ಸ್ಫುರಣ ಕಿರಣ:ರೈಲುಗಳು ಮತ್ತು ಮಠಗಳು/ಧರ್ಮಪೀಠಗಳು/ಪ್ರತಿಷ್ಠಾನಗಳು /ಸಂಸ್ಥೆಗಳು/ಸಮಿತಿಗಳು
Train and Religious Institutes
Sparkling Ray: Trains an Maths/Dharmapeeths
Sparkling Ray: Trains and Maths/Dharmapeeths/Foundations/Institutions/Committees/Institutions/Committees

ಶರಣ ರತ್ನ ಸಚ್ಚಿದಾನಂದ ಪ್ರಭು ಚಟ್ನಳ್ಳಿ
ರೈಲು ಜಗತ್ತಿನ ಸಾರಿಗೆ ವ್ಯವಸ್ಥೆಯಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸುತ್ತವೆ. ರೈಲ್ವೆ ವ್ಯವಸ್ಥೆ ಒಂದು ದೇಶದ ಕೃಷಿ, ಆರ್ಥಿಕ ಸಾಮಾಜಿಕ, ಶೈಕ್ಷಣಿಕ, ಮತ್ತು ರಾಜಕೀಯ ಕ್ಷೇತ್ರಗಳೊಂದಿಗೆ ಅತ್ಯಂತ ನಿಕಟ ಸಂಬಧವನ್ನು ಹೊಂದಿದೆ. ರೈಲು ವಕ್ತಿ ಪ್ರಾಣಿ ಮತ್ತು ವಸ್ತುಗಳನ್ನು ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಅತ್ಯಂತ ಕೈಗೆಟುಕುವ ದರದಲ್ಲಿ ಸಾಗಿಸುವ ಒಂದು ಮಹತ್ವಪೂರ್ಣ ಸಾರಿಗೆ ವ್ಯವಸ್ಥೆ. ಕೋಟಿ ಕೋಟಿ ಜನರ ಬದುಕನ್ನು ಕಟ್ಟಿಕೊಡುವ ವ್ಯವಸ್ಥೆ.
ರೈಲ್ವೆ ಇಲಾಖೆಗೆ ಪ್ರಯಾಣಿಕರ ರೈಲಿನಿಂದ ಹೆಚ್ಚಿನ ಲಾಭವೇನೂ ಇಲ್ಲ ಆದರೂ ಇದನ್ನು ಸಾಮಾಜಿಕ ಜವಾಬ್ದಾರಿಯೆಂದು ಸರಕಾರ ಪ್ರಯಾಣಿಕರಿಗೆ ರೈಲು ಸೇವೆಯನ್ನು ಒದಗಿಸುತ್ತದೆ.
ಎಲ್ಲಾ ಸಾರಿಗೆ ವ್ಯವಸ್ಥೆಗಿಂತ ರೈಲು ಸಾರಿಗೆ ತುಂಬಾ ಭಿನ್ನವಾಗಿದೆ ಮತ್ತು ರೈಲಿನ ಚಾಲನ ವ್ಯವಸ್ಥೆಯೂ ತುಂಬಾ ಭಿನ್ನವಾಗಿದೆ. ಬೇರೆ ಎಲ್ಲಾ ವಾಹನಗಳಲ್ಲಿ ವಾಹನಕ್ಕೆ ಗತಿ ಒದಗಿಸುವಂತಹ ಎಕ್ಷಲರೇಟರ್ ಮತ್ತು ವಾಹನವನ್ನು ನಿಲ್ಲಿಸುವಂತಹ ಬ್ರೇಕ್ ಒಬ್ಬ ಚಾಲಕನ ಕೈಯಲ್ಲಿಯೇ ಇರುತ್ತದೆ.
