಣಬಸಪ್ಪ ಕೋಲ್ಕಾರ.
ಕೊಪ್ಪಳ ಜಿಲ್ಲಾ 15ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವುದು ಅವರ ದೀರ್ಘಕಾಲದ ಸಾಹಿತ್ಯ, ಶೈಕ್ಷಣಿಕ ಹಾಗೂ ಸಂಶೋಧನಾ ಸೇವೆಗೆ ಸಂದ ಮಹತ್ವದ ಗೌರವವಾಗಿದೆ. ಒಬ್ಬ ಇತಿಹಾಸ ಸಂಶೋಧಕನಾಗಿ, ಅಧ್ಯಾಪಕನಾಗಿ, ಲೇಖಕನಾಗಿ, ಸಂಪಾದಕನಾಗಿ ಹಾಗೂ ಪರಂಪರೆಯ ಸಂರಕ್ಷಕನಾಗಿ ಅವರು ನಡೆದುಬಂದ ಹಾದಿ ಇಂದಿನ ಯುವ ಸಂಶೋಧಕರಿಗೆ ಪ್ರೇರಣಾದಾಯಕವಾಗಿದೆ.
ಸರಳ ಕುಟುಂಬದಲ್ಲಿ ಜನನ, ಜ್ಞಾನದ ಹಾದಿಯಲ್ಲಿ ಪಯಣ
ಡಾ. ಶರಣಬಸಪ್ಪ ಕೋಲ್ಕಾರ ಅವರು 1967ರ ಜೂನ್ 1ರಂದು ಕಾರಟಗಿ ತಾಲೂಕಿನ ಬೂದಗುಂಪಾ ಗ್ರಾಮದಲ್ಲಿ ಪಂಪಾಪತೆಪ್ಪ ಮತ್ತು ಲಿಂಗಮ್ಮ ದಂಪತಿಯ ಎಂಟು ಮಕ್ಕಳಲ್ಲಿ ಕಿರಿಯವರಾಗಿ ಜನಿಸಿದರು. ಗ್ರಾಮೀಣ ಪರಿಸರದಲ್ಲಿ ಬೆಳೆದ ಅವರು ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮದಲ್ಲಿಯೇ, ಪ್ರೌಢಶಿಕ್ಷಣವನ್ನು ಗದಗಿನ ಮಾಡೆಲ್ ಹೈಸ್ಕೂಲ್ನಲ್ಲಿ ಹಾಗೂ ಪದವಿಪೂರ್ವ ಶಿಕ್ಷಣವನ್ನು ನರೇಗಲ್ನ ಅನ್ನದಾನೇಶ್ವರ ಕಾಲೇಜಿನಲ್ಲಿ ಪೂರ್ಣಗೊಳಿಸಿದರು.
1989ರಲ್ಲಿ ಧಾರವಾಡದ ಕಿಟೆಲ್ ಮಹಾವಿದ್ಯಾಲಯದಿಂದ ಬಿ.ಎ. ಪದವಿ ಪಡೆದ ಅವರು, 1991ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಚೀನ ಭಾರತೀಯ ಇತಿಹಾಸ ಮತ್ತು ಶಾಸನಶಾಸ್ತ್ರ ವಿಭಾಗದಿಂದ ಎಂ.ಎ. ಪದವಿ ಗಳಿಸಿದರು. ಇದೇ ವಿಶ್ವವಿದ್ಯಾಲಯದ ಕನ್ನಡ ಸಂಶೋಧನಾ ಸಂಸ್ಥೆಯಲ್ಲಿ ಶಾಸನಶಾಸ್ತ್ರ ಅಧ್ಯಯನ ಮಾಡಿ 1993ರಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪಡೆದರು.
