

ಗುಳದಳ್ಳಿ ಗ್ರಾಮದಲ್ಲಿ ‘ನಮ್ಮ ಹಿರಿಯರು ನಮ್ಮ ಹೆಮ್ಮೆ’ ಕಾರ್ಯಕ್ರಮ: ಹಿರಿಯ ನಾಗರಿಕರ ಹುಟ್ಟುಹಬ್ಬ ಆಚರಣೆ
Our Elders, Our Pride’ Program in Guladalli Village: Celebration of Senior Citizens’ Birthdays

ಕೊಪ್ಪಳ ಅಕ್ಟೋಬರ್ 30 (ಕರ್ನಾಟಕ ವಾರ್ತೆ): ಕೊಪ್ಪಳ ತಾಲೂಕಿನ ಗುಳದಳ್ಳಿ ಗ್ರಾಮದ ಗ್ರಂಥಾಲಯದಲ್ಲಿ ‘ನಮ್ಮ ಹಿರಿಯರು ನಮ್ಮ ಹೆಮ್ಮೆ’ ಎಂಬ ಘೋಷವಾಕ್ಯದೊಂದಿಗೆ ಹಿರಿಯ ನಾಗರಿಕರ ಹುಟ್ಟುಹಬ್ಬ ಆಚರಣೆ ಕಾರ್ಯಕ್ರಮವು ಗುರುವಾರ ಅದ್ದೂರಿಯಾಗಿ ನೆರವೇರಿತು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ತಾಲೂಕು ಪಂಚಾಯತ್, ಗ್ರಾಮೀಣಾಭಿವೃದ್ಧಿ ಇಲಾಖೆ, ಗ್ರಾಮ ಪಂಚಾಯಿತಿ, ಕಲಿಕಾ ಟಾಟಾ ಟ್ರಸ್ಟ್ ಹಾಗೂ ಅರಿವು ಕೇಂದ್ರ ಗುಳದಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರಿಂದ ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕಲಿಕಾ ಟಾಟಾ ಟ್ರಸ್ಟ್ನ ಹಿರಿಯ ಸಂಯೋಜಕರಾದ ಸಿದ್ದಲಿಂಗರೆಡ್ಡಿ ಅವರು, ಹಿರಿಯರಿಗೆ ಗೌರವ ನೀಡುವುದು ನಮ್ಮೆಲ್ಲರ ಕರ್ತವ್ಯ ಹಾಗೂ ಹೆಮ್ಮೆ. ಹಿರಿಯರು ಸಮಾಜದ ಆಧಾರಸ್ತಂಭವಾಗಿದ್ದು, ಕುಟುಂಬದ ಪ್ರತಿಯೊಬ್ಬ ಸದಸ್ಯರೂ ಅವರ ಆರೋಗ್ಯ ಮತ್ತು ಯೋಗಕ್ಷೇಮವನ್ನು ಕಾಳಜಿಯಿಂದ ನೋಡಿಕೊಳ್ಳಬೇಕು. ಅರಿವು ಕೇಂದ್ರದ ಮೂಲಕ ಹಿರಿಯರಿಗೆ ಆರೋಗ್ಯ, ಕೌಶಲ್ಯ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಸೇರಿದಂತೆ 16 ವಿಧದ ಚಟುವಟಿಕೆಗಳನ್ನು ಕಲಿಸಿಕೊಡಲಾಗುತ್ತಿದ್ದು, ಇದು ಅವರ ಅನುಭವ ಹಾಗೂ ನೋವು-ನಲಿವುಗಳನ್ನು ಹಂಚಿಕೊಳ್ಳಲು ಉತ್ತಮ ವೇದಿಕೆಯಾಗಿದೆ ಎಂದು ತಿಳಿಸಿದರು.
ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಕಲ್ಯಾಣಾಧಿಕಾರಿ ವೆಂಕಟೇಶ್ ದೇಶಪಾಂಡೆ ಅವರು ಮೂವರು ಹಿರಿಯರಿಗೆ ಊರುಗೋಲು ಹಾಗೂ ಒಬ್ಬರಿಗೆ ಶ್ರವಣ ಸಾಧನವನ್ನು ವಿತರಿಸಿದರು. ನಂತರ ಮಾತನಾಡಿದ ಅವರು, ಹಿರಿಯರು ರಾಷ್ಟ್ರದ ಸಂಪತ್ತು. ಎಲ್ಲರೂ ದುಶ್ಚಟಗಳಿಂದ ದೂರವಿದ್ದು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ನಮ್ಮ ಪರಂಪರೆ, ಆಚಾರ-ವಿಚಾರಗಳನ್ನು ಇಂದಿನ ಯುವಪೀಳಿಗೆಗೆ ಮಾರ್ಗದರ್ಶನದ ರೂಪದಲ್ಲಿ ತಿಳಿಸಿಕೊಡಬೇಕು ಹಾಗೂ ಸರ್ಕಾರದ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಂ.ಆರ್.ಡಬ್ಲ್ಯೂ., ವಿ.ಆರ್.ಡಬ್ಲ್ಯೂ., ಯು.ಆರ್.ಡಬ್ಲ್ಯೂ ಕಾರ್ಯಕರ್ತರ ಜಿಲ್ಲಾ ಸಂಯೋಜಕರಾದ ತೇಕರಾಜ್, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಹನುಮಂತಪ್ಪ, ಗ್ರಂಥಾಲಯ ಮೇಲ್ವಿಚಾರಕರಾದ ಅರುಣ, ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಸಿದ್ದಲಿಂಗಮ್ಮ ಹಾಲಗುಂಡಿ, ತಾಲೂಕು ಸಂಪನ್ಮೂಲ ವ್ಯಕ್ತಿ ವೀರೇಶ ಹಾಲಗುಂಡಿ, ಡಿ.ಎನ್.ಎ. ಆರೈಕೆದಾರರಾದ ನೇತ್ರಾ ರಮೇಶ್, ವಿಸ್ತಾರ ಸಂಸ್ಥೆಯ ಗಾಳೆಪ್ಪ ಕಿನ್ನಾಳ, ಹಿರಿಯ ನಾಗರಿಕರಾದ ಭರಮಪ್ಪ, ಮರಿಯಪ್ಪ, ಮಲ್ಲಿಕಾರ್ಜುನ, ರಾಮಣ್ಣ, ಯಮನೂರಪ್ಪ, ಹನುಮಂತ ವೆಂಕಟಗಿರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ವೀರೇಶ ಹಾಲಗುಂಡಿ ಅವರು ನಿರೂಪಿಸಿ, ವಂದನಾರ್ಪಣೆ ಮಾಡಿದರು.



