ಬೇಸಿಗೆ ರಜೆಯನ್ನು ಸುರಕ್ಷಿತ ಹಾಗೂ ಕ್ರಿಯಾಶೀಲವಾಗಿ ಬಳಸಿಕೊಳ್ಳಲು ಮಕ್ಕಳಿಗೆ ಜಿಲ್ಲಾಧಿಕಾರಿಗಳ ಸಲಹೆ

Mallikarjun
2 Min Read

District Collector's advice to children to make safe and active use of summer vacation




ಬೇಸಿಗೆ ರಜೆಯನ್ನು ಸುರಕ್ಷಿತ ಹಾಗೂ ಕ್ರಿಯಾಶೀಲವಾಗಿ ಬಳಸಿಕೊಳ್ಳಲು ಮಕ್ಕಳಿಗೆ ಜಿಲ್ಲಾಧಿಕಾರಿಗಳ ಸಲಹೆ

ಕೊಪ್ಪಳ ಏಪ್ರಿಲ್ 01, (ಕರ್ನಾಟಕ ವಾರ್ತೆ): ಮಕ್ಕಳ ನೆಚ್ಚಿನ ಬೇಸಿಗೆ ರಜೆಯಲ್ಲಿ ಮಕ್ಕಳು, ವಿದ್ಯಾರ್ಥಿಗಳು ವಹಿಸಬೇಕಾದ ಆರೋಗ್ಯ ಮುಂಜಾಗ್ರತೆ, ಹವ್ಯಾಸ, ವಿವಿಧ ಸುರಕ್ಷತಾ ಕ್ರಮಗಳ ಕುರಿತು ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಅವರು ಮಕ್ಕಳಿಗೆ ಸಲಹೆಗಳನ್ನು ನೀಡಿದ್ದಾರೆ.
ಬೇಸಿಗೆ ಅವಧಿಯಲ್ಲಿ ವಾತಾವರಣದಲ್ಲಿ ತಾಪಮಾನ ಹೆಚ್ಚಿರುವುದರಿಂದ ಮಕ್ಕಳು ಶರೀರವನ್ನು ರಕ್ಷಿಸಿಕೊಳ್ಳಲು ಹಗುರವಾದ ಹತ್ತಿಯ ಬಟ್ಟೆಯನ್ನು ಧರಿಸಿ, ಮನೆಯಿಂದ ಹೊರಗೆ ಹೋಗುವಾಗ ಬಿಸಿಲಿನ ಪ್ರಖರತೆಯಿಂದ ನಿಮ್ಮನ್ನು ಕಾಪಾಡಿಕೊಳ್ಳಿ ಹಾಗೂ ದೇಹದಲ್ಲಿ ನಿರ್ಜಲೀಕರಣವನ್ನು ತಡೆಗಟ್ಟಲು ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಸೇವಿಸಬೇಕು.
ಬೇಸಿಗೆ ರಜೆಯಲ್ಲಿ ಕ್ರೀಯಾಶೀಲರಾಗಿರಲು ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಜೀವನ ಕೌಶಲ್ಯಗಳನ್ನು ಪಡೆಯಲು ಪ್ರಯತ್ನಿಸಿ ಹಾಗೂ ನಿಮ್ಮ ಬೆಳವಣಿಗೆಗೆ ಪೂರಕವಾಗಿರುವ ಪಠ್ಯ/ಪಠ್ಯೇತರ ಚಟುವಟಿಗೆಯಲ್ಲಿ ನಿಮ್ಮನ್ನು ನೀವೇ ತೊಡಗಿಸಿಕೊಳ್ಳಿ. ಆಟವಾಡುವಾಗ, ಪ್ರವಾಸ ಕೈಗೊಂಡಾಗ ಮತ್ತು ಇತರಎಲ್ಲಾ ಸಂದರ್ಭದಲ್ಲಿ ನಿಮ್ಮ ಸುರಕ್ಷತೆಯ ಬಗ್ಗೆ ಗಮನವಹಿಸಿ. ನೀರಿನ ಪ್ರದೇಶಗಳು, ಕೃಷಿಹೊಂಡ, ವಿದ್ಯುತ್‌ಉಪಕರಣ ಇತ್ಯಾದಿಗಳ ಬಗ್ಗೆ ಜಾಗೃತೆಯನ್ನು ವಹಿಸಬೇಕು.
