
High-level job opportunities available from Company Secretary course - Prof. Kariguli


ಕಂಪನಿ ಸೆಕ್ರೆಟರಿ ಕೋರ್ಸ್ ನಿಂದ ಉನ್ನತಮಟ್ಟದ ಉದ್ಯೋಗಾವಕಾಶಗಳು ಲಭ್ಯ- ಪ್ರೊ.ಕರಿಗೂಳಿ

ಗಂಗಾವತಿ: ತಾಲೂಕಿನ ಶ್ರೀರಾಮನಗರ ಚಿಲುಕೂರಿ ನಾಗೇಶ್ವರರಾವ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಶ್ರೀರಾಮನಗರ ದಲ್ಲಿ ದಿನಾಂಕ 04-04-2026 ರಂದು ಮಹಾವಿದ್ಯಾಲಯದ ಐಕ್ಯೂಎಸಿ, ವೃತ್ತಿ ಮಾರ್ಗದರ್ಶನ ಮತ್ತು ಉದ್ಯೋಗ ಭರವಸಾ ಕೋಶ ಹಾಗೂ ಭಾರತೀಯ ಕಂಪನಿ ಸೆಕ್ರೆಟರಿ ಸಂಸ್ಥೆ (ಐಸಿಎಸ್ಐ ಬೆಂಗಳೂರು ಚಾಪ್ಟರ್) ಇವರ ಸಹಯೋಗದಲ್ಲಿ ವಿದ್ಯಾರ್ಥಿಗಳಿಗಾಗಿ ಒಂದು ದಿನದ ವೃತ್ತಿ ಮಾರ್ಗದರ್ಶನ ಕಾರ್ಯಗಾರವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಪ್ರೊ.ಕರಿಗೂಳಿ ಅವರು ಮಾತನಾಡಿ, ಮನುಷ್ಯ ಜೀವನದಲ್ಲಿ ಉದ್ಯೋಗ ಮತ್ತು ವೃತ್ತಿಜೀವನ ಅತ್ಯಂತ ಪ್ರಮುಖವಾಗಿದ್ದು, ಸೂಕ್ತ ಆಯ್ಕೆ ಮತ್ತು ವೃತ್ತಿಪರ ಕೌಶಲ್ಯಗಳು ಮುಖ್ಯ ಎಂದರು, ಅವಕಾಶಗಳಿದ್ದರೂ ಸಕಾಲಕ್ಕೆ ಮಾಹಿತಿ ದೊರೆಯದೇ ವಿದ್ಯಾರ್ಥಿಗಳು ಅವಕಾಶ ವಂಚಿತರಾಗುತ್ತಿದ್ದಾರೆ, ಈ ಹಿನ್ನೆಲೆಯಲ್ಲಿ ಈ ಕಾರ್ಯಾಗಾರ ಏರ್ಪಡಿಸಲಾಗಿದ್ದು, ವಿದ್ಯಾರ್ಥಿಗಳು ಸ್ಪಷ್ಟ ಗುರಿಯೊಂದಿಗೆ ವಿಭಿನ್ನ, ವಿಶಿಷ್ಟ,ವಿನೂತನ ಕೋರ್ಸ್ ಗಳ ಕಡೆಗೆ ಗಮನ ಹರಿಸಿ ಅವಕಾಶಗಳನ್ನು ಪಡೆದುಕೊಳ್ಳಬೇಕು ,ಅದಕ್ಕಾಗಿ ನಿರಂತರ ಶ್ರಮಿಸಬೇಕು ಎಂದು ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು.
ಐಸಿಎಸ್ಐ ಬೆಂಗಳೂರು ಚಾಪ್ಟರ್ ವತಿಯಿಂದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಶ್ರೀಮತಿ ಝಾನ್ಸಿಲತಾ ಅವರು ಸುಮಾರು ಒಂದು ಗಂಟೆಯ ಕಾಲ ವಿದ್ಯಾರ್ಥಿಗಳಿಗೆ ವೃತ್ತಿ ತರಬೇತಿಯ ಮಹತ್ವ, ವಿವಿಧ ಉದ್ಯೋಗಾವಕಾಶಗಳು ಹಾಗೂ Company Secretary (CS) ಕೋರ್ಸ್‌ನ ಉಪಯೋಗಗಳು, ಅದರ ವ್ಯಾಪ್ತಿ ಮತ್ತು ಭವಿಷ್ಯದ ಅವಕಾಶಗಳು ಕುರಿತು ಸಮಗ್ರ ಮಾಹಿತಿ ನೀಡಿದರು. ಅವರ ಉಪನ್ಯಾಸ ವಿದ್ಯಾರ್ಥಿಗಳಲ್ಲಿ ಹೊಸ ಚೈತನ್ಯ ಮೂಡಿಸಿತು ಎಂದು ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರಾಸ್ತಾವಿಕವಾಗಿ ಉದ್ಯೋಗ ಮಾರ್ಗದರ್ಶಿ ಘಟಕದ ಸಂಚಾಲಕರಾದ ಶ್ರೀ ಶಂಕ್ರಪ್ಪ ಎಂ ಅವರು ಮಾತನಾಡಿ, ಸ್ಪರ್ಧಾತ್ಮಕ ಯುಗದ ಅಗತ್ಯಕ್ಕನುಗುಣವಾಗಿ ವಿದ್ಯಾರ್ಥಿಗಳು ಕೌಶಲ್ಯಗಳ ಅಭಿವೃದ್ಧಿ ಜೊತೆಗೆ ಸಂವಹನ ಕೌಶಲ್ಯಗಳನ್ನು ಪಡೆಯಬೇಕೆoದರು,
ಸಮಾರೋಪ ನುಡಿಗಳನ್ನಾಡಿದ ಸಹಪ್ರಾಧ್ಯಾಪಕ ಡಾ.ಸರಫರಾಜ್ ಅಹ್ಮದ್ ರವರು, ಇಂತಹ ಕೌಶಲ್ಯ ಆಧಾರಿತ ವೃತ್ತಿ ಮಾರ್ಗದರ್ಶನದ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಸಹಾಯಕ ಅಧ್ಯಾಪಕರಾದ ಡಾ. ಶಶಿಕುಮಾರ,
ಡಾ.ವಿರೂಪಾಕ್ಷ ಕೆ, ಕಚೇರಿ ಸಿಬ್ಬಂದಿ ಜಬೀನ ಬೇಗಂ,ವಿನಾಯಕ ಹಾಗೂ ಉಪನ್ಯಾಸಕರಾದ ವೆಂಕಟರಾಜು, ಈಶಪ್ಪ, ಅಯ್ಯಪ್ಪ, ಬಾಲಚಂದ್ರ, ಸಾಯಿಕುಮಾರ, ಪ್ರವೀಣ್ ಕುಮಾರ್, ಮಲ್ಲಯ್ಯ, ಸುರೇಶ್ ಗೌಡ, ಮತ್ತು ಸಹಾಯಕ ಸಿಬ್ಬಂದಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳು ತುಂಬಾ ಆಸಕ್ತಿಯಿಂದ ಈ ಮಾರ್ಗದರ್ಶನ ಕಾರ್ಯಾಗಾರದಲ್ಲಿ ತೊಡಗಿಸಿಕೊಂಡಿದ್ದರು.