ಆದರೆ ರೈಲಿಗೆ ಹಾಗಿರುವುದಿಲ್ಲ. ರೈಲಿಗೆ ಗತಿ ಒಂದಗಿಸುವಂತಹ ಸರಳವಾಗಿ ಹೇಳಬೇಕಾದರೆ ಅದನ್ನು ಓಡಿಸಲು ಬೇಕಾದ ಆಪರೇಷನ್ ಹ್ಯಾಂಡಲ್ ಕೇವಲ ರೈಲು ಚಾಲಕನ ಕೈಯಲ್ಲಿ ಮಾತ್ರ ಇರುತ್ತದೆ ಆದರೆ ರೈಲನ್ನು ನಿಲ್ಲಿಸುವಂತಹ ಬ್ರೇಕ್ ರೈಲು ಹತ್ತಿದ ಪ್ರತಿಯೊಬ್ಬರ ಕೈಯಲ್ಲೂ ಇರುತ್ತದೆ.
*ಮೊದಲನೇ ಬ್ರೇಕ್ ರೈಲು ಚಾಲಕನ(Loco Pilot) ಕೈಯಲ್ಲಿ ಇರುತ್ತದೆ. ಎರಡನೇ ಬ್ರೇಕ್ ರೈಲಿನ ಸಹಾಯಕ ಚಾಲಕನ(Assistant loco Pilot) ಕೈಯಲ್ಲಿರುತ್ತದೆ. ಮೂರನೇ ಬ್ರೇಕ್ ರೈಲಿನ ಗಾರ್ಡ್ (ಈಗ ಇವರನ್ನು ಟೈನ್ ಮ್ಯಾನೇಜರ್ ಎಂದು ಕರೆಯುತ್ತಾರೆ) ಕೈಯಲ್ಲಿರುತ್ತದೆ. ನಾಲ್ಕನೇ ಬ್ರೇಕ್ ರೈಲಿನಲ್ಲಿರುವ ಪ್ರತಿಯೊಬ್ಬ ಪ್ರಯಾಣಿಕರ ಕೈಯಲ್ಲೂ ಇರುತ್ತದೆ. ರೈಲನ್ನು ನಿಲ್ಲಿಸಲು ಚೈನನ್ನು ಎಳೆಯಿರಿ (Pull the chain to stop the Train) ಎಂದು ಪ್ರಯಾಣಿಕರ ಕೋಚಿನಲ್ಲಿ ಬರೆದಿರುತ್ತದೆ.*
ರೈಲ್ವೆ ಚಾಲಕರಿಗೆ ರೈಲು ಹೇಗೆ ಓಡಿಸಬೇಕು ಎನ್ನುವುದಕ್ಕಿಂತ ಹೆಚ್ಚಾಗಿ ಅದನ್ನು ಹೇಗೆ ನಿಲ್ಲಿಸಬೇಕು ಎನ್ನುವ ತರಬೇತಿ ನೀಡಿರುತ್ತಾರೆ. ರೈಲು ಓಡಿಸುವುದಕ್ಕಿಂತ ಅದನ್ನು ನಿಲ್ಲಿಸುವುದು ಕಷ್ಟದ ಕೆಲಸ. ರೈಲು ಓಡಿಸುವಾಗಿನ ಜಾಗೃತಿಗಿಂತ ರೈಲು ನಿಲ್ಲಿಸಲು ಹೆಚ್ಚು ಜಾಗೃತರಾಗಿರಬೇಕಾಗುತ್ತದೆ.
ಕಾರಣವೇನೆದಂರೆ, ರೈಲು ಇಂಜೀನ್ ಕ್ರ್ಯೂವ ಜೊತೆಗೆ ಸಹಸ್ರ ಸಹಸ್ರ ಪ್ರಯಾಣಿಕರನ್ನು ತನ್ನ ಒಡಲಲ್ಲಿ ಹೊತ್ತುಕೊಂಡು ಓಡುತ್ತಿರುತ್ತದೆ. ಅದಕ್ಕಾಗಿಯೇ ಪ್ರಯಾಣಿಕರ ಸುರಕ್ಷತೆಯ ದೃಷ್ಠಿಯಿಂದ ರೈಲು ಓಡಿಸುವುದಕ್ಕಿಂತ ಓಡುವ ರೈಲನ್ನು ನಿಲ್ಲಿಸುವುದು ಮುಖ್ಯ. ಆದ್ದರಿಂದ ಎಲ್ಲರ ಕೈಯಲ್ಲೂ ಬ್ರೇಕ್ ಇರುತ್ತದೆ.
