
ಪ್ರಾಣಿ ಕಲ್ಯಾಣ ಮತ್ತು ಪಶುಸಂಗೋಪನೆಗೆ ಸಮಗ್ರ
ಯೋಜನೆ ಅಗತ್ಯ– ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ
Comprehensive planning is needed for animal welfare and animal husbandry – District Collector Dr. Suresh Itnal
ಕೊಪ್ಪಳ ಫೆಬ್ರುವರಿ 11 (ಕರ್ನಾಟಕ ವಾರ್ತೆ): ಪ್ರಾಣಿ ಕಲ್ಯಾಣ ಮತ್ತು ಪಶುಸಂಗೋಪನೆಗೆ ಸಮಗ್ರ ಯೋಜನೆ ಅಗತ್ಯವಾಗಿದೆ ಎಂದು ಕೊಪ್ಪಳ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪ್ರಾಣಿ ದಯಾ ಸಂಘದ ಅಧ್ಯಕ್ಷರಾದ ಡಾ. ಸುರೇಶ್ ಬಿ. ಇಟ್ನಾಳ ಹೇಳಿದರು.
ಅವರು ಬುಧವಾರ ಕೊಪ್ಪಳ ಜಿಲ್ಲಾ ಪಂಚಾಯತ್ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ ಬೆಂಗಳೂರು, ಜಿಲ್ಲಾ ಪ್ರಾಣಿ ದಯಾ ಸಂಘ, ಕೊಪ್ಪಳ ಹಾಗೂ ಹ್ಯೂಮೇನ್ ವರ್ಲ್ಡ ಫಾರ್ ಇಂಡಿಯಾ ಫೌಂಡೇಶನ್ ರವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ “ಪಶುಸಂಗೋಪನೆ ಹಾಗೂ ಪ್ರಾಣಿ ಕಲ್ಯಾಣ ಮಾಸಾಚರಣೆ” ಅಂಗವಾಗಿ ವಿಭಾಗ ಮಟ್ಟದ ಒಂದು ದಿನದ ತಾಂತ್ರಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಪ್ರಾಣಿ ಕಲ್ಯಾಣವು ಕೇವಲ ಪ್ರಾಣಿಗಳ ರಕ್ಷಣೆಗಷ್ಟೇ ಸೀಮಿತವಲ್ಲ, ಅದು ಸಾರ್ವಜನಿಕ ಆರೋಗ್ಯ, ಪರಿಸರ ಸಂರಕ್ಷಣೆ ಮತ್ತು ಗ್ರಾಮೀಣ ಆರ್ಥಿಕತೆಯೊಂದಿಗೆ ನೇರವಾಗಿ ಸಂಬಂಧಿಸಿದೆ. ಪ್ರಾಣಿಗಳ ಮೇಲೆ ಹಿಂಸೆ ತಡೆಯುವುದು ಹಾಗೂ ಅವುಗಳಿಗೆ ಸೂಕ್ತ ಆಶ್ರಯ, ಆಹಾರ ಮತ್ತು ಚಿಕಿತ್ಸೆಯನ್ನು ಒದಗಿಸುವುದು ನಮ್ಮ ಸಮಾಜದ ಜವಾಬ್ದಾರಿಯಾಗಿದೆ. ಜಿಲ್ಲೆಯಲ್ಲಿ ಬೀದಿ ನಾಯಿಗಳ ಜನಸಂಖ್ಯೆ ನಿಯಂತ್ರಣ, ನಿಯಮಿತ ಲಸಿಕಾ ಕಾರ್ಯಕ್ರಮ, ರೇಬೀಸ್ ತಡೆ ಹಾಗೂ ಪಶು ವೈದ್ಯಕೀಯ ಶಿಬಿರಗಳನ್ನು ಸಮನ್ವಯದೊಂದಿಗೆ ನಡೆಸುವ ಅಗತ್ಯವಿದೆ ಎಂದರು.
