ನಗರದಲ್ಲಿ ನೂತನ ಗ್ರಾಮೀಣ ಠಾಣೆ,    ಆನೆಗುಂದಿಯಲ್ಲಿ ಉಪಠಾಣೆ ಸ್ಥಾಪನೆಗೆ ಬಸವರಾಜ ಮ್ಯಾಗಳಮನಿ ಆಗ್ರಹ

H.Mallikarjun
H.Mallikarjun - Kalyanasiri
1 Min Read
Basavaraja Magalamani demands establishment of a sub-station in Anegundi

 

ನಗರದಲ್ಲಿ ನೂತನ ಗ್ರಾಮೀಣ ಠಾಣೆ,    ಆನೆಗುಂದಿಯಲ್ಲಿ ಉಪಠಾಣೆ ಸ್ಥಾಪನೆಗೆ ಬಸವರಾಜ ಮ್ಯಾಗಳಮನಿ ಆಗ್ರಹ

ಜಾಹೀರಾತು

ಗಂಗಾವತಿ: ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಕಾನೂನುಬಾಹಿರ ಹಾಗೂ ಅಪರಾಧ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಗಂಗಾವತಿ ನಗರದಲ್ಲಿ ಅತ್ಯಾಧುನಿಕ ಹಾಗೂ ಸುಸಜ್ಜಿತ ಗ್ರಾಮೀಣ ಪೊಲೀಸ್ ಠಾಣೆಯ ನೂತನ ಕಟ್ಟಡ ನಿರ್ಮಾಣ ಮಾಡಬೇಕು ಎಂದು ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ಒತ್ತಾಯಿಸಿದ್ದಾರೆ.
ಪ್ರಸ್ತುತ ಗ್ರಾಮೀಣ ಪೊಲೀಸ್ ಠಾಣೆಯು ಎಪಿಎಂಸಿ ಯಾರ್ಡ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಗ್ರಾಮೀಣ ಪ್ರದೇಶದ ಸಾರ್ವಜನಿಕರು ತಮ್ಮ ದೂರುಗಳು ಹಾಗೂ ವಿವಿಧ ಪೊಲೀಸ್ ಸಂಬಂಧಿತ ಕೆಲಸಗಳಿಗಾಗಿ ಠಾಣೆಗೆ ತೆರಳಲು ಅನಾನುಕೂಲವಾಗುತ್ತಿದೆ.

ಹೀಗಾಗಿ ಸಾರ್ವಜನಿಕರ ಅನುಕೂಲಕ್ಕಾಗಿ ನಗರದಲ್ಲಿಯೇ ಸೂಕ್ತ ಸ್ಥಳದಲ್ಲಿ ಗ್ರಾಮೀಣ ಪೊಲೀಸ್ ಠಾಣೆಯ ಸುಸಜ್ಜಿತ ಕಟ್ಟಡ ನಿರ್ಮಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಇದೇ ವೇಳೆ, ಆನೆಗುಂದಿ ಐತಿಹಾಸಿಕ ಹಾಗೂ ಪ್ರಮುಖ ಪ್ರವಾಸೋದ್ಯಮ ಕೇಂದ್ರವಾಗಿದ್ದು, ರಾಜ್ಯದ ವಿವಿಧ ಭಾಗಗಳಿಂದ ಮಾತ್ರವಲ್ಲದೆ ಹೊರರಾಜ್ಯ ಹಾಗೂ ವಿದೇಶಗಳಿಂದಲೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುಂಜಾಗ್ರತಾ ಕ್ರಮವಾಗಿ ಆನೆಗುಂದಿ ಭಾಗದಲ್ಲಿ ಗ್ರಾಮೀಣ ಪೊಲೀಸ್ ಉಪಠಾಣೆ ಸ್ಥಾಪಿಸಬೇಕು ಎಂದು ಮನವಿ ಮಾಡಿದ್ದಾರೆ.
ಈ ಎರಡೂ ಬೇಡಿಕೆಗಳನ್ನು ಈಡೇರಿಸುವ ಮೂಲಕ ಗ್ರಾಮೀಣ ಭಾಗದ ಜನರಿಗೆ ಪೊಲೀಸ್ ಸೇವೆಗಳನ್ನು ಮತ್ತಷ್ಟು ಸುಲಭವಾಗಿ ತಲುಪಿಸಲು ಹಾಗೂ ಆನೆಗುಂದಿ ಪ್ರವಾಸೋದ್ಯಮ ಪ್ರದೇಶದಲ್ಲಿ ಸುರಕ್ಷತೆ ಮತ್ತು ಕಾನೂನು ಸುವ್ಯವಸ್ಥೆಯನ್ನು ಬಲಪಡಿಸಲು ಸಾಧ್ಯವಾಗಲಿದೆ ಎಂದು ಬಸವರಾಜ ಮ್ಯಾಗಳಮನಿ ತಿಳಿಸಿದ್ದಾರೆ.
ಈ ಕುರಿತು ಡಿವೈಎಸ್‌ಪಿ ನ್ಯಾಮೇಗೌಡ ಅವರ ಮೂಲಕ ರಾಜ್ಯ ಗೃಹ ಸಚಿವರಿಗೆ ಮನವಿ ಪತ್ರ ಸಲ್ಲಿಸಿ, ಶೀಘ್ರ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ.

Total Views: 0
ಜಾಹೀರಾತು
Share This Article