Yalaburga: Rice auction seized on August 6
ಯಲಬುರ್ಗಾ: ಆಗಸ್ಟ್ 6 ರಂದು ಜಪ್ತಿ ಮಾಡಲಾದ ಅಕ್ಕಿ ಹರಾಜು
ಕೊಪ್ಪಳ ಆಗಸ್ಟ್ 03 (ಕರ್ನಾಟಕ ವಾರ್ತೆ): ಯಲಬುರ್ಗಾ ತಾಲೂಕಿನಲ್ಲಿ ಜಪ್ತಿ ಮಾಡಲಾದ ಅಕ್ಕಿಯ ಬಹಿರಂಗ ಹರಾಜು ಪ್ರಕ್ರಿಯೆಯು ಆಗಸ್ಟ್ 6 ರಂದು ಬೆಳಿಗ್ಗೆ 11 ಗಂಟೆಗೆ ಯಲಬುರ್ಗಾದ ಕೆ.ಎಸ್.ಸಿ.ಎಸ್.ಸಿ ಸಗಟು ಮಳಗಿಯಲ್ಲಿ ನಡೆಯಲಿದೆ ಎಂದು ಯಲಬುರ್ಗಾ ತಹಸೀಲ್ದಾರ್ ಅವರು ತಿಳಿಸಿದ್ದಾರೆ. ಯಲಬುರ್ಗಾ ತಾಲೂಕಿನಲ್ಲಿ 2018-19 ಸಾಲಿನಿಂದ ಇಲ್ಲಿಯವರೆಗೆ ಅಗತ್ಯ ವಸ್ತುಗಳ ಕಾಯ್ದೆ 1955 ರ ಅಡಿಯಲ್ಲಿ ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ.104/2022 ಅಡಿಯಲ್ಲಿ 2022ರ ಜೂನ್ 7 ರಂದು ಸಂಕನೂರು ಕ್ರಾಸ್ ಹತ್ತಿರ 190 ಕ್ವಿಂಟಲ್ ಹಾಗೂ ಗುನ್ನೆ ನಂ.128/2022 ಅಡಿಯಲ್ಲಿ 2022ರ ಜುಲೈ 12 ರಂದು ಯಲಬುರ್ಗಾ ತಾಲೂಕಿನ ಟಿಪ್ಪು ಸರ್ಕಲ್ ಹತ್ತಿರ 8 ಕ್ವಿಂಟಲ್ ಸೇರಿ ಒಟ್ಟು 198 ಕ್ವಿಂಟಲ್ ಜಪ್ತಿ ಮಾಡಲಾದ ಅಕ್ಕಿಯನ್ನು ಬಹಿರಂಗ ಹರಾಜು ಪ್ರಕ್ರಿಯೆ ನಡೆಸಿ ಓ.ಎಂ.ಎಸ್.ಎಸ್.ದರಕ್ಕೆ ಕಡಿಮೆಯಾಗದಂತೆ ಆಹಾರ ಧಾನ್ಯವನ್ನು ಹಾಲಿ ಇರುವ ಸ್ಥಿತಿಯಲ್ಲಿ ಆಗಸ್ಟ್ 6 ರಂದು ಬೆಳಿಗ್ಗೆ 11 ಗಂಟೆಗೆ ಯಲಬುರ್ಗಾದ ಕೆ.ಎಸ್.ಸಿ.ಎಸ್.ಸಿ ಸಗಟು ಮಳಗಿಯಲ್ಲಿ ಬಹಿರಂಗ ಹರಾಜು ಮಾಡಲಾಗುತ್ತಿದ್ದು, ಆಸಕ್ತಿಯುಳ್ಳ ಎ.ಪಿ.ಎಂ.ಸಿ ಪರವಾನಿಗೆದಾರರು ಷರತ್ತುಗಳಿಗೆ ಒಳಪಟ್ಟು ಈ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದು. ಷರತ್ತುಗಳು: ಹರಾಜಿನಲ್ಲಿ ಭಾಗವಹಿಸಲು ಬಿಡ್ಡುದಾರರು ಎ.ಪಿ.ಎಂ.ಸಿ ಪರವಾನಿಗೆ ಹೊಂದಿರಬೇಕು. ಬಿಡ್ಡುದಾರರು ಹರಾಜಿನ ದಿನ 1 ಗಂಟೆ ಮುಂಚಿತವಾಗಿ ಹಾಜರಾಗಿ ಶೇ.10 ರಷ್ಟು ಮೊಬಲಗನ್ನು ಮುಂಗಡವಾಗಿ ಠೇವಣಿ ಪಾವತಿಸಬೇಕು. ಎ.ಪಿ.ಎಂ.ಸಿ ಪರವಾನಿಗೆ ಪ್ರತಿ, ಆಧಾರ್ ಕಾರ್ಡ್ ಪ್ರತಿ, 2 ಪಾಸ್‌ಪೋರ್ಟ್ ಅಳತೆಯ ಭಾವಚಿತ್ರವನ್ನು ಸಲ್ಲಿಸಬೇಕು. ಹರಾಜು ಮುಗಿದ ನಂತರ ಠೇವಣಿ ಮೊತ್ತವನ್ನು 2ನೇ ಗರಿಷ್ಠ ಬಿಡ್ಡುದಾರರು ಹೊರತುಪಡಿಸಿ ಉಳಿದ ಬಿಡ್ಡುದಾರರಿಗೆ ಸ್ಥಳದಲ್ಲಿಯೇ ಹಿಂತಿರುಗಿಸಲಾಗುವುದು. ಗರಿಷ್ಠ ಬಿಡ್ಡುದಾರರಿಗೆ ನಿಗದಿತ ಅವಧಿಯೊಳಗೆ ಪೂರ್ಣ ಹಣವನ್ನು ಪಾವತಿಸಲು ವಿಫಲರಾದಲ್ಲಿ ಠೇವಣಿ ಹಣವನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ನಂತರ 2ನೇ ಬಿಡ್ಡುದಾರರಿಗೆ ಅವಕಾಶ ಮಾಡಿಕೊಡಲಾಗುವುದು (ಇವರಿಗೂ ಸಹ ಇದೇ ನಿಯಮ ಅನ್ವಯವಾಗುತ್ತದೆ).
