ತಳಕಲ್: ತೊಗರಿ ಕುಡಿಚಿವುಟುವ ಯಂತ್ರದ ಪ್ರಾತ್ಯಕ್ಷಿಕೆ

H.Mallikarjun
H.Mallikarjun - Kalyanasiri
2 Min Read

Headline: Demonstration of the chickpea peeling machine

ತಳಕಲ್: ತೊಗರಿ ಕುಡಿಚಿವುಟುವ ಯಂತ್ರದ ಪ್ರಾತ್ಯಕ್ಷಿಕೆ

ಕೊಪ್ಪಳ ಆಗಸ್ಟ್ 12 (ಕರ್ನಾಟಕ ವಾರ್ತೆ): ತಳಕಲ್ ಗ್ರಾಮದ ಪ್ರಗತಿಪರ ರೈತ ಶಂಕರರಾವ್ ಕುಲಕರ್ಣಿ ಅವರ ಹೊಲದಲ್ಲಿ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವತಿಯಿಂದ ತೊಗರಿ ಕುಡಿಚಿವುಟುವ ಯಂತ್ರದ ಪ್ರಾತ್ಯಕ್ಷಿಕೆಯನ್ನು ಆಯೋಜಿಸಲಾಗಿತ್ತು.
ತೊಗರಿ ಬೆಳೆಯನ್ನು 35 ಮತ್ತು 55 ದಿನಗಳ ಅಂತರದಲ್ಲಿ ಕುಡಿಚಿವುಟುವುದರಿಂದ ಹೆಚ್ಚಿನ ಕವಲುಗಳು ಹೊಡೆದು, ಹೆಚ್ಚಿನ ಕಾಯಿಗಳು ಹಿಡಿಯುವ ಮೂಲಕ ಇಳುವರಿ ಹೆಚ್ಚಳವಾಗುತ್ತದೆ ಎಂದು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಸ್ತರಣಾ ಮುಂದಾಳು ಡಾ. ಬದರಿ ಪ್ರಸಾದ್ ಪಿ.ಆರ್. ಅವರು ರೈತರಿಗೆ ತಿಳಿಸಿದರು.
ಕಾರ್ಯಕ್ರಮದ ಸಂದರ್ಭದಲ್ಲಿ ಮಹಿಳಾ ಕೃಷಿ ಕಾರ್ಮಿಕರು ತೊಗರಿ ಕುಡಿಚಿವುಟುವ ಕಾರ್ಯದಲ್ಲಿ ತೊಡಗಿದ್ದ ವೇಳೆ, ಯಂತ್ರದ ಮೂಲಕ ಕುಡಿಚಿವುಟುವುದರಿಂದ ಕಡಿಮೆ ವೆಚ್ಚದಲ್ಲಿ ಹಾಗೂ ಶೀಘ್ರವಾಗಿ ಕೆಲಸ ಪೂರ್ಣಗೊಳಿಸಬಹುದು ಎಂದು ವಿಜ್ಞಾನಿಗಳು ವಿವರಿಸಿದರು. ಇದನ್ನು ಪ್ರಾತ್ಯಕ್ಷಿಕೆಯ ಮೂಲಕ ಗಮನಿಸಿದ ಕಾರ್ಮಿಕರು, ಯಂತ್ರದ ಬಳಕೆಯಿಂದ ತಮ್ಮ ಶ್ರಮ ಮತ್ತು ಸಮಯ ಉಳಿತಾಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರಿನ ಆಡಳಿತ ಮಂಡಳಿ ಸದಸ್ಯರಾದ ತಿಮ್ಮಣ್ಣ ಚೌಡಿ ಅವರು ಮಾತನಾಡಿ, ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ತಳಕಲ್ ಸುತ್ತಮುತ್ತಲಿನ ಗ್ರಾಮಗಳಲ್ಲಿ ವ್ಯಾಪಕವಾಗಿ ತೊಗರಿ ಬಿತ್ತನೆಯಾಗಿದ್ದು, ಇಂತಹ ನೂತನ ತಾಂತ್ರಿಕತೆಗಳನ್ನು ಅಳವಡಿಸಿಕೊಳ್ಳುವುದರಿಂದ ರೈತರ ಆದಾಯ ಹೆಚ್ಚಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು. ವಿಶೇಷವಾಗಿ ಈ ವರ್ಷ ಸೌರಶಕ್ತಿಯಿಂದ ಕಾರ್ಯನಿರ್ವಹಿಸುವ ತೊಗರಿ ಕುಡಿಚಿವುಟುವ ಯಂತ್ರವನ್ನು ತರಲಾಗಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರಗತಿಪರ ರೈತ ಶಂಕರರಾವ್ ಕುಲಕರ್ಣಿ ಮಾತನಾಡಿ, ಕಳೆದ ವರ್ಷ ಕೃಷಿ ಕಾರ್ಮಿಕರ ಮೂಲಕ ತೊಗರಿ ಕುಡಿಚಿವುಟುವ ಸಂದರ್ಭದಲ್ಲಿ ಒಂದು ಎಕರೆಗೆ ಸುಮಾರು 6ರಿಂದ 7 ಆಳುಗಳ ಅಗತ್ಯವಿತ್ತು. ಆದರೆ ಯಂತ್ರದ ಮೂಲಕ ಒಬ್ಬ ವ್ಯಕ್ತಿಯೇ ಈ ಕಾರ್ಯವನ್ನು ನಿರ್ವಹಿಸಬಹುದಾಗಿದ್ದು, ಇದರಿಂದ ಕೃಷಿ ಕಾರ್ಮಿಕರ ವೆಚ್ಚ ಗಣನೀಯವಾಗಿ ಕಡಿಮೆಯಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನೀಲನಗೌಡ್ರು ಮಾಲಿಪಾಟೀಲ್, ಶುಭಾಸಪ್ಪ ಕೆಂಚರಡ್ಡಿ, ಉಮೇಶ್‌ಗೌಡ್ರು ಪೊಲೀಸ್ ಪಾಟೀಲ್, ವೀರೇಶ್ ಬಿಸನಹಳ್ಳಿ, ಶಂಕರರಾವ್ ಹಿರೇಮನಿ, ಕುಮಾರೆಡ್ಡಿ ಭೀಮರೆಡ್ಡಿ ಸೇರಿದಂತೆ ತಳಕಲ್ ಗ್ರಾಮದ ಹಲವಾರು ರೈತರು ಭಾಗವಹಿಸಿದ್ದರು.
ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಜ್ಞಾನಿಗಳನ್ನು (ಡಾ. ಬದರಿ ಪ್ರಸಾದ್ ಪಿ.ಆರ್., ವಿಸ್ತರಣಾ ಮುಂದಾಳು, ಮೊ. 9900145705) ಸಂಪರ್ಕಿಸಬಹುದು.
Total Views: 0
Share This Article