ಬಾಲ್ಯವಿವಾಹ, ಮಕ್ಕಳ ದುಡಿಮೆ ಮತ್ತು ಲೈಂಗಿಕ ಅಪರಾಧ ಇತ್ಯಾದಿಗಳು ಮಕ್ಕಳ ಬಾಲ್ಯವನ್ನು ಮತ್ತು ಅವರ ಹಕ್ಕುಗಳನ್ನು ಕಸಿದುಕೊಳ್ಳುವ ಸಾಮಾಜಿಕ ಸಮಸ್ಯೆಗಳಾಗಿವೆ. ಇಂತಹ ಸಮಸ್ಯೆಗಳಿಂದ ನಿಮ್ಮನ್ನು ಮತ್ತು ನಿಮ್ಮ ಗೆಳೆಯ/ಗೆಳತಿಯರನ್ನು ರಕ್ಷಿಸಿ. ಇಂತಹ ಯಾವುದೇ ಘಟನೆಗಳ ಬಗ್ಗೆ ಮಾಹಿತಿ ಇದ್ದರೆ ತಕ್ಷಣ ಮಕ್ಕಳ ಸಹಾಯವಾಣಿ 1098/112ಕ್ಕೆ ಕರೆಮಾಡಿ ಮಾಹಿತಿ ನೀಡಿ ಹಾಗೂ ಸ್ಥಳೀಯ ಗ್ರಾಮ ಪಂಚಾಯತ್ ಅಥವಾ ನಗರ ಸ್ಥಳೀಯ ಸಂಸ್ಥೆಗಳ ಮಹಿಳೆಯರ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿಗಳಿಗೆ ತಿಳಿಸಬೇಕು.
ಡಿಜಿಟಲ್ ಉಪಕರಣಗಳಾದ ಮೊಬೈಲ್, ಟಿ.ವಿ ಇತ್ಯಾದಿಗಳ ವೀಕ್ಷಣೆಯ ಅವಧಿಯ ಮಿತಿಯನ್ನು ಹಾಕಿಕೊಳ್ಳಿ. ಸುರಕ್ಷಿತವಾದ ಮೊಬೈಲ್ ಬಳಕೆಯ ನಿಯಮ ನಿಮ್ಮ ಮತ್ತು ನಿಮ್ಮ ಕುಟುಂಬದ ರಕ್ಷಣೆಗೆ ಸೂಕ್ತವೆಂದು ತಿಳಿದುಕೊಳ್ಳಿ. ಸೈಬರ್ ವಂಚಕರ ವಂಚನೆಗೆ ಸಿಲುಕಬೇಡಿ.
10ನೇ ತರಗತಿ ಮತ್ತು ದ್ವಿತೀಯ ಪಿ.ಯು.ಸಿ ಫಲಿತಾಂಶಗಳು ಬಂದ ನಂತರ ಮುಂದಿನ ವಿದ್ಯಾಭ್ಯಾಸದ ಬಗ್ಗೆ ಸರಿಯಾದ ತೀರ್ಮಾನಗಳನ್ನು ತೆಗೆದುಕೊಳ್ಳಿ. ಅನುತ್ತೀರ್ಣವಾದರೆ ಯಾವುದೇ ದುಡುಕಿನ ನಿರ್ಧಾರಗಳನ್ನು ತೆಗೆದುಕೊಳ್ಳದೇ ಮರಳಿ ಪ್ರಯತ್ನಗಳನ್ನು ಮಾಡಿ ಯಶಸ್ವಿಯಾಗಿ.
ಜಿಲ್ಲೆಯಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳು ವಾಹನ ಚಲಾಯಿಸಿ ಅಪಘಾತ ಎಸಗಿದ ಪ್ರಕರಣಗಳು ಕಂಡುಬಂದಿವೆ. 18 ವರ್ಷದೊಳಗಿನ ಮಕ್ಕಳು ವಾಹನ ಚಲಾಯಿಸುವಂತಿಲ್ಲ. ರಸ್ತೆಯಲ್ಲಿ ಸಂಚರಿಸುವಾಗ ಜಾಗರೂಕರಾಗಿರಿ ಮತ್ತು ರಸ್ತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ.
ಈ ಅಂಶಗಳ ಬಗ್ಗೆ ನಿಮ್ಮ ಶಿಕ್ಷಕರೊಂದಿಗೆ, ಕುಟುಂಬದೊಂದಿಗೆ ಚರ್ಚಿಸುವಂತೆ ನಿಮ್ಮಲ್ಲಿ ನನ್ನ ಮನವಿ ಹಾಗೂ ನಿಮ್ಮ ಜೀವನವನ್ನು ರೂಪಿಸುವಲ್ಲಿ ಸಹಕರಿಸಲು ಜಿಲ್ಲಾಡಳಿತ ಸದಾ ನಿಮ್ಮ ಜೊತೆ ಕೈ ಜೋಡಿಸುತ್ತದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Total Views: 0
Share This Article