
ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕ ಸೋರಿಕೆ ಖಂಡನೀಯ: ಉಚಡಪ್ಪ ಶ್ರೀರಾಮನಗರ

NEET exam question paper leak condemnable: Uchadappa Sriramanagara

ಮುಂಬರುವ ಜೂನ್-21 ರಂದು ನಡೆಯಲಿರುವ ಮರು ಪರೀಕ್ಷೆಯನ್ನು ಪೊಲೀಸ್ ಭದ್ರತೆಯೊಂದಿಗೆ ನಡೆಸಲು ದಲಿತ ಸೇನೆ ಆಗ್ರಹ
ಗಂಗಾವತಿ: ಭಾರತದಲ್ಲಿ ವೈದ್ಯಕೀಯ ಶಿಕ್ಷಣವನ್ನು ಪಡೆಯುವ ಸಲುವಾಗಿ ವಿದ್ಯಾರ್ಥಿಗಳು ಹಗಲು ರಾತ್ರಿ ಎನ್ನದೇ ತಮ್ಮ ಅಮೂಲ್ಯವಾದ ಸಮಯವನ್ನು ಓದುವುದಕ್ಕೆ ಮೀಸಲಿಟ್ಟು, ಉನ್ನತ ಶಿಕ್ಷಣವನ್ನು ಪಡೆದುಕೊಳ್ಳುವ ಸಲುವಾಗಿ ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆಯನ್ನು ಬರೆದಿರುತ್ತಾರೆ. ಆದರೆ ಸರ್ಕಾರದ ನಿರ್ಲಕ್ಷ್ಯದಿಂದ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ವಿದ್ಯಾರ್ಥಿಗಳ ಮಾನಸಿಕ ಸ್ಥಿರತೆಗೆ ಧಕ್ಕೆಯುಂಟಾಗಿದೆ ಎಂದು ದಲಿತ ಸೇನೆ ಸಂಘಟನೆಯ ಕೊಪ್ಪಳ ಜಿಲ್ಲಾಧ್ಯಕ್ಷರಾದ ಉಡಚಪ್ಪ ಶ್ರೀರಾಮನಗರ ಕಳವಳ ವ್ಯಕ್ತಪಡಿಸಿದರು.
ಅವರು ಇಂದು ಮುಂಬರುವ ಜೂನ್-21 ರಂದು ನಡೆಯಲಿರುವ ಮರುಪರೀಕ್ಷೆಗೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡು ಪೊಲೀಸ್ ಭದ್ರತೆಯೊಂದಿಗೆ ಪರೀಕ್ಷೆ ನಡೆಸಲು ಸರ್ಕಾರಕ್ಕೆ ಆಗ್ರಹಿಸಿ ತಹಶೀಲ್ದಾರರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದರು. ಪರೀಕ್ಷಾ ಕೆಲಸದಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ನೇರವಾಗಿ ಇಂತಹ ಕೃತ್ಯದಲ್ಲಿ ತೊಡಗಿ ಹಣದ ಆಸೆಗೆ ದೇಶಾಧ್ಯಂತ ಕಷ್ಟಪಟ್ಟು ಓದಿದ ಮಕ್ಕಳಿಗೆ ಅನ್ಯಾಯವಾಗುವ ರೀತಿಯಲ್ಲಿ ನಡೆದುಕೊಂಡು ಕಾನೂನಿನ ವಿರುದ್ಧವಾಗಿ ಕೆಲಸ ನಿರ್ವಹಿಸಿ ಪ್ರಶ್ನೆ ಪತ್ರಿಕೆಗಳನ್ನು ಸೋರಿಕೆ ಮಾಡಿರುತ್ತಾರೆ. ವಿದ್ಯಾರ್ಥಿಗಳು ಸರಕಾರಿ ಮತ್ತು ಖಾಸಗಿ ಕಾಲೇಜುಗಳಲ್ಲಿ ಎಂ.ಬಿ.ಬಿ.ಎಸ್, ಬಿ.ಡಿ.