ಸಂಶೋಧನಾ ಆಸಕ್ತಿಯನ್ನು ಮುಂದುವರಿಸಿದ ಅವರು, ಡಾ. ಅ. ಸುಂದರ ಅವರ ಮಾರ್ಗದರ್ಶನದಲ್ಲಿ ‘ಕನಕಗಿರಿ ಪ್ರದೇಶದ ಸ್ಮಾರಕಗಳು ಮತ್ತು ಮೂರ್ತಿಶಿಲ್ಪಗಳು’ ಎಂಬ ವಿಷಯದ ಕುರಿತು ಅಧ್ಯಯನ ನಡೆಸಿ 1994ರಲ್ಲಿ ಎಂ.ಫಿಲ್. ಪದವಿ ಪಡೆದರು. ನಂತರ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದಲ್ಲಿ ಡಾ. ಸಿ. ಮಹಾದೇವ ಅವರ ಮಾರ್ಗದರ್ಶನದಲ್ಲಿ ‘ಕೊಪ್ಪಳ-ಹಂಪಿ ಪ್ರದೇಶದ ಪ್ರಾಗೈತಿಹಾಸ ಕಾಲದ ಕಲೆ’ ಎಂಬ ವಿಷಯದ ಮೇಲೆ ಸಂಶೋಧನಾ ಮಹಾಪ್ರಬಂಧ ಮಂಡಿಸಿ 2002ರಲ್ಲಿ ಪಿಎಚ್.ಡಿ. ಪದವಿ ಪಡೆದರು.
ಅಧ್ಯಾಪನ ವೃತ್ತಿಯೊಂದಿಗೆ ಸಂಶೋಧನೆಯ ನಂಟು
1994ರಲ್ಲಿ ಗಂಗಾವತಿಯ ಶ್ರೀ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಕಲ್ಮಠ ಶ್ರೀ ಚನ್ನಬಸವಸ್ವಾಮಿ ಮಹಿಳಾ ಮಹಾವಿದ್ಯಾಲಯದಲ್ಲಿ ಇತಿಹಾಸ ಉಪನ್ಯಾಸಕರಾಗಿ ವೃತ್ತಿ ಬದುಕು ಆರಂಭಿಸಿದರು. 2002ರಲ್ಲಿ ಇದೇ ಮಹಾವಿದ್ಯಾಲಯದ ಪ್ರಾಚಾರ್ಯರಾಗಿ ನೇಮಕಗೊಂಡು ಇಂದಿಗೂ ಶೈಕ್ಷಣಿಕ ಸೇವೆಯನ್ನು ಮುಂದುವರಿಸಿದ್ದಾರೆ.
ಅಧ್ಯಾಪನವನ್ನು ಕೇವಲ ಉದ್ಯೋಗವೆಂದು ಪರಿಗಣಿಸದೆ, ವಿದ್ಯಾರ್ಥಿಗಳಲ್ಲಿ ಇತಿಹಾಸ ಪ್ರಜ್ಞೆ, ಅಧ್ಯಯನಶೀಲತೆ ಮತ್ತು ಸಂಶೋಧನಾ ಮನೋಭಾವ ಬೆಳೆಸುವ ಕಾರ್ಯದಲ್ಲಿಯೂ ತೊಡಗಿಸಿಕೊಂಡಿದ್ದಾರೆ.
ಶೈಕ್ಷಣಿಕ ಮತ್ತು ಆಡಳಿತಾತ್ಮಕ ಕ್ಷೇತ್ರದಲ್ಲಿ ಮಹತ್ವದ ಸೇವೆ
ಡಾ. ಕೋಲ್ಕಾರ ಅವರು ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವಿವಿಧ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಸಮಿತಿಗಳಲ್ಲಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ.
ಇತಿಹಾಸ ಅಧ್ಯಯನ ಮಂಡಳಿ, ಅಕಾಡೆಮಿಕ್ ಕೌನ್ಸಿಲ್, ಸಿಂಡಿಕೇಟ್, ಕಾಲೇಜುಗಳ ಸ್ಥಾನಿಕ ವಿಚಾರಣಾ ಸಮಿತಿ, ಪ್ರಕಟಣಾ ಸಮಿತಿ, ವೇತನ ಪರಿಷ್ಕರಣ ಸಮಿತಿ, ಕ್ರೀಡಾ ಸಲಹಾ ಸಮಿತಿ ಸೇರಿದಂತೆ ಹಲವು ಸಮಿತಿಗಳಲ್ಲಿ ಜವಾಬ್ದಾರಿಯುತ ಸೇವೆ ಸಲ್ಲಿಸಿದ್ದಾರೆ.
ಕರ್ನಾಟಕ ಇತಿಹಾಸ ಅಕಾಡೆಮಿ (ರಿ), ಬೆಂಗಳೂರಿನ ಕಾರ್ಯಕಾರಿ ಸಮಿತಿಯ ಆಹ್ವಾನಿತ ಸದಸ್ಯರಾಗಿ ಮೂರು ಅವಧಿಗಳಲ್ಲಿ ಕಾರ್ಯನಿರ್ವಹಿಸಿರುವುದು ಅವರ ಶೈಕ್ಷಣಿಕ ಅನುಭವಕ್ಕೆ ಸಾಕ್ಷಿಯಾಗಿದೆ.
