
Onake Obavva, the brave woman who defended Chitradurga Fort, is a symbol of self-respect: B.M. Satish


ಚಿತ್ರದುರ್ಗ ಕೋಟೆ ರಕ್ಷಿಸಿದ ವೀರವನಿತೆ ಒನಕೆ ಓಬವ್ವ ಸ್ವಾಭಿಮಾನದ ಸಂಕೇತ: ಬಿ.ಎಂ. ಸತೀಶ್

ಒನಕೆ ಓಬವ್ವಳ ಎರಡನೇ ತವರುಮನೆ ಸಿರುಗುಪ್ಪ ಎಂಬುದು ಹೆಮ್ಮೆಯ ಸಂಗತಿ
ಸಿರುಗುಪ್ಪ, ನ.12: ಚಿತ್ರದುರ್ಗದ ಕೋಟೆಯನ್ನು ಶತ್ರು ಸೈನಿಕರಿಂದ ರಕ್ಷಿಸುವ ಮೂಲಕ ನಾಡಿನ ಸ್ವಾಭಿಮಾನ, ಸಾಹಸ ಮತ್ತು ದೇಶಭಕ್ತಿಗೆ ಮಾದರಿಯಾದ ವೀರವನಿತೆ ಒನಕೆ ಓಬವ್ವ ಅವರ ತ್ಯಾಗ ಮತ್ತು ಶೌರ್ಯ ಇತಿಹಾಸದ ಪುಟಗಳಲ್ಲಿ ಸದಾ ಜೀವಂತವಾಗಿರುತ್ತದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಬಿ.ಎಂ. ಸತೀಶ್ ಹೇಳಿದರು.
ನಗರದ ನೇತಾಜಿ ವ್ಯಾಯಾಮ ಶಾಲಾ ಆವರಣದಲ್ಲಿ ತಾಲೂಕು ಆಡಳಿತ ಹಾಗೂ ಛಲವಾದಿ ಮಹಾಸಭಾ ತಾಲೂಕು ಸಮಿತಿ ಸಹಯೋಗದಲ್ಲಿ ಆಯೋಜಿಸಿದ್ದ ವೀರವನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಚಿತ್ರದುರ್ಗದ ಪಾಳೆಯಗಾರ ವೀರ ಮದಕರಿ ನಾಯಕರ ಕೋಟೆಯನ್ನು ಕಿಂಡಿಯ ಮೂಲಕ ಪ್ರವೇಶಿಸಲು ಯತ್ನಿಸಿದ ಹೈದರಾಲಿ ಸೈನಿಕರನ್ನು ಒನಕೆಯನ್ನೇ ಆಯುಧವನ್ನಾಗಿಸಿಕೊಂಡು ಸದೆಬಡಿದು ಕೋಟೆಯನ್ನು ರಕ್ಷಿಸಿದ ಓಬವ್ವಳ ಸಾಹಸ ಅನನ್ಯವಾದುದು. ಅವರ ತವರುಮನೆ ಗುಡೇಕೋಟೆಯಾಗಿದ್ದು, ಎರಡನೇ ತವರುಮನೆ ಸಿರುಗುಪ್ಪ ಎಂಬುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ ಎಂದರು.