ಎಸ್ ಮತ್ತು ಆಯುಷ್ ನಂತಹ ವೈದ್ಯಕೀಯ ಪದವಿಗಳನ್ನು ಪಡೆಯುವುದಕ್ಕಾಗಿ ಕಷ್ಟಪಟ್ಟು ಓದಿದ ಮಕ್ಕಳಿಗೆ ಇಂದಿನ ದಿನಮಾನಗಳಲ್ಲಿ ಸರ್ಕಾರಗಳು ಅತ್ಯಂತ ಕಠಿಣವಾದ ಮತ್ತು ಶಿಸ್ತುಬದ್ಧ ಕಾನೂನಿಡಿಯಲ್ಲಿ ಪರೀಕ್ಷೆ ನಡೆಸಿ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವುದು ಅತ್ಯಂತ ಜವಾಬ್ದಾರಿಯುತ ಕರ್ತವ್ಯವಾಗಿರುತ್ತದೆ. ಕೇಂದ್ರದ ಶಿಕ್ಷಣ ಸಚಿವರಾದ ಶ್ರೀ ಧಮೇಂದ್ರ ಪ್ರಧಾನ್ ರವರು ಲಕ್ಷಾಂತರ ವಿದ್ಯಾರ್ಥಿಗಳ ಜೀವನದಲ್ಲಿ ಆಟವಾಡಿರುತ್ತಾರೆ. ಮುಂದಿನ ದಿನಮಾನಗಳಲ್ಲಿ ಮಾನ್ಯ ಪ್ರಧಾನಮಂತ್ರಿಗಳು, ಇದರ ಬಗ್ಗೆ ಸೂಕ್ತ ತನಿಖೆ ನಡೆಸಿ ಅಪರಾಧಿಗಳಿಗೆ ಕಠಿಣವಾದ ಶಿಕ್ಷೆಯನ್ನು ವಿಧಿಸಬೇಕೆಂದು ದಲಿತ ಸೇನೆ ಆಗ್ರಹಿಸುತ್ತದೆ. ಮೇ-3, 2026 ರಂದು ನಡೆದಿದ್ದ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದು ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಪರೀಕ್ಷೆಯನ್ನು ರದ್ದುಗೊಳಿಸಿದ್ದು, ಈ ಕುರಿತಂತೆ ಸಿ.ಬಿ.ಐ ತನಿಖೆ ನಡೆಯಬೇಕೆಂದು ಮತ್ತು ಮರುಪರೀಕ್ಷೆಯನ್ನು ಜೂನ್-21, 2026 ರಂದು ಪೆನ್ ಮತ್ತು ಪೇಪರ್ ಮಾದರಿಯಲ್ಲಿ ನಡೆಯುವ ಪರೀಕ್ಷೆಯಲ್ಲಾದರೂ ಯಾವುದೇ ರೀತಿಯ ಲೋಪದೋಷಗಳು ಆಗದಂತೆ ಮುಂಜಾಗ್ರತೆ ವಹಿಸಿ ಕಟ್ಟುನಿಟ್ಟಿನ ಪೊಲೀಸ್ ಬಂದೋಬಸ್ತ್ ದೊಂದಿಗೆ ಪರೀಕ್ಷೆ ನಡೆಸಬೇಕು. ರಾಷ್ಟ್ರಾದ್ಯಂತ ನಡೆಯುವ ವಿದ್ಯಾರ್ಥಿಗಳ ಭವಿಷ್ಯದ ಪರೀಕ್ಷೆಯನ್ನು ಯಾವುದೇ ಲೋಪ ದೋಷಗಳು ಇಲ್ಲದಂತೆ ಕೇಂದ್ರದ ಶಿಕ್ಷಣ ಸಚಿವರಾದ ಶ್ರೀ ಧಮೇಂದ್ರ ಪ್ರಧಾನ್‌ರವರು ಮುಂಜಾಗ್ರತೆಯನ್ನು ವಹಿಸಿ ಪರೀಕ್ಷೆ ನಡೆಸಬೇಕೆಂದು ನಮ್ಮ ದಲಿತ ಸೇನೆ ಸಂಘಟನೆ ಒತ್ತಾಯಿಸುತ್ತಿದೆ ಎಂದರು.
ಈ ಸಂದರ್ಭದಲ್ಲಿ ದಲಿತ ಸೇನೆ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷರಾದ ಶಿವಕುಮಾರ ಡಿ., ಗಂಗಾವತಿ ತಾಲೂಕ ಅಧ್ಯಕ್ಷ ಮಂಜುನಾಥ ಜಿ., ಉಪಾಧ್ಯಕ್ಷರಾದ ಪರಶುರಾಮ, ದುರುಗಪ್ಪ ಪ್ರಗತಿನಗರ, ಕೃಷ್ಣ, ಶಿವ, ಸಂಘಟನಾ ಸದಸ್ಯರಾದ ರಾಜು, ಖಜಾಂಚಿಯಾದ ಜಗದೀಶ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.