ದುರ್ಘಟನೆ ಯಾರೇ ಗಮನಿಸಿದರೂ ತಕ್ಷಣ ರೈಲು ನಿಲ್ಲಿಸಲು ಸಾಧ್ಯವಾಗಲು ಎಲ್ಲರ ಕೈಯಲ್ಲೂ ಬ್ರೇಕ್ ಇರುತ್ತದೆ.
ಯಾರಾದರೂ ರೈಲಿನಿಂದ ಬಿದ್ದು ಹೋದಾಗ ಅಥವಾ ರೈಲಿನಲ್ಲಿ ದುಷ್ಟರು ಸೇರಿಕೊಂಡು ಯಾರನ್ನಾದರೂ ರೈಲಿನಿಂದ ತಳ್ಳಿದರೆ, ಕೆಲವೊಮ್ಮೆ ರೈಲಿನ ಟಿಕೆಟ್ ಇಲ್ಲದೇ ಒಳಗಡೆ ಸೇರಿಕೊಂಡಿರುವ ದುಷ್ಟರು ಆತಂಕವಾದಿಗಳು ರೈಲಿಗೆ ಬೆಂಕಿ ಹಚ್ಚಿದರೆ ರಕ್ಷಣೆಗಾಗಿ ಯಾವ ಪ್ರಯಾಣಿಕರು ಬೇಕಾದರೂ ಚೈನ್ ಎಳೆದು ರೈಲನ್ನು ನಿಲ್ಲಿಸಬಹುದು ಮತ್ತು ನಿಲ್ಲಿಸಬೇಕು. ಪ್ರತಿಯೊಬ್ಬ ಪ್ರಯಾಣಿಕರ ಕರ್ತವ್ಯವೂ ಅಹುದು.
ಆದರೆ ಕೆಲವರು ಇದ್ದಕ್ಕೂ ನನಗೂ ಸಂಬಂಧವಿಲ್ಲ ಎನ್ನುವಂತೆ ಮೌನ ವಿರುತ್ತಾರೆ. ಮತ್ತೆ ಕೆಲವರು ಬೇರೆಯವರು ಬಿದ್ದು ಹೋಗಿದ್ದು ಒಳ್ಳೆಯದಾಯಿತು ನನಗೆ ಕುಳಿತುಕೊಳ್ಳಲಿಕ್ಕೆ ಒಂದು ಸೀಟಾಯಿತು ಕಾಲಿಡಲಿಕ್ಕೆ ಒಂದು ಸೀಟಾಯಿತು ನಮಗೆ ಸ್ವಲ್ಪ ಫ್ರೀಯಾಗಿ ಜಾಗ ಸಿಕ್ತು ಅಂತ ಸಂತೋಷ ಪಡುತ್ತಾರೆ. ಇದು ಸಲ್ಲದು.