ಠೇವಣಿ ಮೊತ್ತವನ್ನು ಪಾವತಿಸದೇ ಇರುವವರು ಹರಾಜಿನಲ್ಲಿ ಭಾಗವಹಿಸುವಂತಿಲ್ಲ. ಸರ್ಕಾರಕ್ಕೆ ಜಪ್ತಿ ಮಾಡಿಕೊಂಡಿರುವ ಅಕ್ಕಿಯನ್ನು ಹಾಲಿ ಇರುವ ಸ್ಥಿತಿಯಲ್ಲಿಯೇ ಹರಾಜು ಮಾಡಲಾಗುವುದು. ಹರಾಜಿನಲ್ಲಿ ಅಕ್ಕಿಯನ್ನು ಪಡೆದವರು ತಕ್ಷಣವೇ ಉಳಿದ ಹಣವನ್ನು ಸರ್ಕಾರಕ್ಕೆ ಪಾವತಿ ಮಾಡತಕ್ಕದ್ದು ಮತ್ತು ಹರಾಜಾದ ಅಕ್ಕಿಯನ್ನು ಆದೇಶ ನೀಡಿದ ತಕ್ಷಣ ತನ್ನ ಸ್ವಂತ ಖರ್ಚಿನಲ್ಲಿಯೇ ಎತ್ತುವಳಿ ಮತ್ತು ಸಾಗಾಣಿಕೆ ಮಾಡಿಕೊಳ್ಳಬೇಕು. ಎ.ಪಿಎಂ.ಸಿ ಸೆಸ್ ಮತ್ತು ಇತರೆ ಯಾವುದಾದರು ಸರ್ಕಾರಕ್ಕೆ ಕಟ್ಟಬೇಕಾದ ಸೆಸ್‌ಗಳನ್ನು ಹರಾಜು ಹಿಡಿದ ವ್ಯಕ್ತಿಗಳೇ ಭರಿಸತಕ್ಕದ್ದು. ಹರಾಜಿನಲ್ಲಿ ಭಾಗವಹಿಸಲು ಭದ್ರತಾ ಠೇವಣಿಯನ್ನು ಪಾವತಿಸಿದ ಬಿಡ್ಡುದಾರರು ಗೊತ್ತುಪಡಿಸಿದ ದಿನಾಂಕ, ವೇಳೆಗಿಂತ 1 ಗಂಟೆ ಮುಂಚಿತವಾಗಿ ಹಾಜರಿರತಕ್ಕದ್ದು ಮತ್ತು ಆಹಾರ ಧಾನ್ಯ ವಿಕ್ಷಣೆ ಮಾಡಬಹುದಾಗಿರುತ್ತದೆ.
ಹರಾಜಿನಲ್ಲಿ ನಿಗದಿಪಡಿಸಿದ ಸರ್ಕಾರಿ ಸವಾಲು ಮೊತ್ತಕ್ಕಿಂತ ಕಡಿಮೆ ಮೊತ್ತ ಕೂಗಿದಲ್ಲಿ ಹಾಗೂ ಹರಾಜು ಸಮಯದಲ್ಲಿ ಬಿಡ್ಡುದಾರರು ಸಂಖ್ಯೆ ಕಡಿಮೆ ಇದ್ದಲ್ಲಿ ಹರಾಜು ಮುಂದೂಡುವ ಅಧಿಕಾರ ಹಾಗೂ ಅಂತಿಮವಾಗಿ ಹರಾಜು ಒಪ್ಪಿಕೊಳ್ಳುವುದು ಅಥವಾ ತಿರಸ್ಕರಿಸುವ ತೀರ್ಮಾನವು ತಹಶೀಲ್ದಾರರಿಗೆ ಒಳಪಟ್ಟಿರುತ್ತದೆ ಎಂದು ಯಲಬುರ್ಗಾ ತಹಶೀಲ್ದಾರ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