ಕರ್ನಾಟಕ ಸರ್ಕಾರದ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ 2022ರಲ್ಲಿ ಅಂಜನಾದ್ರಿ ಬೆಟ್ಟ ಅಧ್ಯಯನ ಸಲಹಾ ಸಮಿತಿಯ ಸದಸ್ಯರನ್ನಾಗಿ ನೇಮಕ ಮಾಡಿತು. ಕೊಪ್ಪಳ ಜಿಲ್ಲಾಡಳಿತವು 2014ರಲ್ಲಿ ಜಿಲ್ಲಾ ಪ್ರವಾಸೋದ್ಯಮ ಸಮಿತಿಯ ಸಲಹೆಗಾರರನ್ನಾಗಿ ನೇಮಕ ಮಾಡಿತ್ತು.
ಆನೆಗುಂದಿ ಉತ್ಸವದ ಸಂದರ್ಭದಲ್ಲಿ ಆನೆಗೊಂದಿಯ ಇತಿಹಾಸ ಮತ್ತು ಪರಂಪರೆ ವಿಚಾರ ಸಂಕಿರಣ ಹಾಗೂ ಕನಕಗಿರಿ ಉತ್ಸವದ ಸಂದರ್ಭದಲ್ಲಿ ಕನಕಗಿರಿಯ ಇತಿಹಾಸ ಮತ್ತು ಕಲೆ ವಿಚಾರ ಸಂಕಿರಣಗಳ ಸಂಚಾಲಕರಾಗಿ ಕಾರ್ಯನಿರ್ವಹಿಸಿದ್ದಾರೆ. 2024ರಿಂದ ಕರ್ನಾಟಕ ಸರ್ವೋದಯ ಮಂಡಳಿಯ ಕೊಪ್ಪಳ ಜಿಲ್ಲಾ ಘಟಕದ ಸಂಚಾಲಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಅವರ ಸಾಹಿತ್ಯಿಕ ಮತ್ತು ಶೈಕ್ಷಣಿಕ ಕೊಡುಗೆಯನ್ನು ಪರಿಗಣಿಸಿ ಕರ್ನಾಟಕ ಸರ್ಕಾರವು 2024-25ರಿಂದ 2026-27ರ ಅವಧಿಗೆ ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರನ್ನಾಗಿ ನೇಮಕ ಮಾಡಿರುವುದು ಗಮನಾರ್ಹ ಸಾಧನೆಯಾಗಿದೆ.
ಸ್ಥಳೀಯ ಇತಿಹಾಸದ ಅನ್ವೇಷಣೆಯಲ್ಲಿ ಅಪೂರ್ವ ಸಾಧನೆ
ಡಾ. ಶರಣಬಸಪ್ಪ ಕೋಲ್ಕಾರ ಅವರ ಸಂಶೋಧನಾ ಬದುಕಿನ ಪ್ರಮುಖ ವೈಶಿಷ್ಟ್ಯವೆಂದರೆ ತಮ್ಮ ತವರು ನೆಲದ ಇತಿಹಾಸವನ್ನು ಜಗತ್ತಿಗೆ ಪರಿಚಯಿಸುವ ಹಂಬಲ.
ಕೊಪ್ಪಳ-ಹಂಪಿ ಪ್ರದೇಶದ ಪ್ರಾಗೈತಿಹಾಸಿಕ ನೆಲೆಗಳನ್ನು ಶೋಧಿಸುವ ಮೂಲಕ ಸುಮಾರು ನೂರುಕ್ಕೂ ಅಧಿಕ ಪ್ರಾಚೀನ ವಸತಿ ನೆಲೆಗಳು ಹಾಗೂ ಆದಿಮಾನವನ ಶಿಲಾಚಿತ್ರಗಳಿರುವ ಗುಹೆಗಳನ್ನು ಗುರುತಿಸಿದ್ದಾರೆ. ಕನಕಗಿರಿ, ಆನೆಗೊಂದಿ ಮತ್ತು ಯಲಬುರ್ಗಿ ತಾಲೂಕುಗಳಲ್ಲಿನ ಅನೇಕ ಸ್ಮಾರಕಗಳು, ದೇವಾಲಯಗಳು, ಮೂರ್ತಿಶಿಲ್ಪಗಳು ಹಾಗೂ ಐತಿಹಾಸಿಕ ಅವಶೇಷಗಳ ಕುರಿತು ಸುದೀರ್ಘ ಅಧ್ಯಯನ ನಡೆಸಿದ್ದಾರೆ.
