ಹನೂರಿನಲ್ಲಿ ‘ಪ್ರಬಲ’ ಕಾರ್ಯಕ್ರಮದಡಿ ಮಾನಸಿಕ ಆರೋಗ್ಯ ಜಾಗೃತಿ ಜಾಥಾ, ಕಿರು ನಾಟಕ ಪ್ರದರ್ಶನ

H.Mallikarjun
H.Mallikarjun - Kalyanasiri
2 Min Read
ಜಾಹೀರಾತು

Mental health awareness rally and short play performance held in Hanur under the ‘Prabala’ program

ಹನೂರಿನಲ್ಲಿ ‘ಪ್ರಬಲ’ ಕಾರ್ಯಕ್ರಮದಡಿ ಮಾನಸಿಕ ಆರೋಗ್ಯ ಜಾಗೃತಿ ಜಾಥಾ, ಕಿರು ನಾಟಕ ಪ್ರದರ್ಶನ

ಮಾನಸಿಕ ಆರೋಗ್ಯದ ಮಹತ್ವ ಸಾರಿದ ಜಾಗೃತಿ ಅಭಿಯಾನ; ಮಕ್ಕಳಿಗೆ ಡಿಜಿಟಲ್ ಸುರಕ್ಷತೆ, ಆರೋಗ್ಯಕರ ಜೀವನಶೈಲಿ ಕುರಿತು ಅರಿವು

ವರದಿ: ಬಂಗಾರಪ್ಪ. ಸಿ.

ಜಾಹೀರಾತು

ಕಲ್ಯಾಣ ಸಿರಿ:

ಹನೂರು: ಸಾರ್ವಜನಿಕರಲ್ಲಿ ಮಾನಸಿಕ ಆರೋಗ್ಯದ ಮಹತ್ವದ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಕರ್ನಾಟಕ ಹೆಲ್ತ್ ಪ್ರಮೋಷನ್ ಟ್ರಸ್ಟ್ (ಕೆಎಚ್‌ಪಿಟಿ) ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ (ಆರ್‌ಡಿಪಿಆರ್) ಸಹಯೋಗದಲ್ಲಿ ಅನುಷ್ಠಾನಗೊಳ್ಳುತ್ತಿರುವ ‘ಪ್ರಬಲ’ ಕಾರ್ಯಕ್ರಮದಡಿ ಮಾನಸಿಕ ಆರೋಗ್ಯ ಜಾಗೃತಿ ಜಾಥಾ ಹಾಗೂ ಕಿರು ನಾಟಕ ಪ್ರದರ್ಶನವನ್ನು ಹನೂರು ಪಟ್ಟಣದಲ್ಲಿ ಆಯೋಜಿಸಲಾಯಿತು.

ಹನೂರು ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿಯಿಂದ ಆರಂಭಗೊಂಡ ಜಾಗೃತಿ ಜಾಥಾವು ಪಟ್ಟಣದ ಪ್ರಮುಖ ವೃತ್ತದ ಮೂಲಕ ಸಾಗಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ತಲುಪಿತು. ಜಾಥಾದಲ್ಲಿ ಮಾನಸಿಕ ಆರೋಗ್ಯದ ಮಹತ್ವ, ಮಾನಸಿಕ ಯೋಗಕ್ಷೇಮದ ಅಗತ್ಯ ಹಾಗೂ ಆರೋಗ್ಯದ ಬಗ್ಗೆ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕಾದ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.

ಇದೇ ಸಂದರ್ಭದಲ್ಲಿ ಮಾನಸಿಕ ಆರೋಗ್ಯದ ಸಂದೇಶ ಸಾರುವ ಕಿರು ನಾಟಕವನ್ನು ಪ್ರದರ್ಶಿಸಲಾಯಿತು. ಸಾರ್ವಜನಿಕರು ಆಸಕ್ತಿಯಿಂದ ನಾಟಕವನ್ನು ವೀಕ್ಷಿಸಿ, ಕಾರ್ಯಕ್ರಮದ ಕುರಿತು ಪ್ರಶ್ನೆಗಳನ್ನು ಕೇಳುವ ಮೂಲಕ ಸಕ್ರಿಯವಾಗಿ ಪಾಲ್ಗೊಂಡರು.

