KaRaVe Swabhimani Sene takes the lead in painting speed breakers to prevent accidents!


ಹಂಪ್ಗಳಿಗೆ ಬಣ್ಣ ಬಳಿದು ಅಪಘಾತ ತಡೆಗೆ ಕರವೇ ಸ್ವಾಭಿಮಾನಿ ಸೇನೆ ಮುಂದಾಳತ್ವ!

ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಂಘಟನೆಯಿಂದ ತಕ್ಕ ಉತ್ತರ; ಮೈಸೂರು–ಕುಶಾಲನಗರ ಹೆದ್ದಾರಿ ಸೇರಿ 6 ಅಪಾಯಕಾರಿ ಹಂಪ್ಗಳಿಗೆ ಬಣ್ಣ
ಕುಶಾಲನಗರ: ರಾಜ್ಯ ಹೆದ್ದಾರಿಗಳಲ್ಲಿ ಸೂಕ್ತ ನಿರ್ವಹಣೆ ಇಲ್ಲದೆ, ವೇಗ ನಿಯಂತ್ರಕ ಹಂಪ್ಗಳಿಗೆ ಬಣ್ಣ ಬಳಿಯದ ಕಾರಣ ವಾಹನ ಚಾಲಕರಿಗೆ ಅವು ಗೋಚರಿಸದೆ ಸರಣಿ ಅಪಘಾತಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಕೊಡಗು ಜಿಲ್ಲಾ ಘಟಕವು ಜನಹಿತದ ಕಾಳಜಿಯಿಂದ ವಿಶಿಷ್ಟ ಸಾಮಾಜಿಕ ಕಾರ್ಯಕ್ಕೆ ಮುಂದಾಗಿದೆ.
ಸಾರ್ವಜನಿಕರಿಂದ ನಿರಂತರವಾಗಿ ಕೇಳಿಬರುತ್ತಿದ್ದ ಅಪಘಾತಗಳ ದೂರುಗಳಿಗೆ ಸ್ಪಂದಿಸಿದ ಕರವೇ ಸ್ವಾಭಿಮಾನಿ ಸೇನೆಯ ಪದಾಧಿಕಾರಿಗಳು ಸ್ವತಃ ರಸ್ತೆಗಿಳಿದು ಅಪಾಯಕಾರಿ ಹಂಪ್ಗಳಿಗೆ ಬಿಳಿ ಬಣ್ಣ ಬಳಿಯುವ ಮೂಲಕ ರಸ್ತೆ ಸುರಕ್ಷತೆಗೆ ಮಾದರಿ ಹೆಜ್ಜೆ ಇಟ್ಟಿದ್ದಾರೆ.
ಮೈಸೂರಿನಿಂದ ಕುಶಾಲನಗರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಾಜ್ಯ ಹೆದ್ದಾರಿಯಲ್ಲಿ, ಬೈಲಕುಪ್ಪೆಯ ಪ್ರಸಿದ್ಧ ಗೋಲ್ಡನ್ ಟೆಂಪಲ್ಗೆ ತೆರಳುವ ರಸ್ತೆಯ ಸಮೀಪವಿರುವ ಹಂಪ್ಗೆ ಮೊದಲು ಬಣ್ಣ ಬಳಿಯಲಾಯಿತು. ವಾಹನಗಳು ವೇಗವಾಗಿ ಸಂಚರಿಸುವ ಈ ರಸ್ತೆಯಲ್ಲಿ ಹಂಪ್ಗಳು ಸರಿಯಾಗಿ ಗೋಚರಿಸದ ಕಾರಣ ಅಪಘಾತದ ಆತಂಕವಿತ್ತು. ಇದೀಗ ಹಂಪ್ಗಳು ದೂರದಿಂದಲೇ ಸ್ಪಷ್ಟವಾಗಿ ಕಾಣುವಂತಾಗಿದ್ದು, ವಾಹನ ಚಾಲಕರು ಮುನ್ನೆಚ್ಚರಿಕೆಯಿಂದ ಸಂಚರಿಸಲು ಅನುಕೂಲವಾಗಿದೆ.
ಒಟ್ಟು 6 ಹಂಪ್ಗಳಿಗೆ ಬಣ್ಣ
ಕರವೇ ಸ್ವಾಭಿಮಾನಿ ಸೇನೆಯ ಕಾರ್ಯಕರ್ತರು ಕುಶಾಲನಗರ ತಾಲೂಕಿನ ವಿವಿಧ ಪ್ರಮುಖ ರಸ್ತೆಗಳಲ್ಲಿ ಒಟ್ಟು ಆರು ಹಂಪ್ಗಳಿಗೆ ಬಣ್ಣ ಬಳಿದರು.
ಗೋಲ್ಡನ್ ಟೆಂಪಲ್ ರಸ್ತೆಯ ಪಕ್ಕದ ಹೆದ್ದಾರಿ ಹಂಪ್ಗೆ ಬಣ್ಣ.