ಇವರ ಸಂಶೋಧನೆಯಿಂದ ಈ ಭಾಗದ ಇತಿಹಾಸದಲ್ಲಿ ಹೆಚ್ಚು ಪರಿಚಿತವಾಗಿರದ ಕನಕಗಿರಿ ಪಾಳೆಯಗಾರರು, ಹುಲಿಹೈದರ ಸಂಸ್ಥಾನ, ಆನೆಗೊಂದಿ ಸಂಸ್ಥಾನ, ಕೆಳವಡಿ ಕದಂಬರು, ವಿಪ್ರನಾರಾಯಣದ ನೊಳಂಬ ಪಲ್ಲವರು ಹಾಗೂ ಯಲಬುರ್ಗಿಯ ಅಮರ ನಾಯಕರ ಇತಿಹಾಸದ ಹಲವು ಸಂಗತಿಗಳು ಬೆಳಕಿಗೆ ಬಂದಿವೆ.
ಆಂಜನೇಯನ ಜನ್ಮಸ್ಥಳದ ಕುರಿತು ಚರ್ಚೆ ಮತ್ತು ವಿವಾದಗಳು ಉಂಟಾದ ಸಂದರ್ಭದಲ್ಲಿ ಕೊಪ್ಪಳ ಜಿಲ್ಲೆಯ ಆನೆಗೊಂದಿಯ ಅಂಜನಾದ್ರಿ ಬೆಟ್ಟದ ಐತಿಹಾಸಿಕ ಮಹತ್ವವನ್ನು ಪ್ರತಿಪಾದಿಸುವ ದಾಖಲೆಗಳನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಅದೇ ರೀತಿ, ಆನೆಗೊಂದಿಯಲ್ಲಿ ಬೆಂಗಳೂರು ಸ್ಥಾಪಕ ಕೆಂಪೇಗೌಡರನ್ನು ಬಂಧಿಸಿಟ್ಟಿದ್ದರೆನ್ನಲಾದ ಸೆರೆಮನೆಯನ್ನು ಪತ್ತೆಹಚ್ಚಿರುವುದು ಅವರ ಸಂಶೋಧನಾ ಕಾರ್ಯದ ಮತ್ತೊಂದು ವಿಶೇಷವಾಗಿದೆ.
ವಿಶೇಷವಾಗಿ ಹಿರೆಬೆಣಕಲ್ನ ಪ್ರಾಗೈತಿಹಾಸಿಕ ಸ್ಮಾರಕಗಳು ಮತ್ತು ಶಿಲಾಚಿತ್ರಗಳ ಕುರಿತು ನಿರಂತರ ಅಧ್ಯಯನ ನಡೆಸಿ, ಆ ಮಹತ್ವದ ಪಾರಂಪರಿಕ ತಾಣದ ಪರಿಚಯ ಹಾಗೂ ಪ್ರಚಾರಕ್ಕಾಗಿ ಶ್ರಮಿಸಿದ್ದಾರೆ.
ಸಂಶೋಧಕರನ್ನು ರೂಪಿಸಿದ ಮಾರ್ಗದರ್ಶಕ
ಸಂಶೋಧನೆಯ ಮೂಲಕ ತಾವು ಮಾತ್ರ ಉನ್ನತ ಪದವಿ ಗಳಿಸುವುದಕ್ಕೆ ಸೀಮಿತವಾಗದೆ, ಇತರ ಸಂಶೋಧನಾ ವಿದ್ಯಾರ್ಥಿಗಳಿಗೂ ಮಾರ್ಗದರ್ಶನ ನೀಡಿದ್ದಾರೆ.