ಮಕ್ಕಳಿಗೆ ಡಿಜಿಟಲ್ ಸುರಕ್ಷತೆ ಕುರಿತು ಸಲಹೆ

ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪೊಲೀಸ್ ಉಪನಿರೀಕ್ಷಕ ಶಿವಕುಮಾರ್ ಅವರು ಮಕ್ಕಳಿಗೆ ಡಿಜಿಟಲ್ ಸುರಕ್ಷತೆ, ಶಿಕ್ಷಣದ ಮಹತ್ವ ಹಾಗೂ ಮಾನಸಿಕ ಆರೋಗ್ಯದ ಕುರಿತು ಮಾತನಾಡಿದರು. ಡಿಜಿಟಲ್ ತಂತ್ರಜ್ಞಾನವನ್ನು ಸುರಕ್ಷಿತವಾಗಿ ಬಳಸುವ ಅಗತ್ಯವನ್ನು ವಿವರಿಸಿದ ಅವರು, ಮಾನಸಿಕ ಆರೋಗ್ಯದ ಕಾಳಜಿ ವಹಿಸುವಂತೆ ಸಲಹೆ ನೀಡಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಪ್ರಕಾಶ್ ಅವರು ಮಾನಸಿಕ ಆರೋಗ್ಯದ ಜೊತೆಗೆ ದೈಹಿಕ ವ್ಯಾಯಾಮ ಮತ್ತು ಪೌಷ್ಟಿಕ ಆಹಾರ ಸೇವನೆಯ ಮಹತ್ವವನ್ನು ತಿಳಿಸಿ, ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳುವಂತೆ ಸಾರ್ವಜನಿಕರಿಗೆ ಕರೆ ನೀಡಿದರು. ತಾಲ್ಲೂಕು ಪಂಚಾಯಿತಿಯ ಅಧಿಕಾರಿಗಳು ಕಾರ್ಯಕ್ರಮಕ್ಕೆ ಭೇಟಿ ನೀಡಿ ಸಹಕಾರ ವ್ಯಕ್ತಪಡಿಸಿದರು.

ಕಿಶೋರಿಯರ ಸಬಲೀಕರಣಕ್ಕೆ ‘ಪ್ರಬಲ’ ಕಾರ್ಯಕ್ರಮದ ಒತ್ತು

‘ಪ್ರಬಲ’ ಕಾರ್ಯಕ್ರಮವು ಕಿಶೋರಿಯರ ಸಬಲೀಕರಣ, ನಾಯಕತ್ವ ವಿಕಸನ, ಆರೋಗ್ಯ ಮತ್ತು ಹಕ್ಕುಗಳ ಕುರಿತು ಅರಿವು ಮೂಡಿಸುವುದರ ಜೊತೆಗೆ ಸ್ಥಳೀಯ ಆಡಳಿತ ವ್ಯವಸ್ಥೆಯಲ್ಲಿ ಅವರ ಸಕ್ರಿಯ ಭಾಗವಹಿಸುವಿಕೆಯನ್ನು ಉತ್ತೇಜಿಸುತ್ತಿದೆ.

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಿಶೋರಿಯರ ಉಪಸಮಿತಿಗಳನ್ನು ರಚಿಸುವ ಮೂಲಕ ತಮ್ಮ ಅಗತ್ಯಗಳು, ಸಮಸ್ಯೆಗಳು ಮತ್ತು ಹಕ್ಕುಗಳ ಕುರಿತು ಧ್ವನಿ ಎತ್ತಲು ಹಾಗೂ ಸ್ಥಳೀಯ ಆಡಳಿತದ ಗಮನ ಸೆಳೆಯಲು ಅವಕಾಶ ಕಲ್ಪಿಸಲಾಗುತ್ತಿದೆ. ಈ ಮೂಲಕ ಮಹಿಳಾ ಸಬಲೀಕರಣ ಮತ್ತು ಸಮಾನತೆಯ ಸಮಾಜ ನಿರ್ಮಾಣಕ್ಕೆ ಕಾರ್ಯಕ್ರಮ ಕೊಡುಗೆ ನೀಡುತ್ತಿದೆ.

ಕಾರ್ಯಕ್ರಮದಲ್ಲಿ ‘ಪ್ರಬಲ’ ಯೋಜನೆಯ ಜಿಲ್ಲಾ ಸಂಯೋಜಕ ಡಾ. ನಾಗನಂದನ್, ತಾಲ್ಲೂಕು ಸಂಯೋಜಕರಾದ ತೇಜಸ್ವಿನಿ ಮತ್ತು ಮಮತಾ ಹಾಗೂ ಸಮುದಾಯ ಸುಗಮಕಾರರಾದ ವೃಷಭೇಂದ್ರ, ಸಂತೋಷ್, ಮಧು, ಅಶ್ವಿನಿ, ಶೆಂಬಗವಲ್ಲಿ, ಕೌಶಲ್ಯ ಮತ್ತು ಮಹದೇವಮ್ಮ ಉಪಸ್ಥಿತರಿದ್ದರು.

ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಪಂಚಾಯತ್ ಇಲಾಖೆ ಹಾಗೂ ‘ಪ್ರಬಲ’ ಕಾರ್ಯಕ್ರಮದ ತಂಡದ ಸಮನ್ವಯದೊಂದಿಗೆ ಮಾನಸಿಕ ಆರೋಗ್ಯ ಜಾಗೃತಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

Total Views: 0
ಜಾಹೀರಾತು
Share This Article