ಮಲೇರಿಯಾ, ಡೆಂಗ್ಯೂ ಮತ್ತು ಚಿಕೂನ್ ಗುನ್ಯ ಖಾಯಿಲೆಗಳನ್ನು ತಡೆಗಟ್ಟಲು ಡಿಎಚ್‌ಒ ಅವರಿಂದ ಸಲಹೆಗಳು

H.Mallikarjun
H.Mallikarjun - Kalyanasiri
1 Min Read
Advice from the DHO on preventing malaria, dengue, and chikungunya.

ಮಲೇರಿಯಾ, ಡೆಂಗ್ಯೂ ಮತ್ತು ಚಿಕೂನ್ ಗುನ್ಯ ಖಾಯಿಲೆಗಳನ್ನು ತಡೆಗಟ್ಟಲು ಡಿಎಚ್‌ಒ ಅವರಿಂದ ಸಲಹೆಗಳು

ಕೊಪ್ಪಳ ಜುಲೈ 24, (ಕರ್ನಾಟಕ ವಾರ್ತೆ): ಜಿಲ್ಲೆಯಾದ್ಯಂತ ಪ್ರಸ್ತುತ ದಿನಗಳಲ್ಲಿ ಮಳೆಗಾಲ ಪ್ರಾರಂಭವಾದ ಹಿನ್ನೆಲೆಯಲ್ಲಿ ಸಾರ್ವಜನಿಕರು, ಗರ್ಭಿಣಿಯರು, ಬಾಣಂತಿಯರು, ಮಕ್ಕಳು ಹಾಗೂ ವಯೋವೃದ್ಧರು ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಈಶ್ವರ ಎಸ್. ಸವಡಿ ಅವರು ಸಾರ್ವಜನಿಕರಿಗೆ ಆರೋಗ್ಯದ ಸಲಹೆ ನೀಡಿದ್ದಾರೆ.
ಮಲೇರಿಯಾ, ಡೆಂಗ್ಯೂ ಮತ್ತು ಚಿಕೂನ್ ಗುನ್ಯ ಖಾಯಿಲೆಗಳನ್ನು ತಡೆಗಟ್ಟಲು ಸಾರ್ವಜನಿಕರು ಆರೋಗ್ಯವನ್ನು ಕಾಪಾಡಿಕೊಳ್ಳಲು ಈ ಕೆಳಗಿನ ಆರೋಗ್ಯ ಸಲಹೆಗಳನ್ನು ಪಾಲಿಸಬೇಕು.
ನೀರಿನ ತೊಟ್ಟಿಗಳು, ಡ್ರಮ್, ಬ್ಯಾರಲ್ ಮತ್ತು ಟ್ಯಾಂಕ್‌ಗಳನ್ನು ಕನಿಷ್ಟ ವಾರಕ್ಕೆ ಒಂದು ಬಾರಿ ಸ್ವಚ್ಛಗೊಳಿಸಿ, ಭದ್ರವಾಗಿ ಮುಚ್ಚಿಡಬೇಕು. ಮಳೆ ನೀರು ಸಂಗ್ರಹವಾಗುವAತಹ ಟೈರುಗಳು, ತೆಂಗಿನ ಚಿಪ್ಪುಗಳನ್ನು ವಿಲೇವಾರಿ ಮಾಡಬೇಕು.  ಏರ್ ಕೂಲರ್, ಹೂವಿನಕುಂಡ, ಫೈರ್ ಬಕೆಟ್ ಇತ್ಯಾದಿಗಳ ನೀರನ್ನು ಪ್ರತಿವಾರ ಖಾಲಿ ಮಾಡಿ, ಒಣಗಿಸಿ ಭರ್ತಿ ಮಾಡಬೇಕು. ಹಗಲಿನಲ್ಲಿ ನಿದ್ದೆ ಮಾಡುವ/ವಿಶ್ರಾಂತಿ ಪಡೆಯುವವರು ಸೊಳ್ಳೆ ಪರದೆ ಹಾಗೂ ಸೊಳ್ಳೆ ನಿರೋಧಕ ತಪ್ಪದೇ ಬಳಸಬೇಕು.
ಮನೆ, ಶಾಲಾ ಕಾಲೇಜು, ಕಚೇರಿ, ಅಂಗನವಾಡಿ, ಅಂಗಡಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಹಗಲು ಹೊತ್ತಿನಲ್ಲಿ ಈಡಿಸ್ ಈಜಿಪ್ಟ್ ಸೊಳ್ಳೆಗಳಿಂದ ರಕ್ಷಣೆ ಪಡೆಯಲು ಸ್ವಚ್ಛತೆಗೆ ಆದ್ಯತೆ ನೀಡಬೇಕು. ಆರೋಗ್ಯ ಇಲಾಖೆಯ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿ, ಡೆಂಗಿ ಜ್ವರದಿಂದ ರಕ್ಷಿಸಿಕೊಳ್ಳಲು ನೀಡುವ ಸಲಹೆ-ಸೂಚನೆಗಳನ್ನು ತಪ್ಪದೇ ಪಾಲಿಸಿ ಹಾಗೂ ಸ್ವಯಂ ರಕ್ಷಣಾ ವಿಧಾನಗಳನ್ನು ಅನುಸರಿಸಬೇಕು. “ಪ್ರತಿ ಶುಕ್ರವಾರ ಡೆಂಗಿ ನಿಯಂತ್ರಣ ಅಭಿಯಾನ”ದ ಅಂಗವಾಗಿ ಒಣ ದಿನ ಆಚರಿಸಲಾಗುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Total Views: 0
Share This Article