Inspection of comprehensive preparations at the examination center: CPI Rangappa H. Doddamani advises the principal.


ಪರೀಕ್ಷಾ ಕೇಂದ್ರದಲ್ಲಿ ಸಕಲ ಸಿದ್ಧತೆ ಪರಿಶೀಲನೆ: ಪ್ರಾಂಶುಪಾಲರಿಗೆ ಸಿಪಿಐ ರಂಗಪ್ಪ ಹೆಚ್.ದೊಡ್ಡಮನಿ ಸಲಹೆ
ಗಂಗಾವತಿ, ಜುಲೈ 27: ಆಗಸ್ಟ್ 2ರಂದು ನಡೆಯಲಿರುವ ಪೊಲೀಸ್ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯನ್ನು ಸುಸೂತ್ರ, ಶಾಂತಿಯುತ ಹಾಗೂ ಪಾರದರ್ಶಕವಾಗಿ ನಡೆಸುವ ನಿಟ್ಟಿನಲ್ಲಿ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯ ಸಿಪಿಐ ರಂಗಪ್ಪ ಹೆಚ್. ದೊಡ್ಡಮನಿ ಅವರು ಶ್ರೀ ಕೊಲ್ಲೀನಾಗೇಶ್ವರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ, ಪ್ರಾಂಶುಪಾಲರಾದ ಡಾ. ಶಿವರಾಜ ಗುರಿಕಾರ ಅವರಿಗೆ ಅಗತ್ಯ ಸಲಹೆ ಹಾಗೂ ಸೂಚನೆಗಳನ್ನು ನೀಡಿದರು.
ಪರೀಕ್ಷಾ ಕೇಂದ್ರದ ಸಿದ್ಧತೆಗಳನ್ನು ಪರಿಶೀಲಿಸಿದ ಸಿಪಿಐ ರಂಗನಾಥ ಅವರು, ಪರೀಕ್ಷಾರ್ಥಿಗಳ ಅನುಕೂಲಕ್ಕಾಗಿ 10 ಪರೀಕ್ಷಾ ಕೊಠಡಿಗಳು, ಶುದ್ಧ ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಸಮರ್ಪಕವಾಗಿ ಕಲ್ಪಿಸುವಂತೆ ಸೂಚಿಸಿದರು. ಪರೀಕ್ಷೆ ವೇಳೆ ಯಾವುದೇ ಅಡಚಣೆ ಉಂಟಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದರು.
ಪರೀಕ್ಷೆಯ ಪಾವಿತ್ರ್ಯ ಕಾಪಾಡುವ ಉದ್ದೇಶದಿಂದ ಪರೀಕ್ಷಾ ಕೇಂದ್ರದ 100 ಮೀಟರ್ ವ್ಯಾಪ್ತಿಯಲ್ಲಿ ಜೆರಾಕ್ಸ್ ಕೇಂದ್ರಗಳು, ಅಂಗಡಿಗಳು ಹಾಗೂ ಇತರೆ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ನೀಡದಂತೆ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು. ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಸಮಯಕ್ಕೆ ಸರಿಯಾಗಿ ಆಗಮಿಸಿ, ಪರೀಕ್ಷಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಡಾ. ಶಿವರಾಜ ಗುರಿಕಾರ ಅವರು, ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲು ಕಾಲೇಜಿನ ವತಿಯಿಂದ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಸಿದ್ಧಪಡಿಸಲಾಗಿದ್ದು, ಪೊಲೀಸ್ ಇಲಾಖೆಯೊಂದಿಗೆ ಸಮನ್ವಯದಿಂದ ಕಾರ್ಯನಿರ್ವಹಿಸಲಾಗುವುದು ಎಂದು ತಿಳಿಸಿದರು.

