Kushtagi Assembly Constituency: Draft electoral roll of 2,14,016 voters published.
ಕುಷ್ಟಗಿ ವಿಧಾನಸಭಾ ಕ್ಷೇತ್ರ: 2,14,016 ಮತದಾರರ ಕರಡು ಪಟ್ಟಿ ಪ್ರಕಟ
ಜಾಹೀರಾತು

ಕೊಪ್ಪಳ ಆಗಸ್ಟ್ 24, (ಕರ್ನಾಟಕ ವಾರ್ತೆ): ಜಿಲ್ಲೆಯ 60-ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್)-2026ರ ಸಂಬAಧ ಮತದಾರರ ಕರಡು ಪಟ್ಟಿ ಪ್ರಕಟಿಸಲಾಗಿದ್ದು, ಒಟ್ಟು 2,14,016 ಮತದಾರರು ಕರಡು ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಾರೆ.
60-ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿದ್ದ ಒಟ್ಟು 2,47,482 ಮತದಾರರ ಪೈಕಿ ಶೇ.86.48 ರಷ್ಟು ಅಂದರೆ 2,14,016 ಮತದಾರರ ಮಾಹಿತಿ ಪರಿಶೀಲಿಸಿ ಕರಡು ಪಟ್ಟಿ ತಯಾರಿಸಲಾಗಿದೆ. ಇದರಲ್ಲಿ 1,08,363 ಪುರುಷ ಮತದಾರರು, 1,05,644 ಮಹಿಳಾ ಮತದಾರರು ಹಾಗೂ 09 ಇತರೆ ಮತದಾರರಿದ್ದಾರೆ.
ಕರಡು ಮತದಾರರ ಪಟ್ಟಿಯಿಂದ ಹೊರಗುಳಿದ ಒಟ್ಟು 33,466 ಮತದಾರರ ಪೈಕಿ 5,008 ಮಂದಿ ಮೃತಪಟ್ಟಿದ್ದರೆ, 21730 ಮತದಾರರು ಶಾಶ್ವತವಾಗಿ ವಲಸೆ ಹೋಗಿದ್ದಾರೆ. 6,726 ಡಬಲ್ ಎಂಟ್ರಿ ಹಾಗೂ ಮೂರ್ನಾಲ್ಕು ಬಾರಿ ಭೇಟಿ ನೀಡಿದರೂ ಸ್ಥಳದಲ್ಲಿ ಲಭ್ಯವಿಲ್ಲದ 02 ಗೈರುಹಾಜರಿ ಮತದಾರ ಹೆಸರುಗಳನ್ನು ಪಟ್ಟಿಯಿಂದ ಹೊರಗಿಡಲಾಗಿದೆ. ಈ ಪಟ್ಟಿಯನ್ನು ಜಿಲ್ಲಾ ವೆನ್ಸೈಟ್ https://koppal.nic.in/en election/ ನಲ್ಲಿ ಪ್ರಕಟಿಸಲಾಗಿದ್ದು, ಸಾರ್ವಜನಿಕರು ತಮ್ಮ ಹೆಸರುಗಳನ್ನು ಪರಿಶೀಲಿಸಿಕೊಳ್ಳಬಹುದು.
ಕರಡು ಮತದಾರರ ಪಟ್ಟಿ ಪ್ರಕಟಗೊಂಡಿದ್ದು, ಇಂದಿನಿAದ ಸೆಪ್ಟೆಂಬರ್ 23 ರವರೆಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಸಾರ್ವಜನಿಕರಿಗೆ ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ. ಸಾರ್ವಜನಿಕರು ಅರ್ಜಿ ಹಾಗೂ ಆಕ್ಷೇಪಣೆಗಳನ್ನು ಜಿಲ್ಲಾಧಿಕಾರಿ ಕಚೇರಿ, ತಾಲೂಕು ಕಚೇರಿಗಳು, ಗ್ರಾಮ ಪಂಚಾಯಿತಿ ಕೇಂದ್ರಗಳು ಹಾಗೂ ಬಿಎಲ್ಒ ಕೇಂದ್ರಗಳಲ್ಲಿ ಸಲ್ಲಿಸಬಹುದು.