ಅದೇ ರೀತಿ ಧರ್ಮ ಪೀಠಗಳೆಂದರೆ ಅವುಗಳು ಒಂದು ಟ್ರೈನ್ ಇದ್ದಹಾಗೆ. ಅವುಗಳ ಅನೇಕ ಭಕ್ತರನ್ನು ಜಂಗಮರನ್ನು ಸಮಾಜ ಸೇವಕರನ್ನು ತನ್ನ ಒಡಲೊಳಗೆ ತುಂಬಿಕೊಂಡು ಧರ್ಮ ಮತ್ತು ಅಧ್ಯಾತ್ಮ ಪಥದಲ್ಲಿ ಕೊಂಡಯ್ಯುತ್ತಿರುತ್ತಾರೆ. ಚೆನ್ನಾಗಿ ಹೆಸರುವಾಸಿಯಾದ ಧರ್ಮ ಪೀಠವೆಂಬ ರೈಲಿನಲ್ಲಿ ಕೆಲವು ದುಷ್ಟರು ಸೇರಿಕೊಂಡು ಕೆಲವರನ್ನು ರೈಲಿನಿಂದ ತಳ್ಳಿಬಿಡುತ್ತಾರೆ. ನಮ್ಮ ಜೊತೆ ಕೆಲವರು ಜಾಣರು ಇದ್ದರೆ ನಮ್ಮ ದುಷ್ಟ ಆಟಗಳು ನಡೆಯುವುದಿಲ್ಲ ಎಂದು ಜಾಣರನ್ನು ಸಜ್ಜನರನ್ನು ದುಷ್ಟರೂ ದುರ್ಜನರೂ ಧಾರ್ಮಿಕ ಮುಖವಾಡ ಧರಿಸಿದ ಧೂರ್ತರು ಧರ್ಮ ಪೀಠಗಳೆನ್ನುವ ರೈಲಿನಲ್ಲಿ ಸೇರಿಕೊಂಡು ತಮ್ಮ ಸ್ವಾರ್ಥಕ್ಕಾಗಿ ಸಜ್ಜನರನ್ನು ಧರ್ಮ ಪೀಠದಿಂದ ಹೊರಗೆ ತಳ್ಳುತ್ತಾರೆ. ಕೆಲವು ದುಷ್ಟರು ಧರ್ಮಪೀಠಗಳಲ್ಲಿ ಕಾರ್ಯಕರ್ತನಾಗಿ ದುಡಿಯದೇ ಧನಬಲದಿಂದ ದೊಡ್ಡಪದವಿಗೇರಿ ಇಲ್ಲಿ ಬೆಂಕಿ ಹಚ್ಚಲು ಬಂದಿರುವ ಆತಂಕವಾದಿಗಳಾಗಿರುತ್ತಾರೆ.
*ಇಂತಹ ಸಂದರ್ಭದಲ್ಲಿ ಭಕ್ತರು ಧರ್ಮ ಪೀಠ (ಪೀಠಾಧ್ಯಕ್ಷ/ಪೀಠಾಧ್ಯಕ್ಷೆ)ರನ್ನು ಹಿಡಿದು ನಿಲ್ಲಿಸಿ ಇಂತ ದುರ್ಘಟನೆ ನಡೆದಿದೆ ಇದು ದುಷ್ಟರ ಕೈವಾಡ ಇದೆ. ಇದನ್ನು ನೀವು ಅರ್ಥಮಾಡಿಕೊಳ್ಳಬೇಕು. ಕೆಳಗೆ ತಳ್ಳಲ್ಪಟ್ಟವರನ್ನು ಮತ್ತೆ ಧರ್ಮಪೀಠವೆನ್ನುವ ರೈಲಿನಲ್ಲಿ ಹತ್ತಿಸಿಕೊಳ್ಳಬೇಕು. ಎಂದು ತಿಳಿಹೇಳಿ ತಿಳಿಹೇಳಿದರೆ ಅರ್ಥ ಆಗಿಲ್ಲವೆಂದರೆ, ಒತ್ತಡ ಹೇರಿ ಪ್ರತಿಭಟಿಸಿ ತಳ್ಳಲ್ಪಟ್ಟವರನ್ನು ಹತ್ತಿಸಿಕೊಳ್ಳುವವರೆಗೆ ಧರ್ಮಪೀಠವನ್ನು ಮುಂದುನಡೆಸಲು ಬಿಡಬಾರದು. ಇದು ಪ್ರತಿಯೊಬ್ಬ ಸಹಪ್ರಯಾಣಿಕರ(ಸಹ ಸಾಧಕರ/ಸಹ ಜಂಗಮರ) ಕರ್ತವ್ಯ.*
