Construction of bronze statue of Srirangadevarayalu as part of Fourth Commemoration: Parana Munavalli


ನಾಲ್ಕನೇ ಪುಣ್ಯಸ್ಮರಣೆಯೊಳಗೆ ಶ್ರೀರಂಗದೇವರಾಯಲು ಕಂಚಿನ ಪ್ರತಿಮೆ ನಿರ್ಮಾಣ: ಪರಣ್ಣ ಮುನವಳ್ಳಿ

ಸರ್ಕಾರದ ಅನುಮತಿ ಪಡೆದು ಪಕ್ಷಾತೀತವಾಗಿ ಪ್ರತಿಮೆ ನಿರ್ಮಾಣಕ್ಕೆ ಬದ್ಧತೆ
ಗಂಗಾವತಿ: ಮಾಜಿ ಸಚಿವ ಹಾಗೂ ಹಿರಿಯ ಶಾಸಕ ದಿವಂಗತ ಶ್ರೀರಂಗದೇವರಾಯಲು ಅವರ ರಾಜಕೀಯ ಮತ್ತು ಜನಸೇವಾ ಜೀವನ ಇಂದಿನ ರಾಜಕಾರಣಿಗಳಿಗೆ ಮಾದರಿಯಾಗಿದೆ. ಅವರ ನಾಲ್ಕನೇ ಪುಣ್ಯಸ್ಮರಣೆಯೊಳಗೆ ಕಂಚಿನ ಪ್ರತಿಮೆ ನಿರ್ಮಿಸಿ, ಪ್ರತಿಮೆಗೆ ಪೂಜೆ ಸಲ್ಲಿಸಿದ ಬಳಿಕ ಅವರ ಪುಣ್ಯಕರ್ಮಭೂಮಿ ಸಮಾಧಿಗೆ ಪೂಜೆ ಸಲ್ಲಿಸುವ ಸಂಕಲ್ಪ ಶತಸಿದ್ಧವಾಗಿದ್ದು, ಈ ಕಾರ್ಯವನ್ನು ಪೂರ್ಣಗೊಳಿಸಲು ಎಲ್ಲ ರೀತಿಯ ಪ್ರಯತ್ನ ನಡೆಸಲಾಗುವುದು ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು.
ನಗರದಲ್ಲಿ ಶ್ರೀರಂಗದೇವರಾಯಲು ಪ್ರತಿಷ್ಠಾನ ಸಮಿತಿ ವತಿಯಿಂದ ಆಯೋಜಿಸಿದ್ದ ನಾಲ್ಕನೇ ಪುಣ್ಯಸ್ಮರಣೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಶ್ರೀರಂಗದೇವರಾಯಲು ಅವರು ಸತತ 25 ವರ್ಷಗಳ ಕಾಲ ಜನಸೇವಕ ಶಾಸಕರಾಗಿ ಕಾರ್ಯನಿರ್ವಹಿಸಿ ಜನರ ಹೃದಯದಲ್ಲಿ ಅಚ್ಚಳಿಯದ ಸ್ಥಾನ ಪಡೆದಿದ್ದಾರೆ. ಅವರ ಸ್ಮರಣಾರ್ಥ ಕಂಚಿನ ಪ್ರತಿಮೆ ನಿರ್ಮಾಣಕ್ಕೆ ಯಾವುದೇ ಕಾನೂನು ತೊಡಕು ಉಂಟಾಗದಂತೆ ಸರ್ಕಾರದ ಅಗತ್ಯ ಅನುಮತಿಯನ್ನು ಪಡೆದುಕೊಳ್ಳಲಾಗುವುದು. ಪಕ್ಷಾತೀತವಾಗಿ ಎಲ್ಲರ ಸಹಕಾರದೊಂದಿಗೆ ಪ್ರತಿಮೆ ನಿರ್ಮಾಣ ಕಾರ್ಯ ಕೈಗೊಳ್ಳಲು ತಾವು ಸಂಪೂರ್ಣವಾಗಿ ಬದ್ಧರಾಗಿದ್ದೇವೆ ಎಂದು ಪರಣ್ಣ ಮುನವಳ್ಳಿ ಘೋಷಿಸಿದರು.
ರಾಜಮಾತೆ ಲಲಿತಾ ರಾಣಿ ರಾಯಲು ಮಾತನಾಡಿ, ಕನಕಗಿರಿ, ಗಂಗಾವತಿ ಸೇರಿದಂತೆ ಪ್ರತಿಯೊಬ್ಬ ಪ್ರಜೆಯ ಸಣ್ಣ-ಸಣ್ಣ ಕೊಡುಗೆ ಹಾಗೂ ಜನಸಹಭಾಗಿತ್ವದ ಮೂಲಕ ಶ್ರೀರಂಗದೇವರಾಯಲು ಅವರ ಕಂಚಿನ ಪ್ರತಿಮೆ ನಿರ್ಮಾಣಕ್ಕೆ ಮುಂದಾಗಬೇಕು. ಜನರ ಸಹಕಾರದಿಂದ ಈ ಕಾರ್ಯ ನೆರವೇರಿದಾಗ ಮಾತ್ರ ಅವರ ಆತ್ಮಕ್ಕೆ ನಿಜವಾದ ಶಾಂತಿ ದೊರೆಯುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಎಂ. ಸಿದ್ದರಾಮಯ್ಯ, ಸ್ವಾಮಿ ಎಸ್. ಪ್ರಸಾದ್, ಕಲ್ಯಾಣ ನಾಗೇಶ್ವರ, ಡಿ.ಜಿ. ಬಾಬು, ವಿಶ್ವನಾಥ ಕೊಪ್ಪ, ರಾಜ ಯುವರಾಜ ಯಾದವರಾವ್, ವಕೀಲ ಬಾಬಿ ರೆಡ್ಡಿ, ಸಪ್ನಾ ಕೃಷ್ಣ, ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷ ವೆಂಕಟೇಶ್, ಹೊನ್ನಪ್ಪ ನಾಯಕ್, ಕೆ. ನಿಂಗಜ್ಜ, ಅಂಜಿನಪ್ಪ, ರಾಜು, ನರಸಿಂಹಲು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸಾಧನೆಗೈದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.