ಆಂಧ್ರಪ್ರದೇಶದ ಕುಪ್ಪಂನ ದ್ರಾವಿಡಿಯನ್ ವಿಶ್ವವಿದ್ಯಾಲಯದಲ್ಲಿ ಇವರ ಮಾರ್ಗದರ್ಶನದಲ್ಲಿ ಮೂವರು ವಿದ್ಯಾರ್ಥಿಗಳು ಪಿಎಚ್.ಡಿ. ಪದವಿ ಪಡೆದಿದ್ದಾರೆ. ತಮಿಳುನಾಡಿನ ಕರೈಕುಡಿಯ ಅಳಗಪ್ಪ ವಿಶ್ವವಿದ್ಯಾಲಯದಲ್ಲಿ ಒಬ್ಬರು ಹಾಗೂ ಸೇಲಂನ ವಿನಾಯಕ ಮಿಷನ್ಸ್ ವಿಶ್ವವಿದ್ಯಾಲಯದಲ್ಲಿ ಮತ್ತೊಬ್ಬರು ಎಂ.ಫಿಲ್. ಪದವಿ ಪಡೆದಿದ್ದಾರೆ.
ಈ ಮೂಲಕ ಸಂಶೋಧನಾ ಕ್ಷೇತ್ರಕ್ಕೆ ಹೊಸ ಪ್ರತಿಭೆಗಳನ್ನು ಪರಿಚಯಿಸುವ ಕಾರ್ಯದಲ್ಲಿಯೂ ತಮ್ಮ ಕೊಡುಗೆ ನೀಡಿದ್ದಾರೆ.
ಹದಿನಾಲ್ಕು ಸ್ವತಂತ್ರ ಕೃತಿಗಳ ಮೂಲಕ ಇತಿಹಾಸದ ದಾಖಲೀಕರಣ
ಡಾ. ಕೋಲ್ಕಾರ ಅವರು ಇಲ್ಲಿಯವರೆಗೆ 14 ಸ್ವತಂತ್ರ ಕೃತಿಗಳನ್ನು ಪ್ರಕಟಿಸಿದ್ದಾರೆ. ಅವುಗಳಲ್ಲಿ ‘ಕೊಪ್ಪಳ ಜಿಲ್ಲೆಯ ಪ್ರಾಗೈತಿಹಾಸ ಕಾಲದ ಕಲೆ’ (2007), ‘ಆನೆಗುಂದಿ’ (2008), ‘ಹಿರೇಜಂತಕಲ್ ಇತಿಹಾಸ-ವಾಸ್ತುಶಿಲ್ಪಕಲೆ’ (2009), ‘ಗಂಗಾವತಿ ತಾಲೂಕು ದರ್ಶನ ಮತ್ತು ಶಿಲಾಯುಗದ ಗವಿಚಿತ್ರಗಳು’ (2010), ‘ವಿಜಯನಗರ ಪರಿಸರ: ಚರಿತ್ರೆ, ಕಲೆ ಮತ್ತು ಸಂಸ್ಕೃತಿ’ (2012), ‘ವಿಜಯನಗರ ಮಾತೃಸ್ಥಾನ ಆನೆಗೊಂದಿ’ (2013), ‘ಪ್ರಾಕ್ಚಾರಿತ್ರಿಕ ಶಿಲಾ ಚಿತ್ರಕಲೆ’ (2015), ‘ಭವ್ಯ ಪರಂಪರೆಯ ತಾಣ ಆನೆಗೊಂದಿ’ (2020), ‘ಕೊಪ್ಪಳ-ಹಂಪಿ ಪ್ರದೇಶ: ಚರಿತ್ರೆ ಮತ್ತು ಪುರಾತತ್ವ’ (2021), ‘ಗಂಗಾವತಿ ತಾಲೂಕು ಗ್ಯಾಸೆಟಿಯರ್’, ‘ಯಲಬುರ್ಗಾ ತಾಲೂಕು ಗ್ಯಾಸೆಟಿಯರ್’ (2022), ‘ಕಲ್ಯಾಣ ಕರ್ನಾಟಕ: ಪ್ರಾಗೈತಿಹಾಸ ಮತ್ತು ಆದಿಮ ಸಂಸ್ಕೃತಿ’ (2024), ‘ಕೃಷ್ಣದೇವರಾಯ ಸಮಾಧಿ ಹಾಗೂ ಕೆಂಪೇಗೌಡ ಬಂಧನದಲ್ಲಿದ್ದ ಸೆರೆಮನೆ’ (2025) ಪ್ರಮುಖವಾಗಿವೆ.
ಇದಲ್ಲದೆ ದಾಂಪತ್ಯ ಸಂಪದ, ಕಾಯಕ ದೀಪ್ತಿ, ಕಾವ್ಯಗಂಗಾ, ಗುಂಡೂರ ಸಿರಿ ಮತ್ತು ವನದುರ್ಗ ದಳಪತಿ ಸೇರಿದಂತೆ ಹಲವು ಕೃತಿಗಳನ್ನು ಸಂಪಾದಿಸಿದ್ದಾರೆ.