ಕುಶಾಲನಗರ ಹಳೆ ಮಾರ್ಕೆಟ್ ರಸ್ತೆಯ ಎರಡು ಹಂಪ್ಗಳಿಗೆ ಬಣ್ಣ.
ವಾಹನ ಸಂಚಾರ ದಟ್ಟಣೆಯಿರುವ ಐಬಿ ರಸ್ತೆಯ
ಎರಡು ಹಂಪ್ಗಳಿಗೆ ಬಿಳಿ ಬಣ್ಣ.
ಸೋಮವಾರಪೇಟೆ ಮುಖ್ಯ ರಸ್ತೆಯ ಒಂದು ಪ್ರಮುಖ ಹಂಪ್ಗೆ ಬಣ್ಣ.
ಸಾರ್ವಜನಿಕರಿಂದ ಮೆಚ್ಚುಗೆ
ಸಂಬಂಧಪಟ್ಟ ಇಲಾಖೆಗಳು ನಿರ್ವಹಿಸಬೇಕಾದ ರಸ್ತೆ ಸುರಕ್ಷತಾ ಕಾರ್ಯವನ್ನು ಸಂಘಟನೆಯ ಪದಾಧಿಕಾರಿಗಳು ಸ್ವಯಂಪ್ರೇರಿತರಾಗಿ ಕೈಗೆತ್ತಿಕೊಂಡಿರುವುದಕ್ಕೆ ಸ್ಥಳೀಯ ಸಾರ್ವಜನಿಕರು ಹಾಗೂ ವಾಹನ ಚಾಲಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಂಪ್ಗಳಿಗೆ ಬಣ್ಣ ಬಳಿಯುವುದರಿಂದ ಅಪಘಾತಗಳ ಪ್ರಮಾಣ ಕಡಿಮೆಯಾಗಲು ಹಾಗೂ ವಾಹನ ಚಾಲಕರು ಮುನ್ನೆಚ್ಚರಿಕೆಯಿಂದ ಸಂಚರಿಸಲು ನೆರವಾಗಲಿದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.
ಪದಾಧಿಕಾರಿಗಳು, ಕಾರ್ಯಕರ್ತರ ಸಕ್ರಿಯ ಪಾಲ್ಗೊಳ್ಳುವಿಕೆ
ಈ ಸಾಮಾಜಿಕ ಕಾರ್ಯದಲ್ಲಿ ಕರವೇ ಸ್ವಾಭಿಮಾನಿ ಸೇನೆ ಜಿಲ್ಲಾಧ್ಯಕ್ಷ ಫ್ರಾನ್ಸಿಸ್ ಡಿಸೋಜ, ಜಿಲ್ಲಾ ಉಪಾಧ್ಯಕ್ಷ ರಾಜಶೇಖರ್ ಗೌಡ, ಜಿಲ್ಲಾ ಗೌರವಾಧ್ಯಕ್ಷ ಚಂದ್ರು, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಜಯಶ್ರೀ ಮುರುಗೇಶ್, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಫ್ರೆಡ್ಡಿ, ಕುಶಾಲನಗರ ತಾಲೂಕು ಅಧ್ಯಕ್ಷ ಕೆ.ಎಸ್. ಶಿವ, ತಾಲೂಕು ಉಪಾಧ್ಯಕ್ಷ ನಾಸಿರ್, ಕಾರ್ಮಿಕ ಘಟಕದ ತಾಲೂಕು ಅಧ್ಯಕ್ಷ ಆರ್. ಚಂದ್ರು, ಉಪಾಧ್ಯಕ್ಷ ಮಣಿಕಂಠ, ಸಂಚಾಲಕ ವಿಪಿ ಚಂದ್ರಶೇಖರ್, ಕೂಡಿಗೆ ವಲಯ ಅಧ್ಯಕ್ಷೆ ನಿಶಾ, ಸುಂಟಿಕೊಪ್ಪ ಹೋಬಳಿ ಯುವ ಘಟಕದ ಅಧ್ಯಕ್ಷ ಕ್ಲಿಫರ್ಡ್ ರೊಡ್ರಿಗಸ್ ಸೇರಿದಂತೆ ಅಂತೋಣಿ, ನಂಜಪ್ಪ, ವಿಲ್ಸನ್, ಬಾಲಕೃಷ್ಣ, ಖಾಸಿಂ, ಜೈರುದ್ದೀನ್ ಸೇರಿದಂತೆ ಹಲವು ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
ಜನರ ಸುರಕ್ಷತೆಗಾಗಿ ಸಂಘಟನೆ ರಸ್ತೆಗಿಳಿದಿರುವುದು ಸಾರ್ವಜನಿಕ ವಲಯದಲ್ಲಿ ಗಮನ ಸೆಳೆದಿದ್ದು, ಕರವೇ ಸ್ವಾಭಿಮಾನಿ ಸೇನೆಯ ಈ ಸಮಯೋಚಿತ ಹಾಗೂ ಜನಪರ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