ಕಪಪಮಿವಿವಿ ಬೀದರ ಪಶುವೈದ್ಯಕೀಯ ಮಹಾವಿದ್ಯಾಲಯದ ನಿವೃತ್ತ ಪ್ರಾದ್ಯಾಪಕರಾದ ಡಾ. ವಿವೇಕ ಕಸರಳಿಕರ ಅವರು ತಾಂತ್ರಿಕ ಉಪನ್ಯಾಸ ನೀಡಿ ಮಾತನಾಡಿ, ಪಶುಗಳ ಉತ್ತಮ ಪೋಷಣೆ ಮತ್ತು ಸ್ವಚ್ಛ ಪರಿಸರವು ಉತ್ಪಾದಕತೆ ಹೆಚ್ಚಿಸುವಲ್ಲಿ ಪ್ರಮುಖ ಅಂಶಗಳಾಗಿವೆ ಎಂದು ತಿಳಿಸುತ್ತಾ, ಪ್ರಾಣಿ ಕಲ್ಯಾಣ ಸಂಸ್ಥೆಗಳು ಎಡಬ್ಲ್ಯೂಬಿಐ (AWBI)ನಲ್ಲಿ ಲಭ್ಯವಿರುವ ದಾಖಲೆಗಳ ಪ್ರಕಾರ 3000 ರಿಂದ 4000 ಎಡಬ್ಲ್ಯೂಬಿಐ.ಗಳು, 1500 ಗೋಶಾಲೆಗಳು (ಗೋ ಆಶ್ರಯಗಳು), 400 ಎನ್.ಜಿ.ಒ.ಗಳು ನೋಂದಣಿ ಮಾಡಲಾಗಿದೆ. ಪ್ರಾಣಿ ಹಿಂಸೆ ತಡೆ ಕಾಯ್ದೆಗಳ ಪರಿಣಾಮಕಾರಿ ಜಾರಿಗೆ ಸಂಬಂಧಿಸಿದಂತೆ ಎಲ್ಲಾ ಇಲಾಖೆಗಳು ಸಮಗ್ರವಾಗಿ ಕಾರ್ಯನಿರ್ವಹಿಸಬೇಕು. ಪ್ರಾಣಿ ದಯಾ ಸಂಘಗಳ ಪಾತ್ರ ಮಹತ್ವದ್ದಾಗಿದ್ದು, ಸಾರ್ವಜನಿಕ ಸಹಭಾಗಿತ್ವದ ಮೂಲಕವೇ ದೀರ್ಘಕಾಲೀನ ಫಲಿತಾಂಶ ಸಾಧಿಸಬಹುದು ಎಂದು ಹೇಳಿದರು.

ಈ ಕಾರ್ಯಗಾರದಲ್ಲಿ ಪ್ರಾಣಿ ಕಲ್ಯಾಣ ಮತ್ತು ಪಶುಸಂಗೋಪನೆಗೆ ಸಂಬಂಧಿಸಿದಂತೆ ವಿವಿಧ ಸಲಹೆಗಳು ಹಾಗೂ ಶಿಫಾರಸುಗಳನ್ನು ರೂಪಿಸಲಾಗಿದ್ದು, ಸಂಬಂಧಿತ ಇಲಾಖೆಗಳು ಅವುಗಳನ್ನು ಜಾರಿಗೆ ತರಲು ಕ್ರಮ ಕೈಗೊಳ್ಳುವ ನಿರ್ಧಾರ ಕೈಗೊಳ್ಳಲಾಗುವುದು. ಈ ತಾಂತ್ರಿಕ ಕಾರ್ಯಗಾರವು ಪ್ರಾಣಿ ಕಲ್ಯಾಣ, ಸಾರ್ವಜನಿಕ ಜಾಗೃತಿ ಹಾಗೂ ಪಶುಸಂಗೋಪನೆ ಕ್ಷೇತ್ರದಲ್ಲಿ ಸಮಗ್ರ ಅರಿವು ಮೂಡಿಸುವ ಮಹತ್ವದ ವೇದಿಕೆಯಾಗಿದೆ ಎಂದರು.
