ಹನೂರಿನಲ್ಲಿ ಅರ್ಥಪೂರ್ಣವಾಗಿ ವಾಲ್ಮೀಕಿ ಜಯಂತಿ ಆಚರಣೆ : ಶಾಸಕ ಎಂ.ಆರ್. ಮಂಜುನಾಥ್

H.Mallikarjun
H.Mallikarjun - Kalyanasiri
3 Min Read
ಜಾಹೀರಾತು

ಹನೂರಿನಲ್ಲಿ ಅರ್ಥಪೂರ್ಣವಾಗಿ ವಾಲ್ಮೀಕಿ ಜಯಂತಿ ಆಚರಣೆ : ಶಾಸಕ ಎಂ.ಆರ್. ಮಂಜುನಾಥ್

 


ವರದಿ: ಬಂಗಾರಪ್ಪ .ಸಿ.
:ರಾಮಾಯಣ ಬರೆದ ಮಹಾನ್ ಕವಿಗಳಲ್ಲಿ ಒಬ್ಬರಾದ ಮಹರ್ಷಿ ವಾಲ್ಮೀಕಿ ಅವರ ಆದರ್ಶಗಳನ್ನು ಅವರ ತತ್ವ ಮತ್ತು ಸಂದೇಶಗಳನ್ನು ಸಾಮಾನ್ಯ ಜನರ ಜೀವನಕ್ಕೆ ಅಳವಡಿಸಿಕೊಂಡು ಮುನ್ನೇಡದರೆ ಮಾತ್ರ ಜಯಂತಿ ಆಚರಣೆಗೆ ಸಾರ್ಥಕವೆನಿಸುತ್ತದೆ ಎಂದು ಶಾಸಕರಾದ ಎಂ.ಆರ್. ಮಂಜುನಾಥ್ ತಿಳಿಸಿದರು.

ಜಾಹೀರಾತು

ಹನೂರು
ಪಟ್ಟಣದ ಲೋಕೋಪಯೋಗಿ ಇಲಾಖೆಯ ವಸತಿಗೃಹದ ಆವರಣದಲ್ಲಿ ತಾಲ್ಲೂಕು ಆಡಳಿತ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ನಂತರ ಮಾತನಾಡಿದ ಅವರು .
ಮಹರ್ಷಿ ವಾಲ್ಮೀಕಿ ಅವರು ಜಗತ್ತಿಗೆ ನೀಡಿದ ಸಂದೇಶ ಹಾಗೂ ಆದರ್ಶಗಳು ಅತ್ಯಂತ ಮಹತ್ವದ್ದಾಗಿವೆ. ರಾಮಾಯಣದ ಮೂಲಕ ಶ್ರೀರಾಮ ಮತ್ತು ಲಕ್ಷ್ಮಣರ ಅನ್ಯೋನ್ಯತೆ, ಸಹೋದರತ್ವ ಹಾಗೂ ಆದರ್ಶ ಜೀವನದ ಮೌಲ್ಯಗಳನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ಮಹನೀಯರು ಹಾಕಿಕೊಟ್ಟ ಮಾರ್ಗದರ್ಶನ ನಮ್ಮ ಮುಂದಿದ್ದರೂ, ಅವುಗಳನ್ನು ಸಂಪೂರ್ಣವಾಗಿ ಜೀವನದಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಮಹರ್ಷಿ ವಾಲ್ಮೀಕಿ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಬದುಕಬೇಕು ಎಂದು ಕರೆ ನೀಡಿದರು.

ರೈತಾಪಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಆದ್ಯತೆ:

ಹನೂರು ವಿಧಾನಸಭಾ ಕ್ಷೇತ್ರವು ಕೃಷಿ ಪ್ರಧಾನ ಕ್ಷೇತ್ರವಾಗಿದ್ದು, ಇಲ್ಲಿನ ಜನರ ಮೂಲಭೂತ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದು ತಮ್ಮ ಆದ್ಯತೆಯಾಗಿದೆ. ಕುಡಿಯುವ ನೀರು, ವಿದ್ಯುತ್, ರಸ್ತೆ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಿಗೆ ಹೆಚ್ಚಿನ ಒತ್ತು ನೀಡುವ ಮೂಲಕ ಜನರ ಜೀವನಮಟ್ಟ ಸುಧಾರಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇನೆ ಎಂದು ತಿಳಿಸಿದರು.

ರಾಮಾಪುರ ಹೋಬಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಮಹತ್ವಾಕಾಂಕ್ಷಿ ಯೋಜನೆಯು ಹಣಕಾಸು ಅನುಮೋದನೆ ಪಡೆದು, ಮಂಡಳಿ ಸಭೆಯ ಪ್ರಕ್ರಿಯೆ ಪೂರ್ಣಗೊಳಿಸಿ ಸಚಿವ ಸಂಪುಟದ ಹಂತದಲ್ಲಿದ್ದು, ಟೆಂಡರ್ ಪ್ರಕ್ರಿಯೆಯತ್ತ ಸಾಗುತ್ತಿದೆ ಎಂದು ಹೇಳಿದರು.

