
Dr. B.R. Ambedkar's 135th birth anniversary celebrated at the district headquarters on April 14

ಏ. 14 ರಂದು ಜಿಲ್ಲಾ ಕೇಂದ್ರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರವರ 135ನೇ ಜನ್ಮ ದಿನಾಚರಣೆ

ಕೊಪ್ಪಳ ಏಪ್ರಿಲ್ 10 (ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ನಗರಸಭೆ ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಮಹಾನ್ ಮಾನವತಾವಾದಿ, ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ರವರ 135ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಏಪ್ರಿಲ್ 14 ರಂದು ಬೆಳಿಗ್ಗೆ 11 ಗಂಟೆಗೆ ನಗರದ ಸಾಹಿತ್ಯ ಭವನದಲ್ಲಿ ಆಯೋಜಿಸಲಾಗಿದೆ.
ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ತಂಗಡಗಿ ಶಿವರಾಜ ಸಂಗಪ್ಪ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು. ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕರು ಹಾಗೂ ಕುಷ್ಟಗಿ ಶಾಸಕರಾದ ದೊಡ್ಡನಗೌಡ ಹನುಮಗೌಡ ಪಾಟೀಲ, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಹಾಗೂ ಯಲಬುರ್ಗಾ ಶಾಸಕರಾದ ಬಸವರಾಜ ರಾಯರಡ್ಡಿ ಅವರು ಘನ ಉಪಸ್ಥಿತಿ ವಹಿಸುವರು. ರಾ.ಬ.ಕೊ.ವಿ ಹಾಲು ಒಕ್ಕೂಟದ ಅಧ್ಯಕ್ಷರು ಆಗಿರುವ ಕೊಪ್ಪಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ಕೊಪ್ಪಳ ಸಂಸದರಾದ ಕೆ.ರಾಜಶೇಖರ ಹಿಟ್ನಾಳ, ಗಂಗಾವತಿ ಶಾಸಕರಾದ ಜಿ.ಜನಾರ್ಧನ ರೆಡ್ಡಿ, ವಿಧಾನ ಪರಿಷತ್ ಸದಸ್ಯರುಗಳಾದ ಶಶೀಲ್ ಜಿ.ನಮೋಶಿ, ಡಾ.ಚಂದ್ರಶೇಖರ ಬಿ.ಪಾಟೀಲ, ಶರಣಗೌಡ ಅನ್ನದಾನಗೌಡ ಪಾಟೀಲ ಬಯ್ಯಾಪೂರ ಹಾಗೂ ಹೇಮಲತಾ ನಾಯಕ, ಮುನಿರಾಬಾದ್ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ತುಂಗಭದ್ರಾ ಯೋಜನೆಯ ಅಧ್ಯಕ್ಷರಾದ ಹಸನಸಾಬ ನಬಿಸಾಬ ದೋಟಿಹಾಳ, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರಸನ್ನ ವಿ. ಗಡಾದ ಅವರು ಭಾಗವಹಿಸುವರು.
ವಿಶೇಷ ಆಹ್ವಾನಿತರಾಗಿ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಾದ ಡಿ. ರಂದೀಪ್, ವಸತಿ ಇಲಾಖೆ ಸರ್ಕಾರದ ಕಾರ್ಯದರ್ಶಿಗಳು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಕೆ.ಪಿ. ಮೋಹನರಾಜ್, ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರಾದ ಡಾ. ರಾಕೇಶ್ ಕುಮಾರ್ ಕೆ. ಅವರು ಪಾಲ್ಗೊಳ್ಳಲಿದ್ದಾರೆ. ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲ್ಲೂಕಿನ ರಾಮಸಾಗರದ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕರಾದ ಸುಗ್ಗೇನಹಳ್ಳಿ ರಮೇಶ್ ಅವರು ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ರವರ ಕುರಿತು ವಿಶೇಷ ಉಪನ್ಯಾಸ ನೀಡುವರು.
ಕಾರ್ಯಕ್ರಮದಲ್ಲಿ ಕೊಪ್ಪಳ ಜಿಲ್ಲಾಧಿಕಾರಿಗಳಾದ ಡಾ.ಸುರೇಶ್ ಬಿ.ಇಟ್ನಾಳ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ವರ್ಣೀತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ. ರಾಮ್ ಎಲ್. ಅರಸಿದ್ದಿ ಅವರು ಉಪಸ್ಥಿತರಿರುವರು.
ಕಾರ್ಯಕ್ರಮದ ಅಂಗವಾಗಿ ಅಂದು ಬೆಳಿಗ್ಗೆ 8 ಗಂಟೆಗೆ ಕೊಪ್ಪಳ ನಗರದ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಲ್‌ನಿಂದ ಅಶೋಕ ವೃತ್ತದ ಮೂಲಕ ಸಾಹಿತ್ಯ ಭವನದವರೆಗೆ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರದ ಮೆರವಣಿಗೆ ನಡೆಯಲಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಅಜ್ಜಪ್ಪ ಸೊಗಲದ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