ಆದರೆ ಅನೇಕ ಸಂದರ್ಭಗಳಲ್ಲಿ ದುಷ್ಟರು ರೈಲಿನಲ್ಲಿ ಸೇರಿ ಧ್ವಂಸ ಮಾಡಲು ಕೆಲವರನ್ನು ತಳ್ಳಿದಂತೆ, ಧರ್ಮಪೀಠವನ್ನು ಧ್ವಂಸ ಮಾಡಲು ಕೆಲವರನ್ನು ತಳ್ಳುತ್ತಾರೆ. ದ್ವೇಷದ ಬೆಂಕಿ ಹಚ್ಚುತ್ತಾರೆ. ಅಲ್ಲಿರುವ ಸಹ ಸಾಧಕರು ಸಹ ಜಂಗಮರು ಅವರನ್ನು ತಳ್ಳಿದ್ದು ಒಳ್ಳೆಯದೇ ಆಯಿತು ನಮಗೆ ಪೀಠ ಸಿಗಬಹುದು ಎಂದು ಪೀಠದ ಮೇಲೆ ಟವೆಲ್ ಹಾಕುವವರೇ ಹೆಚ್ಚು. ತಳ್ಳಿದವರು ನಮಗೆ ಅನುಕೂಲ ಮಾಡಿಕೊಟ್ಟರು ಎಂದು ಅವರೊಡನೆ ಸ್ನೇಹ ಬೆಳೆಸುವವರಿಗೆ ನಾಚಿಕೆಯಾಗಬೇಕು. ಭಕ್ತರೂ ಅಷ್ಟೇ ನಮಗೇಕೆ ಬೇಕು ಬೇರೆಯವರ ಗೊಡವೆ ಎಂದು ರೈಲು ಓಡಿಸುವವರಿಗೆ ಹಿಡಿದು ನಿಲ್ಲಿಸಿ ಪ್ರಶ್ನಿಸದೇ ಮೌನವಾಗಿದ್ದರೆ ಅವರು ಧರ್ಮ ಮಾರ್ಗದಲ್ಲಿ ನಡೆಯುವ ಒಳ್ಳೆಯ ಪ್ರಯಾಣಿಕರೆನಿಸಿಕೊಳ್ಳದೆ, ಸ್ವಾರ್ಥಿಗಳು ನಿರಭಿಮಾನಿಗಳೂ ಬೇಜವಾಬ್ದಾರಿವಂತರು ಎನಿಸಿಕೊಳ್ಳುತ್ತಾರೆ. ಕೆಳಗೆ ಬಿದ್ದವರಿಗೂ ನನಗೂ ಸಂಬಂಧವಿಲ್ಲ ಎನ್ನುವ ಪೀಠಾಧ್ಯಕ್ಷ/ಪೀಠಾಧ್ಯಕ್ಷೆಯ ನಡೆ ಬೇಜವಾಬ್ದಾರಿ ಸ್ವಾರ್ಥ ಮತ್ತು ದುಷ್ಟತೆಯ ಪರಮಾವಧಿ.
*ಇಂತಹ ದುಷ್ಟ ಮತ್ತು ಕ್ರೂರ ಮನಸ್ಥಿತಿ ಇರುವವರೆಗೆ ಧರ್ಮ ಪೀಠಗಳು, ಪೀಠ ಸ್ಥಾಪಕರ ಮೂಲ ಆಶಯದಂತೆ ನಡೆಯಲು ಸಾಧ್ಯವೇ ಇಲ್ಲ.*
ಧರ್ಮ ಪೀಠ ನಡೆಸುವ ಪೀಠಾಧ್ಯಕ್ಷ/ಪೀಠಾಧ್ಯಕ್ಷೆ ಧರ್ಮಪೀಠದಿಂದ ಹೊರಹಾಕಲ್ಪಟ್ಟವರಿಗೂ ನನಗೂ ಸಂಬಂಧವಿಲ್ಲವೆಂದು ಕೇವಲ ಪೀಠ ನಡೆಸುವುದಷ್ಟೇ ನನ್ನ ಕೆಲಸ ಎಂದು ಕೊಂಡರೆ ರೈಲಿನ ಚಾಲಕ ದುಷ್ಟರೊಂದಿಗೆ ಸೇರಿಕೊಂಡು ಆತಂಕವಾದಕ್ಕೆ ಸಹಕರಿಸಿದಂತಾಗಿ ಅವನನ್ನು ಕರ್ತವ್ಯದಿಂದ ಚ್ಯುತಿಗೊಳಿಸಿ ಕಾನೂನು ಕ್ರಮ ಕೈಗೊಂಡಂತೆ ಪೀಠಾಧ್ಯಕ್ಷ/ಪೀಠಾಧ್ಯಕ್ಷೆಯ ಮೇಲೂ ಲಿಂಗದೇವನ ನ್ಯಾಯಲಯದಲ್ಲಿ ಕಾನೂನು ಕ್ರಮ ನಡಯುತ್ತದೆ.