ಮತದಾರರ ಪಟ್ಟಿಯಲ್ಲಿ ಹೆಸರಿನ ಕಾಗುಣಿತ, ವಿಳಾಸ ಸೇರಿದಂತೆ ಸಣ್ಣಪುಟ್ಟ ತಿದ್ದುಪಡಿಗಳಿರುವ ಸುಮಾರು 2,359 ಮತದಾರರು ಹಾಗೂ ಮ್ಯಾಪ್ ಆಗದ 462 ಮತದಾರರು ಸೇರಿದಂತೆ ಒಟ್ಟು 2,821 ಮತದಾರರಿಗೆ ನೋಟಿಸ್ ನೀಡಿ, ತಾಲೂಕು ಮಟ್ಟದಲ್ಲಿ ತಹಶೀಲ್ದಾರ್ ಹಾಗೂ ಇಆರ್ಒ ಹಂತದಲ್ಲಿ ಕರೆಸಿ ಸೂಕ್ತ ದಾಖಲೆಗಳನ್ನು ಪಡೆದು ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ. ಗಣತಿ ನಮೂನೆಯಲ್ಲಿ ಒದಗಿಸಿರುವ ಹಿಂದಿನ ವಿಶೇಷ ಸಮಗ್ರ ಪರಿಷ್ಕರಣೆ ಮತದಾರರ ಪಟ್ಟಿಯ ವಿವರಗಳು ಲಭ್ಯವಿಲ್ಲದಿದ್ದಲ್ಲಿ ಅಥವಾ ಡೇಟಾಬೇಸ್ನಲ್ಲಿರುವ ಮಾಹಿತಿಯೊಂದಿಗೆ ತಾಳೆಯಾಗದಿರುವ ಮತದಾರರಿಗೆ ನೋಟಿಸ್ ನೀಡಲಾಗುವುದು. ಅಂತಹ ನೋಟಿಸ್ ಸ್ವೀಕರಿಸಿದ ನಂತರ ಮತದಾರರು ಅವಶ್ಯಕ ದಾಖಲೆಗಳನ್ನು ಸಲ್ಲಿಸಬೇಕು.
ಕುಷ್ಟಗಿ ವಿಧಾನ ಸಭಾ ಕ್ಷೇತ್ರದಲ್ಲಿ ಈ ಹಿಂದೆ 268 ಮತಗಟ್ಟೆ ಕೇಂದ್ರಗಳಿದ್ದವು. 1,200 ಕ್ಕಿಂತ ಹೆಚ್ಚು ಮತದಾರರಿರುವ ಕೇಂದ್ರಗಳನ್ನು ಗುರುತಿಸಿ, ಸುಲಭ ಮತದಾನಕ್ಕಾಗಿ 14 ಹೆಚ್ಚುವರಿ ಶಾಶ್ವತ ಮತದಾನ ಕೇಂದ್ರಗಳನ್ನು ನೂತನವಾಗಿ ಸ್ಥಾಪಿಸಲಾಗಿದ್ದು, ಇದರಿಂದ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ಮತಗಟ್ಟೆ ಕೇಂದ್ರಗಳ ಸಂಖ್ಯೆ 282 ಕ್ಕೆ ಏರಿಕೆಯಾಗಿದೆ.
