ಗಂಗಾವತಿಯ ಕಿಯೋನಿಕ್ಸ್ ಯುವ ಡಾಟ್ ಕಾಂ ಸಂಸ್ಥೆಗೆ ರಾಜ್ಯ ಮಟ್ಟದ ದ್ವಿತೀಯ ಪ್ರಶಸ್ತಿ

H.Mallikarjun
H.Mallikarjun - Kalyanasiri
2 Min Read

State-level second prize for Gangavathi’s Keonics Yuva.com

ಗಂಗಾವತಿಯ ಕಿಯೋನಿಕ್ಸ್ ಯುವ ಡಾಟ್ ಕಾಂ ಸಂಸ್ಥೆಗೆ ರಾಜ್ಯ ಮಟ್ಟದ ದ್ವಿತೀಯ ಪ್ರಶಸ್ತಿ
25 ವರ್ಷಗಳ ಸೇವೆಗೆ ಮತ್ತೊಂದು ಹೆಮ್ಮೆಯ ಗರಿ

ಗಂಗಾವತಿ: ನಗರದ ಕಿಯೋನಿಕ್ಸ್ ಯುವ. ಕಾಮ್ ಕಂಪ್ಯೂಟರ್ ತರಬೇತಿ ಸಂಸ್ಥೆಗೆ ರಾಜ್ಯ ಮಟ್ಟದ ಅತ್ಯುತ್ತಮ ನಿರ್ವಹಣಾ ಕೇಂದ್ರ ಎಂಬ ಗೌರವ ಲಭಿಸಿದ್ದು, ಸಂಸ್ಥೆಯ 25 ವರ್ಷಗಳ ಸೇವೆಗೆ ಮತ್ತೊಂದು ಹೆಮ್ಮೆಯ ಗರಿ ಮೂಡಿದೆ.

ಜಾಹೀರಾತು

ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಕಿಯೋನಿಕ್ಸ್ ಸಂಸ್ಥೆಯ 50ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಸುವರ್ಣ ಮಹೋತ್ಸವ ಸಮಾರಂಭದಲ್ಲಿ, ರಾಜ್ಯದ ಅತ್ಯುತ್ತಮ ನಿರ್ವಹಣಾ ಕೇಂದ್ರಗಳಾಗಿ ಆಯ್ಕೆಯಾದ ಕಿಯೋನಿಕ್ಸ್ ತರಬೇತಿ ಕೇಂದ್ರಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ಕಿಯೋನಿಕ್ಸ್ ಯುವ. ಕಾಮ್ ಕಂಪ್ಯೂಟರ್ ತರಬೇತಿ ಸಂಸ್ಥೆಯ ಮುಖ್ಯಸ್ಥ ದಿಲೀಪ್ ಪವಾರ್ ಅವರು ಕರ್ನಾಟಕ ಸರ್ಕಾರದ ಗೃಹ ವ್ಯವಹಾರಗಳು, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್ ಮಲ್ಲಿಕಾರ್ಜುನ ಖರ್ಗೆ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.

ರಾಜ್ಯ ಮಟ್ಟದಲ್ಲಿ ಅತ್ಯುತ್ತಮ ನಿರ್ವಹಣೆಗಾಗಿ ಆಯ್ಕೆಯಾದ 21 ಕಿಯೋನಿಕ್ಸ್ ಕೇಂದ್ರಗಳ ಪೈಕಿ ಗಂಗಾವತಿಯ ಕಿಯೋನಿಕ್ಸ್ ಯುವ. ಕಾಮ್ ಕಂಪ್ಯೂಟರ್ ತರಬೇತಿ ಸಂಸ್ಥೆ ದ್ವಿತೀಯ ಸ್ಥಾನ ಪಡೆದುಕೊಂಡಿರುವುದು ಗಂಗಾವತಿ ನಗರಕ್ಕೆ ಹೆಮ್ಮೆಯ ಸಂಗತಿಯಾಗಿದೆ.

ಕಳೆದ 25 ವರ್ಷಗಳಿಂದ ಗುಣಮಟ್ಟದ ಕಂಪ್ಯೂಟರ್ ತರಬೇತಿ ಹಾಗೂ ಮಾಹಿತಿ ತಂತ್ರಜ್ಞಾನ ಶಿಕ್ಷಣವನ್ನು ನೀಡುತ್ತಾ ಬಂದಿರುವ ಸಂಸ್ಥೆಯ ನಿರಂತರ ಸೇವೆ, ಉತ್ತಮ ನಿರ್ವಹಣೆ ಹಾಗೂ ವಿದ್ಯಾರ್ಥಿಗಳಿಗೆ ನೀಡುತ್ತಿರುವ ತರಬೇತಿ ಗುಣಮಟ್ಟಕ್ಕೆ ಈ ಪ್ರಶಸ್ತಿ ಮತ್ತೊಂದು ಮಾನ್ಯತೆಯಾಗಿದೆ.

ಕಿಯೋನಿಕ್ಸ್‌ನ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕಿಯೋನಿಕ್ಸ್ ಅಧ್ಯಕ್ಷ ಹಾಗೂ ಶಾಸಕ ಶರತ್ ಬಚ್ಚೇಗೌಡ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಪೊನ್ನಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯ ಯು.ಬಿ. ವೆಂಕಟೇಶ್, ಐಟಿ-ಬಿಟಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎನ್. ಮಂಜುಳಾ, ಕಿಯೋನಿಕ್ಸ್ ವ್ಯವಸ್ಥಾಪಕ ನಿರ್ದೇಶಕ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಗಂಗಾವತಿಯ ಕಿಯೋನಿಕ್ಸ್ ಯುವ. ಕಾಮ್ ಸಂಸ್ಥೆಗೆ ದೊರೆತ ಈ ಪ್ರಶಸ್ತಿಗೆ ಸಂಸ್ಥೆಯ ವಿದ್ಯಾರ್ಥಿಗಳು, ಹಿತೈಷಿಗಳು ಹಾಗೂ ಸಾರ್ವಜನಿಕರು ಅಭಿನಂದನೆ ಸಲ್ಲಿಸಿದ್ದಾರೆ.

Total Views: 1
ಜಾಹೀರಾತು
Share This Article