ಪೀಠಾಧ್ಯಕ್ಷ/ಪೀಠಾಧ್ಯಕ್ಷೆ ತಳ್ಳಲ್ಪಟ್ಟವರನ್ನು ಒಳಗೆ ಸೇರಿಸಿಕೊಂಡು ಎಲ್ಲಾ ಭಕ್ತರನ್ನು ಎಲ್ಲಾ ಸಹ ಸಾಧಕರನ್ನು ಎಲ್ಲಾ ಜಂಗಮವರನ್ನು ಸಮಾನವಾಗಿ ಕಂಡು ಜೊತೆಯಾಗಿ ಗುರಿಮುಟ್ಟುವ ಉದ್ದೇಶ ಹೊಂದಿದ್ದರೆ ಅವರು ಒಳ್ಳೆಯ ಪೀಠಾಧ್ಯಕ್ಷ/ಪೀಠಾಧ್ಯಕ್ಷೆ.
ಇಲ್ಲದಿದ್ದರೆ ದುಷ್ಟರೊಂದಿಗೆ ಸೇರಿಕೊಂಡ ಆಂತಕವಾದಿಯಂತಾಗುತ್ತಾರೆ. ಏಕೆಂದರೆ ಹೀಗೆ ಮಾಡುವುದರಿಂದ ತಾನೂ ಕೆಡುವುದಲ್ಲದೆ ಧರ್ಮಪೀಠವನ್ನೂ ಕೆಡಿಸುವ ಪಾಪಕಾರ್ಯ ಮಾಡಿದಂತಹವರಿಗೆ ಲಿಂಗದೇವನ ಕಾನೂನಿನಲ್ಲಿ ಕುಂಭೀಪಾಕ ನಾಯಕ ನರಕದಂತಹ ಕಠೋರ ಶಿಕ್ಷೆ ಕಾದಿಟ್ಟ ಬುತ್ತಿ.
*ಆದ್ದರಿಂದ ನಾವೆಲ್ಲರೂ ನಮ್ಮ ನಮ್ಮ ರೈಲು (ಜೀವನ, ಧರ್ಮ ಸಂಸ್ಥೆ, ಧರ್ಮ ಪೀಠ, ಸಂಘ, ಸಂಸ್ಥೆ)ಗಳನ್ನು ಸನ್ಮಾರ್ಗದಲ್ಲಿ ಓಡಿಸೋಣ, ಎಲ್ಲರನ್ನೂ ಇಂಬಿಟ್ಟುಕೊಂಡು ಬಿದ್ದು ಹೋದವರನ್ನು ತಳ್ಳಲ್ಪಟವರನ್ನು ಮಮತೆಯಿಂದ ಎತ್ತಿಕೊಂಡು ನಮ್ಮ ಜೊತೆ ಕುಳ್ಳಿರಿಸಿಕೊಂಡು ರೈಲನ್ನು ಓಡಿಸುವ ಉತ್ತಮ ಚಾಲಕರಾಗೋಣ ಚಾಲಕ್ ಆಗುವುದು ಬೇಡ.
–ಶರಣ ರತ್ನ ಸಚ್ಚಿದಾನಂದ ಪ್ರಭು ಚಟ್ನಳ್ಳಿ
Kalyanasiri Kannada News Live 24×7 | News Karnataka