ಕರಡು ಮತದಾರರ ಪಟ್ಟಿಯನ್ನು ಮತಗಟ್ಟೆ ಕೇಂದ್ರ, ಗ್ರಾಮ ಪಂಚಾಯಿತಿ ಕಚೇರಿ, ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿ, ತಾಲ್ಲೂಕು ಕಚೇರಿ, ಉಪವಿಭಾಗಾಧಿಕಾರಿಗಳ ಕಚೇರಿ ಹಾಗೂ ಜಿಲ್ಲಾ ವೆಬ್ಸೈಟ್ www.koppal.nic.in ನಲ್ಲಿ ಪರಿಶೀಲಿಸಿಕೊಂಡು ಈ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದಲ್ಲಿ ಪೂರಕ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಹತಾ ದಿನಾಂಕಕ್ಕೆ 18 ವರ್ಷ ಪೂರ್ಣಗೊಳ್ಳುವವರು ಹಾಗೂ ಅರ್ಹ ಹೊಸ ಮತದಾರರು ನಮೂನೆ 6, ಹೊಸ ಮತದಾರರ ನೋಂದಣಿ(ಎನ್ಆರ್ಐ) ನಮೂನೆ 6ಎ, ಈಗಿರುವ ಮತದಾರರ ಪಟ್ಟಿಯಿಂದ ಹೆಸರನ್ನು ತೆಗೆದು ಹಾಕಲು ನಮೂನೆ 7 ಮತ್ತು ನಮೂದುಗಳ ತಿದ್ದುಪಡಿಗಾಗಿ ನಮೂನೆ 8 ಇವುಗಳನ್ನು ECINET ಮೊಬೈಲ್ ಆಪ್ ಅಥವ voters.eci.gov.in ನಲ್ಲಿಯೂ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ನಮೂನೆ 6 ಮತ್ತು ಘೋಷಣಾ ನಮೂನೆಯನ್ನು ಸಲ್ಲಿಸುವ ಅರ್ಜಿದಾರರು ಭಾರತದ ಪ್ರಜೆಯಾಗಿರಬೇಕು. ದಿನಾಂಕ: 01-10-2026 ರ ವೇಳೆಗೆ 18 ವರ್ಷ ವಯಸ್ಸು ಪೂರ್ಣಗೊಳಿಸಿರಬೇಕು ಅಥವಾ ಪೂರ್ಣಗೊಳಿಸಲಿರಬೇಕು. ಅರ್ಜಿಯಲ್ಲಿ ನಮೂದಿಸಿರುವ ವಿಳಾಸದಲ್ಲಿ ಅವರು ಸಾಮಾನ್ಯ ನಿವಾಸಿಯಾಗಿರಬೇಕು. ಪ್ರಸ್ತುತ ಭಾರತದ ಬೇರೆ ಯಾವುದೇ ಸ್ಥಳದಲ್ಲಿ ಮತದಾರರಾಗಿ ನೋಂದಾಯಿತರಾಗಿರಬಾರದು. ಚುನಾವಣಾ ಆಯೋಗವು ನಿಗದಿಪಡಿಸಿರುವ ಅಗತ್ಯ ದಾಖಲೆಗಳನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು.
ಹಕ್ಕು ಮತ್ತು ಆಕ್ಷೇಪಣೆ ಅವಧಿಯಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರದಂದು (ಆಗಸ್ಟ್ 29, 30, ಸೆಪ್ಟೆಂಬರ್ 5, 6, 12, 13, 19, ಮತ್ತು 20) ಬೂತ್ ಮಟ್ಟದ ಅಧಿಕಾರಿಗಳನ್ನು ಹಾಗೂ ಇತರೆ ಅಧಿಕಾರಿಗಳನ್ನು ನಿಯೋಜನೆ ಮಾಡುವ ಮೂಲಕ ವಿಶೇಷ ನೋಂದಣಿ ಅಭಿಯಾನ ಅಥವಾ ಮಿಂಚಿನ ನೋಂದಣಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ವಿಶೇಷ ಅಭಿಯಾನವು ವಸತಿ ಪ್ರದೇಶಗಳು, ಅಪಾರ್ಟ್ಮೆಂಟ್, ಶೈಕ್ಷಣಿಕ ಸಂಸ್ಥೆಗಳು, ಕೈಗಾರಿಕಾ ಸಂಸ್ಥೆಗಳು ಹಾಗೂ ಅರ್ಹ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಇತರೆ ಸ್ಥಳಗಳಲ್ಲಿ ನಡೆಸಲಾಗುವುದು. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು 60-ಕುಷ್ಟಗಿ ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿಗಳು ಹಾಗೂ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಮಂಜುನಾಥ ಗುಂಡೂರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Total Views:
0
ಜಾಹೀರಾತು

