ಮಧ್ಯವರ್ತಿಗಳ ಆರೋಪ ಸತ್ಯಕ್ಕೆ ದೂರ: ತಹಸೀಲ್ದಾರ್ ಚೈತ್ರ, ಮುಖ್ಯಾಧಿಕಾರಿ ರೇಖಾ ಸ್ಪಷ್ಟನೆ

H.Mallikarjun
H.Mallikarjun - Kalyanasiri
2 Min Read
ಜಾಹೀರಾತು

Allegations regarding middlemen are far from the truth: Clarification by Tahsildar Chaithra and Chief Officer Rekha.

ಮಧ್ಯವರ್ತಿಗಳ ಆರೋಪ ಸತ್ಯಕ್ಕೆ ದೂರ: ತಹಸೀಲ್ದಾರ್ ಚೈತ್ರ, ಮುಖ್ಯಾಧಿಕಾರಿ ರೇಖಾ ಸ್ಪಷ್ಟನೆ

ಜಾಹೀರಾತು

ಕಲ್ಯಾಣ ಸಿರಿ:
ಹನೂರು: ಸರ್ಕಾರಿ ಕೆಲಸದಲ್ಲಿ ಮೇಲಾಧಿಕಾರಿಗಳ ಆದೇಶದಂತೆ ನಿಯಮಾನುಸಾರ ಕಾರ್ಯನಿರ್ವಹಿಸುತ್ತಿದ್ದು, ತಮ್ಮ ವಿರುದ್ಧ ಮಾಡಲಾಗಿರುವ ಲಂಚ ಹಾಗೂ ಕರ್ತವ್ಯ ನಿರ್ಲಕ್ಷ್ಯದ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಎಂದು ಹನೂರು ತಹಸೀಲ್ದಾರ್ ಚೈತ್ರ ಹಾಗೂ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರೇಖಾ ಸ್ಪಷ್ಟಪಡಿಸಿದರು.
ಹನೂರು ಪಟ್ಟಣದ ಲೋಕೋಪಯೋಗಿ ಇಲಾಖೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ತಹಸೀಲ್ದಾರ್ ಚೈತ್ರ ಅವರು, ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರಜಾ ಸೇವಾ ಆಂದೋಲನ ಕಾರ್ಯಕ್ರಮದಲ್ಲಿ ಅಮೋಘ ರಾವ್ ಜಗ್ತಾಪ್ ಮತ್ತಿತರರು ಮಾಡಿರುವ ಲಂಚ ಪಡೆದ ಹಾಗೂ ಕರ್ತವ್ಯದಲ್ಲಿ ಬೇಜವಾಬ್ದಾರಿತನ ತೋರಿದ್ದಾರೆ ಎಂಬ ಆರೋಪಗಳು ಸತ್ಯಕ್ಕೆ ದೂರವಾಗಿವೆ. ಆರೋಪಗಳಿಗೆ ಸಾಕ್ಷ್ಯವಿದ್ದರೆ ಸಾಬೀತುಪಡಿಸಲಿ ಎಂದು ಸವಾಲು ಹಾಕಿದರು.
ಸರ್ಕಾರಿ ಜಾಗವನ್ನು ಖಾತೆ ಮಾಡಿಕೊಡುವಂತೆ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಸರ್ಕಾರಿ ಜಾಗವನ್ನು ಖಾತೆ ಮಾಡಿಕೊಡದ ಹಿನ್ನೆಲೆಯಲ್ಲಿ ಈ ರೀತಿಯ ಆರೋಪಗಳನ್ನು ಮಾಡಲಾಗಿದೆ. ಹೈಕೋರ್ಟ್ ಆದೇಶದಲ್ಲಿ ಸ್ಥಳ ಪರಿಶೀಲನೆ ನಡೆಸಿ, ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆಯೇ ಹೊರತು ಸರ್ಕಾರಿ ಜಾಗವನ್ನು ಖಾತೆ ಮಾಡಿಕೊಡುವಂತೆ ಆದೇಶಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಕಣ್ಣೂರು ನಾಯಕ ಸಮುದಾಯದ ಸ್ಮಶಾನಕ್ಕೆ ಸಂಬಂಧಿಸಿದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಆನಾಪುರ ಹಾಗೂ ಕಣ್ಣೂರು ಗ್ರಾಮಸ್ಥರಿಗೂ ಸ್ಮಶಾನ ಸೌಲಭ್ಯ ಕಲ್ಪಿಸಲು ಕ್ರಮ ವಹಿಸಲಾಗುವುದು. ಯಾರಾದರೂ ದಲಿತ ವಿರೋಧಿ ಎಂದು ಆರೋಪಿಸಿದ ಮಾತ್ರಕ್ಕೆ ಅದಕ್ಕೆ ಮಹತ್ವ ನೀಡುವ ಅಗತ್ಯವಿಲ್ಲ. ದಲಿತರು, ಹಿಂದುಳಿದವರು ಸೇರಿದಂತೆ ಎಲ್ಲ ವರ್ಗದ ಜನರ ಸೇವೆಗೆ ಇಲಾಖೆ ಬದ್ಧವಾಗಿದೆ ಎಂದರು.