ಮುಂದುವರೆದು ಮಾತನಾಡಿ, ಪ್ರಾಣಿ ಕಲ್ಯಾಣದ ಅಂತರಾಷ್ಟ್ರೀಯ ಮಾನದಂಡಗಳು, ಪಶು ಆರೋಗ್ಯ ನಿರ್ವಹಣೆಯ ವೈಜ್ಞಾನಿಕ ವಿಧಾನಗಳು ಹಾಗೂ ಪ್ರಾಣಿ ಹಿಂಸೆ ತಡೆ ಕಾಯ್ದೆಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಹಾಗೂ ರೋಗಗಳ ಮುಂಚಿತ ಪತ್ತೆ ಮತ್ತು ಲಸಿಕಾ ಕಾರ್ಯಕ್ರಮಗಳ ಮಹತ್ವವನ್ನು ಉದಾಹರಣೆಗಳೊಂದಿಗೆ ವಿವರಿಸಿದರು.
ರಾಯಚೂರು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ (ರಾಜ್ಯವಲಯ) ಜಂಟಿನಿರ್ದೇಶಕ ಡಾ. ರಮೇಶ ದೊಡ್ಡಮನಿ ಅವರು ಕಾರ್ಯಾಗಾರದ ಅಧ್ಯಕ್ಷತೆವಹಿಸಿ ಮಾತನಾಡಿ, ಪ್ರಾಣಿ ಕಲ್ಯಾಣ ಮತ್ತು ಪಶುಸಂಗೋಪನೆಯಲ್ಲಿ ಕರ್ನಾಟಕದ 31 ಜಿಲ್ಲೆಗಳಲ್ಲಿ ಕೊಪ್ಪಳವು ನಂಬರ್ 1 ಜಿಲ್ಲೆಯಾಗಿದೆ. ಹಾಗಾಗಿ ವಿಭಾಗ ಮಟ್ಟದ ಒಂದು ದಿನದ ತಾಂತ್ರಿಕ ಕಾರ್ಯಾಗಾರ ಕೊಪ್ಪಳ ಜಿಲ್ಲೆಯಿಂದಲೆ ಪ್ರಾರಂಭಿಸಲಾಗಿದೆ. ಜನವರಿ 14 ರಿಂದ ಫೆಬ್ರುವರಿ 13 ರವರರೆಗೆ ಪಶುಸಂಗೋಪನೆ ಮತ್ತು ಪ್ರಾಣಿ ಕಲ್ಯಾಣ ಮಾಸಾಚರಣೆ ಮಾಡಬೇಕೆಂಬ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯವರ ನಿರ್ದೇಶನದ ಮೂಲಕ ಹಮ್ಮಿಕೊಳ್ಳಲಾಗುತ್ತಿದ್ದು, ಪಂಶುಸಂಗೋಪನೆಯಲ್ಲಿ ಆಧುನಿಕರಣದ ಮಹತ್ವದ ಕುರಿತು ರೈತರಿಗೆ ಅರಿವು ಮೂಡಿಸುವ ಮುಖ್ಯ ಉದ್ದೇಶದಿಂದ ಸಂಬಂಧಿಸಿದ ಎಲ್ಲಾ ಪಶುವೈದ್ಯಾಧಿಕಾರಿಗಳಿಗೆ ಈ ಕಾರ್ಯಾಗಾರದಲ್ಲಿ ತರಬೇತಿ ನೀಡಲಾಗುತ್ತಿದೆ. ಇದರ ಸದುಪಯೋಗ ಪಡೆದುಕೊಂಡು ಪಶುವೈದ್ಯಾಧಿಕಾರಿಗಳಿಗೆ ತಮ್ಮ ವ್ಯಾಪ್ತಿಯ ಗ್ರಾಮೀಣ ಭಾಗದ ರೈತರಿಗೆ ಮಾಹಿತಿ ತಲುಪಿಸಲು ಶ್ರಮೀಸಬೇಕು ಎಂದು ಹೇಳಿದರು.