ಸ್ಮರಣ ಸಂಚಿಕೆಗಳ ಸಂಪಾದನೆಯಲ್ಲಿಯೂ ಆಸಕ್ತಿ
ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದ ಸಾಧಕರ ಬದುಕು, ಸಾಧನೆ ಹಾಗೂ ಸೇವೆಯನ್ನು ದಾಖಲಿಸುವ ಉದ್ದೇಶದಿಂದ ಕಾಯಕ ಸಿರಿ (1995), ಕರಿಸಿದ್ಧ ಪ್ರಭೆ (1998), ಸಮೃದ್ಧಿ ಮತ್ತು ಅಕ್ಷಯ (2002), ವಿಕಾಸಗಂಗಾ ಮತ್ತು ಅಂತರಗಂಗೆ (2010), ಕಳವೆ (2011), ಕಲ್ಲರಳಿ ಹೂವಾಗಿ (2013), ಸಿರಿಗಂಗಾ (2014), ಪರಂಪರೆಯ ತೊಟ್ಟಿಲು ಕನಕಗಿರಿ (2015), ಸುವರ್ಣದೀಪ್ತಿ (2016) ಮುಂತಾದ ಸ್ಮರಣ ಸಂಚಿಕೆಗಳ ಸಂಪಾದಕ ಹಾಗೂ ಸಹಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ.
ವಿಶೇಷ ಸಾಧನೆಗಳು ಮತ್ತು ಮಾಧ್ಯಮಗಳಲ್ಲಿ ಗುರುತಿಸುವಿಕೆ
ಡಾ. ಕೋಲ್ಕಾರ ಅವರು ಬರೆದ ‘ವಿಜಯನಗರ ಅರಸರ ಧರ್ಮ, ಕಲೆ, ವಾಸ್ತುಶಿಲ್ಪ’ ಎಂಬ ಲೇಖನವು ಕರ್ನಾಟಕ ವಿಶ್ವವಿದ್ಯಾಲಯದ 2022-23ನೇ ಸಾಲಿನ ಬಿ.ಎ. ಐದನೇ ಸೆಮಿಸ್ಟರ್ ಪಠ್ಯಪುಸ್ತಕದಲ್ಲಿ ಸೇರ್ಪಡೆಯಾಗಿರುವುದು ಅವರ ಅಧ್ಯಯನದ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ.
ದೂರದರ್ಶನ ಚಂದನ ವಾಹಿನಿಯ ಶುಭೋದಯ ಕಾರ್ಯಕ್ರಮದಲ್ಲಿ 2024ರ ಫೆಬ್ರವರಿ 26ರಂದು ಅವರ ಸಂದರ್ಶನ ಪ್ರಸಾರವಾಗಿದೆ. ಯೂಟ್ಯೂಬ್ ವಾಹಿನಿಗಳಲ್ಲಿಯೂ ಪ್ರಾಗೈತಿಹಾಸಿಕ ವಿಷಯಗಳಿಗೆ ಸಂಬಂಧಿಸಿದಂತೆ ಹರಪ್ಪ-ಮೆಹೆಂಜೊದಾರೊ ನಗರಗಳು, ಅಸ್ಥಿಪಂಜರದ ಕಿವಿಯಲ್ಲಿ ಚಿನ್ನದ ಓಲೆ, ರಾಮಾಯಣದ ವಾನರರ ಸಮಾಧಿ, ಕರ್ನಾಟಕದ ಆದಿವಾಸಿ ಜನಾಂಗ ಮತ್ತು ರಾಮಸೇತು ನಿರ್ಮಾಣದ ಕುರಿತ ಚರ್ಚೆ, ಆದಿಮಾನವನ ಆಚರಣೆಗಳು ಸೇರಿದಂತೆ ಹಲವು ವಿಷಯಗಳ ಕುರಿತು ಸಂದರ್ಶನ ನೀಡಿದ್ದಾರೆ.