ದಲಿತ ಸಂಘರ್ಷ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳು ದಲಿತ ವಿರೋಧಿ ಎಂದು ಆರೋಪಿಸಿದರೂ, ದಲಿತ ಸಮುದಾಯದ ಪರವಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಎಸ್‌ಸಿ–ಎಸ್‌ಟಿ ಸಭೆ ಆಯೋಜಿಸಲಾಗುವುದು. ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್ ತಿಳಿಸಿದರು.
ಕರ್ತವ್ಯದಲ್ಲಿ ಬೇಜವಾಬ್ದಾರಿತನ ಹಾಗೂ ನಿರ್ಲಕ್ಷ್ಯದ ಆರೋಪಗಳನ್ನು ವೈಯಕ್ತಿಕ ಈರ್ಷೆಯಿಂದ ಮಾಡಲಾಗಿದೆ. ಇಲಾಖೆಯಲ್ಲಿ ಸಿಬ್ಬಂದಿ ಹಾಗೂ ನುರಿತ ಸಿಬ್ಬಂದಿಯ ಕೊರತೆಯಿಂದ ಕೆಲವು ಕೆಲಸಗಳು ವಿಳಂಬವಾಗಿವೆ. ಮಲೆ ಮಹದೇಶ್ವರ ಬೆಟ್ಟ, ನಾಗಣ್ಣ ನಗರ, ಹೂಗ್ಯಂ ಸೇರಿದಂತೆ ಹಲವು ಗ್ರಾಮಗಳ ವ್ಯಾಪ್ತಿಯ ಸಾವಿರಾರು ಎಕರೆ ಭೂಮಿಯನ್ನು ಸರ್ವೇ ನಡೆಸಿ ಕಂದಾಯ ಗ್ರಾಮಗಳನ್ನಾಗಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಯಥಾನಕಲು ನೀಡಲು ₹2 ಸಾವಿರ ಲಂಚ ಆರೋಪ ಆಧಾರರಹಿತ
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರೇಖಾ ಮಾತನಾಡಿ, ಯಥಾನಕಲು ನೀಡಲು ₹2 ಸಾವಿರ ಲಂಚ ಪಡೆದಿದ್ದಾರೆ ಎಂಬ ಆರೋಪ ಸಂಪೂರ್ಣ ಆಧಾರರಹಿತವಾಗಿದೆ ಎಂದು ಸ್ಪಷ್ಟಪಡಿಸಿದರು.
ಭರತ್ ಎಂಬ ಸಿಬ್ಬಂದಿಯಿಂದ ಕೆಲಸಗಳು ವಿಳಂಬವಾಗುತ್ತಿದ್ದ ಹಿನ್ನೆಲೆಯಲ್ಲಿ ಹಾಗೂ ದಾಖಲೆಗಳ ತಿದ್ದುಪಡಿ ವಿಚಾರದಲ್ಲಿ ಆತನನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದರು.
ಪಟ್ಟಣದ ತಟ್ಟೆಹಳ್ಳದಲ್ಲಿ ನೀರಿನ ಪ್ರವಾಹ ಉಂಟಾದ ದಿನ ಬೆಳಿಗ್ಗೆ 7.30ರಲ್ಲಿಯೇ ತಾವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾಗಿ ಹೇಳಿದರು. ಸಮಾಜ ಸೇವಕ ನಿಶಾಂತ್ ಅವರು ಮಧ್ಯಾಹ್ನ ಸ್ಥಳಕ್ಕೆ ಬಂದಿದ್ದರು ಎಂಬ ಆರೋಪ ಶುದ್ಧ ಸುಳ್ಳು ಎಂದು ಸ್ಪಷ್ಟಪಡಿಸಿದರು.
ಆರ್.ಎಸ್. ದೊಡ್ಡಿಯಲ್ಲಿ ಉಪ್ಪಾರ ಸಮುದಾಯ ಭವನ ಹಾಗೂ ಸ್ಮಶಾನಕ್ಕೆ ಮಂಜೂರಾತಿ ದೊರೆತಿದ್ದು, ಹದ್ದುಬಸ್ತು ಸಂಬಂಧ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಾಧಿಕಾರಿ ರೇಖಾ ತಿಳಿಸಿದರು.


ವರದಿ: ಬಂಗಾರಪ್ಪ .ಸಿ.

Total Views: 0
ಜಾಹೀರಾತು
Share This Article