Request to build a Gandhi memorial pillar

ಗಾಂಧಿ ಸ್ಮಾರಕ ಸ್ತಂಭ ನಿರ್ಮಿಸಲು ಮನವಿ

ಕೊಪ್ಪಳ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ಕರ್ನಾಟಕದಲ್ಲಿ ಭೇಟಿ ನೀಡಿದ ಸ್ಥಳಗಳಲ್ಲಿ ಗಾಂಧಿ ಸ್ಮಾರಕ ಸ್ತಂಭ ನಿರ್ಮಿಸಲು ರಾಜ್ಯ ಸರ್ಕಾರ ಮುಂದಾಗಿದ್ದು ಅದರಂತೆಯೇ ಜಿಲ್ಲೆಯ ಭಾನಾಪುರ ರೈಲು ನಿಲ್ದಾಣದಲ್ಲಿಯೂ ಈ ಸ್ತಂಭ ನಿರ್ಮಿಸಬೇಕು ಎಂದು ಕೊಪ್ಪಳದ ಗಾಂಧಿ ಬಳಗ ಮನವಿ ಮಾಡಿದೆ. ಈ ಕುರಿತು ಜಿಲ್ಲಾಧಿಕಾರಿಗೆ ಬರೆದ ಮನವಿಯನ್ನು ಬುಧವಾರ ಹೆಚ್ಚುವರಿ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಅವರಿಗೆ ಸಲ್ಲಿಸಲಾಗಿದೆ.
ಭಾನಾಪುರ ರೈಲು ನಿಲ್ದಾಣಕ್ಕೆ 1934 ಮಾರ್ಚ್ 3ರಂದು ಗಾಂಧೀಜಿ ಭೇಟಿ ನೀಡಿದ್ದು ಐತಿಹಾಸಿಕ ಸಂಗತಿಯಾಗಿದೆ. ಹರಿಜನರ ಉದ್ದಾರಕ್ಕಾಗಿ ನಿಧಿ ಸಂಗ್ರಹಿಸಲು ಬಂದಾಗ ಭಾನಾಪುರದ ಕಾಳಪ್ಪ ಪತ್ತಾರ ಅವರು ಸ್ಥಳದಲ್ಲಿಯೇ ಗಾಂಧೀಜಿಯವರ ಚಿತ್ರವನ್ನು ಬಿಡಿಸಿ ಹರಾಜು ಮಾಡಿದ ಹಣವನ್ನೇ ನಿಧಿಯಾಗಿ ಗಾಂಧೀಜಿಯವರಿಗೆ ನೀಡಿದ್ದರು. ಈ ಘಟನೆ ಐತಿಹಾಸಿಕವಾಗಿದೆ.
ಆದ್ದರಿಂದ ಭಾನಾಪುರದಲ್ಲಿ ಗಾಂಧಿ ಸ್ಮಾರಕ ಸ್ತಂಭ ನಿರ್ಮಿಸಲು ಕ್ರಮ ವಹಿಸಬೇಕು ಎಂದು ಮನವಿಯಲ್ಲಿ ಹೇಳಿದ್ದಾರೆ.
ಗಾಂಧಿ ಬಳಗದ ಪದಾಧಿಕಾರಿಗಳಾದ ಬಸವರಾಜ ಸವಡಿ, ಪ್ರಭುರಾಜ ನಾಯಕ, ಪ್ರಕಾಶಗೌಡ, ಸಾವಿತ್ರಿ ಮುಜುಮದಾರ, ಶಿವರಾಯ, ಶಿವಪ್ಪ ಹಡಪದ, ಮಲ್ಲಪ್ಪ ಹವಳಿ, ಮೈಲಾರಪ್ಪ, ಪ್ರಾಣೇಶ ಪೂಜಾರ, ಪರಮೇಶರಡ್ಡಿ ಸೇರಿದಂತೆ ಅನೇಕರು ಇದ್ದರು.