ಬಿಜೆಪಿ ಮುಖಂಡ ದರಪ್ಪ ನಾಯಕ ಮಾತನಾಡಿ, ಬುದ್ಧ, ಬಸವಣ್ಣ, ಡಾ. ಬಿ.ಆರ್. ಅಂಬೇಡ್ಕರ್, ವಾಲ್ಮೀಕಿ, ಕನಕದಾಸ, ಜ್ಯೋತಿಬಾ ಫುಲೆ ದಂಪತಿ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಸೇರಿದಂತೆ ಮಹನೀಯರ ಆದರ್ಶಗಳನ್ನು ಯುವಜನತೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಉಪನ್ಯಾಸಕರಾಗಿ ಮಾತನಾಡಿದ ಶಿಕ್ಷಕ ರಮೇಶ ಸುಗ್ಗೇನಹಳ್ಳಿ, ಗುಡೇಕೋಟೆಯ ಚಿನ್ನಮ್ಮ ಮತ್ತು ಚಿನ್ನಪ್ಪ ದಂಪತಿಯ ಪುತ್ರಿಯಾದ ಓಬವ್ವ, ಚಿತ್ರದುರ್ಗದ ಕೋಟೆಯ ಕಾವಲುಗಾರ ಮುದ್ದಹನುಮಪ್ಪ ಅವರನ್ನು ವಿವಾಹವಾದ ನಂತರ ಕೋಟೆಯ ರಕ್ಷಣೆಯಲ್ಲಿ ತೋರಿದ ಅಪ್ರತಿಮ ಧೈರ್ಯ, ತ್ಯಾಗ ಮತ್ತು ಸ್ವಾಭಿಮಾನದ ಬದುಕಿನ ಕುರಿತು ಸಮಗ್ರ ಮಾಹಿತಿ ನೀಡಿದರು.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ
ಕಾರ್ಯಕ್ರಮದ ಅಂಗವಾಗಿ ಹೈಸ್ಕೂಲ್ ಮೈದಾನದಿಂದ ಒನಕೆ ಓಬವ್ವ ಅವರ ಭಾವಚಿತ್ರದೊಂದಿಗೆ ಅದ್ಧೂರಿ ಮೆರವಣಿಗೆ ನಡೆಸಲಾಯಿತು. ಛಲವಾದಿ ಸಮುದಾಯದ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಶೇ.75ಕ್ಕಿಂತ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಉನ್ನತ ಶಿಕ್ಷಣದಲ್ಲಿ ಡಾಕ್ಟರೇಟ್ ಪದವಿ ಪಡೆದ ಡಾ. ಈಶ್ವರ್ ಸಿರಿಗೇರಿ ಸೇರಿದಂತೆ ಉಪನ್ಯಾಸಕರು, ಪತ್ರಕರ್ತರು ಮತ್ತು ಸಮಾಜ ಸೇವಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಂ. ಬಸಪ್ಪ, ಬಿಜೆಪಿ ಮುಖಂಡ ದರಪ್ಪ ನಾಯಕ, ಶ್ರೀ ತಾಯಮ್ಮ ದೇವಿ ದೇವಸ್ಥಾನ ಕುಡುದರಹಾಳು ಪೀಠದ ಅಧ್ಯಕ್ಷರಾದ ಡಾ. ಶಿವಕುಮಾರ ತಾತನವರು, ಬಂತೇಜಿ ಕಮಲರತ್ನ ಚಿಕ್ಕು, ಛಲವಾದಿ ಮಹಾಸಭಾ ತಾಲೂಕು ಸಮಿತಿ ಅಧ್ಯಕ್ಷ ಹಾಗೂ ನಗರಸಭೆ ಸದಸ್ಯ ಹೆಚ್. ಗಣೇಶ್, ಗೌರವಾಧ್ಯಕ್ಷ ಬಿ. ಸಣ್ಣ ರಾಮಯ್ಯ, ಯುವ ಸಮಿತಿ ಅಧ್ಯಕ್ಷ ಕರೆಂಟ್ ಮಲ್ಲಯ್ಯ, ನಗರ ಘಟಕ ಅಧ್ಯಕ್ಷ ಸೂಗೂರು ಮಲ್ಲಯ್ಯ ಸೇರಿದಂತೆ ವಿವಿಧ ಗ್ರಾಮಗಳ ಸಮಾಜದ ಮುಖಂಡರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು, ವಿದ್ಯಾರ್ಥಿಗಳು, ಮಹಿಳಾ ಸಂಘದ ಸದಸ್ಯರು ಹಾಗೂ ಸಮಾಜದ ಬಂಧುಗಳು ಉಪಸ್ಥಿತರಿದ್ದರು.