ಪ್ರಶಸ್ತಿ-ಪುರಸ್ಕಾರಗಳ ಗೌರವ
ಸ್ಥಳೀಯ ಇತಿಹಾಸದ ದಾಖಲೀಕರಣ, ಸಂಶೋಧನೆ, ಸಾಹಿತ್ಯ ಮತ್ತು ಶೈಕ್ಷಣಿಕ ಸೇವೆಯನ್ನು ಗುರುತಿಸಿ ಅನೇಕ ಸಂಘ-ಸಂಸ್ಥೆಗಳು ಅವರಿಗೆ ಪ್ರಶಸ್ತಿ-ಪುರಸ್ಕಾರಗಳನ್ನು ನೀಡಿ ಗೌರವಿಸಿವೆ.
2007ರಲ್ಲಿ ಕೊಪ್ಪಳ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, 2011ರಲ್ಲಿ ಕನಕಾಚಲಶ್ರೀ ಪ್ರಶಸ್ತಿ, 2012ರಲ್ಲಿ ಶಾರದಾ ಸಾಹಿತ್ಯಶ್ರೀ ಪ್ರಶಸ್ತಿ, 2013ರಲ್ಲಿ ಕದಂಬ ಪ್ರಶಸ್ತಿ, 2017ರಲ್ಲಿ ಕನ್ನಡ ಸಾಹಿತ್ಯ ಭೂಷಣ ಪ್ರಶಸ್ತಿ, 2019ರಲ್ಲಿ ಕರಿಸಿದ್ಧಶ್ರೀ ಪ್ರಶಸ್ತಿ, 2020ರಲ್ಲಿ ಕರ್ನಾಟಕ ರಾಜ್ಯೋತ್ಸವ ರತ್ನ ಪ್ರಶಸ್ತಿ, 2023ರಲ್ಲಿ ಕಲ್ಯಾಣ ಕರ್ನಾಟಕ ಕಣ್ಮಣಿ ಪ್ರಶಸ್ತಿ ಹಾಗೂ ಬಸವಾನುಗ್ರಹ ಪ್ರಶಸ್ತಿ, ಇತಿಹಾಸ ಚೈತನ್ಯಮೂರ್ತಿ ಪ್ರಶಸ್ತಿ, ಸಮಾಜಸೇವಾ ಭಾರ್ಗವ ಪ್ರಶಸ್ತಿಗಳು ಸಂದಿವೆ.
2025ರಲ್ಲಿ ಶರಣಶ್ರೀ ಪ್ರಶಸ್ತಿ, ಸದ್ಧರ್ಮಶ್ರೀ ಪ್ರಶಸ್ತಿ ಮತ್ತು ಸಾರ್ವಜನಿಕ ಸೇವಾ ಪ್ರಶಸ್ತಿ ಹಾಗೂ 2026ರಲ್ಲಿ ಸಂಶೋಧನಾಶ್ರೀ ಪ್ರಶಸ್ತಿ, ಕನ್ನಡನಾಡು ಸಾಹಿತ್ಯ ಕೃತಿ ಪ್ರಶಸ್ತಿ ಮತ್ತು ಸಿರಿಗನ್ನಡ ಪ್ರಶಸ್ತಿಗಳು ಸೇರಿದಂತೆ ಹಲವು ಗೌರವಗಳು ಅವರಿಗೆ ಲಭಿಸಿವೆ.
ಸಮ್ಮೇಳನಗಳ ಸರ್ವಾಧ್ಯಕ್ಷತೆಯ ಗೌರವ
ಡಾ. ಶರಣಬಸಪ್ಪ ಕೋಲ್ಕಾರ ಅವರು ಈ ಹಿಂದೆ ಹಲವು ಸಾಹಿತ್ಯ ಸಮ್ಮೇಳನಗಳ ಸರ್ವಾಧ್ಯಕ್ಷತೆಯ ಗೌರವಕ್ಕೆ ಪಾತ್ರರಾಗಿದ್ದಾರೆ. 2005ರಲ್ಲಿ ಗಂಗಾವತಿಯಲ್ಲಿ ನಡೆದ ಕೊಪ್ಪಳ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಪ್ರಥಮ ಯುವಜನ ಸಮಾವೇಶದ ಸರ್ವಾಧ್ಯಕ್ಷರಾಗಿದ್ದರು. 2015ರಲ್ಲಿ ಕನಕಗಿರಿಯಲ್ಲಿ ನಡೆದ ಗಂಗಾವತಿ ತಾಲೂಕು ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನೂ ಅಲಂಕರಿಸಿದ್ದರು.