ಪ್ರಶಂಸಾ ಪತ್ರ ವಿತರಣೆ: ಬೀದಿ ನಾಯಿಗಳ ನಿಯಂತ್ರಣದ ಕುರಿತು ಮಾನ್ಯ ಸರ್ವೋಚ್ಛ ನ್ಯಾಯಾಲಯದ ಸೂಚನೆಯಂತೆ ಕಾರ್ಯನಿರ್ವಹಿಸಿ ಶೇ. 100ರಷ್ಟು ಪ್ರಗತಿ ಸಾಧಿಸಿರುವುದಕ್ಕಾಗಿ ಯಲಬುರ್ಗಾ ಮತ್ತು ಕುಕನೂರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ನಾಗೇಶ ಹಾಗೂ ಕಾರಟಗಿ ಪುರಸಭೆಯ ಮುಖ್ಯಾಧಿಕಾರಿ ಸಾಬಣ್ಣ ಕಟ್ಟೇಕಾರ ಅವರಿಗೆ ಕಾರ್ಯಾಗಾರದಲ್ಲಿ ಪ್ರಶಂಸಾ ಪತ್ರ ವಿತರಣೆ ಮಾಡಲಾಯಿತು.
ಸನ್ಮಾನ: ಪಶುಸಂಗೋಪನೆ ಹಾಗೂ ಪ್ರಾಣಿ ಕಲ್ಯಾಣ ಮಾಸಾಚರಣೆ ಅಂಗವಾಗಿ ತಾಂತ್ರಿಕ ತರಬೇತಿ ನೀಡಿದ ಆಹ್ವಾನಿತ ವಿಷಯ ತಜ್ಞರಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಕೊಪ್ಪಳ ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್.ಕೆ. ನಿರ್ಮಲಾ, ಶಿವಮೊಗ್ಗ ಪಶುವೈದ್ಯಕೀಯ ಮಹಾವಿದ್ಯಾಲಯ ಔಷಧ ಶಾಸ್ತ್ರ ಹಾಗೂ ವಿಷ ಶಾಸ್ತ್ರ ವಿಭಾಗದ ಪ್ರಾದ್ಯಾಪಕರಾದ ಡಾ. ಎನ್.ಬಿ. ಶ್ರೀಧರ ಹಾಗೂ ಹ್ಯೂಮೇನ್ ವರ್ಲ್ಡ ಫಾರ್ ಇಂಡಿಯಾ ಫೌಂಡೇಶನ್ ಹಿರಿಯ ತಜ್ಞರಾದ ರಮೇಶ ಭಜಂತ್ರಿ, ಕೊಪ್ಪಳ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ. ಪಿ.ಎಂ.ಮಲ್ಲಯ್ಯ ಹಾಗೂ ಕೊಪ್ಪಳ ಪಾಲಿಕ್ಲಿನಿಕ್ ಉಪನಿರ್ದೇಶಕ ಡಾ. ಶರಣಬಸಪ್ಪ ರೋಣ ಸೇರಿದಂತೆ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಕಲಬುರಗಿ ವಿಭಾಗದ ಎಲ್ಲಾ ಜಿಲ್ಲೆಗಳ ಪಶು ಉಪನಿರ್ದೇಶಕರು, ಮುಖ್ಯ ಪಶುವೈದ್ಯಾಧಿಕಾರಿಗಳು ಮತ್ತು ಸ್ಥಳೀಯ ಸಂಸ್ಥೆಗಳ ಎಲ್ಲಾ ಅಧಿಕಾರಿಗಳು, ಸಿಬ್ಬಂದಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.