ರಾಮನಗುಡ್ಡ ಮತ್ತು ಹುಬ್ಬೆಹುಣಸೆ ನೀರಾವರಿ ಯೋಜನೆಗಳಿಗೆ ಮೂರನೇ ಬಾರಿ ಟೆಂಡರ್ ಕರೆಯಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಹಿಂದೆ ಟೆಂಡರ್ ಮೊತ್ತ ಹೆಚ್ಚಿದ್ದ ಕಾರಣ ಗುತ್ತಿಗೆದಾರರು ಭಾಗವಹಿಸಿರಲಿಲ್ಲ. ಈ ಬಾರಿ ಅಗತ್ಯ ಕ್ರಮಗಳನ್ನು ಕೈಗೊಂಡು ಆದಷ್ಟು ಶೀಘ್ರವಾಗಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸುವ ಗುರಿ ಹೊಂದಲಾಗಿದೆ ಎಂದರು.

ಕ್ಷೇತ್ರದ 291 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆಯ ಕಾಮಗಾರಿಗೆ ಅರಣ್ಯ ಇಲಾಖೆಯ ಅನುಮತಿ ಪಡೆಯುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಅನುಮತಿ ದೊರೆತ ಬಳಿಕ ಐದರಿಂದ ಆರು ತಿಂಗಳೊಳಗೆ ಪೈಪ್‌ಲೈನ್ ಕಾಮಗಾರಿ ಪೂರ್ಣಗೊಳಿಸಿ, ಕ್ಷೇತ್ರದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ನಾಯಕರ
ಸಮುದಾಯ ಭವನ ನಿರ್ಮಾಣಕ್ಕೆ ಶೀಘ್ರ ಕ್ರಮ:ಸಮುದಾಯ ಭವನ ನಿರ್ಮಾಣಕ್ಕಾಗಿ ಎರಡು ವರ್ಷಗಳ ಹಿಂದೆ ಜಾಗ ಮತ್ತು ಕಟ್ಟಡ ಒದಗಿಸುವ ಭರವಸೆ ನೀಡಲಾಗಿತ್ತು. ವಿವಿಧ ಸಮುದಾಯಗಳಿಂದಲೂ ಬೇಡಿಕೆಗಳಿರುವುದರಿಂದ ಸಾಮಾಜಿಕ ನ್ಯಾಯದಡಿ ಜಾಗ ಗುರುತಿಸುವ ಪ್ರಕ್ರಿಯೆಯಲ್ಲಿ ವಿಳಂಬವಾಗಿದೆ. ಆದರೂ ಕೆಲವೇ ದಿನಗಳಲ್ಲಿ ಸ್ವಾಮೀಜಿಗಳನ್ನು ಆಹ್ವಾನಿಸಿ ಜಾಗ ಹಸ್ತಾಂತರ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮ ನಡೆಸಲಾಗುವುದು. ಈ ವಿಚಾರದಲ್ಲಿ ಯಾರೂ ತಪ್ಪು ತಿಳಿದುಕೊಳ್ಳಬಾರದು ಎಂದು ಸ್ಪಷ್ಟಪಡಿಸಿದರು.

ವಾಲ್ಮೀಕಿ ಜಯಂತಿಯ ಸಂದರ್ಭದಲ್ಲಿ
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ :ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ನಾಯಕ ಸಮುದಾಯದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ಪ್ರೋತ್ಸಾಹಿಸುವುದು ಹಾಗೂ ಮುಂದಿನ ದಿನಗಳಲ್ಲಿಯೂ ಉನ್ನತ ಸಾಧನೆ ಮಾಡಲು ಉತ್ತೇಜನ ನೀಡುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.‌

ಇದೇ ಸಂದರ್ಭದಲ್ಲಿ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ರಾಚಪ್ಪ, ಜಿಲ್ಲಾ ಉಪಾಧ್ಯಕ್ಷ ಉದ್ದನೂರು ಸಿದ್ದರಾಜು, ತಾಲ್ಲೂಕು ನಾಯಕರ ಸಂಘದ ಅಧ್ಯಕ್ಷ ಪುಟ್ಟವೀರನಾಯಕ, ತಹಶೀಲ್ದಾರ್ ಚೈತ್ರ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರತಿಭಾ, ಪುರಸಭೆ ಮುಖ್ಯಾಧಿಕಾರಿ ರೇಖಾ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕುಮಾರ್, ಪೊಲೀಸ್ ಇನ್ಸ್‌ಪೆಕ್ಟರ್ ಆನಂದಮೂರ್ತಿ, ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಸುಬ್ಬರಾಯ ಹಾಗೂ ಸಮುದಾಯದ ಮುಖಂಡರಾದ ರಾಚಪ್ಪ, ಸ್ವಾಮಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.

Total Views: 0
ಜಾಹೀರಾತು
Share This Article
Leave a Comment