ರಾಯಚೂರಿನಲ್ಲಿ ಆರ್ಯವೈಶ್ಯ ಯುವಕನ ಕೊಲೆ ಖಂಡಿಸಿ ಬೃಹತ್ ಬೈಕ್ ರ‍್ಯಾಲಿ

H.Mallikarjun
H.Mallikarjun - Kalyanasiri
2 Min Read
ಜಾಹೀರಾತು
ಜಾಹೀರಾತು

ರಾಯಚೂರಿನಲ್ಲಿ ಆರ್ಯವೈಶ್ಯ ಯುವಕನ ಕೊಲೆ ಖಂಡಿಸಿ ಬೃಹತ್ ಬೈಕ್ ರ‍್ಯಾಲಿ

ಜಾಹೀರಾತು

Massive bike rally in Raichur condemning the murder of an Arya Vysya youth

ಆರೋಪಿಗೆ ಗಲ್ಲು ಶಿಕ್ಷೆ, ಮೃತರ ಕುಟುಂಬಕ್ಕೆ ₹50 ಲಕ್ಷ ಪರಿಹಾರ ನೀಡಲು ಆಗ್ರಹ

ಗಂಗಾವತಿ: ರಾಯಚೂರಿನ ಎಲ್.ಬಿ.ಎಸ್. ನಗರದಲ್ಲಿ ಆರ್ಯವೈಶ್ಯ ಸಮಾಜದ ಯುವಕ ಬಾಪುರ ನರಸಿಂಹ (40) ಅವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆಯನ್ನು ಖಂಡಿಸಿ ಗಂಗಾವತಿ ಆರ್ಯವೈಶ್ಯ ಸಮಾಜದ ವತಿಯಿಂದ ಬುಧವಾರ ಬೃಹತ್ ಮೋಟಾರ್ ಬೈಕ್ ರ‍್ಯಾಲಿ ನಡೆಸಲಾಯಿತು.

ನಗರದ ಶ್ರೀ ಕೃಷ್ಣದೇವರಾಯ ವೃತ್ತದಿಂದ ಆರಂಭವಾದ ಬೈಕ್ ರ‍್ಯಾಲಿಯು ಪ್ರಮುಖ ಬೀದಿಗಳ ಮೂಲಕ ಸಂಚರಿಸಿ ತಹಶೀಲ್ದಾರ್ ಕಚೇರಿಗೆ ತಲುಪಿತು. ಬಳಿಕ ಸಮಾಜದ ಮುಖಂಡರು ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ, ಕೊಲೆ ಪ್ರಕರಣದಲ್ಲಿ ಭಾಗಿಯಾದ ಆರೋಪಿಗೆ ಕಾನೂನು ಪ್ರಕಾರ ಕಠಿಣ ಶಿಕ್ಷೆ ವಿಧಿಸಬೇಕು ಹಾಗೂ ಮೃತರ ಕುಟುಂಬಕ್ಕೆ ₹50 ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ನಗರಸಭೆ ಮಾಜಿ ಅಧ್ಯಕ್ಷ ಹಾಗೂ ಆರ್ಯವೈಶ್ಯ ಸಮಾಜದ ಮುಖಂಡ ರಾಘವೇಂದ್ರ ಶೆಟ್ಟಿ ಮಾತನಾಡಿ, ಸಣ್ಣ ಹೋಟೆಲ್ ಹಾಗೂ ಕಿರಾಣಿ ಅಂಗಡಿ ನಡೆಸಿಕೊಂಡು ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದ ನರಸಿಂಹ ಅವರ ಹತ್ಯೆಯಿಂದ ಕುಟುಂಬವು ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಸರ್ಕಾರ ಕೂಡಲೇ ಮೃತರ ಕುಟುಂಬಕ್ಕೆ ₹50 ಲಕ್ಷ ಪರಿಹಾರ ನೀಡಬೇಕು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗೆ ಗರಿಷ್ಠ ಶಿಕ್ಷೆ ವಿಧಿಸಲು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಜನನಿಬಿಡ ಪ್ರದೇಶದಲ್ಲಿ ನಡೆದಿರುವ ಈ ಕೊಲೆ ಪ್ರಕರಣದಿಂದ ವ್ಯಾಪಾರಿಗಳು ಹಾಗೂ ಸಾರ್ವಜನಿಕರಲ್ಲಿ ಆತಂಕ ಉಂಟಾಗಿದೆ. ಇಂತಹ ಘಟನೆಗಳು ಮರುಕಳಿಸದಂತೆ ಪೊಲೀಸ್ ಇಲಾಖೆ ಹಾಗೂ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಆರ್ಯವೈಶ್ಯ ಸಮಾಜದ ಮುಖಂಡ ನಾಗರಾಜ್ ದರೋಜಿ ಮಾತನಾಡಿ, ರಾಜ್ಯದಲ್ಲಿ ಅಫೀಮು, ಗಾಂಜಾ ಸೇರಿದಂತೆ ಮಾದಕ ವಸ್ತುಗಳ ಹಾವಳಿಗೆ ಕಡಿವಾಣ ಹಾಕಲು ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಮಾದಕ ವಸ್ತುಗಳ ದುಷ್ಪರಿಣಾಮದಿಂದ ಅಪರಾಧ ಕೃತ್ಯಗಳು ಹೆಚ್ಚಾಗದಂತೆ ಪರಿಣಾಮಕಾರಿ ನಿಯಂತ್ರಣ ಅಗತ್ಯವಾಗಿದೆ. ನರಸಿಂಹ ಕೊಲೆ ಪ್ರಕರಣದ ಆರೋಪಿಗೆ ಕಾನೂನು ಪ್ರಕಾರ ಕಠಿಣ ಶಿಕ್ಷೆ ವಿಧಿಸುವ ಮೂಲಕ ಮುಂದೆ ಇಂತಹ ಘಟನೆಗಳು ನಡೆಯದಂತೆ ಎಚ್ಚರಿಕೆ ನೀಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಆರ್ಯವೈಶ್ಯ ಸಮಾಜದ ಅಧ್ಯಕ್ಷ ರೂಪರಾಣಿ ರಾಯಚೂರು, ಉಪಾಧ್ಯಕ್ಷ ಜಿ. ಸುರೇಶ್, ಕಾರ್ಯದರ್ಶಿ ಈಶ್ವರ ಶೆಟ್ಟಿ, ವಾಸು, ಚಂದ್ರಶೇಖರ್ ಹಣವಾಳ, ಭಾಗ್ಯ ಈಶ್ವರ ಶೆಟ್ಟಿ, ನರಸಿಂಹ ದರೋಜಿ, ಮಾರುತಿ ಡಿ., ರಾಜಕುಮಾರ್ ಸೇರಿದಂತೆ ವಾಸವಿ ಮಹಿಳಾ ಮಂಡಳಿ, ವಾಸವಿ ಯುವಕ ಮಂಡಳಿ ಸದಸ್ಯರು ಹಾಗೂ ಸಮಾಜದ ಅನೇಕರು ಭಾಗವಹಿಸಿದ್ದರು.

Total Views: 0
ಜಾಹೀರಾತು
Share This Article
Leave a Comment