ಇದೀಗ ಕೊಪ್ಪಳ ಜಿಲ್ಲಾ 15ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವುದು ಅವರ ನಿರಂತರ ಸಾಹಿತ್ಯ ಸೇವೆ, ಸಂಶೋಧನಾ ಬದ್ಧತೆ ಮತ್ತು ಶೈಕ್ಷಣಿಕ ಸಾಧನೆಗೆ ಸಂದ ಮತ್ತೊಂದು ಮಹತ್ವದ ಗೌರವವಾಗಿದೆ.
ಇತಿಹಾಸವನ್ನು ಹುಡುಕಿದ ಕೈಗಳಿಗೆ ಸಮ್ಮೇಳನದ ಗೌರವ
ಒಂದು ಪ್ರದೇಶದ ಇತಿಹಾಸವೆಂದರೆ ಕೇವಲ ರಾಜರು, ಸಂಸ್ಥಾನಗಳು ಮತ್ತು ಯುದ್ಧಗಳ ಕಥೆಯಲ್ಲ. ಅಲ್ಲಿನ ಜನಜೀವನ, ಸಂಸ್ಕೃತಿ, ಕಲೆ, ವಾಸ್ತುಶಿಲ್ಪ, ಪ್ರಾಗೈತಿಹಾಸಿಕ ನೆಲೆಗಳು ಮತ್ತು ಪರಂಪರೆಯ ಸಮಗ್ರ ಚಿತ್ರಣವೇ ನಿಜವಾದ ಇತಿಹಾಸ. ಈ ಸತ್ಯವನ್ನು ತಮ್ಮ ಸಂಶೋಧನೆಯ ಮೂಲಕ ನಿರೂಪಿಸುತ್ತಾ ಬಂದವರು ಡಾ. ಶರಣಬಸಪ್ಪ ಕೋಲ್ಕಾರ.
ತಮ್ಮ ವೃತ್ತಿ ಬದುಕಿನ ಜೊತೆಗೆ ಸಂಶೋಧನೆ, ಬರವಣಿಗೆ, ಸಂಪಾದನೆ, ಶೈಕ್ಷಣಿಕ ಮಾರ್ಗದರ್ಶನ ಹಾಗೂ ಪರಂಪರೆಯ ಸಂರಕ್ಷಣೆಗೆ ಅವರು ನೀಡಿರುವ ಕೊಡುಗೆ ಅಪಾರ. ವಿಶೇಷವಾಗಿ ಕೊಪ್ಪಳ-ಹಂಪಿ ಪ್ರದೇಶದ ಇತಿಹಾಸವನ್ನು ದಾಖಲೀಕರಿಸುವ ಮೂಲಕ ಮುಂದಿನ ಪೀಳಿಗೆಗೆ ಅಮೂಲ್ಯ ಜ್ಞಾನಸಂಪತ್ತನ್ನು ನೀಡಿದ್ದಾರೆ.
ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆ ಕೇವಲ ವ್ಯಕ್ತಿಯೊಬ್ಬರಿಗೆ ನೀಡಿದ ಗೌರವವಲ್ಲ; ಸ್ಥಳೀಯ ಇತಿಹಾಸ, ಸಂಶೋಧನೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಂಪರೆಗೆ ನೀಡಿದ ಮನ್ನಣೆಯೂ ಹೌದು. ಈ ದೃಷ್ಟಿಯಿಂದ ಡಾ. ಶರಣಬಸಪ್ಪ ಕೋಲ್ಕಾರ ಅವರ ಆಯ್ಕೆ ಅತ್ಯಂತ ಅರ್ಥಪೂರ್ಣವಾಗಿದೆ.
ಇತಿಹಾಸದ ಮಣ್ಣಿನಲ್ಲಿ ಹುದುಗಿದ್ದ ಸತ್ಯಗಳನ್ನು ಶೋಧಿಸಿ, ಸಂಶೋಧನೆಯ ಬೆಳಕಿನಲ್ಲಿ ನಾಡಿನ ಜನತೆಗೆ ಪರಿಚಯಿಸಿದ ಅವರ ಜ್ಞಾನಯಾತ್ರೆ ಇನ್ನಷ್ಟು ವಿಸ್ತಾರವಾಗಲಿ. ಕನ್ನಡ ನಾಡು, ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಸೇವೆ ನಿರಂತರವಾಗಿ ಸಾಗಲಿ ಎಂಬುದು ನಮ್ಮ ಆಶಯ.

— . ರವಿ ಎನ್. ಚವ್ಹಾಣ


